Advertisement

ಬಾಲ್ಯದಲ್ಲಿ ಸ್ಮಾರ್ಟ್‌ಫೋನ್‌ ಬಳಕೆ 

06:20 AM Feb 18, 2018 | |

ಮೊಬೈಲ್‌ ಫೋನ್‌ ತಂತ್ರಜ್ಞಾನ ಬಳಕೆ ಇಂದು ಎಲ್ಲ ಮನೆಗಳಲ್ಲಿ ಬಹುಸಾಮಾನ್ಯ ವಿದ್ಯಮಾನವಾಗಿದೆ. ಸಿನೆಮಾ ನೋಡಲು, ಸಂಗೀತ ಕೇಳಲು, ಸುದ್ದಿಗಳನ್ನು ಓದಲು ಮತ್ತು ಇಂಟರ್‌ನೆಟ್‌ ಜಾಲಾಡಲು… ಹೀಗೆ ತರಹೇವಾರಿ ಉದ್ದೇಶಗಳಿಗೆ ಮೊಬೈಲ್‌ ಫೋನುಗಳನ್ನು ಉಪಯೋಗಿಸಲಾಗುತ್ತದೆ. ಯುವ ಜನಾಂಗಕ್ಕೆ ಮಾತ್ರವೇ ಅಲ್ಲ, ಹಿರಿಯರಿಗೂ ಕೆಲವೇ ತಾಸುಗಳಷ್ಟು ಕಾಲವೂ ಮೊಬೈಲ್‌ ಫೋನನ್ನು ಬಿಟ್ಟಿರುವುದಕ್ಕೆ ಅಸಾಧ್ಯ ಎಂಬಂತಾಗಿದೆ.

Advertisement

ಹಿಂದಿನ ಕಾಲದಲ್ಲಿ ಮನೆಮಂದಿಯೊಂದಿಗೆ ಬೆರೆತು ಕಾಲ ಕಳೆಯುವುದು ಸಾಮಾನ್ಯವಾಗಿದ್ದರೆ ಇಂದು ಯುವಜನಾಂಗ, ಮಕ್ಕಳು ಟಿವಿ ಅಥವಾ ಮೊಬೈಲ್‌ ಫೋನ್‌ ಎದುರು ಕುಳಿತುಕೊಂಡು ಕಾಲಕ್ಷೇಪ ಮಾಡುತ್ತಾರೆ. ಸಹೋದರ – ಸಹೋದರಿಯ ಜತೆಗೆ ಅಥವಾ ಹೆತ್ತವರು, ಮನೆಮಂದಿಯ ಜತೆಗೆ ಮಕ್ಕಳು ಮಾತುಕತೆ ನಡೆಸುತ್ತ ಹೆಚ್ಚು ಕಾಲ ಕಳೆಯುವುದನ್ನು ಕಾಣುವುದೇ ಇಂದು ಅಪರೂಪ. ಅನೇಕ ಮನೆಗಳಲ್ಲಿ ಆನ್‌ಲೈನ್‌ ಮೂಲಕ ಲಭ್ಯವಿರುವ ಶೈಕ್ಷಣಿಕ ಆ್ಯಪ್‌ ಮೂಲಕ ಅಜ್ಜಿಕತೆ, ನೀತಿಕತೆಗಳು ಮಕ್ಕಳಿಗೆ ಸಿಗುತ್ತವೆಯೇ ಹೊರತು ಅಪ್ಪ ಅಥವಾ ಅಮ್ಮ ಕತೆ ಹೇಳುವುದರಿಂದ ಅಲ್ಲ. 

