Advertisement
ಒಂದೆಡೆ ನೀರಿನ ಬೇಡಿಕೆ ಹೆಚ್ಚುತ್ತಲೇ ಇದ್ದರೆ, ಮತ್ತೂಂದೆಡೆ ಇದಕ್ಕೆ ತದ್ವಿರುದ್ಧವಾಗಿ ಲಭ್ಯತೆ ಕಡಿಮೆ ಆಗುತ್ತಿದೆ. ಆದ್ದರಿಂದ ಸಾಧ್ಯವಾದಷ್ಟು ಎಲ್ಲ ರೀತಿಯಿಂದ ನೀರಿನ ಉಳಿತಾಯ ಮಾಡಲು ಪ್ರಯತ್ನಗಳು ನಡೆದಿದೆ. ಇದರಲ್ಲಿ ಹೊಸ ಅಪಾರ್ಟ್‍ಮೆಂಟ್ ನಿರ್ಮಾಣ ಯೋಜನೆಗೆ ನಿಷೇಧ, ಈಗಾಗಲೇ ಇರುವ ಅಪಾರ್ಟ್‍ಮೆಂಟ್‌ಗಳಿಗೆ ಮೀಟರ್ ಅಳವಡಿಕೆ, ತ್ಯಾಜ್ಯ ನೀರು ಸಂಸ್ಕರಣೆ ಜತೆಗೆ ಇದರ ಮುಂದುವರಿದ ಭಾಗವಾಗಿ ಕಡಿಮೆ ನೀರು ಹೊರಚೆಲ್ಲುವ ಟ್ಯಾಪ್‍ಗಳನ್ನು ಅಳವಡಿಸಲು ಚಿಂತನೆ ನಡೆದಿದೆ.
Related Articles
Advertisement
ಹೇಗೆಂದರೆ, ನೀರು ಮಿತ ಬಳಕೆಯಿಂದ ನೀರಿನ ಬಿಲ್ ಕಡಿಮೆ ಆಗುತ್ತದೆ. ಮಾರುಕಟ್ಟೆಗಳಲ್ಲಿ ಒಂದು ನಿಮಿಷಕ್ಕೆ 6 ಲೀ., 9 ಲೀ. ಮತ್ತು 15 ಲೀ. ನೀರು ಹೊರಚೆಲ್ಲುವಂತಹ ವಿವಿಧ ಪ್ರಕಾರ ಟ್ಯಾಪ್‍ಗಳಿವೆ. ಸ್ಮಾರ್ಟ್ ಟ್ಯಾಪ್‍ಗಳು ದುಬಾರಿ ಎನಿಸಿದವರು, ಈ ಮಾದರಿಯ ಟ್ಯಾಪ್‍ಗಳನ್ನು ಅಳವಡಿಸಿಕೊಳ್ಳಬಹುದು ಎಂದು ಜಲಮಂಡಳಿ ಉನ್ನತ ಅಧಿಕಾರಿಯೊಬ್ಬರು ಹೇಳುತ್ತಾರೆ.
ಚರ್ಚೆ ಪ್ರಾಥಮಿಕ ಹಂತದಲ್ಲಿ; ಲೋಕೋಪಯೋಗಿ ಇಲಾಖೆ: “ಪ್ರಸ್ತುತ ನಾವು ಬಳಕೆ ಮಾಡುವ ಸಾಮಾನ್ಯ ನಲ್ಲಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಹೊರಬರುತ್ತದೆ. ಸ್ಮಾರ್ಟ್ ಟ್ಯಾಪ್‍ಗಳು ಅಥವಾ ಅಗತ್ಯಕ್ಕೆ ತಕ್ಕಷ್ಟೇ ನೀರು ಹೊರಚೆಲ್ಲುವ ಅತ್ಯಾಧುನಿಕ ಟ್ಯಾಪ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳನ್ನು ಪರಿಚಯಿಸಲು ಸಾಧ್ಯವೇ ಎಂಬುದರ ಬಗ್ಗೆ ಚಿಂತನೆ ನಡೆದಿದೆ. ಅಷ್ಟೇ ಅಲ್ಲದೆ, ಫ್ಲಶ್‌ಗಳ ನೀರನ್ನು ಕೂಡ ಶುದ್ಧೀಕರಿಸಿ, ಅದೇ ಫ್ಲಶ್‌ಗಳಿಗೆ ಮರುಬಳಕೆ ಮಾಡುವ ತಂತ್ರಜ್ಞಾನವೂ ಬಂದಿದೆ. ಈ ಸಂಬಂಧ ಅಮೆರಿಕದ ಕಂಪೆನಿಯೊಂದು ಪ್ರಾತ್ಯಕ್ಷಿಕೆ ನೀಡುವುದರ ಜತೆಗೆ ಚರ್ಚೆ ನಡೆಸಿದೆ. ಆದರೆ, ಈ ಚಿಂತನೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣರೆಡ್ಡಿ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.
ಸಬ್ಸಿಡಿ ನೀಡುವುದು ಅಗತ್ಯ – ತಜ್ಞರು: ನೀರಿನ ಮಿತ ಬಳಕೆಗೆ ಪೂರಕವಾದ ಟ್ಯಾಪ್‍ಗಳ ಅಳವಡಿಕೆಗೆ ಜನರನ್ನು ಪ್ರೋತ್ಸಾಹಿಸಲು ಸರ್ಕಾರಗಳಿಂದ ಸಬ್ಸಿಡಿ ನೀಡುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅತ್ಯಾಧುನಿಕ ಟ್ಯಾಪ್‍ಗಳನ್ನು ಅಳವಡಿಸಿಕೊಳ್ಳಲು ಜನ ಮುಂದೆಬರುವುದಿಲ್ಲ. ಈ ಟ್ಯಾಪ್‍ಗಳು ದುಬಾರಿ ಎಂಬುದು ಇದಕ್ಕೆ ಕಾರಣ. ಆದರೆ, ನಂತರದ ದಿನಗಳಲ್ಲಿ ಪರೋಕ್ಷವಾಗಿ ಬಳಕೆದಾರರಿಗೇ ಇದರಿಂದ ಉಳಿತಾಯ ಆಗುತ್ತದೆ. ಅದೇನೇ ಇರಲಿ, ಜನ ಸ್ವಯಂಪ್ರೇರಿತರಾಗಿ ಮುಂದೆಬರಲು ಸಬ್ಸಿಡಿ ನೀಡಿ ಪ್ರೋತ್ಸಾಹಿಸಬೇಕು. ಈ ಸಂಬಂಧ ರಾಜ್ಯ ಅಥವಾ ಕೇಂದ್ರ ಸರ್ಕಾರ ನೀತಿ ರೂಪಿಸುವ ಅವಶ್ಯಕತೆ ಇದೆ ಎಂದು ತಜ್ಞರು ಪ್ರತಿಪಾದಿಸುತ್ತಾರೆ.
* ವಿಜಯಕುಮಾರ ಚಂದರಗಿ