Advertisement

ಸ್ಮಾರ್ಟ್‌ ಸ್ಲಂಗಳ ಯೋಜನೆ ಅಗತ್ಯ

09:41 PM Feb 22, 2020 | mahesh |

ಎಲ್ಲಿ ನಗರಗಳಿರುತ್ತವೆಯೋ ಅಲ್ಲಿ ಸ್ಲಂಗಳು ಇದ್ದೇ ಇರುತ್ತವೆ. ಸ್ಲಂ ಎಂದಾಕ್ಷಣ ಎಲ್ಲರ ಕಣ್ಣ ಮುಂದೆ ಬರುವುದೇ ಅಲ್ಲಿನ ಕೊಳಚೆ ಪ್ರದೇಶ, ಮೂಲ ಸೌಕರ್ಯಗಳ ಕೊರತೆ, ಅರೆಬರೆ ಬಟ್ಟೆ ಹಾಕಿಕೊಂಡು ಒಡಾಡುವ ಮಕ್ಕಳು, ಸುಸಜ್ಜಿತವಲ್ಲದ ಮನೆಗಳು ಇನ್ನೂ ಎನೇನೋ. ಇಂದು ಜಗತ್ತು ಎಷ್ಟೇ ಮುಂದುವರಿದಿದ್ದರೂ ವಿದೇಶಗಳೂ ಸಹಿತ ಅತ್ಯಾಧುನಿಕತೆಯಿಂದ ತುಂಬಿ ತುಳುಕುತ್ತಿರುವ ಹೈಟೆಕ್‌ ನಗರಗಳು ಒಂದೆಡೆಯಾದರೆ ಅದರ ಪಕ್ಕದಲ್ಲೇ ಅಸೌಕರ್ಯಗಳ ಗೂಡಾಗಿರುವ ಸ್ಲಂಗಳತ್ತ ಸರಕಾರ ವಹಿಸುತ್ತಿರುವ ಈಗಿನ ಕಾಳಜಿ ತೀರಾ ಅಲ್ಪವಾಗಿದೆ. ಸರಕಾರಗಳು ಸ್ಲಂಗಳಿಗೆ ನೀಡುವ ಅರ್ಧದಷ್ಟು ಪ್ರಾಮುಖ್ಯ ನೀಡಿದರೂ ಸ್ಲಂಗಳಿಗೆ ಒಂದು ಸುಂದರ ರೂಪ ನೀಡಬಹುದು. ಅಲ್ಲದೇ ಅವರಿಗೂ ಒಂದು ಸುಂದರ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

Advertisement

ಕುಡಿಯಲು ಮತ್ತು ಬಳಸುವ ನೀರು, ಸೂರು ಮತ್ತು ವಿದ್ಯುತ್‌ಶಕ್ತಿ ಇವುಗಳು ಇಂದಿನ ಅನೇಕ ಸ್ಲಂಗಳಲ್ಲಿ ಅತೀ ಮುಖ್ಯವಾಗಿ ಕಾಣುವಂತ ಪ್ರಬಲ ಸಮಸ್ಯೆಗಳಾಗಿವೆ. ಮುಂಬೈ, ಕೊಲ್ಕತ್ತಾ, ಚೈನ್ನೈ, ಬೆಂಗಳೂರು ಇನ್ನೂ ಮುಂತಾದ ನಗರಗಳಲ್ಲಿ ಇಂದು ಸ್ಲಂಗಳನ್ನು ನೋಡಿದರೆ ಅವರ ಜೀವನದ ಗುಣಮಟ್ಟ ಎಷ್ಟು ಕೆಳಗಿದೆ ಎಂದು ಅರಿವಾಗುತ್ತದೆ. ಇಂತಹ ಸ್ಲಂಗಳತ್ತ ಕೆಲವು ಅಗತ್ಯ ಮೂಲ ಸೌಕರ್ಯಗಳನ್ನು ತ್ವರಿತಗತಿಯಲ್ಲಿ ಒದಗಿಸುವತ್ತ ಸ್ಥಳೀಯಾಡಳಿತ ಮತ್ತು ಸರಕಾರ ಗಮನವನ್ನು ಕೇಂದ್ರೀಕರಿಸುವ ಅಗತ್ಯವಿದೆ.

