Advertisement

ನಗುವ ಹೂಗಳು

06:00 AM Aug 10, 2018 | |

ಮಳೆಗಾಲದಲ್ಲಿ  ಎಲ್ಲೆಡೆ ಹಸಿರು ಚಿಗುರೊಡೆದು ನಳನಳಿಸುತ್ತಿರಲು ಹಸಿರಿನ ನಡುವೆ ಕಣ್ಣಿಗೆ ತಂಪು, ಜತೆಗೆ ಮನಕ್ಕೂ ತಂಪು ನೀಡುವ ವಿವಿಧ ಕಂಪಿನ ಹೂಗಳು ನಲಿದಾಡುತ್ತವೆ. ವೈವಿಧ್ಯಮಯ ಚಿತ್ತಾಕರ್ಷಕ ಬಣ್ಣಗಳೊಂದೆಡೆಯಾದರೆ, ಬಣ್ಣ ಬಣ್ಣದ ಹೂಗಳ ಮೇಲೆ ನಲಿದಾಡುವ ಮಳೆಹನಿಗಳ ನೋಟ ಕಣ್ಮನ ತಣಿಸುತ್ತವೆ. ವಿಶೇಷವಾಗಿ ಮಳೆಗಾಲದಲ್ಲಿಯೇ ಅರಳುವ ಹೂಗಳು ಇಂತಿವೆ.

Advertisement

ಕಮಲದ ಹೂವು
ಮಳೆಗಾಲದಲ್ಲಿ ಪವಿತ್ರವಾದ ಹಾಗೂ ಅಂದವಾದ ಕಮಲದ ಹೂವು ಅರಳಿ ನಗಲು ಮನೆಯ ತೋಟದಲ್ಲಿ ಅಥವಾ ಕೈತೋಟದಲ್ಲಿ ಕೃತಕ ಟ್ಯಾಂಕ್‌ ಸೃಜಿಸಿ ಅಥವಾ ನೀರು ನಿಲ್ಲುವ ಸಣ್ಣ ತಟಾಕಗಳನ್ನು ನಿರ್ಮಿಸಿದರೂ ಮಳೆಗಾಲದ ತುಂಬಾ ಬಣ್ಣ ಬಣ್ಣದ ಕಮಲದ ಹೂಗಳು ಅರಳಿ ನಿಂತು ಪರಿಮಳ ಸೂಸುತ್ತವೆ. ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳಿಗೆಲ್ಲ ಕಮಲದ ಹೂವು ಶ್ರೇಷ್ಠ. ಕಮಲಾಲಯೆಯಾಗಿರುವ ಕಮಲಜಲೋಚನೆ ಮಹಾಲಕುಮಿಗೆ ಪ್ರಿಯವೀ ಕಮಲ! ವಾಟರ್‌ ಲಿಲ್ಲಿ ಹಾಗೂ ಲಿಲ್ಲಿ ಹೂಗಳು ಸಹ ಮಳೆಗಾಲದಲ್ಲಿ ಅರಳಿ ಬಣ್ಣಗಳಿಂದ ಮಿನುಗುತ್ತವೆ.

ಗುಲ್‌ ಮೊಹರ್‌
ರಕ್ತವರ್ಣದ ಅಂದದ ಗುಲ್‌ಮೊಹರ್‌, ಇತರ ಮರಗಳ ಹೂಗಳು ಉದುರಿದಾಗ, ಅಂದರೆ ಬೇಸಿಗೆಯ ಕೊನೆ (ಮೇ ತಿಂಗಳಲ್ಲಿ) ಅರಳಲು ಆರಂಭಿಸಿ ಮಳೆಗಾಲವಿಡೀ ಮರವಿಡೀ ತುಂಬಿ ತುಳುಕುತ್ತದೆ. ಗಾರ್ಡನ್‌ಗಳಲ್ಲಿ ಗುಲ್‌ಮೊಹರ್‌ನ ಸಾಲು ಮರಗಳಿದ್ದರೆ, ಮಳೆಗಾಲದಲ್ಲಿ ಭುವಿಗೆ ಕೆಂಪು ಬಣ್ಣದ ಕಾಪೆìಟ್‌ ಹಾಸಿದಂತೆ, ಉದುರಿದ ಹೂಗಳು ನೆಲದ ಮೇಲೆ ಅಂದವಾಗಿ ಕಾಣಿಸುತ್ತವೆ.

