Advertisement

ನಂ.1 ಸ್ಥಾನ ಭದ್ರಪಡಿಸಿದ ಸ್ಮಿತ್‌

02:21 PM Nov 29, 2017 | Team Udayavani |

ದುಬಾೖ: ಆ್ಯಶಸ್‌ ಸರಣಿಯ ಬ್ರಿಸ್ಬೇನ್‌ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ ಆಸ್ಟ್ರೇ ಲಿಯ ತಂಡದ ನಾಯಕ ಸ್ಟೀವನ್‌ ಸ್ಮಿತ್‌ ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ ಯಾದಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಈ ಸಾಧನೆಗಾಗಿ ಅವರಿಗೆ 5 ಅಂಕ ಲಭಿಸಿದ್ದು, ಒಟ್ಟು ಅಂಕವೀಗ 941ಕ್ಕೆ ಏರಿದೆ. 

Advertisement

ಇದು ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ ಇತಿಹಾಸದಲ್ಲಿ ಆಟಗಾರನೊಬ್ಬ ಗಳಿಸಿದ ಜಂಟಿ 5ನೇ ಅತ್ಯಧಿಕ ಅಂಕವಾಗಿದೆ. ಸರ್‌ ಡಾನ್‌ ಬ್ರಾಡ್‌ಮನ್‌ (961), ಲೆನ್‌ ಹಟನ್‌ (945), ಜಾಕ್‌ ಹಾಬ್ಸ್ (942), ರಿಕಿ ಪಾಂಟಿಂಗ್‌ (942) ಮೊದಲ 4 ಸ್ಥಾನದಲ್ಲಿದ್ದಾರೆ. ಪೀಟರ್‌ ಮೇ ಕೂಡ 941 ಅಂಕ ಗಳಿಸಿದ್ದರು. ಮುಂದಿನ ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿ ಸ್ಮಿತ್‌ ಇಂಥದೇ ಬ್ಯಾಟಿಂಗ್‌ ಪ್ರದರ್ಶನವನ್ನು ಪುನರಾವರ್ತಿಸಿದರೆ ಅವರು ಬ್ರಾಡ್‌ಮನ್‌ ಅನಂತರದ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಎಲ್ಲ ಸಾಧ್ಯತೆ ಹೊಂದಿದ್ದಾರೆ.

ಪೂಜಾರ ಮತ್ತೆ ನಂ.2
ನಾಗ್ಪುರ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ 143 ರನ್‌ ಬಾರಿಸಿದ ಭಾರತದ ಚೇತೇಶ್ವರ್‌ ಪೂಜಾರ ದ್ವಿತೀಯ ಸ್ಥಾನಕ್ಕೆ ಮರಳಿದ್ದಾರೆ. ಈ ಪಂದ್ಯಕ್ಕೂ ಮೊದಲು ಅವರು 4ನೇ ಸಾªನದಲ್ಲಿದ್ದರು. ನಾಗ್ಪುರ ಬ್ಯಾಟಿಂಗ್‌ ಸಾಧನೆಗಾಗಿ ಪೂಜಾರ 22 ಅಂಕ ಗಳಿಸಿದರು. ಅವರ ಒಟ್ಟು ಅಂಕವೀಗ 888ಕ್ಕೆ ಏರಿದ್ದು, ಇದು ಪೂಜಾರ ಅವರ ಜೀವನಶ್ರೇಷ್ಠ ಸಾಧನೆಯಾಗಿದೆ. 

ಟೆಸ್ಟ್‌ ಬಾಳ್ವೆಯ 5ನೇ ದ್ವಿಶತಕ ಬಾರಿಸಿದ ವಿರಾಟ್‌ ಕೊಹ್ಲಿ ತಮ್ಮ ರ್‍ಯಾಂಕಿಂಗ್‌ ಅಂಕಗಳನ್ನು 877ಕ್ಕೆ ಏರಿಸಿಕೊಂಡರೂ 5ನೇ ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ. ಜೋ ರೂಟ್‌ (881) ಹಾಗೂ ಕೇನ್‌ ವಿಲಿಯಮ್ಸನ್‌ (880) ಕ್ರಮವಾಗಿ 3-4ನೇ ಸ್ಥಾನದಲ್ಲಿದ್ದಾರೆ. 2ರಿಂದ 5ನೇ ಸ್ಥಾನದ ವರೆಗೆ ಕೇವಲ 11 ಅಂಕಗಳ ವ್ಯತ್ಯಾಸವಿದ್ದು, ಆ್ಯಶಸ್‌ ಹಾಗೂ ಭಾರತ-ಶ್ರೀಲಂಕಾ ಟೆಸ್ಟ್‌ ಸರಣಿ ಮುಂದುವರಿದಂತೆ ರ್‍ಯಾಂಕಿಂಗ್‌ ಯಾದಿಯಲ್ಲಿ ಮಹತ್ವದ ಬದಲಾವಣೆಗಳನ್ನು ನಿರೀಕ್ಷಿಸಬಹುದು. 

