Advertisement

ಸ್ಮಾರ್ಟ್‌ಸಿಟಿಯ ಮೂಲಕ ಮಂಗಳೂರು ಅಭಿವೃದ್ಧಿ: ಸಂಸದ ನಳಿನ್‌

11:59 PM Feb 26, 2023 | Team Udayavani |

ಮಂಗಳೂರು: ಸ್ಮಾರ್ಟ್‌ಸಿಟಿ, ಅಮೃತ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳ ಮೂಲಕ ಮಂಗಳೂರು ನಗರ ಅಭಿವೃದ್ಧಿಯತ್ತ ದಾಪುಗಾಲಿಟ್ಟಿದ್ದು, ಸ್ಮಾರ್ಟ್‌ಸಿಟಿ ಕಾಮಗಾರಿ ಅನುಷ್ಠಾನದಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದರು.

Advertisement

ಮಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ವತಿಯಿಂದ ನಿರ್ಮಾಣಗೊಂಡ ನಗರದ ಮಂಗಳಾ ಕ್ರೀಡಾಂಗಣದ ನೂತನ ಪೆವಿಲಿಯನ್‌, ವ್ಯಾಯಾಮ ಶಾಲೆ, ಫಿಸಿಯೋಥೆರಪಿ ವ್ಯವಸ್ಥೆ, ಅಧಿಕಾರಿಗಳ ಕೊಠಡಿಯನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ವೇದವ್ಯಾಸ ಕಾಮತ್‌ ಶಾಸಕರಾದ ಬಳಿಕ ಸ್ಮಾರ್ಟ್‌ ಸಿಟಿ ಕಾಮಗಾರಿಗಳಿಗೆ ವೇಗ ನೀಡಲಾಗಿದೆ. ಕಾನೂನಾತ್ಮಕ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗಿದೆ. ಕ್ರೀಡಾಪಟುಗಳ ಆಶಯದಂತೆ ಮಂಗಳಾ ಕ್ರೀಡಾಂಗಣದಲ್ಲಿ ನೂತನ ವ್ಯವಸ್ಥೆ ಕಲ್ಪಿಸಲಾ ಗಿದೆ. ಶೀಘ್ರದಲ್ಲಿ ಕಬಡ್ಡಿ, ಶಟಲ್‌ ಕೋರ್ಟ್‌, ಅಂತಾರಾಷ್ಟ್ರೀಯ ದರ್ಜೆಯ ಈಜುಕೊಳ ಉದ್ಘಾಟನೆಗೊಳ್ಳಲಿದೆ ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಮೊದಲ ಬಾರಿಗೆ ಮಂಗಳೂರಿನ ರಸ್ತೆ ಅಭಿವೃದ್ಧಿಗೆ 300 ಕೋಟಿ ರೂ. ಅನುದಾನ ನೀಡಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಮಾರ್ಟ್‌ ಸಿಟಿ ನೀಡುವ ಮೂಲಕ ನಗರದ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಸುಮಾರು 700 ಕೋಟಿ ರೂ.ಗಳನ್ನು ವಿವಿಧ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ. ಶನಿವಾರ ಸಂಜೆ ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ಪ್ರಧಾನಿ ಭಾಗವಹಿಸಿದ ಕಾರ್ಯ ಕ್ರಮದಲ್ಲಿ ಭಾಗವಹಿಸಲು ತೆರಳಿದ ಕಾರಣ ಉಸ್ತುವಾರಿ ಸಚಿವರು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎಂದರು.

