Advertisement

ಪ್ರತಿಕೂಲ ಪರಿಸ್ಥಿತಿಯಲ್ಲೂ ಕೃಷಿಕನ ಮೊಗದಲ್ಲಿ ಕಿಲಕಿಲ

12:17 PM Apr 07, 2022 | Team Udayavani |

ಕಾಪು: ಸಮರ್ಪಕ ಬೀಜದ ಕೊರತೆ, ಬಿರು ಬಿಸಿಲಿನಿಂದ ಒಣಗಿ ಹೋದ ತರಕಾರಿ ಗದ್ದೆ, ನವಿಲು, ಹೆಗ್ಗಣ ಮತ್ತು ಹಂದಿಗಳ ಕಾಟದ ನಡುವೆಯೂ ಛಲದೊಂದಿಗೆ ಕೃಷಿ ಕಾಯಕದಲ್ಲಿ ನಿರತರಾಗಿರುವ ಪ್ರಗತಿಪರ ಕೃಷಿಕ ಶೇಖರ್‌ ಸಾಲ್ಯಾನ್‌ ಅವರ ಮೊಗದಲ್ಲಿ ಕಲ್ಲಂಗಡಿ ಹಣ್ಣು ಮತ್ತು ಸೌತೆಕಾಯಿ ಬೆಳೆಯು ಮತ್ತೆ ನಗು ತರಿಸಿದೆ.

Advertisement

ಕಾಪು ಪಡುಗ್ರಾಮದ ಹಿರಿಯ, ಪ್ರಗತಿಪರ ಕೃಷಿಕರಾಗಿರುವ ಶೇಖರ್‌ ಸಾಲ್ಯಾನ್‌ ಪ್ರತೀ ವರ್ಷ ಭತ್ತದ ಬೆಳೆಯನ್ನು ಬೆಳೆದು, ಬಳಿಕ ವಾಣಿಜ್ಯ ಬೆಳೆಗಳ ಜತೆಗೆ ಕಲ್ಲಂಗಡಿ, ಸೌತೆಕಾಯಿ ಸಹಿತ ವಿವಿಧ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಬೆಳೆಸಿಕೊಂಡು ಪ್ರತೀ ವರ್ಷ ಲಕ್ಷ ರೂ. ಲಾಭ ಗಳಿಸುತ್ತಿದ್ದರು.

ಆದರೆ ಈ ಬಾರಿ ಪ್ರತಿಕೂಲ ವಾತಾ ವರಣ ದಿಂದಾಗಿ ಇತರೆಲ್ಲ ಬೆಳೆಗಳು ಕೈಕೊಟ್ಟಿದ್ದರೂ ಕಲ್ಲಂಗಡಿ ಹಣ್ಣು ಮತ್ತು ಸೌತೆ ಕಾಯಿ ಬೆಳೆ ಮಾತ್ರ ಭರ್ಜರಿ ಇಳುವರಿಯೊಂದಿಗೆ ಶೇಖರ್‌ ಸಾಲ್ಯಾನ್‌ ಅವರ ಕೈ ಹಿಡಿದಿದೆ.

ಭತ್ತದ ಕೃಷಿಯ ಬಳಿಕ ಗದ್ದೆಯಲ್ಲಿ ವಾಣಿಜ್ಯ ಬೆಳೆಗಳಾದ ಎಳ್ಳು, ಉದ್ದು, ಆವಡೆ ಬೆಳೆಸುತ್ತಾರೆ. ಕಲ್ಲಂಗಡಿ, ಸೌತೆಕಾಯಿ, ಅಲಸಂಡೆ, ಗೆಣಸು, ಬೂದು ಕುಂಬಳಕಾಯಿ, ಹರಿವೆ, ಪಡುವಲಕಾಯಿ, ಸೋರೆಕಾಯಿ, ಹೀರೆಕಾಯಿ, ಸಿಹಿ ಕುಂಬಳ ಕಾಯಿ, ಮೂಲಂಗಿ, ಬೆಂಡೆ, ಅವರೆ ಕಾಯಿ ಇತ್ಯಾದಿ ಬೆಳೆಗಳನ್ನು ಬೆಳೆಸುತ್ತಾರೆ.

