ಕೋಲ್ಕತ : ಭಾರತ – ಬಾಂಗ್ಲಾ ಗಡಿಯಲ್ಲಿನ ಎರಡೂ ಕಡೆಗಳಲ್ಲಿ ಸಕ್ರಿಯರಾಗಿರುವ ಮಾನವ ಕಳ್ಳಸಾಗಾಟಗಾರರು ಭಾರತದೊಳಗೆ ನೆಲೆ ಕಾಣಲು ಬಯಸುವ ಮ್ಯಾನ್‌ಮಾರ್ ಸೇನಾ ಹತ್ಯಾಕಾಂಡದಿಂದ ಪಾರಾಗಿ ಬಂದಿರುವ ರೊಹಿಂಗ್ಯಾಗಳಿಂದ ಭಾರೀ ಮೊತ್ತದ ಹಣ ಸುಲಿಗೆ ಮಾಡುತ್ತಿರುವುದು ಇದೀಗ ಬೆಳಕಿಗೆ ಬಂದಿದೆ.
ಮಹಿಳೆಯರು, ಪುರುಷರಾದರೆ ತಲಾ 20,000 ದಿಂದ 25,000 ರೂ., 10 ವರ್ಷದೊಳಗಿನ ಮಕ್ಕಳಿಗೆ ಎರಡರಿಂದ ಐದು ಸಾವಿರ ರೂ. (ವಯಸ್ಸಿಗೆ ಅನುಗುಣವಾಗಿ), ಐದು ಮಂದಿಯ ಕುಟುಂಬದವರಾದರೆ 75,000 ರೂ.ಗಳಿಂದ 80,000 ರೂ.ಗಳನ್ನು ಮಾನವ ಕಳ್ಳಸಾಗಾಟಗಾರರು ಸುಲಿಗೆ ಮಾಡುತ್ತಿದ್ದಾರೆ.
ಭಾರತ – ಬಾಂಗ್ಲಾ ಗಡಿ ಮೂಲಕ ಅಕ್ರಮವಾಗಿ ಭಾರತದ ಗಡಿ ನುಸುಳಿ ಬಂದಿರುವ ರೊಹಿಂಗ್ಯಾಗಳು ಪ್ರಕೃತ ಪಶ್ಚಿಮ ಬಂಗಾಲದ ದಕ್ಷಿಣ 24 ಪರಗಣ ಜಿಲ್ಲೆಯ ನಿರಾಶ್ರಿತರ ಶಿಬಿರದಲ್ಲಿ ಆಸರೆ ಪಡೆದಿದ್ದಾರೆ. ಆದರೆ ಅಲ್ಲಿ ಅವರಿಗೆ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಅವರು ಪಶುಗಳ ರೀತಿ ಜೀವಿಸುತ್ತಿದ್ದಾರೆ. ಮಮತಾ ಬ್ಯಾನರ್ಜಿ ಸರಕಾರ ಅವರಿಗೆ ಅಗತ್ಯ ಸೌಕರ್ಯ ಕಲ್ಪಿಸುವ ಭರವಸೆ ನೀಡಿದೆ.
ಮಾನವ ಕಳ್ಳಸಾಗಾಟಗಾರರು ರೊಹಿಂಗ್ಯಾಗಳಿಗೆ ಭಾರತದಲ್ಲಿ ನೆಲೆ ಕಂಡುಕೊಳ್ಳಲು ತಾವು ನೆರವಾಗುವುದಾಗಿ ಹೇಳಿ ಅವರಿಂದ ಭಾರೀ ಮೊತ್ತದ ಹಣವನ್ನು ಪೀಕಿಸಿಕೊಳ್ಳುವಲ್ಲಿ ಸಕ್ರಿಯರಾಗಿದ್ದಾರೆ. ಪಶು ಕಳ್ಳಸಾಗಾಟಗಾರರಾಗಿರುವ ಇವರು ಕಾರ್ಮಿಕರನ್ನು ಬಳಸಿಕೊಂಡು ರೊಹಿಂಗ್ಯಾಗಳನ್ನು ದೇಶದ ವಿವಿಧ ಭಾಗಗಳಿಗೆ ರವಾನಿಸುವ ಧಂಧೆಯಲ್ಲಿ ತೊಡಗಿಕೊಂಡಿದ್ದಾರೆ.
ರೊಹಿಂಗ್ಯಾಗಳ ಸಮಸ್ಯೆ ಭಾರತಕ್ಕೆ ದೊಡ್ಡ ಕಳವಳದ ಸಂಗತಿಯಾಗಿದೆ. ರೊಹಿಂಗ್ಯಾಗಳು ಉಗ್ರರೊಂದಿಗೆ ಸುಲಭದಲ್ಲಿ ನಂಟು ಬೆಳೆಸಿಕೊಳ್ಳುತ್ತಾರೆ. ಆದುದರಿಂದ ಇವರ ಒಳನಸುಳುವಿಕೆಯ ಬಗ್ಗೆ ಹೆಚ್ಚಿನ ಜಾಗೃತೆ ವಹಿಸುವಂತೆ ಭಾರತ ಸರಕಾರ ಈಗಾಗಲೇ ಬಾಂಗ್ಲಾದೊಂದಿಗೆ ಗಡಿ ಹಂಚಿಕೊಳ್ಳುವ ರಾಜ್ಯಗಳಾದ ಪಶ್ಚಿಮ ಬಂಗಾಲ, ಅಸ್ಸಾಂ, ಮಿಜೋರಾಂ, ಮೇಘಾಯ ಮತ್ತು ತ್ರಿಪುರ ರಾಜ್ಯಗಳನ್ನು ಕೇಳಿಕೊಂಡಿದೆ.