Advertisement

ಹಳೆ ಡಿಸಿ ಕಚೇರಿ ಅಭಿವೃದ್ಧಿ ಯೋಜನೆ ಕೈಬಿಟ್ಟ ಸ್ಮಾರ್ಟ್‌ಸಿಟಿ

03:23 PM Jun 10, 2020 | mahesh |

ಮಹಾನಗರ: ಇತಿಹಾಸ ಪರಂಪರೆಯನ್ನು ಕಾಪಾಡುತ್ತ ಬಂದಿರುವ ಮಂಗಳೂರಿನ ಜಿಲ್ಲಾಧಿಕಾರಿ ಸಂಕೀರ್ಣದ ಹತ್ತಿರವಿರುವ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಆವರಣವನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಬೆಸೆದುಕೊಳ್ಳುವ ಯೋಜನೆಯನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಕೈಬಿಡಲಾಗಿದೆ.

Advertisement

ಹಳೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎರಡು ಪ್ರತ್ಯೇಕ ಕಟ್ಟಡಗಳಿವೆ. ಈ ಪೈಕಿ ಒಂದು ಕಟ್ಟಡದಲ್ಲಿ ಮತ ಎಣಿಕೆ ಆದ ಬಳಿಕ ಸೂಕ್ತ ಭದ್ರತೆಯೊಂದಿಗೆ ಇವಿಎಂ ಮೆಷಿನ್‌ಗಳು ಇರುವುದು ಹಾಗೂ ಇನ್ನೊಂದು ಕಟ್ಟಡದಲ್ಲಿ ಜಿಲ್ಲಾಡಳಿತದ ಅಮೂಲ್ಯ ದಾಖಲೆಗಳು ಇರುವ ಕಾರಣದಿಂದ ಸದ್ಯಕ್ಕೆ ಇವುಗಳ ತೆರವು ಕಷ್ಟಸಾಧ್ಯವಾದ್ದರಿಂದ ಈ ಕಟ್ಟಡದ ಅಭಿವೃದ್ಧಿಯನ್ನು ಸದ್ಯಕ್ಕೆ ಕೈ ಬಿಡಲಾಗಿದೆ. ಮತ ಎಣಿಕೆಯ ಬಗ್ಗೆ ಯಾರಿಗಾದರೂ ಆಕ್ಷೇಪಗಳಿದ್ದರೆ ನಿಗದಿತ ದಿನಾಂಕದೊಳಗೆ ನ್ಯಾಯಾಲಯದಲ್ಲಿ ಆಕ್ಷೇಪ ಸಲ್ಲಿಸಲು ಅವಕಾಶವಿದೆ. ಈ ಸಂದರ್ಭ ನ್ಯಾಯಾಲ ಯದ ಆದೇಶದ ಮೇರೆಗೆ ಮರು ಎಣಿಕೆ ಮಾಡಬೇಕಾದ ಅಗತ್ಯತೆ ಇದ್ದರೆ ಅಂತಹ ಸಂದರ್ಭಕ್ಕೆ ಅಗತ್ಯವಾಗಿ ಇವಿಎಂ ಮೆಷಿನ್‌ಗಳನ್ನು ಭದ್ರವಾಗಿ ಇಡಲಾಗುತ್ತದೆ. ಜತೆಗೆ ಜಿಲ್ಲಾಡಳಿತಕ್ಕೆ ಅಗತ್ಯವಿರುವ ದಾಖಲೆಗಳು ಕಟ್ಟಡದಲ್ಲಿ ಇರುವ ಹಿನ್ನೆಲೆಯಲ್ಲಿ ಇವುಗಳನ್ನು ಇರಿಸಿಕೊಂಡು ಸ್ಮಾರ್ಟ್‌ ಸಿಟಿಯ ಕೆಲಸ ಮಾಡುವುದು ಕಷ್ಟ ಎಂಬ ಕಾರಣದಿಂದ ಇದನ್ನು ಕೈಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿ ಫಲಕ
“1914-1919ರ ಮಹಾಯುದ್ದದಲ್ಲಿ ಈ ಹಳ್ಳಿಯಿಂದ 88 ಮಂದಿ ಭಾಗವಹಿಸಿದ್ದಾರೆ. ಅವರಲ್ಲಿ 2 ಮಂದಿ ಮರಣ ಹೊಂದಿದ್ದಾರೆ’ ಎಂಬ ಕುತೂಹಲಕಾರಿಯಾದ ಮಾಹಿತಿ ಫಲಕ ಈಗಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಾಣಸಿಗುತ್ತದೆ. ಇಲ್ಲಿ ಗೋಪುರ ಸ್ವರೂಪದ ರಚನೆಯೂ ಇದೆ. ಫಲಕ ಹಾಗೂ ಗೋಪುರ ಈಗಲೂ ಇವೆ. ಇಂತಹ ಇತಿಹಾಸವನ್ನು ಸಾರುವ ಕಟ್ಟಡವನ್ನು ಕಾಪಾಡುವ ನೆಲೆಯಲ್ಲಿ ಸ್ಮಾರ್ಟ್‌ ಮಂಗಳೂರು ಯೋಜನೆಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು. ಈಗ ಇರುವ ಕಚೇರಿಗೆ ಯಾವುದೇ ಧಕ್ಕೆ ಆಗದಂತೆ ಎಚ್ಚರಿಕೆ ವಹಿಸಿಕೊಂಡು ಪಾರಂಪರಿಕ ಮಾದರಿಯಲ್ಲಿ ರಕ್ಷಿಸಿಕೊಳ್ಳುವುದು ಸ್ಮಾರ್ಟ್‌ ಸಿಟಿ ಉದ್ದೇಶವಾಗಿತ್ತು. ಪ್ರವಾಸೋದ್ಯಮಕ್ಕೆ ಪೂರಕವಾಗಿ ಮ್ಯೂಸಿಯಂ ನಿರ್ಮಾಣದ ಯೋಜನೆಯಿತ್ತು. ಆರ್ಟ್‌ ಗ್ಯಾಲರಿ ನಿರ್ಮಾಣಕ್ಕೂ ಉದ್ದೇಶಿಸಲಾಗಿತ್ತು.

 ಯೋಜನೆ ಸದ್ಯಕ್ಕೆ ಕೈಬಿಡಲಾಗಿದೆ
ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಹಳೆಯ ಕಚೇರಿ ಆವರಣವನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು. ಆದರೆ, ಅಲ್ಲಿ ಇವಿಎಂ ಮೆಷಿನ್‌ ಹಾಗೂ ದಾಖಲೆಗಳು ಇರುವ ಕಾರಣದಿಂದ ಸದ್ಯಕ್ಕೆ ಅಭಿವೃದ್ಧಿಪಡಿಸಲು ಕಷ್ಟ. ಹೀಗಾಗಿ ಮುಂದಿನ ಎರಡು ವರ್ಷಗಳವರೆಗೆ ಈ ಯೋಜನೆಯನ್ನು ಕೈಬಿಡಲಾಗಿದೆ. ಜಿಲ್ಲಾಡಳಿತದಿಂದ ಅನಂತರ ಅನುಮತಿ ಪಡೆದು ಮುಂದಿನ ಯೋಜನೆ ರೂಪಿಸಲಾಗುವುದು.
– ಮೊಹಮ್ಮದ್‌ ನಝೀರ್‌, ವ್ಯವಸ್ಥಾಪಕ ನಿರ್ದೇಶಕರು, ಸ್ಮಾರ್ಟ್‌ ಸಿಟಿ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next