Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಸಿ

03:20 PM Mar 23, 2022 | Team Udayavani |

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗದಂತೆ ಪರೀಕ್ಷಾ ಕೇಂದ್ರದಲ್ಲಿ ಉತ್ತಮವಾದ ವಾತಾವರಣ ನಿರ್ಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ. ನಂದಿನಿದೇವಿ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾರ್ಚ್‌ 28 ರಿಂದ ಏಪ್ರಿಲ್‌ 11ರವರೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯಲಿವೆ. ಅತ್ಯಂತ ಪಾರದರ್ಶಕವಾಗಿ, ವ್ಯವಸ್ಥಿತವಾಗಿ ಯಾವುದೇ ಲೋಪಗಳಾಗದಂತೆ ಪರೀಕ್ಷೆ ನಡೆಯಬೇಕು. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು. ವಿದ್ಯುತ್‌, ಡೆಸ್ಕ್, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದರು.

ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಓಪಿ ಅನುಸರಿಸಲು ಪ್ರತಿ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿ ನಿಯೋಜಿಸಬೇಕು. ಮಕ್ಕಳ ತಪಾಸಣೆ ಮೂಲಕ ಪರೀಕ್ಷೆ ಯಶಸ್ವಿಗೊಳಿಸಲು ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಕಳೆದ ವರ್ಷ ಕೋವಿಡ್‌-19ರ ಸಾಂಕ್ರಾಮಿಕ ರೋಗದ ನಡುವೆಯೇ ಯಾವುದೇ ಗೊಂದಲವಾಗದಂತೆ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಅದರಂತೆ ಈ ಬಾರಿಯೂ ಕಳೆದ ವರ್ಷಕ್ಕಿಂತ ಉತ್ತಮವಾಗಿ ಪರೀಕ್ಷೆ ನಡೆಸಬೇಕು. ಯಾವುದೇ ಕಾರಣಕ್ಕೂ ಪರೀಕ್ಷಾ ಅವ್ಯವಹಾರಗಳಿಗೆ ಆಸ್ಪದವಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಿ ಪರೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ನೋಡಲ್‌ ಅಧಿಕಾರಿ ವಿಜಯಕುಮಾರ್‌ ಮಾತನಾಡಿ, 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಗಾಗಿ ಜಿಲ್ಲೆಯಲ್ಲಿ 98 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಇದರಲ್ಲಿ 95 ರೆಗ್ಯೂಲರ್‌ ಕೇಂದ್ರಗಳು ಹಾಗೂ 3 ಪರೀಕ್ಷಾ ಕೇಂದ್ರಗಳು ಖಾಸಗಿ ಕೇಂದ್ರಗಳಾಗಿವೆ. ಬಿಇಒಗಳಿಂದ ಬಂದಂತಹ ಪ್ರಸ್ತಾವನೆಗೆ ಅನುಗುಣವಾಗಿ 98 ಕೇಂದ್ರಗಳಿಗೆ ಅಧೀಕ್ಷಕರು ಮತ್ತು ಕಸ್ಟೋಡಿಯನ್‌ ನೇಮಕ ಮಾಡಲಾಗಿದೆ. ಎರಡರಿಂದ ಮೂರು ಪರೀಕ್ಷಾ ಕೇಂದ್ರಗಳಿಗೆ ಒಬ್ಬ ಮಾರ್ಗಾಧಿಕಾರಿ ನೇಮಕ ಮಾಡಲಾಗಿದ್ದು, 96 ಕೇಂದ್ರಗಳಿಗೆ ಒಟ್ಟು 36 ಮಾರ್ಗಗಳನ್ನು ಗುರುತಿಸಲಾಗಿದೆ. ಪ್ರತಿ ಕೇಂದ್ರಕ್ಕೆ ಇಬ್ಬರಂತೆ 196 ಪೊಲೀಸ್‌ ಅಧಿಕಾರಿಗಳನ್ನು ಹಾಗೂ 36 ಮಾರ್ಗಗಳಿಗೆ 36 ಪೊಲೀಸ್‌ ಅಧಿಕಾರಿಗಳನ್ನು, ಜಿಲ್ಲಾ ಕೇಂದ್ರದಲ್ಲಿ ಉತ್ತರಪತ್ರಿಕೆಗಳನ್ನು ಸಂಗ್ರಹಿಸಲು ಮಾಡಿದ ಸ್ಟ್ರಾಂಗ್‌ರೂಂ ರಕ್ಷಣೆಗಾಗಿ ಮಾರ್ಚ್‌ 28 ರಿಂದ ಉತ್ತರಪತ್ರಿಕೆಗಳನ್ನು ರವಾನಿಸುವವರಿಗೆ ಭದ್ರತಾ ವ್ಯವಸ್ಥೆ ಒದಗಿಸಬೇಕು ಎಂದರು.