ಮನೆಯೇ ಮಾರುಕಟ್ಟೆ

Advertisement

ಕಲ್ಲಂಗಡಿ ಬೆಳೆಯ ಇಳುವರಿಯನ್ನು ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡದೆ ಮನೆಯಲ್ಲೇ ಗ್ರಾಹಕರಿಗೆ ಪೂರೈಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ಮೂಲೆ ಸೇರಿ, ಪ್ರಸ್ತುತ ಸುಧಾರಿಸಿಕೊಳ್ಳುತ್ತಿರುವ ಮಗ ಸಂದೇಶ್‌ ಸಾಲ್ಯಾನ್‌ ಅವರಿಗೆ ಮನೆಯಲ್ಲೇ ಈ ಕೆಲಸ ಕೊಟ್ಟು ಮಗನ ಬದುಕಿಗೂ ಆಧಾರವಾಗಿದ್ದಾರೆ. ಬ್ರಹ್ಮಾವರದಲ್ಲಿ ಉದ್ಯಮ ನಡೆಸುತ್ತಿರುವ ಅವರು ಕಾಪುವಿನಲ್ಲಿ ವಿವಿಧ ಸಂಘ – ಸಂಸ್ಥೆಗಳ ಮೂಲಕವಾಗಿ ಸಂಘ ಜೀವಿಯಾಗಿದ್ದಾರೆ.

ಸಾವಯವ ಗೊಬ್ಬರ

ಕುಟುಂಬದ ಕೃಷಿ ಭೂಮಿಯೊಂದಿಗೆ ಇತರರ ಜಮೀನನ್ನು ಗೇಣಿಗೆ ಪಡೆದುಕೊಂಡು ಕೃಷಿ ನಡೆಸುತ್ತಿರುವ ಅವರು ಸಂಪೂರ್ಣ ಸಾವಯವ ಗೊಬ್ಬರವಾದ ಹಟ್ಟಿ ಗೊಬ್ಬರ ಮತ್ತು ಸುಡು ಮಣ್ಣುಗಳನ್ನು ಬಳಸುತ್ತಾರೆ. ಅವಶ್ಯ ಬಿದ್ದಲ್ಲಿ ಇತರ ಹೈನುಗಾರರಿಂದಲೂ ಗೊಬ್ಬರವನ್ನು ಪಡೆಯುತ್ತಾರೆ.

‌ಶ್ರದ್ಧೆಯಿದ್ದರೆ ಕೃಷಿ ಲಾಭಕರ

ತಂದೆ-ತಾಯಿಯಿಂದ ಬಳುವಳಿಯಾಗಿ ಬಂದ ಕೃಷಿ ಕಾರ್ಯದ ಪರಂಪರೆಯನ್ನು ಉಳಿಸಿಕೊಂಡು ಬರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮುಂದುವರಿಸಿದ್ದೇನೆ. ಕೃಷಿ ಕಾರ್ಯಕ್ಕೆ ಪತ್ನಿ, ಮಕ್ಕಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಬೈಲು ಪ್ರದೇಶದಲ್ಲಿ ನೂರಾರು ಎಕರೆ ಕೃಷಿ ಭೂಮಿ ಹಡಿಲು ಬಿದ್ದಿರುವುದನ್ನು ನೋಡಿದರೆ ಹೊಟ್ಟೆಯುರಿ ಬರುತ್ತದೆ. ತರಕಾರಿ-ಹಣ್ಣು ಸಹಿತವಾಗಿ ಕೃಷಿ ಕಾರ್ಯವನ್ನು ಶ್ರದ್ಧೆಯಿಂದ ನಡೆಸಿದರೆ ಖಂಡಿತವಾಗಿಯೂ ಲಾಭದಾಯಕವಾಗಿದ್ದು ಯುವಕರು ಹೆಚ್ಚು ಹೆಚ್ಚಾಗಿ ಕೃಷಿ ಕಾರ್ಯದತ್ತ ಒಲವು ತೋರಿಸಬೇಕಿದೆ. -ಶೇಖರ್‌ ಸಾಲ್ಯಾನ್‌, ಪ್ರಗತಿಪರ ಕೃಷಿಕ, ಕಾಪು  

-ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next