ಧೂಮಪಾನ ನಿಷೇಧದ ಬಗ್ಗೆ ನಮ್ಮ ಸರ್ಕಾರಗಳು ಕೈಗೊಳ್ಳುವ ಕ್ರಮಗಳು ನಿಜಕ್ಕೂ ಯಾವ ಮಟ್ಟದಲ್ಲಿ ಅನುಷ್ಠಾನಕ್ಕೆ ಬಂದಿವೆ ಎನ್ನುವುದು ನಮಗೆ ತಿಳಿಯದ ವಿಷಯವೇನೂ ಇಲ್ಲ. ಹಿಂದೆ ಜಾರಿಯಾದ ಕಾನೂನುಗಳು ಎಷ್ಟು ಸಫಲವಾಗಿವೆ ಎನ್ನುವುದನ್ನು ನೋಡುವುದಕ್ಕೂ ಹೋಗದ ಸರ್ಕಾರ ಪ್ರತಿಬಾರಿಯೂ ಧೂಮಪಾನ ನಿಷೇಧದ ಕುರಿತು ಹೊಸ ಹೊಸ ಕಾನೂನುಗಳನ್ನು ರೂಪಿಸುತ್ತಲೇ ಇರುತ್ತದೆ. ಇದರ ಮುಂದುವರಿದ ಭಾಗವೆಂಬಂತೆ ಮಹಾನಗರ, ನಗರ, ಪಟ್ಟಣ ಪ್ರದೇಶಗಳ ಹೊಟೇಲ್, ಬಾರ್, ರೆಸ್ಟೋರೆಂಟ್, ಕ್ಲಬ್ ಹಾಗೂ ಪಬ್‌ಗಳಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಸಂಪೂರ್ಣ ಧೂಮಪಾನ ನಿಷೇಧಿಸಿ ಆದೇಶಿಸಲಾಗಿದೆ. ಕರ್ನಾಟಕ ಧೂಮಪಾನ ನಿಷೇಧ ಹಾಗೂ ಧೂಮಪಾನಿಗಳಲ್ಲದವರ ಆರೋಗ್ಯ ರಕ್ಷಣೆ ಕಾಯ್ದೆ 2001ರ ಪ್ರಕಾರ ಸೋಮವಾರದಿಂದಲೇ ನಿಷೇಧ ಹೇರಲಾಗಿದ್ದು, ಈ ಪ್ರದೇಶಗಳಲ್ಲಿ ಒಂದು ವೇಳೆ ಧೂಮಪಾನಕ್ಕೆ ಅವಕಾಶ ನೀಡಿದರೆ ಸಂಬಂಧಪಟ್ಟ ಹೊಟೇಲ್, ಬಾರ್, ಕ್ಲಬ್‌ಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಇದಷ್ಟೇ ಅಲ್ಲದೆ ಕೋಟ್ಟಾ ಕಾಯ್ದೆ 2003ರ ಪ್ರಕಾರ 30ಕ್ಕೂ ಹೆಚ್ಚು ಆಸನವಿರುವ ಬಾರ್, ಹೊಟೇಲ್, ಪಬ್, ಕ್ಲಬ್‌ಗಳಲ್ಲಿ ಧೂಮಪಾನ ಪ್ರದೇಶ ಸ್ಥಾಪಿಸಿಕೊಳ್ಳಲು ಅವಕಾಶವಿದ್ದು, ಈ ಕಾನೂನು ತಿದ್ದುಪಡಿಯ ಕುರಿತೂ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸತ್ಯವೇನೆಂದರೆ, “ಧೂಮಪಾನ ನಿಷೇಧ’ ಎನ್ನುವುದು ಇಂದು ಯಾವುದೋ ಖ್ಯಾತ ನಗೆನಾಟಕದ ಶೀರ್ಷಿಕೆಯಂತೆ ಭಾಸವಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದಂಡ ಮತ್ತು ಹಾಗೆ ಮಾರಾಟ ಮಾಡುವ ಅಂಗಡಿಗಳಿಗೆ ದಂಡ/ಮಾನ್ಯತೆ ರದ್ದು ಎನ್ನುವ ಕಾನೂನು ಈಗಾಗಲೇ ಜಾರಿಯಲ್ಲಿದ್ದು, ಅದು ಕೇವಲ ಹಾಳೆಗಳಿಗೆ ಮಾತ್ರ ಸೀಮಿತವಾಗಿದೆ ಎನ್ನುವುದು ಪ್ರತಿಯೊಂದು ಊರಿನ ಸಾರ್ವಜನಿಕ ಸ್ಥಳಗಳಲ್ಲಿ ನಿಶ್ಚಿಂತೆಯಿಂದ ಹೊಗೆಯುಗುಳುವವರನ್ನು ಕಂಡಾಗ ಅರಿವಾಗುತ್ತದೆ. ಕನ್ನಡದ ಹಿರಿಯ ಹಾಸ್ಯ ಸಾಹಿತಿಯೊಬ್ಬರು ಈ ರೀತಿ ಸರ್ಕಾರಿ ನಿಷೇಧಗಳ ಪರಿಯನ್ನು ಹಂಗಿಸುತ್ತಾ ಹೇಳಿದ್ದರು: “ಪಾನ ನಿಷೇಧ ಕುಡಿಯದವರಿಗೆ ಮಾತ್ರ’. ಈ ಮಾತನ್ನು ಧೂಮಪಾನ ನಿಷೇಧಕ್ಕೂ ಅನ್ವಯಿಸಲು ಅಡ್ಡಿಯಿಲ್ಲ.
