ಹೊಸದಿಲ್ಲಿ: ಗೋವು ಕಳ್ಳಸಾಗಾಣಿಕೆ ಜಾಲವನ್ನು ಬೇಧಿಸಿರುವ ಪೊಲೀಸರು ಐವರು ಗೋಕಳ್ಳರನ್ನು ಬಂಧಿಸಿರುವ ಘಟನೆ ದಿಲ್ಲಿ ಸಮೀಪದ ಗುರುಗ್ರಾಮದಲ್ಲಿ ನಡೆದಿದೆ. ಗೋರಕ್ಷಕರು ಸುಮಾರು 22 ಕಿ.ಮೀ ಬೆನ್ನಟ್ಟಿ ಕಳ್ಳರನ್ನು ಹಿಡಿದಿದ್ದು, ತಪ್ಪಿಸಿಕೊಳ್ಳುವ ಭರದಲ್ಲಿ ಆರೋಪಿಗಳು ಕೆಲವು ಗೋವುಗಳನ್ನು ಚಲಿಸುತ್ತಿದ್ದ ವಾಹನದಿಂದ ಹೊರಗೆಸೆದಿದ್ದಾರೆ.
ಶನಿವಾರ ಮುಂಜಾನೆ ಗುರುಗ್ರಾಮದ ಸೈಬರ್ ಸಿಟಿ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಗೋವು ಕಳ್ಳಸಾಗಣೆದಾರರಿಂದ ಕೆಲವು ದೇಶ ನಿರ್ಮಿತ ಬಂದೂಕುಗಳು ಮತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳ್ಳಸಾಗಣೆದಾರರು ದೆಹಲಿ ಗಡಿಯಿಂದ ಗುರುಗ್ರಾಮಕ್ಕೆ ಪ್ರವೇಶಿಸುವಾಗ ವಾಹನವನ್ನು ನಿಲ್ಲಿಸಲು ಕೇಳಿದರೂ ನಿಲ್ಲಿಸದೆ ವೇಗವಾಗಿ ಓಡಿಸಿದ್ದರು. ಹೀಗಾಗಿ ಚೇಸ್ ಪ್ರಾರಂಭವಾಯಿತು. ಗೋರಕ್ಷಕರು ಕಳ್ಳಸಾಗಾಣಿಕೆದಾರ ವಾಹನದ ಟೈರ್‌ಗಳನ್ನು ಪಂಕ್ಚರ್ ಮಾಡಿದರೂ ಆರೋಪಿಗಳು ವಾಹನವನ್ನು ಅತಿವೇಗದಲ್ಲಿ ಚಲಾಯಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
22 ಕಿಮೀ ಬೆನ್ನಟ್ಟಿದ ಸಂದರ್ಭದಲ್ಲಿ ಹಲವು ಹಂತಗಳಲ್ಲಿ ಕಳ್ಳಸಾಗಾಣಿಕೆದಾರರು ಗೋರಕ್ಷಕರ ಗಮನವನ್ನು ಬೇರೆಡೆ ಸೆಳೆಯಲು ಹಸುಗಳನ್ನು ಓಡುವ ವಾಹನದಿಂದ ಹೊರಕ್ಕೆ ಎಸೆದಿದ್ದಾರೆ.
ಇದನ್ನೂ ಓದಿ:ನಟಿ ರೇಖಾ ವಿವಾಹವಾಗಲು ಮುಂದಾಗಿದ್ದ ಇಮ್ರಾನ್ ಖಾನ್: ಸುದ್ದಿ ಮತ್ತೆ ಮುನ್ನೆಲೆಗೆ
22 ಕಿ.ಮೀ. ಬೆನ್ನಟ್ಟಿದ ನಂತರ ಗೋವು ಕಳ್ಳಸಾಗಣೆದಾರರನ್ನು ಹಿಡಿಯಲಾಯಿತು. ಅವರ ವಾಹನದಿಂದ ಅಕ್ರಮ ಬಂದೂಕುಗಳು ಮತ್ತು ಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಗುರುಗ್ರಾಮ ಪೊಲೀಸರ ತಂಡವು ಹಸು ಕಳ್ಳಸಾಗಣೆದಾರರನ್ನು ಬಂಧಿಸಿದೆ.
ಹರ್ಯಾಣ ಸರ್ಕಾರವು ಗೋವು ಕಳ್ಳಸಾಗಣೆ ವಿರುದ್ಧ ಕಠಿಣ ಕಾನೂನುಗಳನ್ನು ಮಾಡಿದೆ. ಗೋವುಗಳ ರಕ್ಷಣೆಗಾಗಿ ಆಯೋಗವನ್ನು ಸಹ ರಚಿಸಿದೆ. ಆದರೆ ಈ ಕ್ರಮಗಳ ಹೊರತಾಗಿಯೂ, ಹರ್ಯಾಣ ರಾಜ್ಯದಲ್ಲಿ ಜಾನುವಾರು ಕಳ್ಳಸಾಗಣೆ ಹೆಚ್ಚುತ್ತಿದೆ.