Advertisement

ಸೆಂಟ್ರಲ್‌ ಮಾರುಕಟ್ಟೆ ಸ್ಥಳಾಂತರದ ಸವಾಲ್‌!

10:15 AM Oct 21, 2018 | |

ಮಹಾನಗರ: ಸ್ಮಾರ್ಟ್‌ಸಿಟಿ ಯೋಜನೆಯಡಿ 145 ಕೋ.ರೂ. ವೆಚ್ಚದಲ್ಲಿ ಸ್ಟೇಟ್‌ಬ್ಯಾಂಕ್‌ನಲ್ಲಿ ನೂತನ ಸೆಂಟ್ರಲ್‌ ಮಾರುಕಟ್ಟೆ ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿರುವಂತೆಯೇ, ಕಾಮಗಾರಿ ಸಂದರ್ಭ ಈಗಿನ ವ್ಯಾಪಾರಿಗಳ ಸ್ಥಳಾಂತರಕ್ಕೆ ಸ್ಥಳ ನಿಗದಿ ಪ್ರಕ್ರಿಯೆ ಆರಂಭವಾಗಿದೆ.

Advertisement

ತರಕಾರಿ, ಹಣ್ಣುಹಂಪಲುಗಳ ಸೆಂಟ್ರಲ್‌ ಮಾರುಕಟ್ಟೆ, ಸಮೀಪದ ಮೀನು-ಮಾಂಸ ಮಾರುಕಟ್ಟೆ ಹಾಗೂ ಸ್ಟೇಟ್‌ಬ್ಯಾಂಕ್‌ ಸರ್ವಿಸ್‌ ಬಸ್‌ ನಿಲ್ದಾಣ ಸಮೀಪದ ಮೀನಿನ ಮಾರುಕಟ್ಟೆಯನ್ನು ಒಂದೇ ಕಟ್ಟಡದಲ್ಲಿ ನಿರ್ಮಿಸಲು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಉದ್ದೇಶಿಸಲಾಗಿದೆ. ಇತ್ತೀಚೆಗೆ ನಡೆದ ಸ್ಮಾರ್ಟ್‌ಸಿಟಿ ಸಭೆಯಲ್ಲಿ ಇದಕ್ಕೆ ಮಂಜೂರಾತಿ ದೊರಕಿದ್ದು, ಕೆಲವೇ ತಿಂಗಳುಗಳಲ್ಲಿ ನೂತನ ಮಾರುಕಟ್ಟೆ ನಿರ್ಮಾಣ ಆರಂಭವಾಗುವ ನಿರೀಕ್ಷೆಯಿದೆ.

ಈಗಿನ ಸೆಂಟ್ರಲ್‌, ಮಾಂಸ ಮಾರಾಟದ ಮಾರುಕಟ್ಟೆಗಳನ್ನು ಸಂಪೂರ್ಣ ತೆರವುಗೊಳಿಸಿ ನೂತನ ಮಾರುಕಟ್ಟೆ ನಿರ್ಮಾಣವಾಗಲಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರ ನಡೆಸುತ್ತಿರುವವರಿಗೆ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಮಾಡುವುದು ಆಡಳಿತ ವ್ಯವಸ್ಥೆಗೆ ಹೊಸ ಸವಾಲಾಗಿದೆ. 