ಮಾನ್‌ಸೂನ್‌ ಕ್ಯಾಸಿಯಾ
ಗಾಢ ಹಳದಿ ಬಣ್ಣದ ಹೂಗಳಿಂದ ರಸ್ತೆಯ ಇಕ್ಕೆಲಗಳಲ್ಲಿ ಮರಗಳಲ್ಲಿ ಓಲಾಡುವ ಮಾನ್‌ಸೂನ್‌ ಕ್ಯಾಸಿಯಾ ನೋಡಲು ಬಲು ಅಂದ. ಇದರ ಚಿಗುರು ಎಲೆಗಳನ್ನು ಅಡುಗೆಯಲ್ಲಿ ಬಳಸುತ್ತಾರೆ. ಇದು ಆರೋಗ್ಯಕ್ಕೆ ಹಿತಕರ. 5 ಎಸಳುಗಳುಳ್ಳ ಮಾನ್‌ಸೂನ್‌ ಕ್ಯಾಸಿಯಾ ಕಂಗಳಿಗೂ, ಮನಸ್ಸಿಗೂ ಮುದ ನೀಡುತ್ತದೆ. ಸಾಮಾನ್ಯವಾಗಿ ಗುಲ್‌ಮೊಹರ್‌ ಹಾಗೂ ಮಾನ್‌ಸೂನ್‌ ಕ್ಯಾಸಿಯಾ ಮಳೆಗಾಲದಲ್ಲಿ ರಸ್ತೆ, ಹೆದ್ದಾರಿಗಳ ಇಕ್ಕೆಲಗಳಲ್ಲಿ ಮೈತುಂಬಾ ಕೆಂಪು-ಹಳದಿ ಹೂವಿನಿಂದ ಅಲಂಕರಿಸಿಕೊಂಡಿರುವುದು ಕಾಣಸಿಗುವುದು ಸರ್ವೇಸಾಮಾನ್ಯ.

ಡೇಲಿಯಾ
ಜೂನ್‌ನಿಂದ-ಡಿಸೆಂಬರ್‌ವರೆಗೆ ಅರಳಿ ನಲಿದಾಡುವ ಡೇಲಿಯಾ ಹೂಗಳಲ್ಲಿ ಬಣ್ಣಗಳ ವೈವಿಧ್ಯಮಯ ಸಂಯೋಜನೆಗಳಿವೆ. ಈ ಪ್ರಾಕೃತಿಕ ವರ್ಣ ಸಂಯೋಜನೆ ಚಿತ್ತಾಕರ್ಷಕ. ಈ ಹೂವುಗಳು ಬೇಗನೆ ಬಾಡುವುದೂ ಇಲ್ಲ.

Advertisement

ಮೇರಿಗೋಲ್ಡ್‌ ಅಥವಾ ಗೊಂಡೆ ಹೂವು
ಪೋರ್ಚುಗೀಸರಿಂದ ಭಾರತಕ್ಕೆ ಪರಿಚಯಿಸಲ್ಪಟ್ಟ ಗೊಂಡೆ ಹೂವು ಅಥವಾ ಮೇರಿಗೋಲ್ಡ್‌ ಹಾರಗಳ ರೂಪದಲ್ಲಿ ಅಂದವಾಗಿ ಪೋಣಿಸಲ್ಪಟ್ಟು ವಿಶೇಷ ಸಮಾರಂಭ, ಪೂಜೆ, ಪುನಸ್ಕಾರಗಳಲ್ಲಿ ಬಹುವಾಗಿ ಬಳಸಲ್ಪಡುತ್ತವೆ.
ಮಳೆಗಾಲದಲ್ಲಿ ಬರುವ ಸಾಲು ಸಾಲು ಹಬ್ಬಗಳಲ್ಲಿ ಫ್ರೆಂಚ್‌, ಆಫ್ರಿಕನ್‌ ಇವೇ ಮೊದಲಾದ ವೈವಿಧ್ಯಮಯ ಗೊಂಡೆ ಹೂವುಗಳು ಭಾರತದಲ್ಲಿ ವಿಪುಲವಾಗಿ ಸಿಗುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಬಳಸಲ್ಪಡುತ್ತವೆ.

