ಬೆಂಗಳೂರು: ಅಧಿಕಾರ ಅವಧಿ ಮುಗಿಯುತ್ತಾ ಬಂದರೂ ಜಾರಿಯಾಗದ “ಸ್ಮಾರ್ಟ್ ಸಿಟಿ’ಯ ಕನಸಿನ ಯೋಜನೆಗಳನ್ನು ಕೈಬಿಟ್ಟು, ಅಲ್ಪಾವಧಿಯಲ್ಲಿ ಅನುಷ್ಠಾನಗೊಳಿಸಬಹುದಾದ ಕಾರ್ಯಕ್ರಮಗಳನ್ನು ಮಾತ್ರ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು, ಈ ಸಂಬಂಧ ಸೋಮವಾರದೊಳಗೆ ಪರಿಷ್ಕೃತ ಯೋಜನಾ ಪಟ್ಟಿ ಸಲ್ಲಿಸಲು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಸೂಚಿಸಿದೆ.
ಈ ಪರಿಷ್ಕರಣೆಯಿಂದ “ಸ್ಮಾರ್ಟ್ ಸಿಟಿ’ ಅಡಿ ರಾಜ್ಯದ ಏಳೂ ನಗರಗಳಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಹಾಗೂ ಯೋಜನಾ ಮೊತ್ತಕ್ಕೆ ಕತ್ತರಿ ಬೀಳಲಿದ್ದು, ಮುಂದಿನ ಆರು ತಿಂಗಳಲ್ಲಿ ಮಾಡಿ ಮುಗಿಸಬಹುದಾದ ಯೋಜನೆಗಳಿಗೆ ಮಾತ್ರ ಈ ಭಾಗ್ಯ ಸಿಗಲಿದೆ.
ಅದರಂತೆ ರಾಜಧಾನಿ ಬೆಂಗಳೂರಿನಲ್ಲಿ ಕೆರೆಗಳು, ವಿವಿಧ ಮಾರುಕಟ್ಟೆಗಳ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳ ಪಟ್ಟಿಯನ್ನು ಕೇಂದ್ರದ ಮುಂದಿಡಲಾಗಿತ್ತು. ಈಗ ಪರಿಷ್ಕರಣೆಯಿಂದ ಪ್ರಮುಖವಾಗಿ ಟೆಂಡರ್ ಶ್ಯೂರ್ ಮಾದರಿಯಲ್ಲಿ ಸ್ಮಾರ್ಟ್ ರಸ್ತೆ ಕನಸು ಮಾತ್ರ ಕೈಗೂಡುವ ಸಾಧ್ಯತೆ ಇದೆ ಎಂದು ಕರ್ನಾಟಕ ನಗರ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್ಸಿ)ದ ಮೂಲಗಳು ತಿಳಿಸಿವೆ.
ಸರ್ಕಾರದ ಬಳಿ ಸಮಯಾವಕಾಶ ತುಂಬಾ ಕಡಿಮೆ ಇದೆ. ಆದ್ದರಿಂದ ಭೂವಿವಾದ, ಕಾನೂನಿನ ಅಡತಡೆಗಳು, ಒತ್ತುವರಿ ತೆರವು ಕಿರಿಕಿರಿ, ಪುನರ್‌ವಸತಿ ಕಲ್ಪಿಸುವುದು ಮತ್ತಿತರ ಯಾವುದೇ ಸಮಸ್ಯೆಗಳು ಇಲ್ಲದ, ಸುಲಿಲತವಾಗಿ ಅನುಷ್ಠಾನಗೊಳಿಸಬಹುದಾದ ಯೋಜನೆಗಳನ್ನು ಸದ್ಯಕ್ಕೆ ಕೈಗೆತ್ತಿಕೊಳ್ಳದಿರಲು ಉದ್ದೇಶಿಸಲಾಗಿದೆ. ಹಾಗಾಗಿ, ಈ ಮೊದಲಿನ ಕನಸಿನ ಯೋಜನೆಗಳನ್ನು ಬದಿಗೊತ್ತಿ, ವಾಸ್ತವಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇಲ್ಲವಾದರೆ, ಮಂಜೂರಾದ ಹಣ ವಾಪಸ್ ಹೋಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಉದ್ದೇಶಿಸಿದ್ದ ಯೋಜನೆಗಳು: ಸ್ಮಾರ್ಟ್ ಸಿಟಿ ಯೋಜನೆ ಅಡಿ ಈ ಮೊದಲು ಬೆಂಗಳೂರಿನಲ್ಲಿ 640.85 ಕೋಟಿ ರೂ. ವೆಚ್ಚದಲ್ಲಿ 56 ಕಿ.ಮೀ. ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣ, 94 ಕೋಟಿ ರೂ.ಗಳಲ್ಲಿ ರಸೆಲ್ ಮಾರುಕಟ್ಟೆ, ಬಸ್ ಡಿಪೊ, ಸಾರ್ವಜನಿಕ ಉದ್ಯಾನ, ಮೆಟ್ರೋ ನಿಲ್ದಾಣ ಸೇರಿದಂತೆ ಶಿವಾಜಿನಗರದ ಅಭಿವೃದ್ಧಿ, 67.97 ಕೋಟಿ ವೆಚ್ಚದಲ್ಲಿ ಕೆ.ಆರ್. ಮಾರುಕಟ್ಟೆ ಅಭಿವೃದ್ಧಿ, 20 ಕೋಟಿಯಲ್ಲಿ ಕಬ್ಬನ್ ಉದ್ಯಾನದ ಅಪರೂಪದ ಸಸ್ಯಗಳ ವೈವಧ್ಯತೆಯಿಂದ ಕೂಡಿದ ಜಾಗದ ಸಂರಕ್ಷಣೆ ಮತ್ತು ಮರು ಅಭಿವೃದ್ಧಿ, 28.65 ಕೋಟಿಯಲ್ಲಿ ಕೊಳಚೆ ಪ್ರದೇಶದಲ್ಲಿ ವಸತಿ ಸೌಲಭ್ಯ ಹೆಚ್ಚಿಸುವುದು, 30 ಕೋಟಿ ವೆಚ್ಚದಲ್ಲಿ ಬೆನ್ನಿಗಾನಹಳ್ಳಿ, ಹಲಸೂರು ಕೆರೆ, ಸ್ಯಾಂಕಿ ಕೆರೆ, ಬೆನ್ನಿಗಾನಹಳ್ಳಿ ಕೆರೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು.
