Advertisement

ಎಸ್‌ಎಂಕೆ-ಎಚ್‌ಡಿಕೆ ವಾಕ್ಸಮರ

11:03 PM Jun 09, 2019 | Lakshmi GovindaRaj |

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಸುದ್ದಿ ವಾಹಿನಿಯೊಂದರ ವಿರುದ್ಧ ವಾಗ್ಧಾಳಿ ನಡೆಸಿದ್ದಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಾಯಕ ಎಸ್‌.ಎಂ. ಕೃಷ್ಣ ಆಕ್ಷೇಪಿಸಿದ್ದು, ತಾತ್ಕಾಲಿಕ ಅಧಿಕಾರದಲ್ಲಿರುವವರು ಮಾಧ್ಯಮ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕಿದೆ ಎಂದು ಸಲಹೆ ನೀಡಿದ್ದಾರೆ.

Advertisement

ಇದಕ್ಕೆ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಸರ್ಕಾರದ ಬಗ್ಗೆ, ನನ್ನ ನಡವಳಿಕೆ ಕುರಿತು ರಚನಾತ್ಮಕ ಟೀಕೆ ಮಾಡಿದರೆ ಅದನ್ನು ಸ್ಫೂರ್ತಿಯಿಂದ ಸ್ವೀಕರಿಸುವಷ್ಟು ಮುಕ್ತ ಮನೋಭಾವವಿದ್ದು, ಮುಖ್ಯಮಂತ್ರಿ ಹುದ್ದೆ ಶಾಶ್ವತವಲ್ಲ ಎಂಬ ಅರಿವು ನನಗಿದೆ ಎಂಬುದಾಗಿ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಅವರು ಇತ್ತೀಚೆಗೆ ಜೆಡಿಎಸ್‌ ಕಾರ್ಯಕ್ರಮದಲ್ಲಿ ಸುದ್ದಿವಾಹಿನಿಯೊಂದರ ವಿರುದ್ಧ ನಡೆಸಿದ ವಾಗ್ಧಾಳಿಗೆ ಸಂಬಂಧಪಟ್ಟಂತೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಎಸ್‌.ಎಂ.ಕೃಷ್ಣ, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅನುಭವಿಸಿದ ಹೀನಾಯ ಸೋಲಿನಿಂದ ಹತಾಶಗೊಂಡಂತೆ ಮುಖ್ಯಮಂತ್ರಿಯವರು ಸುದ್ದಿ ವಾಹಿನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಗತ್ಯ ಆರೋಪ ಮಾಡುವ ಮೂಲಕ ಕೆಳಮಟ್ಟಕ್ಕಿಳಿದಿದ್ದಾರೆ ಎಂದು ಜರಿದಿದ್ದಾರೆ.

ತಾತ್ಕಾಲಿಕ ಸ್ಥಾನದಲ್ಲಿರುವವರು ಮಾಧ್ಯಮ ಸ್ವಾತಂತ್ರ್ಯ ಸೇರಿ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯಗಳನ್ನು ಎತ್ತಿ ಹಿಡಿಯಬೇಕಾಗುತ್ತದೆ. ಮಾಧ್ಯಮ ಸ್ವಾತಂತ್ರ್ಯವು ಸಂವಿಧಾನದತ್ತವಾಗಿದೆ. ಹಾಗಾಗಿ ಮುಖ್ಯಮಂತ್ರಿಗಳು ತಮ್ಮ ಇತಿಮಿತಿ ಅರಿತು ಮುಂದುವರಿಯಬೇಕು. ಇಲ್ಲದಿದ್ದರೆ ಅವರು ವೈಯಕ್ತಿಕವಾಗಿ ಅಧಃಪತನಕ್ಕೆ ಈಡಾಗಲಿದ್ದಾರೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಹಿರಿಯ ಮುತ್ಸದ್ಧಿಗಳಾದ ಎಸ್‌.ಎಂ.ಕೃಷ್ಣ ಅವರು ಮಾಧ್ಯಮಗಳ ಸ್ವಾತಂತ್ರ್ಯ ಕುರಿತು ನೀಡಿರುವ ಹೇಳಿಕೆಯನ್ನು ಗೌರವಿಸುತ್ತೇನೆ. ಆದರೆ ಮಾಧ್ಯಮಗಳ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರ ಮಾಡಲು ಅವಕಾಶವಿಲ್ಲ. ಕಾನೂನಿನ ಮುಂದೆ ಮುಖ್ಯಮಂತ್ರಿಯಾಗಲಿ, ಪತ್ರಕರ್ತರಾಗಲಿ ಎಲ್ಲರೂ ಒಂದೇ, ತಲೆಬಾಗಲೇಬೇಕು ಎಂಬುದನ್ನೂ ಸನ್ಮಾನ್ಯ ಕೃಷ್ಣ ಅವರು ಸಂಬಂಧಪಟ್ಟ ಪತ್ರಕರ್ತರ ಗಮನಕ್ಕೆ ತರಲಿ ಎಂದು ಆಶಿಸುತ್ತೇನೆ ಎಂದು ಕುಟುಕಿದ್ದಾರೆ.

Advertisement

ಸಂವಿಧಾನದತ್ತವಾದ ಮಾಧ್ಯಮ ಸ್ವಾತಂತ್ರ್ಯವನ್ನು ನಾನು ಖಂಡಿತಾ ಗೌರವಿಸುತ್ತೇನೆ. ಆದರೆ ರಾಜ್ಯಪಾಲರು, ಮುಖ್ಯಮಂತ್ರಿ ಹುದ್ದೆಯಂತಹ ಸಾಂವಿಧಾನಾತ್ಮಕ ಹುದ್ದೆಯನ್ನು ಅಗೌರವದಿಂದ ಕಾಣುವ “ಸ್ವಾತಂತ್ರ್ಯ’ ಖಂಡಿತ ಇಲ್ಲ ಎನ್ನುವುದು ನನ್ನ ಸೀಮಿತ ತಿಳಿವಳಿಕೆಯಲ್ಲಿರುವ ವಿಚಾರ. ಒಬ್ಬ ವ್ಯಕ್ತಿಯನ್ನು ದುರುದ್ದೇಶಪೂರಿತವಾಗಿ ತೇಜೋವಧೆ ಮಾಡುವ ಅಧಿಕಾರವನ್ನಂತೂ ಸಂವಿಧಾನ ಮಾಧ್ಯಮಗಳಿಗೆ ನೀಡಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next