ದಾಸವಾಳ
ಬಣ್ಣ ಬಣ್ಣದ ದಾಸವಾಳ ಮಳೆಗಾಲದಲ್ಲಿ ತನ್ನ ದೊಡ್ಡ ಪಕಳೆಗಳನ್ನು ಅರಳಿಸಿ ನಗುವುದು ನೋಡಲು ಅಂದ. ಮಳೆಗಾಲದಲ್ಲಿ ಉಂಟಾಗುವ ತುರಿಕೆ, ಕಜ್ಜಿ ಮೊದಲಾದ ಚರ್ಮದ ತೊಂದರೆಗಳಲ್ಲಿ  ದಾಸವಾಳದ (ಬಿಳಿ ದಾಸವಾಳವಾದರೆ ಶ್ರೇಷ್ಠ) ಎಲೆಗಳನ್ನು ದೋಸೆ ಅಥವಾ ಇಡ್ಲಿ ಹಿಟ್ಟಿನಲ್ಲಿ ಅರೆದು ಸೇವಿಸಿದರೆ ಶಮನಕಾರಿ. ಬಿಳಿ ದಾಸವಾಳ ಹಾಗೂ ಕೆಂಪು ದಾಸವಾಳದ ಹೂವುಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಬೇಕು. ಎಂಟು ದಿನ ಕುದಿಸಿದ ಬಳಿಕ ತಲೆಕೂದಲಿಗೆ ಲೇಪಿಸಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಹೊಟ್ಟು ನಿವಾರಣೆಯಾಗುತ್ತದೆ.

ಇಂಡಿಗೋ ಅಥವಾ ನೀಲಿ ಹೂವು
ಗಾಢ ನೀಲಿ ಬಣ್ಣ ತಿಳಿ ನೀಲಿ ಬಣ್ಣಗಳಲ್ಲಿ ಮಳೆಗಾಲದಲ್ಲಿ ಸಮೃದ್ಧವಾಗಿ ಬೆಳೆಯುವ ನೀಲಿ ಹೂ ಅಥವಾ ಇಂಡಿಗೋ ಹೂವು ಚಿತ್ತಾಪಹಾರಕ.

ಮಲ್ಲಿಗೆ
ಕೇಪ್‌ ಜಾಸ್ಮಿನ್‌ ಮಳೆಗಾಲದಲ್ಲಿ ಅಧಿಕವಾಗಿ ಕಂಡುಬರುವ ಹೂವು. ಈ ಹೂವು ತುಂಬಾ ಪರಿಮಳ ಯುಕ್ತವಾಗಿರುವುದರಿಂದ ಗಂಧರಾಜ ಎಂದೂ ಕರೆಯುತ್ತಾರೆ. ದೇವರ ಪೂಜೆಗೆ ಸಭೆ-ಸಮಾರಂಭಗಳಿಗೆ ವಿಶೇಷವಾಗಿ ಮಳೆಗಾಲದಲ್ಲಿ ಬಳಸಲ್ಪಡುತ್ತದೆ.
ಹೀಗೆ ಬಗೆ ಬಗೆಯ ಹೂಗಳಿಂದ ಮಳೆಗಾಲ ವರ್ಣಮಯ, ಸುಗಂಧಮಯ!

ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next