Advertisement

ಸ್ಮಾರ್ಟ್‌ ಪಾರ್ಕಿಂಗ್‌ ಅನುಮಾನ?

04:30 AM Feb 07, 2019 | |

ಬೆಂಗಳೂರು: ಬೆಂಗಳೂರಿನಲ್ಲಿ ಪಾರ್ಕಿಂಗ್‌ ಸಮಸ್ಯೆಗೆ ನಿವಾರಣೆ ಹಾಗೂ ಪಾರ್ಕಿಂಗ್‌ ಮಾಫಿಯಾ ನಿಯಂತ್ರಿಸಲು ಜಾರಿಗೊಳಿಸಲು ಮುಂದಾಗಿದ್ದ ‘ಸ್ಮಾರ್ಟ್‌ ಪಾರ್ಕಿಂಗ್‌’ ಯೋಜನೆಗೆ ಸರ್ಕಾರ ಅನುಮೋದಿಸದ ಹಿನ್ನೆಲೆಯಲ್ಲಿ ಯೋಜನೆಗೆ ಹಿನ್ನಡೆಯುಂಟಾಗಿದೆ.

Advertisement

ಪಾರ್ಕಿಂಗ್‌ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರುವ ಉದ್ದೇಶದಿಂದ ಮಾನವ ರಹಿತ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೊಳಿಸಲು ಪಾಲಿಕೆ ಯೋಜನೆ ರೂಪಿ ಸಿತ್ತು. ಆ ಮೂಲಕ ಪಾರ್ಕಿಂಗ್‌ ಮಾಫಿಯಾ ಗಳಿಗೆ ಕಡಿವಾಣ ಹಾಕುವುದು, ಪಾರ್ಕಿಂಗ್‌ ಶುಲ್ಕದಿಂದ ಸಂಪನ್ಮೂಲ ಕ್ರೋಢೀ ಕರಣದ ಜತೆಗೆ, ವಾಹನ ಸವಾರರಿಗೆ ವ್ಯವಸ್ಥಿತ ವಾದ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿತ್ತು.

ಅದರಂತೆ ನಗರದ 87 ರಸ್ತೆಗಳಲ್ಲಿ ಸ್ವಯಂ ಚಾಲಿತ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೊಳಿಸಲು ಪಾಲಿಕೆ ಮುಂದಾಗಿತ್ತು. ಅದರಂತೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಗುತ್ತಿಗೆದಾರರನ್ನು ಆಯ್ಕೆ ಮಾಡಿ, ಅಂತಿಮ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಆದರೆ, ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಸರ್ಕಾರ, ಸ್ಮಾರ್ಟ್‌ ಪಾಕಿಂಗ್‌ ಯೋಜನೆ ಜಾರಿಗೆ ಮರು ಟೆಂಡರ್‌ ನಡೆಸುವಂತೆ ಸೂಚಿಸಿದೆ. ಪರಿಣಾಮ ಕಳೆದ ಒಂದೂವರೆ ವರ್ಷಗಳಿಂದ ಸ್ಮಾರ್ಟ್‌ಪಾರ್ಕಿಂಗ್‌ ಯೋಜನೆ ಜಾರಿಗೊಳಿಸಲು ಅಧಿಕಾರಿಗಳು ನಡೆಸಿದ ಪ್ರಯತ್ನ ವಿಫ‌ಲವಾಗಿದ್ದು, ಮತ್ತೆ ಟೆಂಡರ್‌ ಪ್ರಕ್ರಿಯೆ ನಡೆಸಿ ಗುತ್ತಿಗೆದಾರರನ್ನು ಆಯ್ಕೆ ಮಾಡಲು ಕನಿಷ್ಠ ಆರು ತಿಂಗಳು ಸಮಯಾವಕಾಶ ಬೇಕಾಗಲಿದೆ. ಇದರೊಂದಿಗೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವುದರಿಂದ ಸ್ಮಾರ್ಟ್‌ ಪಾರ್ಕಿಂಗ್‌ ಯೋಜನೆ ಅನುಷ್ಠಾ ನವಾಗುವುದು ಅನುಮಾನ ಎನ್ನಲಾಗಿದೆ.