ರೀಸೈಕ್ಲಿಂಗ್‌ ಹಬ್‌
ಸ್ಲಂಗಳಲ್ಲಿ ಹೆಚ್ಚಿನ ಜನರು ಚಿಂದಿ ಆಯುವುದು, ಗುಜರಿ, ಮೆಕ್ಯಾನಿಕ್‌ ಇತ್ಯಾದಿ ಕೆಲಸಗಳನ್ನು ಮಾಡುವವರಿದ್ದಾರೆ. ಈಗಿರುವ ಯುವಕರಿಗೆ ಶಿಕ್ಷಣ ನೀಡಿ ಬೇರೆ ಬೇರೆ ಕೆಲಸಗಳನ್ನು ಮಾಡುವುದಕ್ಕೆ ಪ್ರೇರೇಪಿಸಬಹುದು. ಆದರೆ ಈಗಾಗಲೆ ಈ ಹಂತ ದಾಟಿರುವ ಜನರಿಗೆ ಉತ್ತಮ ಉದ್ಯೋಗ ನೀಡಬೇಕಾದರೆ ತ್ಯಾಜ್ಯ ಸಂಸ್ಕರಣೆ, ಮತ್ತಿತರ ಕಾರ್ಖಾನೆಗಳನ್ನು ಆರಂಭಿಸುವ ಮೂಲಕ ಸ್ಲಂನ ಜನಶಕ್ತಿಯನ್ನು ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬಹುದು. ಮುಂಬಯಿಯ ಧಾರಾವಿಯಲ್ಲಿ ಏಕ ಕೋಣೆಯ 15,000ಕ್ಕೂ ಅಧಿಕ ಕಾರ್ಖಾನೆಗಳು ಅಲ್ಲಿನ ಜನರಿಗೆ ಉದ್ಯೋಗ ಒದಗಿಸಿದ್ದು ಪ್ರತಿ ವರ್ಷ ಸುಮಾರು 1 ಬಿಲಿಯನ್‌ ಡಾಲರ್‌ನಷ್ಟು ವಹಿವಾಟು ನಡೆಸುತ್ತವೆೆ.

ಚರಂಡಿ, ಕುಡಿಯುವ ನೀರು, ಆರೋಗ್ಯ ಕೇಂದ್ರ
ಕೊಳೆಗೇರಿಗಳಲ್ಲಿ ಎದ್ದು ಕಾಣುವಂತ ಸಮಸ್ಯೆಗಳಲ್ಲಿ ಇವು ಪ್ರಮುಖ ಸಮಸ್ಯೆಗಳಾಗಿದ್ದು ಇವುಗಳತ್ತ ಸರಕಾರ ಹೆಚ್ಚು ಗಮನವಹಿಸುವ ಅಗತ್ಯವಿದೆ. ಸ್ಲಂಗಳಲ್ಲಿ ಚರಂಡಿಗಳಲ್ಲದೆ ಮನೆ ಬಳಕೆಯ ನೀರು ಹರಿಬಿಡುವುದರಿಂದ ಗಲೀಜು ನೀರು ಒಂದೆಡೆ ನಿಂತು ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತದೆ. ಇನ್ನು ಕೆಲವೆಡೆ ಕುಡಿಯಲು ಮತ್ತು ಬಳಸಲು ಸಮರ್ಪಕ ನೀರಿನ ಕೊರತೆ ಇದೆ. ಕೊಳೆಗೇರಿಗಳಲ್ಲಿ ಸರಕಾರದ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯುಲೂ ಆದ್ಯತೆ ನೀಡಬೇಕು ಈ ಮೂಲಕ ಸ್ಲಂ ಜನರ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಮಾಡಲು ಸಾಧ್ಯ.