ಸದ್ಯ ಸೆಂಟ್ರಲ್‌ ಮಾರುಕಟ್ಟೆಯಲ್ಲಿ ತರಕಾರಿ-ಹಣ್ಣುಹಂಪಲು ಸಹಿತ 133 ಸ್ಟಾಲ್‌ ಗಳು, ಸಮೀಪದ ಮಾಂಸ ಮಾರುಕಟ್ಟೆಯಲ್ಲಿ 94 ಸ್ಟಾಲ್‌ಗ‌ಳು ಹಾಗೂ ಸರ್ವಿಸ್‌ ಬಸ್‌ನಿಲ್ದಾಣ ಬಳಿಯ ಮೀನು ಮಾರುಕಟ್ಟೆಯಲ್ಲಿ 135 ಸ್ಟಾಲ್‌ಗ‌ಳಿವೆ ಎಂದು ಮನಪಾ ಅಂದಾಜಿಸಿದೆ. ತಾತ್ಕಾಲಿಕ ಮಾರುಕಟ್ಟೆಗಾಗಿ ನಗರದ ಸ್ಟೇಟ್‌ಬ್ಯಾಂಕ್‌ನಲ್ಲಿಯೇ ಜಿಲ್ಲಾಡಳಿತ/ ಪಾಲಿಕೆ ಸ್ಥಳ ಗೊತ್ತುಪಡಿಸಿದೆ. ಆದರೆ ಇದು ಅಂತಿಮಗೊಂಡಿಲ್ಲ. ಸದ್ಯದ ಮಾಹಿತಿ ಪ್ರಕಾರ, ಪುರಭವನದ ಹಿಂಬದಿಯ ‘ಬೀದಿ ಬದಿ ವ್ಯಾಪಾರಿಗಳ ವಲಯ’ದಲ್ಲಿ 2,920 ಚದರ ಮೀಟರ್‌, ನೆಹರೂ ಮೈದಾನದ ಫುಟ್‌ಬಾಲ್‌ ಮೈದಾನಕ್ಕೆ ತಾಗಿರುವ (ಪುರಭವನದ ಹಿಂಭಾಗ) ಖಾಲಿ ಜಾಗದಲ್ಲಿ 3,818 ಚದರ ಮೀಟರ್‌ ಸಹಿತ ಒಟ್ಟು 6,761 ಚದರ ಮೀಟರ್‌ ಜಾಗದಲ್ಲಿ ಸೆಂಟ್ರಲ್‌ ಮಾರುಕಟ್ಟೆ ಹಾಗೂ ಮಾಂಸ ಮಾರುಕಟ್ಟೆಯ ವ್ಯಾಪಾರಿಗಳಿಗೆ ತಾತ್ಕಾಲಿಕ ವ್ಯವಸ್ಥೆಗೆ ಚಿಂತಿಸಲಾಗಿದೆ. ಈ ಬಗ್ಗೆ ಒಂದು ಸುತ್ತಿನ ಮಾತುಕತೆ ಕೂಡ ವ್ಯಾಪಾರಿಗಳ ಜತೆಗೆ ನಡೆಸಲಾಗಿದೆ. ಇದಕ್ಕಾಗಿ 5.82 ಕೋ.ರೂ. ವೆಚ್ಚ ತಗುಲುವ ಬಗ್ಗೆ ಅಂದಾಜಿಸಲಾಗಿದೆ.

ಬೀದಿ ಬದಿ ವ್ಯಾಪಾರಿ ವಲಯ ಈಗ ಬಂದ್‌!
ನಗರದ ಬೀದಿ ಬದಿ ವ್ಯಾಪಾರಿಗಳ ಬೇಡಿಕೆಯ ಹಿನ್ನೆಲೆಯಲ್ಲಿ ಮನಪಾವು ಪುರಭವನದ ಹಿಂಭಾಗದಲ್ಲಿ ಆರಂಭಿಸಿದ ‘ಬೀದಿ ಬದಿ ವ್ಯಾಪಾರಿಗಳ ವಲಯ’ ಉದ್ಘಾಟನೆಗೊಂಡು ವರ್ಷ ಕಳೆದರೂ ವ್ಯಾಪಾರಿಗಳು ವಲಯದೊಳಗೆ ಬಾರದೆ, ಬಿಕೋ ಎನ್ನುತ್ತಿದೆ. ಇಲ್ಲಿ ಸುಮಾರು 250 ಮಂದಿಗೆ ವ್ಯಾಪಾರ ನಡೆಸಲು ಅವಕಾಶವಿದೆ. ಕೆಲವರಿಗೆ ಪಾಲಿಕೆ ವತಿಯಿಂದ ಗುರುತಿನ ಚೀಟಿ ನೀಡಲಾಗಿತ್ತು. ಈ ಪೈಕಿ ಕೆಲವರು ವ್ಯಾಪಾರ ನಡೆಸಲು ಆರಂಭಿಸಿದ್ದರು. ಆದರೆ, ಗ್ರಾಹಕರು ಅತ್ತ ಕಡೆ ಬಾರದ ಹಿನ್ನೆಲೆ ಹಾಗೂ ಮೂಲಸೌಕರ್ಯ ಒದಗಿಸದ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ವ್ಯಾಪಾರಿ ವಲಯ ಬಂದ್‌ ಆಗುವಂತಾಗಿದೆ. ಇದೀಗ ಸೆಂಟ್ರಲ್‌ ಮಾರುಕಟ್ಟೆಯ ಹೊಸ ಕಟ್ಟಡ ನಿರ್ಮಾಣದ ವೇಳೆಗೆ ಅಲ್ಲಿನ ವ್ಯಾಪಾರಿಗಳನ್ನು ವ್ಯಾಪಾರಿ ವಲಯದೊಳಗೆ ಕರೆತರುವ ಪ್ರಯತ್ನ ನಡೆದಿದೆ. 

