Advertisement

ಸ್ಮಾರ್ಟ್‌ಸಿಟಿ ಕಾಮಗಾರಿ; ಪಾಲಿಕೆ ಸದಸ್ಯರಿಗೆ ಮಾಹಿತಿ ನೀಡಿ

11:34 AM Sep 30, 2018 | Team Udayavani |

ಮಹಾನಗರ: ಮಂಗಳೂರಿಗೆ ಸ್ಮಾರ್ಟ್‌ಸಿಟಿ ಯೋಜನೆ ಘೋಷಣೆಯಾಗಿ 2 ವರ್ಷಗಳು ಕಳೆದಿವೆ. ಆದರೆ ಅದರಲ್ಲಿ ಯಾವ ಕಾಮಗಾರಿಗಳು ಆರಂಭಗೊಂಡಿವೆ ಹಾಗೂ ಇನ್ನಿತರ ಮಾಹಿತಿ ಪಾಲಿಕೆಯ ಐದು ಸದಸ್ಯರಿಗೆ ಹೊರತುಪಡಿಸಿ ಬೇರಾರಿಗೂ ತಿಳಿದಿಲ್ಲ. ನಮಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಎಂದು ಪಾಲಿಕೆ ಸದಸ್ಯರು ಆಗ್ರಹಿಸಿದರು.

Advertisement

ಶನಿವಾರ ಮೇಯರ್‌ ಭಾಸ್ಕರ ಮೊಯಿಲಿ ಅಧ್ಯಕ್ಷತೆಯಲ್ಲಿ ಪಾಲಿಕೆ ಮಂಗಳಾ ಸಭಾಂಗಣದಲ್ಲಿ ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಸದಸ್ಯರು ಈ ಬಗ್ಗೆ ಧ್ವನಿ ಎತ್ತಿದರು. 2 ಸಾವಿರ ಕೋಟಿ ರೂ. ಹೂಡಿಕೆ ಮಾಡುವಾಗ ಸ್ಮಾರ್ಟ್‌ಸಿಟಿ ಕಾಮಗಾರಿ ಬಗ್ಗೆ ಎಲ್ಲ ಮಾಹಿತಿ ಸದಸ್ಯರಿಗೆ ಗೊತ್ತಿರಬೇಕು ಎಂದು ಸದಸ್ಯ ಎ.ಸಿ. ವಿನಯ ರಾಜ್‌ ಹೇಳಿದರು.

ಪ್ರತ್ಯೇಕ ಸಭೆ ಕರೆಸುವುದೇ ಸೂಕ್ತ
ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಮಾತನಾಡಿ, ಸ್ಮಾರ್ಟ್‌ ಸಿಟಿ ಕುರಿತಂತೆ ಪಾಲಿಕೆ ಸಭೆಯಲ್ಲಿ ಚರ್ಚಿಸುವುದರಿಂದ ಏನೂ ಪ್ರಯೋಜನ ಇಲ್ಲ. ಈ ಬಗ್ಗೆ ಪಾಲಿಕೆಗೆ ನಿರ್ಧಾರ ಕೈಗೊಳ್ಳುವ ಯಾವುದೇ ಅಧಿಕಾರವೂ ಇಲ್ಲ. ಆದ್ದರಿಂದ ಪ್ರತ್ಯೇಕ ಸಭೆ ಕರೆಸುವುದೇ ಸೂಕ್ತ ಎಂದು ಹೇಳಿದರು. ಆಯುಕ್ತ ಮೊಹಮ್ಮದ್‌ ನಝೀರ್‌ ಉತ್ತರಿಸಿ, ಮೂರು ಕಾಮಗಾರಿಗಳನ್ನು ಪಿಪಿಪಿ ಮಾದರಿಯಲ್ಲಿ ಸ್ಮಾರ್ಟ್‌ ಸಿಟಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಹಂಪನಕಟ್ಟೆಯಲ್ಲಿ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ 94 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಈಗ ಎರಡನೇ ಬಾರಿ ಇದಕ್ಕೆ ಟೆಂಡರ್‌ ಕರೆಯಲಾಗಿದೆ. ಸೆಂಟ್ರಲ್‌ ಮಾರುಕಟ್ಟೆಯನ್ನು 145 ಕೋ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಟೆಂಡರ್‌ ಹಂತದಲ್ಲಿದೆ. ಪಂಪ್‌ವೆಲ್‌ನಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಹೊಸ ಬಸ್‌ ನಿಲ್ದಾಣ ನಿರ್ಮಾಣಕ್ಕೆ ತಾಂತ್ರಿಕ ಮಂಜೂರಾತಿ ಲಭಿಸಿದೆ ಎಂದರು. ಮೇಯರ್‌ ಪ್ರತಿಕ್ರಿಯಿಸಿ, ಮುಂದಿನ ವಾರದಲ್ಲಿ ಸ್ಮಾರ್ಟ್‌ಸಿಟಿ ಕುರಿತಂತೆ ಸದಸ್ಯರ ವಿಶೇಷ ಸಭೆ ನಡೆಸಲಾಗುವುದು ಎಂದರು.

