Advertisement
ರಾಜೀನಾಮೆ ನೀಡಿರುವ ಹನ್ನೆರಡು ಶಾಸಕರಲ್ಲಿ ಹತ್ತು ಶಾಸಕರು ಮುಂಬೈಗೆ ತೆರಳಿದ್ದು, ಶಿವಸೇನೆ ನಾಯಕರ ಒಡೆತನದಲ್ಲಿರುವ ಸೋಫಿಟಲ್ ಹೋಟೆಲ್‌ನಲ್ಲಿ ಅತೃಪ್ತ ಶಾಸಕರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಮಹಾರಾಷ್ಟ್ರ ಬಿಜೆಪಿಯ ಉಪಾಧ್ಯಕ್ಷ ಪ್ರಸಾದ್ ಲಾಡ್‌ಗೆ ಉಸ್ತುವಾರಿ ನೀಡಲಾಗಿದೆ ಎಂದು ತಿಳಿದು ಬಂದಿದೆ.
Related Articles
Advertisement
ಈ ನಡುವೆ, ರಾಜ್ಯ ಕಾಂಗ್ರೆಸ್ ಮುಖಂಡ ಮಹೇಂದ್ರ ಸಿಂಘೆ ಅತೃಪ್ತರು ಉಳಿದುಕೊಂಡಿರುವ ಹೋಟೆಲ್‌ಗೆ ಭೇಟಿ ನೀಡಿ ಕುತೂಹಲ ಮೂಡಿಸಿದರು. ರಾಜ್ಯ ಕಾಂಗ್ರೆಸ್ ನಾಯಕರ ಸೂಚನೆ ಮೇರೆಗೆ ಮುಂಬೈಗೆ ಭೇಟಿ ನೀಡಿ, ಉತ್ತರ ಕರ್ನಾಟಕ ಭಾಗದ ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮಹೇಂದ್ರ ಸಿಂಘೆ, “ರಮೇಶ್ ಜಾರಕಿಹೊಳಿ ನನ್ನ ಆತ್ಮೀಯರು, ಅವರೊಂದಿಗೆ ಮಾತನಾಡಿದ್ದೇನೆ. ನೀವು ತೆಗೆದುಕೊಳ್ಳುವ ನಿರ್ಣಯ ಒಳ್ಳೆಯದಾಗಿರಲಿ ಎಂದು ಎಚ್ಚರಿಸಿದ್ದೇನೆ. ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ’ ಎಂದು ತಿಳಿಸಿದರು.
ಮಂಗಳವಾರ ಬೆಂಗಳೂರಿಗೆ: ರಾಜೀನಾಮೆ ನೀಡಿ ಮುಂಬೈ ಸೇರಿರುವ ಅತೃಪ್ತ ಶಾಸಕರು ಮಂಗಳವಾರ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್ ಅವರ ಅನುಪಸ್ಥಿತಿಯಲ್ಲಿ ಅವರ ಆಪ್ತ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿರುವುದರಿಂದ ತಾಂತ್ರಿಕವಾಗಿ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಮಂಗಳವಾರ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಖುದ್ದಾಗಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಖುಷಿಯಾಗಿ ಓಡಾಡಿದ ರಮೇಶ್ ಜಾರಕಿಹೊಳಿ: ಕಳೆದ ಆರು ತಿಂಗಳಿಂದ ಪಕ್ಷದ ವಿರುದ್ಧ ಬಂಡಾಯ ಸಾರಿದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ತಾವು ಅಂದುಕೊಂಡಿದ್ದನ್ನು ಸಾಧಿಸಿದೆ ಎನ್ನುವ ಖುಷಿಯಲ್ಲಿದ್ದರು. ಲೋಕಸಭೆ ಚುನಾವಣೆಯ ನಂತರ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಅದರಂತೆ ಸಾಮೂಹಿಕ ರಾಜೀನಾಮೆ ನೀಡಿ, ಸರ್ಕಾರಕ್ಕೆ ಶಾಕ್ ನೀಡಿದ್ದೇವೆ ಎಂದು ಆಪ್ತ ಶಾಸಕರ ಎದುರು ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರ, ಮಂಗಳವಾರ ಇನ್ನಷ್ಟು ಶಾಸಕರು ರಾಜೀನಾಮೆ ನೀಡಲಿದ್ದು, ಯಾರೂ ಊಹಿಸದಿರುವವರೂ ರಾಜೀನಾಮೆ ನೀಡಲಿದ್ದಾರೆ. ಮುಂದಿನವಾರ ಸರ್ಕಾರ ಪತನವಾಗುತ್ತದೆ ಎಂದು ಶಾಸಕರ ಎದುರು ಹೇಳಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಹಾರಾಷ್ಟ್ರ ಸಿಎಂ ಆಪ್ತ ಭೇಟಿ: ಶಾಸಕರು ತಂಗಿರುವ ಹೋಟೆಲ್‌ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಆಪ್ತ ಪ್ರಸಾದ್ ಲಾಡ್ ಭೇಟಿ ನೀಡಿ ರಾಜ್ಯ ಅತೃಪ್ತ ಶಾಸಕರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಪ್ರಸಾದ್ ಲಾಡ್ ಅವರು ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷರಾಗಿದ್ದು, ಶಾಸಕರ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರ ಕಾಂಗ್ರೆಸ್ ಪ್ರತಿಭಟನೆ: ರಾಜ್ಯ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿರುವುದನ್ನು ವಿರೋಧಿಸಿ ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಯಕರ್ತರು ಸೋಫಿಟಲ್ ಹೋಟೆಲ್ ಎದುರು ಭಾನುವಾರ ಪ್ರತಿಭಟನೆ ನಡೆಸಿದರು. ಶಾಸಕರು ಕೂಡಲೇ ರಾಜೀನಾಮೆ ವಾಪಸ್ ಪಡೆದು ಕರ್ನಾಟಕಕ್ಕೆ ತೆರಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಬಿಜೆಪಿ ಹಾಗೂ ಸಂಘ ಪರಿವಾರ, ಕರ್ನಾಟಕ ಸರ್ಕಾರವನ್ನು ಉರುಳಿಸುವ ಕುತಂತ್ರ ಕೈ ಬಿಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.
ಐಷಾರಾಮಿ ಹೋಟೆಲ್: ಮುಂಬೈನ ಬಾಂದ್ರಾದಲ್ಲಿರುವ ಸೋಫಿಟಲ್ ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ರಾಜ್ಯದ ಅತೃಪ್ತ ಶಾಸಕರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೋಟೆಲ್‌ನ ಏಳನೇ ಮಹಡಿಯ ಎಲ್ಲ ರೂಮ್‌ಗಳನ್ನು ರಾಜ್ಯದ ಅತೃಪ್ತ ಶಾಸಕರಿಗೆ ಬುಕ್ ಮಾಡಲಾಗಿದ್ದು, ಏಳನೇ ಮಹಡಿಗೆ ಉಳಿದ ಗ್ರಾಹಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಏಳನೇ ಮಹಡಿಯಲ್ಲಿ ಕಾನ್ಪರೆನ್ಸ್ ಹಾಲ್, ಜಿಮ್, ಸೆಲೂನ್ ಸ್ಪಾಗಳ ವ್ಯವಸ್ಥೆ ಇದೆ. ಸ್ಥಳೀಯ ಬಿಜೆಪಿ ನಾಯಕರ ಸೂಚನೆ ಮೇರೆಗೆ ಅತೃಪ್ತ ಶಾಸಕರಿಗೆ ಭಾರಿ ಭದ್ರತೆ ಒದಗಿಸಲಾಗಿದೆ.
