ಹೊಸದಿಲ್ಲಿ: ಚುನಾವಣೆಯಲ್ಲಿ ಸ್ಪರ್ಧಿಸಲು ಕೇರಳದ ವಯನಾಡ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬೆಂಬಲವನ್ನು ಪಡೆದಿದ್ದಾರೆ ಎಂದು ಕೇಂದ್ರ ಸಚಿವೆ ಮತ್ತು ಅಮೇಥಿ ಸಂಸದೆ ಸ್ಮೃತಿ ಇರಾನಿ ಗುರುವಾರ ಆರೋಪಿಸಿದ್ದಾರೆ.
ಗೌರಿಗಂಜ್‌ನಲ್ಲಿರುವ ತಮ್ಮ ನಿವಾಸದಲ್ಲಿ ಯಾದವ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಸಚಿವೆ ”ವಯನಾಡಿನಲ್ಲಿ ಚುನಾವಣೆಗೆ ಸ್ಪರ್ಧಿಸಲು ಹಿಂದೂಗಳನ್ನು ಕೊಲ್ಲಲು ಪಟ್ಟಿ ಮಾಡಿದ ಭಯೋತ್ಪಾದಕ ಸಂಘಟನೆಯಾದ ಪಿಎಫ್‌ಐ ನಿಂದ ರಾಹುಲ್ ಗಾಂಧಿ ಬೆಂಬಲವನ್ನು ಪಡೆದಿದ್ದಾರೆ” ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಭಾಗವಹಿಸಿದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್‌ನ ರ್‍ಯಾಲಿಯಲ್ಲಿ ಮುಸ್ಲಿಂ ಲೀಗ್ ನ ಧ್ವಜಗಳ ಅನುಪಸ್ಥಿತಿಯ ವಿಷಯವನ್ನು ಪ್ರಸ್ತಾಪಿಸಿ, ”ಎರಡೂ ಪಕ್ಷಗಳ ಧ್ವಜವನ್ನು ತರದಿರಲು ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ತಮ್ಮ ಸ್ವಾರ್ಥಕ್ಕಾಗಿ ಪಕ್ಷದ ಧ್ವಜವನ್ನು ಮಾರಿದಾಗ, ಇನ್ನೇನು ಮಾಡುತ್ತಾರೆ ಎಂದು ನೀವು ಯೋಚಿಸಬಹುದು” ಎಂದರು.
“ಕರ್ನಾಟಕದ ಸಚಿವರೊಬ್ಬರು ವಯನಾಡ್‌ನಿಂದ ಚುನಾವಣೆಗೆ ಸ್ಪರ್ಧಿಸಿರುವ ಕುರಿತು ಕೇಳಿದಾಗ ‘ವಯನಾಡಿನ ಜನರು ಹೆಚ್ಚು ನಿಷ್ಠಾವಂತರು’ ಎಂದು ರಾಹುಲ್ ಗಾಂಧಿ ಉತ್ತರಿಸಿದ್ದರು. ನಾನು ಕೇಳಲು ಬಯಸುತ್ತೇನೆ, ಅವರು 15 ವರ್ಷಗಳ ಕಾಲ ಸಂಸದರಾಗಿದ್ದ ಅಮೇಥಿಯ ಜನರು ನಿಷ್ಠಾವಂತರಲ್ಲವೇ? ಅವರು ದೇಶದ್ರೋಹಿಗಳೇ?” ಎಂದು ಇರಾನಿ ಪ್ರಶ್ನಿಸಿದರು.
50 ವರ್ಷಗಳಲ್ಲಿ ಅಮೇಥಿಯಲ್ಲಿ ಮಾಡದ ಸಾಧನೆಯನ್ನು ಬಿಜೆಪಿಯ ಡಬಲ್ ಇಂಜಿನ್ ಸರಕಾರ ಐದು ವರ್ಷಗಳಲ್ಲಿ ಸಾಧಿಸಿದೆ.ಗಾಂಧಿ ಕುಟುಂಬವು ಅಮೇಥಿಯನ್ನು ಯಾವಾಗಲೂ ಹಿಂದುಳಿದಿದೆ ಎಂದು ಹೇಳಿ ಜನರನ್ನು ಬಡವರನ್ನಾಗಿ ಉಳಿಯಲು ಬಯಸಿದ್ದರು ಎಂದರು.