ಕನ್ನಡ, ಹಿಂದಿ ಚಿತ್ರಭೂಮಿಕೆಗಳಲ್ಲಿ ನಟಿಸಿದ್ದ, ಹಿರಿಯ ಅಭಿನೇತ್ರಿ ಕಿಶೋರಿ ಬಲ್ಲಾಳ್ ಇತ್ತೀಚೆಗಷ್ಟೇ ಇಹವನ್ನು ಅಗಲಿದರು. ಆಪ್ತ ಬಳಗದಲ್ಲಿ ಅವರು ಬಿತ್ತಿದ ನೆನಪುಗಳು ನೂರಾರು…
ಸದಾ ನಗು ಮೊಗದ ಅಮ್ಮ, ಕಿಶೋರಿ ಬಲ್ಲಾಳ್. ನಾವು ಯಾವಾಗಲೂ ಅವರಿಗೆ, “ನಿಮಗೆ ದುಃಖದ ದೃಶ್ಯ ನಟಿಸಲು ಕೊಟ್ಟರೂ ನಗ್ತಾ ನಗ್ತಾನೆ ಅಳಿಸ್ತಿರಿ’ ಎಂದು ಕಿಚಾಯಿಸುತ್ತಿದ್ದೆವು. ಅದಕ್ಕೆ ಅವರು, “ಮತ್ತೆ ನಾನು, ಶಾರೂಖ್ ಖಾನ್‌ನನ್ನೇ ಅಳಿಸಿದೋಳಲ್ವೇ?’ ಅನ್ನೋರು. ನಮ್ಮ ಸ್ಪಂದನ ನಾಟಕ ತಂಡ ಮುಂಬೈಗೆ ಹೋದಾಗ, ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ.
ಅಗಿನ್ನೂ ಅವರದು ನಡು ವಯಸ್ಸು. ಆ ನಾಟಕೋತ್ಸವದಲ್ಲಿ ಅವರು ಪತಿ ಬಲ್ಲಾಳರ ಜತೆ ಓಡಾಡುವಾಗ ಸಡಗರ ಮನೆಮಾಡಿತ್ತು. ನಂತರದಲ್ಲಿ ಬಲ್ಲಾಳ್ ದಂಪತಿ, ಬೆಂಗಳೂರಿಗೆ ಬಂದು ನೆಲೆಸಿದರು. “ಪ್ರೇಮ ರಾಗ ಹಾಡು ಗೆಳತಿ’ ಚಿತ್ರದಲ್ಲಿ ನನ್ನ ತಂದೆ , ತಾಯಿಯ ಪಾತ್ರದಲ್ಲಿ ಅವರಿಬ್ಬರು ನಟಿಸಿದ್ದರು. ನನ್ನದು ಅದರಲ್ಲಿ ಮೂಕನ ಪಾತ್ರ. ನನಗಿಂತ ಕಿಶೋರಿ ಬಲ್ಲಾಳರೇ ಪಾತ್ರದಲ್ಲಿ ಲೀನವಾಗಿ ಬಹಳ ದುಃಖೀತರಾಗಿದ್ದನ್ನು ಕಂಡಿದ್ದೆ.
250ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದ್ದ ರಾಜೇಂದ್ರ ಕಾರಂತನ ನಮ್ಮ ನಾಟಕ “ನಮ್ಮ ನಿಮ್ಮೊಳಗೊಬ್ಬ’. ಈ ಟಿವಿಗಾಗಿ ಟಿಲಿಫಿಲ್ಮ್ನಂತೆ ಚಿತ್ರಿಸಲು ಸಿದ್ಧತೆ ನಡೆಸಿದ್ದಾಗ, ಕುಂದಾಪುರದ ಭಾಷೆಯ ಲಾಲಿತ್ಯವನ್ನು ಬಲ್ಲಂತ ಕಲಾವಿದೆ ಬೇಕಿತ್ತು. ಮುಂಚೆ ರಂಗನಟಿ ಶಾಂತತುಪ್ಪರವರು ಆ ಪಾತ್ರವನ್ನು ಮಾಡುತ್ತಿದ್ದರು. ಆದರೆ, ಆ ವೇಳೆಗೆ ಶಾಂತಾತುಪ್ಪಾ ತೀರಿಕೊಂಡಿದ್ದರು. ಬೇರೆ ಯಾರು ಎಂದು ಯೋಚಿಸುತ್ತಿದ್ದಾಗ ಹೊಳೆದದ್ದು ಕಿಶೋರಿ ಬಲ್ಲಾಳ್.
ಕೋರಮಂಗಲದ ಅವರ ಮನೆಗೆ ಹೋಗಿ, ಕೇಳಿಕೊಂಡಿದ್ದಕ್ಕೆ ನಮ್ಮ ನಾಟಕದ ಬಗ್ಗೆ ಕೇಳಿ ತಿಳಿದಿದ್ದ ಅವರು, ಬಹಳ ಖುಷಿಯಿಂದ ಒಪ್ಪಿಕೊಂಡಿದ್ದರು. ಹೈದರಾಬಾದ್‌ನಲ್ಲಿ 10 ದಿನಗಳ ಶೂಟಿಂಗು. ಅಷ್ಟೂ ದಿವಸ ಮಳೆಯ ಸನ್ನಿವೇಶದಲ್ಲಿ ನಟಿಸಬೇಕಿತ್ತು. ಅಷ್ಟು ಹಿರಿಯರಾದರೂ, ಮಕ್ಕಳಂತೆ ನಮ್ಮೊಡನೆ ಬೆರೆತು, ವಿಸ್ಮಯ ಮೂಡಿಸಿದ್ದರು.
ವಾರಕ್ಕೊಮ್ಮೆ ಅವರ ಫೋನು ಬರುತ್ತಲೇ ಇತ್ತು… “ಹೇಗಿದ್ದೀಯಾ? ಆರಾಮ?’ ಎಂದು. ಅವರ ಮನೆಗೆ ಹೋದರಂತೂ, ಭರ್ಜರಿ ಅತಿಥಿ ಸತ್ಕಾರ. ನಮ್ಮೆಲ್ಲರ ಪ್ರೀತಿಯ ಅಮ್ಮ, ಈಗ ಕಾಣಿಸುತ್ತಿಲ್ಲ. ನೆನಪಿನ ಕಲಾಕೃತಿಯಾಗಿ ನಮ್ಮ ಮನದೊಳಗೆ ನಿಂತಿದ್ದಾರೆ.
* ನಾಗೇಂದ್ರ ಶಾನ್