ಏಕೆ ಈ ಹೊಟೇಲ್: ಸೋಫಿಟಲ್ ಹೋಟೆಲ್ ಮಹಾರಾಷ್ಟ್ರ ಬಿಜೆಪಿಗೆ ಲಕ್ಕಿ ಹೋಟೆಲ್ ಎಂಬ ಪ್ರತೀತಿ ಇದೆ. ಈ ಹೋಟೆಲ್‌ನಲ್ಲಿ ನಡೆಸಿದ ಶಿವಸೇನೆ ಹಾಗೂ ಬಿಜೆಪಿ ಸಭೆಗಳ ಫಲಿತಾಂಶ ಫಲಪ್ರದವಾಗಿದೆ ಎಂಬ ಮಾತುಗಳು ಚಾಲ್ತಿಯಲ್ಲಿವೆ. ಸೋಫಿಟಲ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದರೆ ಯಾವುದೇ ಸಮಸ್ಯೆ ಇಲ್ಲ ಎನ್ನುವ ಕಾರಣಕ್ಕೆ ಈ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬಿಜೆಪಿಯ ದಲ್ಲಾಳಿಗಳಿಗೆ ಹೋಟೆಲ್‌ನಲ್ಲಿ ಒಳಗಡೆ ಬಿಡಲಾಗಿದೆ. ಮುಂಬೈನಲ್ಲಿನ ಬೆಳವಣಿಗೆಗಳ ಬಗ್ಗೆ ಕರ್ನಾಟಕ ಕಾಂಗ್ರೆಸ್ ಮುಖಂಡರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.-ಭಾಯಿ ಜಗತಾಪ್, ಮಹಾರಾಷ್ಟ್ರ ಹಿರಿಯ ಕಾಂಗ್ರೆಸ್ ಮುಖಂಡ ನಾವು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದೇವೆ. ನಮಗೆ ಸಚಿವ ಸ್ಥಾನ ನೀಡಿದರೂ ಬೇಡ. ಮೂರು ಬಾರಿ ಶಾಸಕನಾಗಿದ್ದರೂ, ಸಚಿವ ಸ್ಥಾನ ನೀಡಲಿಲ್ಲ. ಕಾಂಗ್ರೆಸ್‌ನಲ್ಲಿ ನಮ್ಮ ಬೇಡಿಕೆಗಳಿಗೆ ಮರ್ಯಾದೆ ಇಲ್ಲದಿರುವುದರಿಂದಲೇ ರಾಜೀನಾಮೆ ನೀಡಿದ್ದೇವೆ.
-ಬಿ.ಸಿ. ಪಾಟೀಲ್, ರಾಜೀನಾಮೆ ನೀಡಿರುವ ಹಿರೇಕೆರೂರು ಶಾಸಕ ನಾನು ಮೂರು ಸಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಮ್ಮ ಯಾವ ಬೇಡಿಕೆಗಳಿಗೂ ಮರ್ಯಾದೆ ಸಿಗುತ್ತಿಲ್ಲ. ಮೈತ್ರಿ ಸರ್ಕಾರದಲ್ಲಿ ನಮಗೆ ಮರ್ಯಾದೆ ಇಲ್ಲದಂತಾಗಿದೆ. ಹೀಗಾಗಿ, ರಾಜೀನಾಮೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ.
-ಪ್ರತಾಪ್‌ಗೌಡ ಪಾಟೀಲ್, ರಾಜೀನಾಮೆ ನೀಡಿರುವ ಮಸ್ಕಿ ಶಾಸಕ ಮೈತ್ರಿ ಸರ್ಕಾರದಲ್ಲಿ ನಮ್ಮನ್ನು ಯಾರೂ ಕೇಳದಂತಾಗಿದೆ. ಎಷ್ಟೇ ಸಮಸ್ಯೆ ಹೇಳಿದರೂ ಯಾರೂ ಸ್ಪಂದಿಸುತ್ತಿಲ್ಲ. ಮೈತ್ರಿ ಸರ್ಕಾರದ ನಾಯಕರ ವಿರುದ್ಧ ಬೇಸರಗೊಂಡು ರಾಜೀನಾಮೆ ನೀಡಿದ್ದೇವೆ. ರಾಜೀನಾಮೆ ವಾಪಸ್ ಪಡೆಯುವುದಿಲ್ಲ.
-ಮಹೇಶ್ ಕುಮಠಳ್ಳಿ, ರಾಜೀನಾಮೆ ನೀಡಿರುವ ಅಥಣಿ ಶಾಸಕ