Advertisement
ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ನಗರವಾಗಿದ್ದು, ಕೇಂದ್ರ ಸರಕಾರದ ಸೂಚನೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆ ನಿಯಮದಂತೆ ವಿವಿಧ ಯೋಜನೆ, ಸೌಕರ್ಯಗಳನ್ನು ಸ್ಮಾರ್ಟ್ ಆಗಿಸಲಾಗುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಎಸ್‌ಎಸ್‌ಇ ಪ್ರೊಟೆಕ್ ಸಂಸ್ಥೆ ಸ್ಮಾರ್ಟ್ ಕಸದ ತೊಟ್ಟಿ ತಯಾರುಗೊಳಿಸುವ ಮೂಲಕ ಗಮನ ಸೆಳೆದಿದೆ.
Related Articles
Advertisement
ಅಲ್ಲದೇ ತ್ಯಾಜ್ಯ ಭರ್ತಿಯಾಗಿದ್ದು, ಸಾಗಣೆಗೆ ಮುಂದಾಗುವಂತೆ ಸಂಬಂಧಿಸಿದವರಿಗೆ ಸಂದೇಶ ರವಾನಿಸುತ್ತದೆ. ತ್ಯಾಜ್ಯ ಸಾಗಣೆ ಮಾಡುವವರು ಇದರ ಸಾಗಣೆ ಸಕಾಲಕ್ಕೆ ಮಾಡದಿದ್ದರೆ, ಅದರ ಸಂದೇಶವನ್ನು ಸ್ಥಳೀಯ ಆಡಳಿತ ಮುಖ್ಯಸ್ಥರಿಗೂ ರವಾನಿಸುತ್ತದೆ. ಜತೆಗೆ ಸ್ಮಾರ್ಟ್ ಕಸದ ತೊಟ್ಟಿ ಇರುವ ಪ್ರದೇಶದ ತ್ಯಾಜ್ಯ ನಿರ್ವಹಣೆಯನ್ನು ಜಿಎಸ್‌ಎಂ ನೆರವಿನೊಂದಿಗೆ ಸ್ಥಳೀಯ ಆಡಳಿತ ಮುಖ್ಯಸ್ಥರು ತಮ್ಮ ಮೊಬೈಲ್‌ನಲ್ಲಿಯೇ ವೀಕ್ಷಣೆ ಮಾಡಬಹುದು, ಮಾಹಿತಿ ಪಡೆಯಬಹುದಾಗಿದೆ. ಮೊಬೈಲ್ ಆ್ಯಪ್ ಮೂಲಕವೂ ಮಾಹಿತಿ ಪಡೆಯಬಹುದಾಗಿದೆ.
ವಾಸನೆ ಬಾರದು: ಸ್ಮಾರ್ಟ್ ಕಸದ ತೊಟ್ಟಿಯಲ್ಲಿ ತ್ಯಾಜ್ಯ ಹಾಕಿದ ನಂತರ ಸ್ವಯಂ ಮುಚ್ಚಿಕೊಳ್ಳುತ್ತದೆ. ಜತೆಗೆ ತ್ಯಾಜ್ಯದ ಯಾವುದೇ ವಾಸನೆ ಬಾರದಂತೆ ಭದ್ರವಾಗಿ ಮುಚ್ಚಿಕೊಳ್ಳುವ ವ್ಯವಸ್ಥೆ ಅಳವಡಿಸಲಾಗಿದೆ. ಸ್ಮಾರ್ಟ್ ಕಸದ ತೊಟ್ಟಿಗೆ ಒಂದು ಬಾರಿ ಹೂಡಿಕೆ ಮಾಡಿದರೆ ಸುಮಾರು 20ರಿಂದ 30 ವರ್ಷ ಯಾವುದೇ ಸಮಸ್ಯೆ ಬಾರದು ಎಂಬುದು ಕಂಪನಿ ಅನಿಸಿಕೆ.
ಎಸ್‌ಎಸ್‌ಇ ಪ್ರೊಟೆಕ್ ಕಂಪನಿ ಪ್ರಸ್ತುತ ಸುಮಾರು 144 ಲೀಟರ್ ಸಾಮರ್ಥ್ಯ ಹಾಗೂ 80 ಲೀಟರ್ ಸಾಮರ್ಥ್ಯದಲ್ಲಿ ಸ್ಮಾರ್ಟ್ ಕಸದ ತೊಟ್ಟಿ ತಯಾರಿಸಿದೆ. 144 ಲೀಟರ್ ಸಾಮರ್ಥ್ಯದ ತೊಟ್ಟಿ ನಾಲ್ಕು ಅಡಿ ಎತ್ತರ ಇದ್ದು, ಅದೇ ರೀತಿ 80 ಲೀಟರ್ ಸಾಮರ್ಥ್ಯವಿದ್ದು, ಮೂರು ಅಡಿ ಎತ್ತರ ಇದೆ. ಸುಮಾರು 15ರಿಂದ 22 ಸಾವಿರ ರೂ. ವೆಚ್ಚದಲ್ಲಿ ಇವು ದೊರೆಯಲಿವೆ. ಜತೆಗೆ ಇದೇ ಸ್ಮಾರ್ಟ್ ಕಸದ ತೊಟ್ಟಿಯಲ್ಲಿ ಹಸಿತ್ಯಾಜ್ಯ ಬಳಿಸಿ ಕಾಂಪೊಸ್ಟ್ ಸಹ ತಯಾರು ಮಾಡಬಹುದಾಗಿದೆ.
ಸ್ಮಾರ್ಟ್ ನಗರಕ್ಕೆ ಸ್ಮಾರ್ಟ್ ಯೋಜನೆ : ತ್ಯಾಜ್ಯ ವಿಂಗಡಣೆ ಹಾಗೂ ಸಂಗ್ರಹ ನಿಟ್ಟಿನಲ್ಲಿ ಸ್ಮಾರ್ಟ್ ಕಸದ ತೊಟ್ಟಿ ಉತ್ತಮ ಸಹಕಾರಿ ಆಗಲಿದೆ. ಜತೆಗೆ ಸ್ಥಳೀಯ ಆಡಳಿತಕ್ಕೂ ತ್ಯಾಜ್ಯ ಸಂಗ್ರಹ ಬಗ್ಗೆ ಸಂದೇಶ ರವಾನಿಸುತ್ತಿದ್ದು, ಸಮರ್ಪಕ ಸಾಗಣೆ ಆಗಿದೆಯೋ ಇಲ್ಲವೋ ಎನ್ನುವ ಮಾಹಿತಿಯನ್ನು ಇದ್ದಲ್ಲಿಂದಲೇ ತಿಳಿದುಕೊಳ್ಳಬಹುದಾಗಿದೆ. – ಬಿ.ಎಚ್. ಸುರೇಶರಾಜು, ವ್ಯವಸ್ಥಾಪಕ ನಿರ್ದೇಶಕ, ಎಎಸ್‌ಇ ಪ್ರೊಟೆಕ್
-ಅಮರೇಗೌಡ ಗೋನವಾರ