ಬಿಜೆಪಿ ಸದಸ್ಯರ ಧರಣಿ
14ನೇ ಹಣಕಾಸು ಅನುದಾನದಲ್ಲಿ ಹಂಚಿಕೆಯನ್ನು ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ವಿಪಕ್ಷ ಬಿಜೆಪಿ ಸದಸ್ಯರು ಮೇಯರ್‌ ಪೀಠದ ಎದುರು ಧರಣಿ ಕುಳಿತರು. ಸುಮಾರು 17.50 ಕೋಟಿ ರೂ. ಗಳಲ್ಲಿ 280 ಕಾಮಗಾರಿಯನ್ನು ಪ್ರಸ್ತಾವಿಸಲಾಗಿದೆ. ಇದರಲ್ಲಿ ಯಾವುದೇ ದೊಡ್ಡ ಕಾಮಗಾರಿಗಳಿಲ್ಲ. ಆದ್ದರಿಂದ ಅನುಷ್ಠಾನಗೊಂಡ ಕಡೆಗಳಲ್ಲಿ ಕಾಮಗಾರಿಯನ್ನು ಬದಲಾಯಿಸಬೇಕು. ಇಲ್ಲದಿದ್ದರೆ ವಿಪಕ್ಷ ಸದಸ್ಯರ ಆಕ್ಷೇಪವನ್ನು ದಾಖಲಿಸಬೇಕು ಎಂದು ವಿಪಕ್ಷ ಮುಖಂಡ ಪ್ರೇಮಾನಂದ ಶೆಟ್ಟಿ ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಮೇಯರ್‌ ಭಾಸ್ಕರ್‌, ಕಾಮಗಾರಿ ಪಟ್ಟಿಯಲ್ಲಿ ಆವಶ್ಯಕ ಬದಲಾವಣೆ ಮಾಡುವ ಭರವಸೆ ನೀಡಿದರು. ಈ ಮಧ್ಯೆ ಮಾತನಾಡಿದ ಸ್ಥಾಯೀ ಸಮಿತಿ ಅಧ್ಯಕ್ಷ ಪ್ರವೀಣ್‌ ಚಂದ್ರ ಆಳ್ವ, ಸದಸ್ಯರು ನೀಡಿದ ಪಟ್ಟಿಯ ಆಧಾರದಲ್ಲಿ ತುರ್ತು ಕಾಮಗಾರಿಗಳನ್ನು ಆದ್ಯತೆ ನೆಲೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ನಗರದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ನಡೆಯುವುದರಿಂದ ಒಳರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.

Advertisement

ನೀರಿನ ಬಿಲ್‌ ಲೋಪ ನಿವಾರಣೆಗೆ ಆಗ್ರಹ
ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಬಿಲ್‌ನಲ್ಲಿ ಲೋಪ ಇನ್ನೂ ನಿವಾರಣೆಯಾಗಿಲ್ಲ. ಇದರಿಂದಾಗಿ ನಾಗರಿಕರು ವಿನಾ ಕಾರಣ ಪಾಲಿಕೆಗೆ ಬರವಂತಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ವಿಪಕ್ಷ ಸದಸ್ಯರಾದ ತಿಲಕ್‌ರಾಜ್‌, ವಿಜಯ ಕುಮಾರ್‌ ಹೇಳಿದರು. ಪ್ರತಿಕ್ರಿಯಿಸಿದ ಅಧಿಕಾರಿ ನರೇಶ್‌ ಶೆಣೈ, ನೀರಿನ ಮೀಟರ್‌ ರೀಡಿಂಗ್‌ಗೆ ತೆರಳಿದಾಗ ಬಿಲ್‌ನ ಮೊತ್ತವನ್ನು ತಾಳೆ ನೋಡಲಾಗುತ್ತಿದೆ. ಹಿಂದೆ ಬಿಲ್‌ ನೀಡುವ ಸಾಫ್ಟ್‌ವೇರ್‌ ಸಮಸ್ಯೆಯಿಂದ ತೊಂದರೆಯಾಗಿತ್ತು. ಈಗ ಸರಿಪಡಿಸಲಾಗಿದೆ ಎಂದರು. ಈ ಬಗ್ಗೆ 15 ದಿನಕ್ಕೊಮ್ಮೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಮೇಯರ್‌ ತಿಳಿಸಿದರು. 

