ಶಿಕಾರಿಪುರ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪೋಷಣ್ ಅಭಿಯಾನ ಉತ್ತಮ ಯೋಜನೆಯಾಗಿದ್ದು, ಅಂಗನವಾಡಿ ಶಿಕ್ಷಕಿಯರು ತಮಗೆ ನೀಡಿರುವ ಸ್ಮಾರ್ಟ್ ಫೋನ್ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಪಟ್ಟಣದಲ್ಲಿ ಸೋಮವಾರ ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಪೋಷಣ್ ಅಭಿಯಾನ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಣೆಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಗನವಾಡಿ ಮಕ್ಕಳು, ಗರ್ಭಿಣಿ, ಬಾಣಂತಿಯರ ದಾಖಲೆ ನಿರ್ವಹಣೆ ಸೇರಿದಂತೆ ಹಲವು ಉಪಯುಕ್ತ ಕೆಲಸ ಸ್ಮಾರ್ಟ್ ಫೋನ್ ಮೂಲಕ ಮಾಡಬಹುದು.ಈ ಯೋಜನೆಯಿಂದ ಜನರಿಗೆ ಸರಕಾರದಸೌಲಭ್ಯ ಸಿಗುತ್ತದೆ. ಅಲ್ಲದೇ, ಸೋರಿಕೆ ತಡೆಗಟ್ಟಬಹುದು ಎಂದರು.
ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ ವಾರಿಯರ್ ಆಗಿ ಸೇವೆಸಲ್ಲಿಸುತ್ತಿರುವುದಲ್ಲದೇ ಸರಕಾರದ ಹಲವು ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಹಾಗೂ ಸೌಲಭ್ಯಗಳನ್ನು ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಅವರಿಗೆ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ತಾಲೂಕಿನಲ್ಲಿ 302 ಅಂಗನವಾಡಿಗಳಿದ್ದು, ಎಲ್ಲ ಕಡೆ ಮೂಲ ಸೌಕರ್ಯ ಕಲ್ಪಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಎಲ್ಲಿಯಾದರೂ ತೊಂದರೆ ಆಗಿದ್ದರೆ ತಮಗೆ ತಿಳಿಸಿದಲ್ಲಿ ಆದ್ಯತೆ ಮೇರೆಗೆ ಉತ್ತಮ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು. ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ನಂದಕುಮಾರ್ ಮಾತನಾಡಿ, ತಾಲೂಕಿನಲ್ಲಿ 302 ಅಂಗನವಾಡಿ ಕೇಂದ್ರಗಳಿದ್ದು, ಮೇಲ್ವಿಚಾರಕಿಯರು ಸೇರಿ 312 ಸ್ಮಾರ್ಟ್ ಫೋನ್ ವಿತರಣೆ ಮಾಡಲಾಗುತ್ತಿದೆ. ತಾಲೂಕಿನ ಎಲ್ಲ ವಿಭಾಗದ ಶಿಕ್ಷಕಿಯರಿಗೆ ತರಬೇತಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಫೋನ್‌ಗೆ ಸಾಫ್ಟ್‌ವೇರ್ ಅಳವಡಿಕೆ, ಇನ್ನಷ್ಟು ತರಬೇತಿ ನಂತರ ಮುಂದಿನ ದಿನಗಳಲ್ಲಿ ಇಲಾಖೆ ಯೋಜನೆ ಸಂಪೂರ್ಣ ಗಣಕೀಕರಣಗೊಳ್ಳಲಿದೆ. ಅದರಿಂದ ಜನರಿಗೆ ಅನುಕೂಲವಾಗುತ್ತದೆ. ಯೋಜನೆ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ತಾ.ಪಂ. ಅಧ್ಯಕ್ಷ ಪ್ರಕಾಶ್ ಉಡುಗಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಚನ್ನಳ್ಳಿ, ಸದಸ್ಯರಾದ ಸುರೇಶ್ ನಾಯ್ಕ, ಮಲ್ಲಿಕ್‌ರೆಡ್ಡಿ, ಗೀತಾ ರಾಜಣ್ಣ, ಕವಲಿ ಸುಬ್ರಹ್ಮಣ್ಯ, ಗಾಯಿತ್ರಿ, ಈಸೂರು ಜಯಣ್ಣ, ಇಒ ಪರಮೇಶ್, ಜಿ.ಪಂ. ಸದಸ್ಯರಾದ ಅರುಂಧತಿ ರಾಜೇಶ್, ರೇಣುಕಾ ಹನುಮಂತಪ್ಪ, ಇಲಾಖೆ ಅಧಿಕಾರಿಗಳಾದ ರತ್ನಮ್ಮ, ಸುನೀತಾ ಮುಡೇರಾ, ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.