ಸ್ಲಂ ಅಭಿವೃದ್ಧಿ ಹಿಂದಿರುವ ಉದ್ದೇಶ
1 ಸ್ಲಂ ಜನರ ಜೀವನಮಟ್ಟವನ್ನು ಉನ್ನತೀಕರಿಸುವುದು.
2 ಅವರಿಗೂ ಉದ್ಯೋಗ ನೀಡುವ ಮೂಲಕ ದೇಶದ ಅಥವಾ ನಗರದ ಅಭಿವೃದ್ಧಿಯಲ್ಲಿ ಪಾಲುದಾರಿಕೆ ನೀಡುವುದು.
3 ಸ್ಲಂನ ಜನಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು.
4 ಸ್ಲಂಗಳನ್ನು ನೈರ್ಮಲೀಕರಣ ಗೊಳಿಸುವುದರಿಂದ ಅಲ್ಲಿನ ಜನರ ಆರೋಗ್ಯ ಕಾಪಾಡುವುದು.
5 ನಗರದಂತೆ ಸ್ಲಂಗಳನ್ನು ಸುಂದರವಾಗಿರಿಸುವುದು, ನಗರ ಸೌಂದರ್ಯವನ್ನು ಹೆಚ್ಚಿಸುವುದು.

Advertisement

ಸೋಲಾರೀಕರಣ
ಸೂರ್ಯನ ಬೆಳಕನ್ನು ಸರಿಯಾಗಿ ಉಪಯೋಗಿಸುವಲ್ಲಿ ಸೋಲಾರ್‌ ಪ್ಲೇಟ್‌ನ ಬಳಕೆ ಹೆಚ್ಚು ಸೂಕ್ತ. ಸ್ಲಂಗಳಲ್ಲಿ ಹೆಚ್ಚು ಸೋಲಾರ್‌ ದೀಪಗಳನ್ನು ಅಳವಡಿಸುವ ಮೂಲಕ ಸ್ಲಂಗಳಿಗೆ ಅಗತ್ಯ ಪ್ರಮಾಣದ ಸೌರಶಕ್ತಿ ಮತ್ತು ಮನೆಗಳಿಗೆ ವಿದ್ಯುತ್‌ಅನ್ನು ಸಹ ಒದಗಿಸಲು ಸಹಾಯಕವಾಗುತ್ತದೆ. ಸ್ಲಂನ ಜನರಿಗೆ ಸಹಾಯವಾಗುವಂತೆ ಸಬ್ಸಿಡಿ ದರದಲ್ಲಿ ವಿದ್ಯುತ್‌ ಒದಗಿಸುವುದು.

ಸಾರ್ವಜನಿಕ ಶೌಚಗೃಹ
ಸ್ಲಂಗಳಲ್ಲಿ ಶೌಚಗೃಹ ಕೂಡ ಒಂದು ಪ್ರಮುಖ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರ ಒದಗಿಸಬೇಕಾದರೆ ಸುಸಜ್ಜಿತವಾದ ಸಾರ್ವಜನಿಕ ಶೌಚಗೃಹಗಳ ನಿರ್ಮಾಣ ಅತ್ಯಗತ್ಯವಾಗಿದೆ. ಇದರಿಂದಾಗಿ ಕೊಳೆಗೇರಿಗಳಲ್ಲಿ ಸುಚಿತ್ವ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ವಿಶ್ವದ 4 ಅತಿದೊಡ್ಡ ಸ್ಲಂಗಳು
ಖಯೇಲ್ಟಿಶಾ -(ಕೇಪ್‌ಟೌನ್‌) ದಕ್ಷಿಣ ಆಫ್ರಿಕಾ
ಕಿಬೆರಾ-(ನೈರೊಬಿ) ಕಿನ್ಯಾ
ಧಾರಾವಿ-(ಮುಂಬಯಿ) ಭಾರತ
ಒರಂಗಿ ಟೌನ್‌-(ಕರಾಚಿ) ಪಾಕಿಸ್ಥಾನ

ಶಿವಾನಂದ ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next