ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ಬಸ್ ನಿಲ್ದಾಣಗಳಲ್ಲಿ ಕಳೆದ ಆರು ವರ್ಷಗಳಲ್ಲಿ ಧೂಮಪಾನ ಮಾಡುವ ಸುಮಾರು 1.31 ಲಕ್ಷ ಪ್ರಯಾಣಿಕರಿಂದ 2.62 ಕೋಟಿ ರೂ. ದಂಡ ವಸೂಲು ಮಾಡಿದೆ.
ತಂಬಾಕು ನಿಷೇಧ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಕೆಎಸ್‌ಆರ್‌ಟಿಸಿ ಮುಂಚೂಣಿಯಲ್ಲಿದೆ. ದೇಶದ ಯಾವುದೇ ಸಾರಿಗೆ ನಿಗಮಗಳಲ್ಲಿ ಇಷ್ಟು ಕಟ್ಟುನಿಟ್ಟಾಗಿ ಧೂಮಪಾನ ನಿಷೇಧ ಜಾರಿಗೊಳಿಸಿಲ್ಲ. ಕಳೆದ ಆರು ವರ್ಷಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಧೂಮಪಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ 2013ರ ಏಪ್ರಿಲ್‌ನಿಂದ 2019ರ ಮಾರ್ಚ್‌ವರೆಗೆ 1.31 ಲಕ್ಷ ಪ್ರಯಾಣಿಕರಿಂದ 2.62 ಕೋಟಿ ದಂಡ ವಸೂಲು ಮಾಡಲಾಗಿದೆ.
ನಿತ್ಯ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ 1ರಿಂದ 1.25 ಲಕ್ಷ ಜನ ಪ್ರಯಾಣಿಸುತ್ತಾರೆ. ನಿಗಮದ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಪ್ರಚಾರ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣ ನಿಷೇಧಿಸಿದ್ದು, ತಂಬಾಕು ಸೇವನೆ ವಿರುದ್ಧ ಹೋರಾಟ ನಿರಂತರವಾಗಿರಲಿದೆ ಎಂದು ಕೆಎಸ್‌ಆರ್‌ಟಿಸಿ ನಿರ್ದೇಶಕ (ಸಿಬ್ಬಂದಿ ಮತ್ತು ಪರಿಸರ) ಪಿ.ಆರ್. ಶಿವಪ್ರಸಾದ್ ತಿಳಿಸಿದರು.
ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಕೆಂಪೇಗೌಡ ಬಸ್ ನಿಲ್ದಾಣದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ದಂಡ ವಿಧಿಸುವುದು ಪರಿಹಾರವಲ್ಲದಿದ್ದರೂ, ಸಾರ್ವಜನಿಕರು ಮತ್ತು ನಿಗಮದ ಸಿಬ್ಬಂದಿಗೆ ಜಾಗೃತಿ ಮೂಡಿಸಲು ಇದು ಅತ್ಯವಶ್ಯಕ ಎಂದು ಅಭಿಪ್ರಾಯಪಟ್ಟರು.
ಇದಕ್ಕೂ ಮುನ್ನ ಚಾಲಕ ಮತ್ತು ನಿರ್ವಾಹಕರು ಸಿಗರೇಟು ಮತ್ತು ತಂಬಾಕಿನ ಮೇಲೆ ನೀರು ಸುರಿಯುವ ಮೂಲಕ ತಂಬಾಕು ವಿರೋಧಿ ದಿನಾಚರಣೆಗೆ ಚಾಲನೆ ನೀಡಿದರು. ಇದೇ ವೇಳೆ ನಾರಾಯಣ ಸೇವಾ ಸಂಸ್ಥಾನದಿಂದ ಉಚಿತ ಆರೋಗ್ಯ ತಪಾಸಣೆ, ಕಾರ್ಬನ್ ಮೋನಾಕ್ಸೆ„ಡ್ ಸ್ಕ್ರೀನಿಂಗ್ ಕಾರ್ಯಕ್ರಮ, ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಪೋಸ್ಟರ್ ಪ್ರದರ್ಶನ, ಸಿಂಧಿ ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಕಾರ್ಯಕ್ರಮ ಹಾಗೂ ಆರೋಗ್ಯ ಇಲಾಖೆಯಿಂದ “ರೂಪಾಂತರ ರಂಗ’ ಬೀದಿ ನಾಟಕ ಪ್ರದರ್ಶನ ನಡೆಯಿತು.