ಜತೆಗೆ ಸ್ಮಾರ್ಟ್‌ ಪಾರ್ಕಿಂಗ್‌ ಯೋಜನೆ ಯಾವ ರಸ್ತೆಗಳಲ್ಲಿ ಜಾರಿಗೊಳಿಸಬೇಕೆಂಬ ಗೊಂದಲ ಅಧಿಕಾರಿಗಳಲ್ಲಿ ಮೂಡಿಸಿದೆ. ಪಾಲಿಕೆಯಿಂದ ಈ ಹಿಂದೆ ಆಯ್ಕೆ ಮಾಡಿಕೊಂಡ ರಸ್ತೆಗಳಲ್ಲಿ ಬಹುತೇಕ ರಸ್ತೆಗಳಲ್ಲಿ ಟೆಂಡರ್‌ಶ್ಯೂರ್‌ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕೆಲವು ರಸ್ಯೆಗಳಲ್ಲಿ ಮಾತ್ರ ಪ್ರಗತಿಯಲ್ಲಿದೆ. ಇನ್ನುಳಿದಂತೆ ವೈಟ್ಟಾಪಿಂಗ್‌ ಕಾಮಗಾರಿ ಯಿಂದ ರಸ್ತೆಗಳ ಅಳತೆಯಲ್ಲಿ ಹೆಚ್ಚಿನ ವ್ಯತ್ಯಾಸ ಉಂಟಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಇನ್ನು ಹೊಸ ರಸ್ತೆಗಳನ್ನು ಆಯ್ಕೆ ಮಾಡುವ ಮಾನದಂಡಗಳ ಬಗ್ಗೆಯೂ ಗೊಂದಲ ಸೃಷ್ಟಿಯಾಗಿದ್ದು, ಹಿಂದೆ ರಸ್ತೆಗಳನ್ನು ಎ (ಪ್ರೀಮಿಯಂ), ಬಿ (ವಾಣಿಜ್ಯ) ಹಾಗೂ ಸಿ (ಸಾಮಾನ್ಯ) ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗಿತ್ತು. ಜತೆಗೆ ಒಟ್ಟು 87 ರಸ್ತೆಗಳಲ್ಲಿ 2,500 ಕಾರುಗಳು ಹಾಗೂ 5 ಸಾವಿರ ದ್ವಿಚಕ್ರ ವಾಹನಗಳ ನಿಲುಗಡೆ ಸ್ಥಳಾವಕಾಶವನ್ನು ಗುರುತಿಸಲಾಗಿತ್ತು. ಇದೀಗ ಮರು ಟೆಂಡರ್‌ ಕರೆಯುವುದರಿಂದ ಮತ್ತೆ ರಸ್ತೆಗಳ ಅಧ್ಯಯನ ನಡೆಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

Advertisement

ಸರ್ಕಾರದ ಆದೇಶದಲ್ಲೇನಿದೆ?: ಪಾಲಿಕೆಯ ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ಆಯ್ಕೆ ಮಾಡಿಕೊಂಡಿರುವ ರಸ್ತೆಗಳಲ್ಲಿ ಟೆಂಡರ್‌ ಶ್ಯೂರ್‌ ಅಥವಾ ವೈಟ್ಟಾಪಿಂಗ್‌ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾಮಗಾರಿ ಗಳು ಪೂರ್ಣಗೊಂಡ ನಂತರ ರಸ್ತೆಗಳ ವಿನ್ಯಾಸವೇ ಬದಲಾಗಲಿದ್ದು, ಬಿಡ್‌ ಸಲ್ಲಿಸಿರುವ ಸಂಸ್ಥೆಗಳು ನಮೂದಿಸಿರುವ ಮೊತ್ತದಲ್ಲಿ ಭಾರಿ ವ್ಯಾತ್ಯಾಸ ಕಂಡು ಬರುವು ದರಿಂದ ಮರು ಟೆಂಡರ್‌ ಆಹ್ವಾನಿಸುವಂತೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳು ಪತ್ರದಲ್ಲಿ ತಿಳಿಸಿದ್ದಾರೆ.

ಹೆಚ್ಚುವುದೇ ಆದಾಯ?: ನಗರದ ಪ್ರಮುಖ 87 ರಸ್ತೆಗಳಲ್ಲಿ ಸ್ಮಾರ್ಟ್‌ ಪಾಕಿಂಗ್‌ ವ್ಯವಸ್ಥೆ ಜಾರಿಯಿಂದಾಗಿ ಪಾಲಿಕೆಗೆ ವಾರ್ಷಿಕ 31.56 ಕೋಟಿ ರೂ. ಆದಾಯ ಬರುತ್ತದೆ ಎಂದು ಅಂದಾಜಿಸಲಾಗಿತ್ತು. ಅದರಂತೆ ಗುತ್ತಿಗೆ ಪಡೆದ ಬಿಲ್ಡಿಂಗ್‌ ಕಂಟ್ರೋಲ್‌ ಸಲ್ಯೂಷನ್ಸ್‌ ಇಂಡಿಯಾ ಕಂಪನಿಯು 10 ವರ್ಷಗಳಿಗೆ ಪಾಲಿಕೆಗೆ 315.60 ಕೋಟಿ ರೂ. ನೀಡಲು ಒಪ್ಪಿಕೊಂಡಿತ್ತು. ಇದೀಗ ಮರು ಟೆಂಡರ್‌ ಕರೆಯುವುದರಿಂದ ಪಾಲಿಕೆಗೆ ಆದಾಯ ಹೆಚ್ಚಬಹುದು ಅಥವಾ ಎಸ್‌ಆರ್‌ ದರ ಹೆಚ್ಚಾಗಿದೆ ಎಂಬ ಕಾರಣ ನೀಡಿ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ 87 ರಸ್ತೆಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ಯೋಜನೆ ಜಾರಿಗೊಳಿಸಲು ಪಾಲಿಕೆ ಮುಂದಾಗಿತ್ತು. ಅದರಂತೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಸರ್ಕಾರದ ಅನುಮತಿಗಾಗಿ ಕಳುಹಿಸಲಾಗಿದ್ದು, ಸರ್ಕಾರ ಮರು ಟೆಂಡರ್‌ ಆಹ್ವಾನಿಸುವಂತೆ ಸೂಚಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮರು ಟೆಂಡರ್‌
ಕರೆಯಲಾಗುವುದು. 
●ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ

ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next