Advertisement

ಇದು ಚುಕುಬುಕು ರೈಲಲ್ಲ…ಪಂಜಿಮೊಗರುವಿನ ಸರಕಾರಿ ಶಾಲೆ!

10:01 AM Aug 29, 2018 | Team Udayavani |

ಮಹಾನಗರ: ನಗರದ ಹೊರಭಾಗದ ಪಂಜಿಮೊಗರು ವಿದ್ಯಾ ನಗರದಲ್ಲಿರುವ ಜಿಲ್ಲಾ ಪಂಚಾಯತ್‌ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆಯಿಲ್ಲದೆ ಮಕ್ಕಳನ್ನು ಕೈಬೀಸಿ ಕರೆಯುತ್ತಿದೆ. ಸರಕಾರಿ ಶಾಲೆಗಳು ಮುಚ್ಚುತ್ತಿವೆ ಎಂಬ ಸಾರ್ವತ್ರಿಕ ಕೂಗಿನ ಮಧ್ಯೆಯೇ ನಗರದ ಸರಕಾರಿ ಶಾಲೆಯೊಂದು ಆಧುನಿಕ ಶಿಕ್ಷಣ ಕ್ರಮಕ್ಕೆ ತೆರೆದುಕೊಂಡು ಮಕ್ಕಳ ಭವಿಷ್ಯಕ್ಕೆ ಬೆಳಕಾಗಿರುವುದು ವಿಶೇಷ. ಇಲ್ಲಿ ಒಂದರಿಂದ ಮೂರನೇ ತರಗತಿವರೆಗೆ ಮಕ್ಕಳಿಗೆ ನಲಿ-ಕಲಿಯನ್ನು ಹಾಗೂ ಇತರ ತರಗತಿ ಮಕ್ಕಳಿಗೂ ಸ್ಮಾರ್ಟ್‌ ಕ್ಲಾಸ್‌ ಮೂಲಕವೇ ಅಭ್ಯಸಿಸಲಾಗುತ್ತದೆ.

Advertisement

1954ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿಲ್ಲ. ಜತೆಗೆ ಸ್ಥಳೀಯ ಜನಪ್ರತಿ ನಿಧಿಗಳು, ಎಸ್‌ಡಿಎಂಸಿ ಪ್ರಮುಖರು, ಶಿಕ್ಷಕರು, ಹೆತ್ತವರ ಒಟ್ಟು ಸ್ನೇಹಪರ ನಿಲುವಿನಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಪ್ರತೀ ವರ್ಷ ಕಡಿಮೆಯಾಗಿಲ್ಲ. ಈಗ ಒಟ್ಟು 220 ಮಕ್ಕಳಿದ್ದಾರೆ.  ಏಳು ಶಿಕ್ಷಕರಿದ್ದಾರೆ. ಕಳೆದ ವರ್ಷ ಕೂಡ ಇಷ್ಟೇ ಮಕ್ಕಳಿದ್ದರು.

ಸ್ಮಾರ್ಟ್‌ಕ್ಲಾಸ್‌
ಸರಕಾರಿ ಶಾಲೆಯನ್ನು ಮತ್ತಷ್ಟು ಮಕ್ಕಳ ಸ್ನೇಹಿ ಮಾಡಬೇಕು ಎಂಬ ಇರಾದೆಯಿಂದ ‘ಸ್ಮಾರ್ಟ್‌ ಕ್ಲಾಸ್‌’ ಪರಿಕಲ್ಪನೆಯನ್ನು ಈ ಶಾಲೆಯಲ್ಲಿ ಈ ವರ್ಷದಿಂದ ಜಾರಿಗೊಳಿಸಲಾಗಿದೆ. ಶಾಲೆಯ 1, 2, 3 ಹಾಗೂ ನಾಲ್ಕನೇ ತರಗತಿ ಮಕ್ಕಳಿಗೆ ಪ್ರತ್ಯೇಕವಾಗಿ ಒಂದು ಕಟ್ಟಡದಲ್ಲಿ ಸ್ಮಾರ್ಟ್‌ ಕ್ಲಾಸ್‌ ವಿದ್ಯಾಭ್ಯಾಸವಿದೆ. ಜತೆಗೆ 5, 6 ಏಳನೇ ತರಗತಿ ಮಕ್ಕಳಿಗೆ ಇನ್ನೊಂದು ಕಟ್ಟಡದಲ್ಲಿ ಸ್ಮಾರ್ಟ್‌ ಕ್ಲಾಸ್‌ ನಡೆಸಲಾಗುತ್ತದೆ. ಅಂದಹಾಗೆ, ಖಾಸಗಿ ಶಾಲೆಗಳಲ್ಲಿ ಬಳಸುವ ಹಾಗೆ ಸ್ಮಾರ್ಟ್‌ಕ್ಲಾಸ್‌ ಇಲ್ಲಿಲ್ಲ. ಬದಲಾಗಿ, ಕಂಪ್ಯೂಟರ್‌ ಹಾಗೂ ಪ್ರೊಜೆಕ್ಟರ್‌ ಸಹಾಯದಿಂದ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ ಕ್ಲಾಸ್‌ ಶಿಕ್ಷಣ ನೀಡಲಾಗುತ್ತದೆ. ಪುಟ್ಟ ಪುಟ್ಟ ಕನಸಿನ ಮಕ್ಕಳು ಇದನ್ನೇ ಅದ್ಬುತವಾಗಿ ಗ್ರಹಿಸುತ್ತಾರೆ ಹಾಗೂ ಸ್ಮಾರ್ಟ್‌ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಎನ್ನುವುದು ಶಿಕ್ಷಕಿ ವಾಣಿ ಅವರ ಅಭಿಪ್ರಾಯ.