ವಯಸ್ಕರಿಗೆ ಹೋಲಿಸಿದರೆ ಮಕ್ಕಳು ತುಂಬಾ ಕ್ಷಿಪ್ರವಾಗಿ ಮೊಬೈಲ್‌ ಫೋನನ್ನು ಆಪರೇಟ್‌ ಮಾಡಲು ಕಲಿಯುತ್ತಾರೆ. ಅವರಿಗೆ ಯಾರೂ ಕಲಿಸದೆ ಇದ್ದರೂ ಕೇವಲ ಗಮನಿಸುವಿಕೆಯ ಮೂಲಕ ತುಂಬಾ ಸಣ್ಣ ಪ್ರಾಯದಿಂದಲೇ ಮಕ್ಕಳು ಸ್ಮಾರ್ಟ್‌ಫೋನನ್ನು ಸ್ವೆ„ಪ್‌ ಮಾಡುವುದು ಮತ್ತು ವಿವಿಧ ಆ್ಯಪ್‌ಗ್ಳನ್ನು ತೆರೆದು ಉಪಯೋಗಿಸುವುದನ್ನು ಕಲಿಯುತ್ತಾರೆ. ಅನೇಕ ಬಾರಿ ಒಂದು ವರ್ಷ ತುಂಬುವ ಮುನ್ನವೇ ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಪರಿಚಯವಾಗಿರುತ್ತದೆ. ಸಾಮಾನ್ಯವಾಗಿ ಮಗುವಿಗೆ ಉಣಿಸಲು -ತಿನಿಸಲು ಅಥವಾ ಕಿರಿಕಿರಿ ಮಾಡದೆ ಸುಮ್ಮನೆ ಕುಳ್ಳಿರಿಸುವುದಕ್ಕಾಗಿ ಸ್ಮಾರ್ಟ್‌ಫೋನನ್ನು ಉಪಯೋಗಿಸಲಾಗುತ್ತದೆ. ಮಕ್ಕಳು ಯಾವುದು ತಪ್ಪು, ಯಾವುದು ಸರಿ ಎಂಬುದು ತಿಳಿಯುವುದಕ್ಕೆ ಮುನ್ನವೇ ಡಿಜಿಟಲ್‌ ಜಗತ್ತಿನ ಒಳಹೊಕ್ಕು ಬಿಡುತ್ತಾರೆ. ಸ್ಮಾರ್ಟ್‌ಫೋನ್‌ ಮೇಲಣ ಈ ಅತಿಯಾದ ವ್ಯಾಮೋಹ, ಅವಲಂಬನೆ ಮಕ್ಕಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. 