ಅನಧೀಕೃತ ಅಂಗಡಿ
ಪಾಲಿಕೆ ವ್ಯಾಪ್ತಿಯ ಪಾರ್ಕಿಂಗ್‌ ಜಾಗದಲ್ಲಿ ಅನೇಕ ಮಂದಿ ಅನಧಿಕೃತವಾಗಿ ಅಂಗಡಿ ಮುಂಗಟ್ಟು ನಿರ್ಮಿಸಿ ಡೋರ್‌ ನಂಬರ್‌ ಪಡೆದುಕೊಂಡಿದ್ದು, ಪಾರ್ಕಿಂಗ್‌ ಪ್ರದೇಶವನ್ನು ಅನಧಿಕೃತವಾಗಿ ಒತ್ತುವರಿ ಮಾಡಿದ್ದಾರೆ. ಅವರ ವಿರುದ್ಧ ಕ್ರಮಕ್ಕೆ ಸದಸ್ಯ ಸುಧೀರ್‌ ಶೆಟ್ಟಿ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಮೇಯರ್‌, ಅಂತಹ ಡೋರ್‌ ನಂಬರ್‌ ರದ್ದುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಉಪಮೇಯರ್‌ ಮೊಹಮ್ಮದ್‌ ಉಪಸ್ಥಿತರಿದ್ದರು.

ತಂಬಿಗೆ ನೀರು
ರಾಜ್ಯದಲ್ಲಿ ಪ್ಲಾಸ್ಟಿಕ್‌ ಬಾಟಲ್‌ ನಿಷೇಧ ಕಟ್ಟುನಿಟ್ಟು ಜಾರಿಗೆ ಹೈಕೋರ್ಟ್‌ ಸೂಚಿಸಿದ ಹಿನ್ನೆಲೆಯಲ್ಲಿ ಪಾಲಿಕೆ ಸಭೆಯಲ್ಲಿ ಕುಡಿಯಲು ವಾಟರ್‌ ಬಾಟಲ್‌ ಬದಲಿಗೆ ಸ್ಟೀಲಿನ ತಂಬಿಗೆ, ಲೋಟದ ವ್ಯವಸ್ಥೆ ಮಾಡಲಾಗಿತ್ತು. ಮೇಯರ್‌ ಪೀಠ, ಸ್ಥಾಯೀ ಸಮಿತಿ ಸದಸ್ಯರು, ಇತರೆ ಸದಸ್ಯರು, ಅಧಿಕಾರಿಗಳು, ಪತ್ರಕರ್ತರು ಸಹಿತ ಎಲ್ಲ ಭಾಗಗಳಲ್ಲಿ ಸ್ಟೀಲಿನ ತಂಬಿಗೆಯಲ್ಲಿ ನೀರು ತುಂಬಿಸಿ ಲೋಟವನ್ನು ಇರಿಸಲಾಗಿತ್ತು.

ಸುದಿನ ವರದಿ ಪ್ರತಿಧ್ವನಿ
ಪಾಲಿಕೆಯ ಸಭೆಯಲ್ಲಿ ಸುದಿನ ಪ್ರಕಟಿಸಿದ ವರದಿಗಳು ಪ್ರತಿಧ್ವನಿಸಿದವು. ನಗರದ ಅನೇಕ ಕಡೆ ಬಸ್‌ ನಿಲ್ದಾಣಗಳು ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಈ ಬಗ್ಗೆ ಪಾಲಿಕೆ ಗಮನಹರಿಸದೆ, ಸ್ಮಾರ್ಟ್‌ಸಿಟಿ ಯೋಜನೆಯಡಿ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಿಸುವ ಬಗ್ಗೆ ವಿಪಕ್ಷ ನಾಯಕರು ಧ್ವನಿ ಎತ್ತಿದರು. ಮಣ್ಣಗುಡ್ಡ ಗುರ್ಜಿ, ಮೇಯರ್‌ ಬಂಗ್ಲೆ ಪಕ್ಕದಲ್ಲಿರುವ ಸೇವಕ್‌ ಗಾರ್ಡನ್‌ ಸೇರಿದಂತೆ ಇನ್ನಿತರ ಪಾಲಿಕೆ ಜಾಗಗಳು ಉಪಯೋಗವಾಗದೇ ಇರುವ ಬಗ್ಗೆಯೂ ಚರ್ಚಿಸಲಾಯಿತು. ಇದಕ್ಕೆ ಸಂಬಂಧಪಟ್ಟಂತೆ ಸುದಿನ ಈಗಾಗಲೇ ವಿಶೇಷ ವರದಿ ಪ್ರಕಟಿಸಿತ್ತು.

ಪೂವಮ್ಮಗೆ 2 ಲಕ್ಷ ರೂ. ನಗದು
ಏಷ್ಯಾನ್‌ಆ್ಯತ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಎಂ.ಆರ್‌. ಪೂವಮ್ಮ ಅವರಿಗೆ ಪಾಲಿಕೆ ವತಿಯಿಂದ ಶನಿವಾರ ಸಾಮಾನ್ಯ ಸಭೆಯಲ್ಲಿ ಸಮ್ಮಾನಿಸಲಾಯಿತು. ಅವರಿಗೆ ಬೆಳ್ಳಿಯ ತಟ್ಟೆ, ಫಲತಾಂಬೂಲ, ಮೈಸೂರು ಪೇಟ, ಹಾರಹಾಕಿ, ಸ್ಮರಣಿಕೆ ಜತೆಗೆ 2 ಲಕ್ಷ ರೂ. ನಗದು ನೀಡಿ ಮೇಯರ್‌ ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next