ಕಲಿಕಾಸಕ್ತಿ ವೃದ್ಧಿಗೆ ಸಹಕಾರಿ
ಸ್ಮಾರ್ಟ್‌ ಕ್ಲಾಸ್‌ನಿಂದಾಗಿ ವಿದ್ಯಾರ್ಥಿಗಳ ಜ್ಞಾನಾರ್ಜನೆ ಹಾಗೂ ಕಲಿಕಾಸಕ್ತಿ ವೃದ್ಧಿಗೆ ಸಹಕಾರಿ. ದೃಶ್ಯ, ಶಬ್ದ ಮಾಧ್ಯಮಗಳ ನೆರವಿನಿಂದ ಮಕ್ಕಳಿಗೆ ಹೊಸ ಹೊಸ ವಿಚಾರಗಳು ಮನದಟ್ಟಾ ಗುತ್ತಿವೆ. ನೋಡಿ ತಿಳಿ, ಕೇಳಿ ಕಲಿ ಎಂಬ ಧ್ಯೇಯ ಸಾಕಾರಕ್ಕೆ ಸ್ಮಾರ್ಟ್‌ ಕ್ಲಾಸ್‌ ಪೂರಕ ಎನ್ನುವುದು ಶಿಕ್ಷಕರ ಅನಿಸಿಕೆ.

ಒಂದರಿಂದ ಏಳರವರೆಗೆ ಇಲ್ಲಿ ಮಕ್ಕಳು ಕಲಿಯುವ ಜತೆಗೆ ಪೂರ್ವಪ್ರಾಥಮಿಕ ಶಾಲೆ ಕೂಡ ಆರಂಭವಾಗಿದೆ. ಎಲ್‌ಕೆಜಿ, ಯುಕೆಜಿ ಕ್ರಮಗಳು ಈಗ ಖಾಸಗಿಯಾಗಿ ಆರಂಭವಾದ ಕಾರಣದಿಂದ ಮಕ್ಕಳು ಆ ಬಳಿಕ ಅದೇ ಮಾದರಿಯಂತೆ ಆಂಗ್ಲಮಾಧ್ಯಮಕ್ಕೆ ತೆರಳುತ್ತಾರೆ. ಇದಕ್ಕಾಗಿ ಸರಕಾರಿ ಶಾಲೆಗಳತ್ತ ಮಕ್ಕಳನ್ನು ಕರೆತರುವ ಉದ್ದೇಶದಿಂದ ಇಲ್ಲಿಯೂ ಎಲ್‌ಕೆಜಿ ತರಗತಿ ಕಳೆದ ವರ್ಷ ಆರಂಭಿಸಲಾಗಿತ್ತು. ಈ ವರ್ಷದಿಂದ ಯುಕೆಜಿ ಆರಂಭಿಸಲಾಗಿದ್ದು, ಎರಡೂ ತರಗತಿಗಳಲ್ಲಿ ಸುಮಾರು 70 ಮಕ್ಕಳು ಕಲಿಯುತ್ತಿದ್ದಾರೆ.