ಪರಿಷ್ಕೃತ ಯೋಜನೆ: ಪರಿಷ್ಕರಣೆ ಪರಿಣಾಮ ಮುಖ್ಯವಾಗಿ 640 ಕೋಟಿ ವೆಚ್ಚದಲ್ಲಿ ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣ, 250 ಕೋಟಿ ವೆಚ್ಚದಲ್ಲಿ ಕಮಾಂಡ್ ಸೆಂಟರ್, 70 ಕೋಟಿಯಲ್ಲಿ ಕೆ.ಆರ್.ಮಾರುಕಟ್ಟೆ ಮರು ಅಭಿವೃದ್ಧಿಯನ್ನು ಮಾತ್ರ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಪಟ್ಟಿಯನ್ನು ಸೋಮವಾರ ಕೇಂದ್ರ ಸರ್ಕಾರಕ್ಕೆ ರಾಜ್ಯದ ಕೆಯುಐಡಿಎಫ್ಸಿ ಸಲ್ಲಿಸಲಿದೆ.
ಆದರೆ, ಈ ಪೈಕಿ ಸ್ಮಾರ್ಟ್‌ರಸ್ತೆ ಮಾತ್ರ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳ್ಳಲಿದೆ. ಕೆ.ಆರ್. ಮಾರುಕಟ್ಟೆ ಪುನರ್ ಅಭಿವೃದ್ಧಿ ಕಾರ್ಯ ವಿಳಂಬವಾಗಲಿದೆ. ಇನ್ನು ಒಂದೇ ಕಡೆ ಕುಳಿತು ನಿಯಂತ್ರಿಸಬಹುದಾದ ವ್ಯವಸ್ಥೆ ಕಮಾಂಡ್ ಸೆಂಟರ್. ಈಗಾಗಲೇ ಸಂಚಾರ, ಜಲಮಂಡಳಿ ಮತ್ತಿತರ ವ್ಯವಸ್ಥೆಯಲ್ಲಿ ಇದು ಚಾಲ್ತಿಯಲ್ಲಿದೆ. ಎಲ್ಲವನ್ನೂ ಸೇರಿ ಕಮಾಂಡ್ ಸೆಂಟರ್ ರೂಪಿಸಲು ಉದ್ದೇಶಿಸಲಾಗಿದೆ.
ಇದಲ್ಲದೆ, 750 ಕೋಟಿ ರೂ. ವೆಚ್ಚದಲ್ಲಿ ಇ-ಶೌಚಾಲಯಗಳು, ಬಹುಮಹಡಿ ವಾಹನ ನಿಲುಗಡೆ ವ್ಯವಸ್ಥೆ ಮತ್ತಿತರ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು. ಒಟ್ಟಾರೆ ಈ ಮೊದಲು ಸ್ಮಾರ್ಟ್‌ಸಿಟಿ ಅಡಿ ಬೆಂಗಳೂರಿಗೆ 2,219 ಕೋಟಿ ರೂ. ಮೀಸಲಿಡಲಾಗಿತ್ತು. ಇದು ಈಗ 2,150 ಕೋಟಿ ರೂ.ಗೆ ಸೀಮಿತವಾಗಿದೆ. ಈಗಾಗಲೇ 100 ಕೋಟಿ ರೂ. ಬಿಡುಗಡೆಯಾಗಿದ್ದು, ಇದರಲ್ಲಿ ಕೇಂದ್ರದ ಹಣ 50 ಕೋಟಿ ರೂ. ಇದೆ. ಮುಂದಿನ ಕಂತಿನ ಹಣ ಬಿಡುಗಡೆ ಆಗಬೇಕಾದರೆ, ಈಗಾಗಲೇ ನೀಡಿದ ಅನುದಾನದಲ್ಲಿ ಶೇ. 70ರಷ್ಟು ವಿನಿಯೋಗಿಸಿರಬೇಕು.
ಪರಿಷ್ಕೃತ ಪಟ್ಟಿಯಲ್ಲಿನ ಯೋಜನೆಗಳು
ಯೋಜನೆ ವೆಚ್ಚ
-56 ಕಿ.ಮೀ ಸ್ಮಾರ್ಟ್ ರಸ್ತೆ 640 ಕೋಟಿ ರೂ.
-ಕೆ.ಆರ್.ಮಾರುಕಟ್ಟೆ ಅಭಿವೃದ್ಧಿ 70 ಕೋಟಿ ರೂ.
-ಕಮಾಂಡ್ ಸೆಂಟರ್ 250 ಕೋಟಿ ರೂ.
* ವಿಜಯಕುಮಾರ್ ಚಂದರಗಿ