ಅತಿಯಾದ ಸ್ಮಾರ್ಟ್‌ಫೋನ್‌ ಬಳಕೆ:
ಲಾಭಕ್ಕಿಂತ ಹಾನಿಯೇ ಹೆಚ್ಚು

ಸ್ಮಾರ್ಟ್‌ಫೋನ್‌ ಜತೆಗೆ ತುಂಬಾ ಹೊತ್ತು ಕಳೆಯುವ ಮಕ್ಕಳು ಮಾತು ಮತ್ತು ಭಾಷೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬೆಳೆಯಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂಬುದಾಗಿ ಸಂಶೋಧನೆಗಳು ಹೇಳುತ್ತವೆ. ಸ್ಮಾರ್ಟ್‌ಫೋನ್‌ನಲ್ಲಿ ಬೆರಳು ಉಜ್ಜುತ್ತ ಕಳೆಯುವ ಸಮಯ ಹೆಚ್ಚಿದಷ್ಟು ಮಗು ಸಾಮಾಜಿಕವಾಗಿ ಬೆರೆಯುವ ಅವಕಾಶ ಕಡಿಮೆಯಾಗುತ್ತದೆ. 6 ತಿಂಗಳಿಂದ ತೊಡಗಿ ಎರಡು ವರ್ಷ ವಯಸ್ಸಿನ ತನಕದ 894 ಮಂದಿ ಮಕ್ಕಳ ನಡುವೆ ಇತ್ತೀಚೆಗೆ ನಡೆಸಿದ ಒಂದು ಅಧ್ಯಯನವು ಬಹಿರಂಗಪಡಿಸಿರುವ ಸತ್ಯಾಂಶ ಇದು: ಸ್ಮಾರ್ಟ್‌ಫೋನ್‌, ಐಪ್ಯಾಡ್‌, ಟ್ಯಾಬ್‌ ಇತ್ಯಾದಿ ಡಿಜಿಟಲ್‌ ಉಪಕರಣಗಳ ಸ್ಕ್ರೀನ್‌ ಮುಂದೆ ಮಗು ಕಳೆಯುವ ಪ್ರತೀ 30 ನಿಮಿಷ ಸಮಯವು ಶೇ.49ರಷ್ಟು ಅಭಿವ್ಯಕ್ತಾತ್ಮಕ ಮಾತುಗಾರಿಕೆಯ ವಿಳಂಬಕ್ಕೆ ಕಾರಣವಾಗುತ್ತದೆ (2017ರ ಪೀಡಿಯಾಟ್ರಿಕ್‌ ಅಕಾಡೆಮಿಕ್‌ ಮೀಟಿಂಗ್‌ನಲ್ಲಿ ಮಂಡಿತ ವರದಿ). ಸಣ್ಣ ಪ್ರಾಯದ ಮಕ್ಕಳು ಶೈಕ್ಷಣಿಕ ಆ್ಯಪ್‌ಗ್ಳನ್ನು ಮಿತಿಮೀರಿ ಉಪಯೋಗಿಸಿದರೆ ಪ್ರಯೋಜನಕ್ಕಿಂತ ಸಂವಹನ ಕೌಶಲ ಅಭಿವೃದ್ಧಿ ಹೊಂದದಂತಹ ಋಣಾತ್ಮಕ ಪರಿಣಾಮವೇ ಹೆಚ್ಚು ಎಂಬುದನ್ನು ಈ ಅಧ್ಯಯನ ಬಹಿರಂಗ ಪಡಿಸಿದೆ. ಸ್ಮಾರ್ಟ್‌ಫೋನ್‌ ಉಪಯೋಗ ಮಗುವಿಗೆ ದೃಶ್ಯ ಪ್ರಚೋದನೆಯನ್ನು ಒದಗಿಸಬಹುದು, ಸ್ಮಾರ್ಟ್‌ಫೋನ್‌ಗೆ ಮಗು ದೀರ್ಘ‌ಕಾಲ ಅಂಟಿಕೊಳ್ಳಬಹುದು ಎಂಬುದನ್ನು ಬಿಟ್ಟರೆ ಅದು ಮಾತುಗಾರಿಕೆಯ ಕೌಶಲವನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ತೀರಾ ಕಡಿಮೆ. ಮಕ್ಕಳು ತಾವು ಸ್ಮಾರ್ಟ್‌ಫೋನ್‌ ಪರದೆಯಲ್ಲಿ ಕಂಡುದನ್ನು ಅನುಕರಿಸಬಹುದೇ ವಿನಾ ಸಾಮಾಜಿಕವಾಗಿ ಸಂದರ್ಭಕ್ಕೆ ಸರಿಯಾಗಿ ತಮ್ಮದೇ ಆದ ನುಡಿಗಟ್ಟುಗಳನ್ನು, ವಾಕ್ಯಗಳನ್ನು ರಚಿಸಿ ಉಪಯೋಗಿಸುವ ಕೌಶಲ ಅವರಲ್ಲಿ ಅಭಿವೃದ್ಧಿ ಹೊಂದುವುದು ಕಡಿಮೆ. 

ಸೀಮಿತ ಸಂವಹನ ಸಾಮರ್ಥ್ಯ
ಬಾಲ್ಯದ ಸಂವಹನ ಸಮಸ್ಯೆಗಳಾದ ಆಟಿಸಮ್‌, ಬುದ್ಧಿಶೀಲತೆಯ ಕೊರತೆಗಳು, ಏಕಾಗ್ರತೆಯ ಕೊರತೆ ಅತಿಚಟುವಟಿಕೆ ಸಮಸ್ಯೆ, ಸೆರಬ್ರಲ್‌ ಪಾಲ್ಸಿ, ನಿರ್ದಿಷ್ಟ ಭಾಷಾ ಸಮಸ್ಯೆ ಇತ್ಯಾದಿಗಳ ಪೈಕಿ ಸೀಮಿತ ಸಂವಹನ ಸಾಮರ್ಥ್ಯ ಹೆಚ್ಚು ಸಾಮಾನ್ಯವಾಗಿ ಕಂಡುಬರುತ್ತದೆ. ಸ್ಮಾರ್ಟ್‌ಫೋನ್‌ಗಳ ಮಿತಿಮೀರಿದ ಬಳಕೆಯಿಂದ ಇಂತಹ ಸಮಸ್ಯಾಸ್ಥಿತಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚುವುದು ಅಸಾಧ್ಯವಾಗುತ್ತದೆ ಎಂಬುದನ್ನು ಹೆತ್ತವರು ಅರ್ಥ ಮಾಡಿಕೊಳ್ಳಬೇಕು. ಮಕ್ಕಳು ಸ್ಮಾರ್ಟ್‌ಫೋನ್‌ಗೆ ಹೆಚ್ಚು ಅಂಟಿಕೊಳ್ಳುವುದರಿಂದ ಶ್ರವಣಸಾಮರ್ಥ್ಯ ನಷ್ಟ, ದೃಷ್ಟಿ ಸಮಸ್ಯೆಗಳು, ಸಾಮಾಜಿಕವಾಗಿ ಬೆರೆಯುವಿಕೆ ಕಡಿಮೆಯಾಗುವುದು, ಆತಂಕ, ಒತ್ತಡ, ಖನ್ನತೆ, ನಿದ್ದೆಯಲ್ಲಿ ಅಡಚಣೆ, ಮಣಿಕಟ್ಟು ಮತ್ತು ಬೆರಳುಗಳಲ್ಲಿ ನೋವು, ದೇಹದಾಡ್ಯìಕ್ಕೆ ಸಂಬಂಧಿಸಿದ ಸಮಸ್ಯೆಗಳು, ವಿಕಿರಣ ಸಮಸ್ಯೆಗಳು ಹಾಗೂ ಇತರ ಆರೋಗ್ಯ ಸಮಸ್ಯೆಗಳು ಕೂಡ ಉಂಟಾಗಬಲ್ಲವು. 

