ಲಕ್ನೋ: ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಹೆಬ್ಬಾವು ಕಚ್ಚಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏತನ್ಮಧ್ಯೆ ಘಟನೆ ಬಗ್ಗೆ ಮಹಿಳೆಯ ಪತಿಗೆ ಮಾಹಿತಿ ನೀಡಲಾಗಿತ್ತು. ಆ ವ್ಯಕ್ತಿ ಮನೆಗೆ ತೆರಳಿ ಹೆಬ್ಬಾವನ್ನು ಹಿಡಿದು ಚೀಲವೊಂದರಲ್ಲಿ ಹಾಕಿಕೊಂಡು ನೇರ ಆಸ್ಪತ್ರೆಗೆ ತಂದ ವಿಲಕ್ಷಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ:ಮಂಗಳೂರು: ಕಳೆದುಹೋದ ಮೊಬೈಲ್ ಪತ್ತೆಗಾಗಿ ಸಾರ್ವಜನಿಕರ ನೆರವಿಗೆ ವಾಟ್ಸಪ್ ಸಹಾಯವಾಣಿ ಆರಂಭ
ಉನ್ನಾವೋ ಜಿಲ್ಲೆಯ ಸಫಿಪುರ್ ಕೊಟ್ವಾಲಿ ಪ್ರದೇಶದ ಉಮರ್ ಅಟ್ವಾ ಗ್ರಾಮದ ನಿವಾಸಿ ನರೇಂದ್ರ ಅವರ ಪತ್ನಿ ಕುಸ್ಮಾ ಅವರು ಮನೆಯನ್ನು ಸ್ವಚ್ಚಗೊಳಿಸುತ್ತಿದ್ದರು. ಈ ಸಂದರ್ಭದಲ್ಲಿ ಹೆಬ್ಬಾವು ಆಕೆಗೆ ಕಚ್ಚಿತ್ತು. ಇದರ ಪರಿಣಾಮ ಆಕೆ ಬೊಬ್ಬಿಡುತ್ತಾ ಪ್ರಜ್ಞೆಕಳೆದುಕೊಂಡು ಬಿಟ್ಟಿದ್ದರು. ನಂತರ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆ ಬಗ್ಗೆ ಮಾಹಿತಿ ತಿಳಿದಿ ಪತಿ ನರೇಂದ್ರ ಮನೆಗೆ ಹೋಗಿ, ಹೆಬ್ಬಾವನ್ನು ಹಿಡಿದು ಚೀಲದಲ್ಲಿ ಹಾಕಿ ಆಸ್ಪತ್ರೆಗೆ ತಂದು ಬಿಟ್ಟಿದ್ದ. ಇದನ್ನು ಗಮನಿಸಿದ ಆಸ್ಪತ್ರೆಯ ವೈದ್ಯರು, ಸಿಬಂದಿಗಳು ಕಕ್ಕಾಬಿಕ್ಕಿಯಾಗಿದ್ದರು.
ಹೆಬ್ಬಾವನ್ನು ಆಸ್ಪತ್ರೆಗೆ ತಂದಿದ್ದೇಕೆ ಎಂದು ವೈದ್ಯರು ಆತನನ್ನು ಪ್ರಶ್ನಿಸಿದಾಗ, ತನ್ನ ಪತ್ನಿಗೆ ಯಾವ ಹಾವು ಕಚ್ಚಿದೆ ಎಂಬುದು ವೈದ್ಯರಿಗೆ ಗೊತ್ತಾಗಬೇಕು ಎಂಬ ಕಾರಣಕ್ಕಾಗಿ ತಂದಿರುವುದಾಗಿ ಉತ್ತರಿಸಿದ್ದ! ಆದರೆ ಚೀಲದಲ್ಲಿದ್ದ ಹೆಬ್ಬಾವನ್ನು ಕಂಡು ವೈದ್ಯರು ಬೆಚ್ಚಿ ಬಿದ್ದಿರುವುದಾಗಿ ವರದಿ ತಿಳಿಸಿದೆ.
ವರದಿಯ ಪ್ರಕಾರ, ಹೆಬ್ಬಾವು ಕಚ್ಚಿದ್ದ ಮಹಿಳೆಗೆ ಚಿಕಿತ್ಸೆ ನೀಡಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಡಾ.ತುಷಾರ್ ಶ್ರೀವಾತ್ಸವ್ ತಿಳಿಸಿದ್ದು, ಹೆಬ್ಬಾವನ್ನು ಅರಣ್ಯಕ್ಕೆ ಬಿಡಲಾಗಿದೆ ಎಂದು ತಿಳಿಸಿದ್ದಾರೆ.