ನಾಗ್ಪುರದಲ್ಲಿ ಶತಕ ಬಾರಿಸಿದ ಮುರಳಿ ವಿಜಯ್‌, ರೊಹಿತ್‌ ಶರ್ಮ ಕೂಡ ರ್‍ಯಾಂಕಿಂಗ್‌ ಯಾದಿಯಲ್ಲಿ ಪ್ರಗತಿ ಸಾಧಿಸಿದ್ದಾರೆ. ವಿಜಯ್‌ 8 ಸ್ಥಾನ ಮೇಲೇರಿದ್ದು, 28ನೇ ಸ್ಥಾನಕ್ಕೆ ಬಂದಿದ್ದಾರೆ. ರೋಹಿತ್‌ 7 ಸ್ಥಾನಗಳ ಜಿಗಿತದೊಂದಿಗೆ 46ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕೆ.ಎಲ್‌. ರಾಹುಲ್‌ ಮತ್ತು ಶಿಖರ್‌ ಧವನ್‌ ಒಂದು ಸ್ಥಾನ, ಅಜಿಂಕ್ಯ ರಹಾನೆ 2 ಸ್ಥಾನ ಕೆಳಗಿಳಿದಿದ್ದಾರೆ. 

Advertisement

ಜಡೇಜ ಮರಳಿ ಎರಡಕ್ಕೆ
ನಾಗ್ಪುರದಲ್ಲಿ 84 ರನ್ನಿಗೆ 5 ವಿಕೆಟ್‌ ಕಿತ್ತ ರವೀಂದ್ರ ಜಡೇಜ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಅತಿ ಕಡಿಮೆ ಟೆಸ್ಟ್‌ಗಳಲ್ಲಿ 300 ವಿಕೆಟ್‌ ಉರುಳಿಸಿದ ಆರ್‌. ಅಶ್ವಿ‌ನ್‌ 4ನೇ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಭುವನೇಶ್ವರ್‌ ಕುಮಾರ್‌ (28) ಮತ್ತು ಇಶಾಂತ್‌ ಶರ್ಮ (30) ಒಂದೊಂದು ಸ್ಥಾನ ಮೇಲೇರಿದ್ದಾರೆ. 

ಬ್ರಿಸ್ಬೇನ್‌ನಲ್ಲಿ ಕೇವಲ 2 ವಿಕೆಟ್‌ ಕಿತ್ತ ಜೇಮ್ಸ್‌ ಆ್ಯಂಡರ್ಸನ್‌ 5 ಅಂಕ ಕಳೆದುಕೊಂಡರೂ ಅವರ ಅಗ್ರಸ್ಥಾನಕ್ಕೇನೂ ಧಕ್ಕೆಯಾಗಿಲ್ಲ.  ಟೆಸ್ಟ್‌ ಆಲ್‌ರೌಂಡರ್‌ಗಳ ಯಾದಿಯಲ್ಲಿ ಆರ್‌. ಅಶ್ವಿ‌ನ್‌ 3ನೇ ಸ್ಥಾನಕ್ಕೆ ಮರಳಿದ್ದಾರೆ.

ಟಾಪ್‌-10 ಬ್ಯಾಟ್ಸ್‌ಮನ್‌: 
1. ಸ್ಟೀವನ್‌ ಸ್ಮಿತ್‌ (941), 2. ಚೇತೇಶ್ವರ್‌ ಪೂಜಾರ (888), 3. ಜೋ ರೂಟ್‌ (881), 4. ಕೇನ್‌ ವಿಲಿಯಮ್ಸನ್‌ (880), 5. ವಿರಾಟ್‌ ಕೊಹ್ಲಿ (877), 6. ಡೇವಿಡ್‌ ವಾರ್ನರ್‌ (826), 7. ಹಾಶಿಮ್‌ ಆಮ್ಲ (795), 8. ಅಜರ್‌ ಅಲಿ (755), 9. ಕೆ.ಎಲ್‌. ರಾಹುಲ್‌ (735), 10. ಡೀನ್‌ ಎಲ್ಗರ್‌ (732).

ಟಾಪ್‌-10 ಬೌಲರ್: 
1. ಜೇಮ್ಸ್‌ ಆ್ಯಂಡರ್ಸನ್‌ (891), 2. ರವೀಂದ್ರ ಜಡೇಜ (880), 3. ಕಾಗಿಸೊ ರಬಾಡ (876), 4. ಆರ್‌. ಅಶ್ವಿ‌ನ್‌ (849), 5. ರಂಗನ ಹೆರಾತ್‌ (807), 6. ಜೋಶ್‌ ಹ್ಯಾಝಲ್‌ವುಡ್‌ (798), 7. ನಥನ್‌ ಲಿಯೋನ್‌ (753), 8. ಡೇಲ್‌ ಸ್ಟೇನ್‌ (748), 9. ನೀಲ್‌ ವ್ಯಾಗ್ನರ್‌ (745), 10. ಮಿಚೆಲ್‌ ಸ್ಟಾರ್ಕ್‌ (744).

Advertisement

Udayavani is now on Telegram. Click here to join our channel and stay updated with the latest news.

Next