Advertisement

ಹೆತ್ತವರು ಮಕ್ಕಳೊಂದಿಗೆ ನೇರ ಮತ್ತು ನಿಕಟವಾಗಿ ಸಂಪರ್ಕದಲ್ಲಿ ತೊಡಗಿದರೆ ಸಂವಹನ ಕೌಶಲಗಳನ್ನು ಅಭಿವೃದ್ಧಿಪಡಿಸಬಹುದು. ಎರಡು ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳಲ್ಲಿ ಭಾಷೆಯ ಮತ್ತು ಸಂಭಾಷಣೆಯ ಕೌಶಲವನ್ನು ವೃದ್ಧಿಸಲು ಅಮೆರಿಕನ್‌ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ಅಸೋಸಿಯೇಶನ್‌ ಶಿಫಾರಸು ಮಾಡುವ ಕೆಲವು ಸಲಹೆಗಳು ಹೀಗಿವೆ:

– ನಿಮ್ಮ ಮಗು ವರ್ಣದಂತಹ (ಇಂಗ್ಲಿಷ್‌: ವೊವೆಲ್‌) ಮತ್ತು ವ್ಯಂಜನ+ವರ್ಣ ಕೂಡಿದಂತಹ (ಇಂಗ್ಲಿಷ್‌: ಕಾನ್ಸೊನೆಂಟ್‌+ವೊವೆಲ್‌) ಸದ್ದುಗಳನ್ನು ಉತ್ಪಾದಿಸಲು ಪ್ರೋತ್ಸಾಹಿಸಿ. ಉದಾಹರಣೆಗೆ: “ಅ’, “ಆ’, “ಇ’, “ಉ’, “ಓ’, “ಐ’, “ದಾ’, “ಮಾ’, “ಪಾ’… ಇತ್ಯಾದಿ. 

– ಮಗುವಿನ ಜತೆಗೆ ದೃಷ್ಟಿಸಂಪರ್ಕವನ್ನು ಕಾಯ್ದುಕೊಂಡಿರಿ ಮತ್ತು ಅದು ಉತ್ಪಾದಿಸುವ ಶಬ್ದಗಳಿಗೆ ಮಾತಿನ ಮೂಲಕ ಮತ್ತು ವಿವಿಧ ಶಬ್ದರೂಪ ಮತ್ತು ಒತ್ತುಗಳನ್ನು ಉಪಯೋಗಿಸುವ ಮೂಲಕ ಉತ್ತರಿಸಿ. ಉದಾಹರಣೆಗೆ, ನೀವು ಮಾತಾಡಿರುವುದು ಒಂದು ಪ್ರಶ್ನೆ ಎಂಬುದನ್ನು ಸೂಚಿಸುವ ಸಲುವಾಗಿ ಧ್ವನಿಯನ್ನು ಸ್ವಲ್ಪ ಎತ್ತರಿಸಿ ಮಾತನಾಡಿ.

– ಡಾ| ಸುನಿಲಾ ಜಾನ್‌
ಅಸೊಸಿಯೇಟ್‌ ಪ್ರೊಫೆಸರ್‌
ವಾಕ್‌-ಶ್ರವಣ ವಿಭಾಗ, ಸ್ಕೂಲ್‌ ಆಫ್ ಅಲೈಡ್‌ ಹೆಲ್ತ್‌ ಸೈನ್ಸಸ್‌, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next