Advertisement
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆರ್.ಕೆ.ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಸಭೆಯಲ್ಲಿ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಪೊನ್ನುರಾಜ್ ಸೇರಿದಂತೆ ರಾಜ್ಯದ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಜತೆಗೆ ಸ್ಮಾರ್ಟ್‌ಸಿಟಿ ರಚನೆ ಸಂಬಂಧಿಸಿ ಹೊಸದಿಲ್ಲಿಯಿಂದ ಅಧಿಕಾರಿಗಳ ಪ್ರತ್ಯೇಕ ತಂಡ ಕೂಡ ಸಭೆಯಲ್ಲಿ ಭಾಗವಹಿಸಲಿದೆ. ಮಂಗಳೂರು ಮೇಯರ್ ಕವಿತಾ ಸನಿಲ್ ನೇತೃತ್ವದಲ್ಲಿ ಮಂಗಳೂರು ತಂಡ ಬೆಂಗಳೂರಿಗೆ ತೆರಳಲಿದೆ. ಪ್ರತೀ 90 ದಿನಕ್ಕೊಮ್ಮೆ ಎಸ್‌ಪಿವಿ ಸಭೆ ನಡೆಯಲಿದ್ದು, ಮುಂದಿನ ಸಭೆ ಮಂಗಳೂರಿನಲ್ಲಿ ನಡೆಯುವ ಸಾಧ್ಯತೆ ಇದೆ.
ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆ ಯಾದ ಮಂಗಳೂರು ಪ್ರಸ್ತಾವನೆಯ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಜತೆಗೆ ಎಸ್‌ಪಿವಿ ಕೈಗೊಳ್ಳುವ ತೀರ್ಮಾನ ಜಾರಿಗೊಳಿಸುವ “ಪಿಎಂಸಿ’ಗೆ (ಪ್ರೊಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್) ಬೋರ್ಡ್‌ಗೆ ಅನುಮೋದನೆ ನೀಡಲಾಗುತ್ತದೆ. ಈಗಾಗಲೇ “ಪಿಎಂಸಿ’ಗೆ ವಾಡಿಯಾ ಗ್ರೂಫ್ ಟೆಕ್ನೋ ಎಂಜಿನಿಯರ್ ಸರ್ವಿಸ್ ಲಿ.ಗೆ ಟೆಂಡರ್ ಕೂಡ ನಡೆದಿದೆ. ಉಳಿದಂತೆ ಮುಂದಿನ ಹಂತ ಜಾರಿ ಗೊಳಿಸಲು ಅಗತ್ಯವಿರುವ ಮಾನವ ಸಂಪನ್ಮೂಲ ಆಯ್ಕೆಗೆ ಒಪ್ಪಿಗೆ ಸಭೆಯಲ್ಲಿ ನಡೆಯಲಿದೆ. ಸಂಬಂಧಿತ ಅಧಿಕಾರಿಗಳಿಗೆ ನೀಡಬಹು ದಾದ ಹೆಚ್ಚುವರಿ ಅಧಿಕಾರಾವಾಧಿಯ ಬಗ್ಗೆಯೂ ಸಭೆಯಲ್ಲಿ ಮಾತುಕತೆ ನಡೆಯಲಿದೆ. ಬ್ಯಾಂಕ್ ಖಾತೆ ಪ್ರತ್ಯೇಕವಾಗಿ ತೆರೆಯುವ ಬಗ್ಗೆ ಹಾಗೂ ಕಂಪೆನೀಸ್ ಆ್ಯಕ್ಟ್‌ನ ಇತರ ವಿವರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. “ವಿಶೇಷ ಉದ್ದೇಶ ವಾಹಕ’ದ ಕುರಿತು
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1 ಕೋ.ರೂ.ಗಳಿಂತ ಅಧಿಕ ಮೊತ್ತಕ್ಕೆ ಅನುಮೋದನೆ ದೊರೆಯಬೇಕಾದರೆ, ಅದು ವಿವಿಧ ಇಲಾಖೆಗಳ ಒಪ್ಪಿಗೆ ಪಡೆದು, ಸರಕಾರಕ್ಕೆ ಕಡತ ಕಳುಹಿಸಿ, ಬಳಿಕ ಹಲವು ದಿನಗಳ ಅನಂತರ ಒಪ್ಪಿಗೆ ದೊರೆ
ಯುತ್ತದೆ. ಆದರೆ, ಸ್ಮಾರ್ಟ್ ಸಿಟಿಗಾಗಿ ಮಾಡಿದ “ವಿಶೇಷ ಉದ್ದೇಶ ವಾಹಕ’ ಹಾಗಲ್ಲ. ಎಷ್ಟೇ ಕೋ.ರೂ.ಗಳ ಯೋಜನೆಯನ್ನು ಈ “ವಾಹಕ’ದ ನೇರ ಅನುಮತಿಯ ಮೂಲಕ ಶೀಘ್ರದಲ್ಲಿ ಜಾರಿಗೊಳಿಸಬಹುದು. ಸರಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರಿ ಈ ವಾಹಕದ ಅಧ್ಯಕ್ಷರಾ ಗಲಿದ್ದು, ಐಎಎಸ್ ಶ್ರೇಣಿಯ ಅಧಿಕಾರಿ ಆಡಳಿತ ನಿರ್ದೇಶಕರಾಗಲಿದ್ದಾರೆ. ರಾಜ್ಯದ ಮುಖ್ಯವಾದ ವಿವಿಧ ಇಲಾಖೆಗಳ ಅಧಿಕಾರಿಗಳು ಬೋರ್ಡ್ ಸದಸ್ಯರಾಗಲಿದ್ದಾರೆ. 2013ರ ಕಂಪೆನೀಸ್ ಆ್ಯಕ್ಟ್ಗೆ ಇದು ಒಳಪಡಲಿದೆ.