ರೈತರ ಹಿತದೃಷ್ಟಿ ಮತ್ತು ರೆವೆನ್ಯೂ ದೃಷ್ಟಿಕೋನದಿಂದ ನೋಡಿದಾಗ ತಂಬಾಕು ಬೆಳೆಯನ್ನೇ ನಿಷೇಧಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ. ಹೀಗಾಗಿ, ಅದು ತಂಬಾಕು ಬೆಳೆಗೆ ಪ್ರೋತ್ಸಾಹ ಕೊಡುತ್ತಲೇ ಇರುತ್ತದೆ. ಅಲ್ಲದೇ ಲಕ್ಷಾಂತರ ಕೋಟಿ ವ್ಯವಹಾರದ ಟೊಬ್ಯಾಕೋ ಕಂಪನಿಗಳ ಲಾಬಿಗೆೆ ಎಲ್ಲಾ ಸರ್ಕಾರಗಳೂ ಕುಣಿಯುತ್ತಲೇ ಬಂದಿವೆ, ಮುಂದೆಯೂ ಕುಣಿಯುತ್ತವೆ.
ದುರಂತವೆಂದರೆ, ಹೆರಾಯಿನ್, ಕೋಕೇನ್‌ನಂತೆಯೇ ತಂಬಾಕಿನಲ್ಲಿರುವ ನಿಕೋಟಿನ್ ಕೂಡ ಅಷ್ಟೇ ವ್ಯಸನಕಾರಿ ಅಂಶ ಎನ್ನುವುದು ಗೊತ್ತೇ ಇದೆ. ಆದರೆ ನಿಕೋಟಿನ್ ಸೇವಿಸುವ ಭರದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ರಾಸಾಯನಿಕಗಳೂ ಧೂಮಪಾನಿಗಳ ದೇಹ ಸೇರುತ್ತಿರುತ್ತವೆ. ಈ ರಾಸಾಯನಿಕಗಳಲ್ಲಿ ನೂರಾರು ಕ್ಯಾನ್ಸರ್ ಕಾರಕ ಅಂಶಗಳೂ ಇರುತ್ತವೆ. ಇದು ದೇಶದಲ್ಲಿ ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಿರುವವರಲ್ಲಿ ಅತಿ ಹೆಚ್ಚು ಜನ ತಂಬಾಕು ಸೇವಿಸುವವರೇ ಇದ್ದಾರೆ. ಆದರೆ ಯಾವ ಸರ್ಕಾರಗಳಿಗೂ ಇದು ಗಂಭೀರ ವಿಷಯವಾಗಿ ಕಾಣಿಸುತ್ತಲೇ ಇಲ್ಲ. ಸಿಗರೇಟ್ ಡಬ್ಬಿಗಳ ಮೇಲೆ ದೊಡ್ಡದಾಗಿ ಕ್ಯಾನ್ಸರ್ ರೋಗಿಗಳ ಚಿತ್ರ ಹಾಕಿಬಿಟ್ಟರೆ ವ್ಯಸನಿಗಳು ಅದನ್ನು ಬಿಟ್ಟುಬಿಡುತ್ತಾರೆಯೇ? ವ್ಯಸನವೆನ್ನುವುದು ಮಾನಸಿಕವಾದದ್ದು ಎನ್ನುವುದು ಎಷ್ಟು ನಿಜವೋ ಅದರ ಪರಿಣಾಮ ದೈಹಿಕವಾಗಿಯೂ ಅಷ್ಟೇ ತೀವ್ರತೆರನಾಗಿರುತ್ತದೆ ಎನ್ನುವುದು ಅಷ್ಟೇ ಸತ್ಯ. ಧೂಮಪಾನ ತೊರೆದವರಲ್ಲಿ ಸೃಷ್ಟಿಯಾಗುವ ಮಾನಸಿಕ ತಳಮಳಗಳು, ಏರುಪೇರಾಗುವ ಹಾರ್ಮೋನುಗಳು, ಅಧಿಕವಾಗುವ ಕ್ರೇವಿಂಗ್‌ಗಳು, ಹೆಚ್ಚಾಗುವ ಆಹಾರ ಸೇವನೆ ಸಮಸ್ಯೆಗಳು ಮತ್ತೆ ಧೂಮಪಾನಕ್ಕೆ ಹಿಂದಿರುಗ ದಂತಾಗಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಉದ್ದೇಶಿಸಲೂ ಮುತುವರ್ಜಿ ವಹಿಸಬೇಕಲ್ಲವೇ? ಇದೆಲ್ಲವನ್ನೂ ಬಿಟ್ಟು ಬರೀ ಜನರ ಆರೋಗ್ಯದ ಹಿತಚಿಂತನೆಯ ಮಾತನಾಡುವುದು, ಇನ್ನೊಂದೆಡೆ ತಂಬಾಕು ಬೆಳೆಗೆ ಪ್ರೋತ್ಸಾಹ ಕೊಡುವುದು “ಮಕ್ಕಳನ್ನು ಚಿವುಟಿ ತೊಟ್ಟಿಲು ತೂಗುವುದಕ್ಕೆ’ ಸಮವಾಗುತ್ತದಷ್ಟೆ.
ಇನ್ನು, ಬಾರ್‌ಗಳಲ್ಲಿ-ಪಬ್‌ಗಳಲ್ಲಿ ಪ್ರತ್ಯೇಕ ಸ್ಮೋಕಿಂಗ್ ಝೋನ್ ಎನ್ನುವ ಪರಿಕಲ್ಪನೆಯೇ ಬಾಲಿಶವಾಗಿ ಕಾಣಿಸುತ್ತದೆ. ಬಾರ್-ಪಬ್‌ಗಳಲ್ಲಿ ಪ್ರತ್ಯೇಕ ಸ್ಮೋಕಿಂಗ್ ಕೊಠಡಿಗಳಿದ್ದರೂ ಜನರು ಎದ್ದು ಹೋಗಿ ಅಲ್ಲಿ ಧೂಮಪಾನ ಮಾಡಿಬರುವ ಪರಿಪಾಠ ಎಲ್ಲಿಯೂ ಕಾಣಸಿಗುವುದಿಲ್ಲ. ತಮ್ಮ ಆರೋಗ್ಯದ ಬಗ್ಗೆಯೇ ಕಾಳಜಿಯಿಲ್ಲದವರು ಸುತ್ತಲಿನ ಪರಿಸರದ, ಜನರ ಆರೋಗ್ಯದ ಬಗ್ಗೆ ಕಾಳಜಿ ಹೇಗೆ ಮಾಡಿಯಾರು?
ಮೂಲ ಸಮಸ್ಯೆಯಿರುವುದೇ ಧೂಮಪಾನದ ನಿಜ ಅಪಾಯಗಳನ್ನು ಜನರಿಗೆ ಮನದಟ್ಟು ಮಾಡಿಸುವಲ್ಲಿ ಸರ್ಕಾರ ತೋರುತ್ತಿರುವ ವೈಫಲ್ಯದಲ್ಲಿ. ಇಂದು ಪ್ರತಿ ಶಾಲೆ-ಕಾಲೇಜುಗಳಲ್ಲಿ, ಕಚೇರಿಗಳಲ್ಲಿ ವ್ಯಸನ ಮುಕ್ತಿ ಕಾರ್ಯಾಗಾರಗಳನ್ನು ತಪಸ್ಸಿನಂತೆ ನಡೆಸುವ ಅಗತ್ಯವಿದೆ. ವ್ಯಸನ ಮುಕ್ತಿಗೆ ಸಮಯ ತಗುಲುತ್ತದೆ. ಅದು ಕೇವಲ ಒಂದೆರಡು ಜಾಹೀರಾತುಗಳಿಂದಲೋ ಅಥವಾ ಅನುಷ್ಠಾನಕ್ಕೆ ಬರದ ಕಾನೂನುಗ ಳಿಂದಲೋ ಆಗುವಂಥದ್ದಲ್ಲ.