Advertisement

ರೈಲು ಬಂಡಿಯಾದ ಶಾಲೆಯ ಗೋಡೆ
13 ಲಕ್ಷ ರೂ.ಗಳ ಜಿಲ್ಲಾ ಪಂಚಾಯತ್‌ ಅನುದಾನದಲ್ಲಿ 2 ಕೊಠಡಿ, ದಾನಿಗಳು-ಸಂಘ ಸಂಸ್ಥೆಗಳ ನೆರವಿನೊಂದಿಗೆ ಇನ್ನೆರಡು ಕೊಠಡಿಗಳನ್ನು ನಿರ್ಮಿಸಲಾಗಿದೆ. ಈ ನಾಲ್ಕೂ ಗೋಡೆಗಳ ಹೊರಭಾಗಕ್ಕೆ ರೈಲುಬಂಡಿಯ ಬಣ್ಣ ಬಳಿಯಲಾಗಿದೆ. ಕೇರಳ ಸಹಿತ ವಿವಿಧ ಭಾಗದಲ್ಲಿ ಶಾಲಾ ಕೊಠಡಿಯ ಬಣ್ಣವನ್ನು ರೈಲುಬಂಡಿಯ ಮಾದರಿಯಲ್ಲಿ ಸಿಂಗರಿಸಿರುವುದು ವಿಶೇಷವಾಗಿತ್ತು. ಇದು ಈಗ ನಗರಕ್ಕೂ ಪರಿಚಿತವಾದಂತಾಗಿದೆ. ಸದ್ಯ ನಾಲ್ಕು ಹೊಸ ಕಟ್ಟಡಕ್ಕೆ (5, 6, 7ನೇ ತರಗತಿ)ಮಾತ್ರ ರೈಲು ಬಂಡಿಯ ಬಣ್ಣ ಹಾಕಿದ್ದು, ಹಳೆಯ ಕಟ್ಟಡಕ್ಕೂ ಅದ್ದೇ ಬಣ್ಣ ಬಳಿಯಲು ಚಿಂತಿಸಲಾಗಿದೆ. 

ಇನ್ನಷ್ಟು ಶಾಲೆಗಳಿಗೆ ವಿಸ್ತರಣೆ
ಪಂಜಿಮೊಗರು ಶಾಲೆ ಮಕ್ಕಳ ಸ್ನೇಹಿಯಾಗಿ ಮೂಡಿಬಂದಿದೆ. ಇದೇ ರೀತಿ ನಗರದ ಹಲವು ಸರಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್‌ ಪರಿಕಲ್ಪನೆ ಯಶಸ್ವಿಯಾಗಿದೆ. ಮುಂದೆಯೂ ಇಂಥ ಪ್ರಯೋಗಗಳನ್ನು ಸ್ಥಳೀಯರ ನೆರವಿನಿಂದ ಇನ್ನಷ್ಟು ಸರಕಾರಿ ಶಾಲೆಗಳಿಗೆ ವಿಸ್ತರಿಸಲಾಗುವುದು.
– ಮಂಜುಳಾ ಕೆ.ಎಲ್‌., ಕ್ಷೇತ್ರ
ಶಿಕ್ಷಣಾಧಿಕಾರಿ, ಮಂಗಳೂರು ಉ.ವ.

 ‘ಸ್ಮಾರ್ಟ್‌ ಕ್ಲಾಸ್‌ ಮಕ್ಕಳು ಖುಷ್‌’
ಸರಕಾರಿ ಶಾಲೆ ಮುಚ್ಚುತ್ತಿವೆ ಎಂಬ ಆತಂಕದ ಇಂದಿನ ದಿನಗಳಲ್ಲಿ ಪಂಜಿಮೊಗರುವಿನ ಸರಕಾರಿ ಶಾಲೆ ಮಾದರಿಯ ರೂಪ ಪಡೆದಿದೆ. ಸ್ಥಳೀಯರು, ಹೆತ್ತವರು, ಸಂಘ-ಸಂಸ್ಥೆಗಳು, ದಾನಿಗಳು, ಶಾಲಾಭಿವೃದ್ಧಿ ಸಮಿತಿ ಸೇರಿದಂತೆ ಎಲ್ಲರ ಸಹಭಾಗಿತ್ವದಿಂದಾಗಿ ಸ್ಮಾರ್ಟ್‌ ಕ್ಲಾಸ್‌ ಆರಂಭಿಸಲಾಗಿದೆ. ಇಂತಹ ಪರಿಕಲ್ಪನೆಗಳು ಇತರ ಸರಕಾರಿ ಶಾಲೆಗಳ ಭಾಗದಲ್ಲೂ ನಡೆದರೆ ಉತ್ತಮ.
ದಯಾನಂದ ಶೆಟ್ಟಿ, ಕಾರ್ಪೊರೇಟರ್‌ 

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next