ಪರೀಕ್ಷಾ ಸಿಬ್ಬಂದಿಗೆ ತರಬೇತಿ ನೀಡಿ

Advertisement

ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸುವ ಸಿಬ್ಬಂದಿಗೆ ಪರೀಕ್ಷಾ ಮಾರ್ಗಸೂಚಿಗಳ ಕುರಿತು ತರಬೇತಿ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ| ಕೆ. ನಂದಿನಿದೇವಿ ಸೂಚನೆ ನೀಡಿದರು.

ಯಾವಾಗ ಪ್ರಶ್ನೆಪತ್ರಿಕೆ ತೆರೆಯಬೇಕು, ಉತ್ತರಪತ್ರಿಕೆಗಳನ್ನು ಸಂಗ್ರಹಿಸುವ ವಿಧಾನ ಇತ್ಯಾದಿ ಅಂಶಗಳನ್ನು ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸುವ ಸಿಬ್ಬಂದಿಗೆ ತರಬೇತಿ ನೀಡಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಕೆ. ರವಿಶಂಕರ್‌ ರೆಡ್ಡಿ, ಮಾ. 25ರಂದು ಜಿಲ್ಲೆಯ ಎಲ್ಲ ಪರೀಕ್ಷ ಮುಖ್ಯಸ್ಥರ ಸಭೆ ಕರೆಯಲಾಗಿದೆ. ಇದರಲ್ಲಿ ನೋಡಲ್‌ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗವಹಿಸಲಿದ್ದು, ಪರೀಕ್ಷ ಕೇಂದ್ರಗಳಿಗೆ ಅಗತ್ಯವಾಗಿ ಬೇಕಾಗಿರುವ ಡೆಸ್ಕ್, ಕುಡಿಯುವ ನೀರು ವ್ಯವಸ್ಥೆ, ಶೌಚಾಲಯ ಸೌಲಭ್ಯ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳ ಕುರಿತು ಸಭೆಯಲ್ಲಿ ಪರಿಶೀಲನೆ ಮಾಡಲಾಗುವುದು. ಪರೀಕ್ಷ ಕಾರ್ಯ ಯಶಸ್ವಿಗೆ ಎಲ್ಲ ರೀತಿಯ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಮಾತನಾಡಿ, ಪರೀಕ್ಷ ಕೇಂದ್ರಗಳಿಗೆ ಮುಂಚಿತವಾಗಿ ಸಂಬಂಧಪಟ್ಟವರು ಭೇಟಿ ನೀಡಿ ಮೂಲ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಬೇಕು. ಪರೀಕ್ಷಾ ಕಾರ್ಯಕ್ಕೆ ಸುಸ್ಥಿತಿಯಲ್ಲಿರುವ ವಾಹನಗಳ ವ್ಯವಸ್ಥೆ ಮಾಡಬೇಕು. ವಾಹನಗಳನ್ನು ಪರಿಶೀಲಿಸಿ ಆ ನಂತರ ಪರೀಕ್ಷಾ ಕಾರ್ಯಕ್ಕೆ ವಾಹನಗಳನ್ನು ನೀಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಡಯಟ್‌ ಪ್ರಾಚಾರ್ಯ ಎಸ್‌.ಕೆ.ಬಿ ಪ್ರಸಾದ್‌, ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೇಶಕ ರಾಜಣ್ಣ ಸೇರಿದಂತೆ ಆರು ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next