Related Articles
ಸ್ಮಾರ್ಟ್‌ಸಿಟಿ ಅನುಷ್ಠಾನ ಕುರಿತಂತೆ ಪ್ರಕ್ರಿಯೆಗಳಿಗೆ ವೇಗ ನೀಡುವ ಹಿನ್ನೆಲೆಯಲ್ಲಿ ಈಗಾಗಲೇ ವಿವಿಧ ಹಂತದ ಕಾರ್ಯಯೋಜನೆಗಳು ನಡೆದಿವೆ. ಫೆ.3 ಹಾಗೂ 4ರಂದು ಮಂಗಳೂರಿನಲ್ಲಿ ರಾಜ್ಯದ 6 ಆಯ್ಕೆಯಾದ ಸ್ಮಾರ್ಟ್‌ನಗರಗಳ ಪ್ರಮುಖರ ಜತೆಗೆ ಸಭೆ ನಡೆದಿದ್ದು, ಅದರಲ್ಲಿ ವಿಶ್ವಬ್ಯಾಂಕ್‌ನ 8 ಪ್ರತಿನಿಧಿಗಳು ಭಾಗವಹಿಸಿದ್ದರು.
Advertisement
2,000.72 ಕೋ.ರೂ.ಗಳ ಪ್ರಸ್ತಾವನೆಪಾಲಿಕೆ ಸಲ್ಲಿಸಿರುವ 2,000.72 ಕೋ.ರೂ.ಗಳ ಪ್ರಸ್ತಾವನೆಗೆ ಕೇಂದ್ರ ನಗರಾಭಿವೃದ್ದಿ ಸಚಿವಾಲಯ ಒಪ್ಪಿಗೆ ನೀಡುವ ಮೂಲಕ ಸ್ಮಾರ್ಟ್‌ಸಿಟಿ ಪರಿಕಲ್ಪನೆಗೆ ಚಾಲನೆ ದೊರಕಿದೆ. ಮಂಗಳೂರು ನಗರ, ಹಂಪನಕಟ್ಟೆ, ಬಂದರು ಹಾಗೂ ಕಾರ್‌ಸ್ಟ್ರೀಟ್ ವ್ಯಾಪ್ತಿಯ 1628 ಎಕರೆ ಪ್ರದೇಶವನ್ನು ಇದರಲ್ಲಿ ಜೋಡಿಸಲಾಗಿದೆ. 2 ವಿಧದಲ್ಲಿ ಮಂಗಳೂರು ಬೆಳವಣಿಗೆಯ ಗುರಿ ಇಟ್ಟು ಪ್ರಸ್ತಾವನೆ ಸಿದ್ದಪಡಿಸಲಾಗಿದ್ದು, ಪಾಲಿಕೆ ಸಲ್ಲಿಸಿದ್ದ ಒಟ್ಟು 2000.72 ಕೋ.ರೂ. ಪ್ರಸ್ತಾವನೆಯಲ್ಲಿ “ಏರಿಯಾ ಬೇಸ್’ನಿಂದ (ನಗರದ ಸ್ಥಳ ಕೇಂದ್ರಿತ ಅಭಿವೃದ್ದಿ)1,707.29 ಕೋ.ರೂ. ಹಾಗೂ “ಪಾನ್ ಸಿಟಿ’ (ಡಿಜಿಟಲೀಕರಣ-ತಂತ್ರಜ್ಞಾನ)ಮೂಲಕ 293.43 ಕೋ.ರೂ.ಗಳ ಪ್ರಸ್ತಾವನೆಯ ಯೋಜನೆ ಸಿದ್ದಗೊಳಿಸಲಾಗಿದೆ. – ದಿನೇಶ್ ಇರಾ