ಮುಂಬೈ: ಕಳೆದೊಂದು ವರ್ಷದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಕೊಡುತ್ತಿರುವ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿಯ ಜೂನ್ ತಿಂಗಳ ಪಟ್ಟಿ ಪ್ರಕಟವಾಗಿದೆ. ಪುರುಷ ಮತ್ತು ವನಿತಾ ವಿಭಾಗ ಎರಡರಲ್ಲಿಯೂ ಭಾರತೀಯ ಕ್ರೀಡಾಪಟುಗಳೇ ಈ ಬಾರಿ ಪ್ರಶಸ್ತಿ ಪಡೆದಿದ್ದಾರೆ.
ಪುರುಷರ ವಿಭಾಗದಲ್ಲಿ ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಪ್ರಶಸ್ತಿ ಗೆದ್ದರೆ, ವನಿತಾ ವಿಭಾಗದ ಪ್ರಶಸ್ತಿಯು ಉಪ ನಾಯಕಿ ಸ್ಮೃತಿ ಮಂಧನಾ ಅವರ ಪಾಲಾಗಿದೆ.
ಪುರುಷರ ವಿಭಾಗದಲ್ಲಿ ಬುಮ್ರಾ ಅವರೊಂಧಿಗೆ ರೋಹಿತ್ ಶರ್ಮಾ ಮತ್ತು ಅಫ್ಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ನಾಮಿನೇಟ್ ಆಗಿದ್ದರು. ಅವರನ್ನು ಮೀರಿಸಿದ ಬುಮ್ರಾ ಪ್ರಶಸ್ತಿ ಪಡೆದರು. ವನಿತಾ ವಿಭಾಗದಲ್ಲಿ ಇಂಗ್ಲೆಂಡ್ ನ ಮೈಯಾ ಬೌಚಿಯರ್ ಮತ್ತು ಶ್ರೀಲಂಕಾದ ವಿಶ್ಮಿ ಗುಣರತ್ನೆ ಅವರನ್ನು ಸೋಲಿಸಿ ಸ್ಮೃತಿ ಮಂಧನಾ ಪ್ರಶಸ್ತಿಯನ್ನು ಗೆದ್ದರು.
ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ಅತ್ಯದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಬುಮ್ರಾ 15 ವಿಕೆಟ್ ಕಿತ್ತು, ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಸ್ಮೃತಿ ಮಂಧನಾ ಅವರು ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಯಲ್ಲಿ ಸತತ ಎರಡು ಶತಕ, ಒಂದು ಅರ್ಧಶತಕ ಸಿಡಿಸಿದ್ದರು.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸ್ಮೃತಿ ಅವರು 114.33 ರ ಸರಾಸರಿಯಲ್ಲಿ 343 ರನ್ ಗಳನ್ನು ಗಳಿಸಿದ್ದರು. 100 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ, ಸರಣಿಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.