ಸೆಂಟ್ರಲ್‌ ಮಾರ್ಕೆಟ್‌ ಕಟ್ಟಡಕ್ಕೆ ಶಿಲಾನ್ಯಾಸ
ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, ಸ್ಮಾರ್ಟ್‌ ಸಿಟಿ ಯೋಜನೆಯಡಿ ಮಂಗಳೂರಿನಲ್ಲಿ ವಿವಿಧ ಕಾಮಗಾರಿಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಮಾ. 5ರಂದು ಜಲಾಭಿಮುಖ ಪ್ರದೇಶ ಅಭಿವೃದ್ಧಿ ಯೋಜನೆ ಹಾಗೂ ಸೆಂಟ್ರಲ್‌ ಮಾರ್ಕೆಟ್‌ ಕಟ್ಟಡಕ್ಕೆ ಶಿಲಾನ್ಯಾಸ ನಡೆಯಲಿದೆ. ಸಿಆರ್‌ಝಡ್‌ ಸಮಸ್ಯೆ, ಖಾಸಗಿ ಜಾಗ ಪಡೆಯುವಲ್ಲಿ ಉಂಟಾದ ಸಮಸ್ಯೆಯಿಂದ ಜಲಾಭಿಮುಖ ಪ್ರದೇಶ ಅಭಿವೃದ್ಧಿ ಯೋಜನೆ ವಿಳಂಬಗೊಂಡಿತ್ತು ಎಂದರು.

Advertisement

ಹೊಗೆಬಜಾರ್‌ ಮೀನುಗಾರಿಕ ಕಾಲೇಜಿನಲ್ಲಿ ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರವನ್ನು ಸಂಸದರು ಉದ್ಘಾಟಿಸಿದರು. ಮೇಯರ್‌ ಜಯಾನಂದ ಅಂಚನ್‌, ಉಪಮೇಯರ್‌ ಪೂರ್ಣಿಮಾ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮನಪಾ ಸದಸ್ಯರಾದ ಸುಧೀರ್‌ ಶೆಟ್ಟಿ ಕಣ್ಣೂರು, ಸಂಧ್ಯಾ ಆಚಾರ್ಯ, ಜಿಲ್ಲಾಧಿಕಾರಿ ಎಂ.ಆರ್‌. ರವಿಕುಮಾರ್‌, ಮನಪಾ ಆಯುಕ್ತ ಚನ್ನಬಸಪ್ಪ, ಸ್ಮಾರ್ಟ್‌ ಸಿಟಿ ಅಧಿಕಾರಿಗಳಾದ ಅರುಣ್‌ಪ್ರಭ, ಚಂದ್ರಕಾಂತ್‌ ಉಪಸ್ಥಿತರಿದ್ದರು.

ಸುಸಜ್ಜಿತ ಪೆವಿಲಿಯನ್‌, ಕೌಶಲ ಅಭಿವೃದ್ಧಿ ಕೇಂದ್ರ
ಸುಮಾರು 9 ಕೋಟಿ ರೂ. ವೆಚ್ಚದಲ್ಲಿ, 800 ಮಂದಿ ಆಸೀನ ವ್ಯವಸ್ಥೆಯ ಮಂಗಳಾ ಕ್ರೀಡಾಂಗಣದಲ್ಲಿ ನೂತನ ಫೆವಿಲಿಯನ್‌ ಉದ್ಘಾಟನೆಗೊಂಡಿದ್ದು, ಸುಸಜ್ಜಿತ ಪ್ರೇಕ್ಷಕ ವೀಕ್ಷಣ ಗ್ಯಾಲರಿ, ಜಿಮ್‌, ಫಿಸಿಯೋಥೆರಪಿ ವ್ಯವಸ್ಥೆ, ಶೌಚಾಲಯ, ಟೆನ್ಸಿಲ್‌ ರೂಫಿಂಗ್‌ ವ್ಯವಸ್ಥೆ ಹೊಂದಿದೆ. ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರ 2.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. 8 ಕೋರ್ಸ್‌ಗಳು, 30 ದಿನಗಳ ತರಬೇತಿ ಅವಧಿ, ಪ್ರತೀ ವಿಷಯಕ್ಕೆ 30 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಮೀನು ಗಾರಿಕೆ ಮತ್ತು ಬಂದರು ವಿಷಯಗಳಿಗೆ ಸಂಬಂಧಿಸಿದ ವಿವಿಧ ರೀತಿಯ ತರಬೇತಿ ನೀಡಲಾಗುತ್ತದೆ. ಮೀನುಗಾರರು, ನಿರುದ್ಯೋಗಿ ಯುವಕರು, ಶಾಲಾ-ಕಾಲೇಜು ತೊರೆದವರು, ಸ್ಥಳೀಯರು ಉಪಯೋಗ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next