Advertisement

ಸುಸಜ್ಜಿತ ‘ಸ್ಮಾರ್ಟ್‌ ಸೆಂಟ್ರಲ್‌ ಮಾರುಕಟ್ಟೆ’
ನೂತನ ಸ್ಮಾರ್ಟ್‌ ಸೆಂಟ್ರಲ್‌ ಮಾರುಕಟ್ಟೆಯಲ್ಲಿ ಮೂರು ವಲಯಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಒಂದನೇ ವಲಯದಲ್ಲಿ ತರಕಾರಿ, ಹಣ್ಣು ಹಂಪಲುಗಳ ಮಾರುಕಟ್ಟೆ, ಎರಡನೇ ವಲಯದಲ್ಲಿ ಮಾಂಸ, ಮೀನು ಮಾರುಕಟ್ಟೆ ಮತ್ತು ಮೂರನೇ ವಲಯದಲ್ಲಿ ರಖಂ ಹಾಗೂ ಚಿಲ್ಲರೆ ವ್ಯಾಪಾರಸ್ಥರಿಗೆ ಅವಕಾಶ ನೀಡಲಾಗುತ್ತದೆ. ಕೆಳಮಹಡಿ ಸಹಿತ ಒಟ್ಟು ಮೂರು ಮಹಡಿಗಳಲ್ಲಿ ನೂತನ ಮಾರುಕಟ್ಟೆ ನಿರ್ಮಾಣವಾಗಲಿದೆ. 583 ಕಾರು, 146 ದ್ವಿಚಕ್ರ ವಾಹನ ನಿಲುಗಡೆಗೆ ಹೊಸ ಮಾರುಕಟ್ಟೆಯಲ್ಲಿ ಅವಕಾಶವಿರಲಿದೆ. 14,353 ಚದರ ಮೀಟರ್‌ನಷ್ಟು ಸ್ಥಳವನ್ನು ಪಾರ್ಕಿಂಗ್‌ ಗೆಂದು ಮೀಸಲಿಡಲಾಗುತ್ತದೆ. ಒಟ್ಟು ಸ್ಮಾರ್ಟ್‌ ಮಾರುಕಟ್ಟೆಗಾಗಿ 145 ಕೋ.ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಮನಪಾ ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ ತಿಳಿಸಿದ್ದಾರೆ. 

ಪಾರ್ಕಿಂಗ್‌ ಸವಾಲ್‌
ಮುಂಜಾನೆ 4ರಿಂದ ಬೆಳಗ್ಗೆ 8 ಗಂಟೆಯವರೆಗೆ ಕೇಂದ್ರ ಮಾರುಕಟ್ಟೆ ವ್ಯಾಪ್ತಿಯಲ್ಲಿ ಬೇರೆ ಬೇರೆ ಭಾಗಗಳಿಂದ ಬರುವ ತರಕಾರಿ, ಹಣ್ಣುಗಳ ವಾಹನಗಳು ಲೋಡಿಂಗ್‌/ಅನ್‌ ಲೋಡಿಂಗ್‌ನಲ್ಲಿ ಬ್ಯುಸಿಯಾಗಿರುತ್ತದೆ. ಮುಂದೆ ಕೇಂದ್ರ ಮಾರುಕಟ್ಟೆ ತಾತ್ಕಾಲಿಕವಾಗಿ ಸ್ಥಳಾಂತರವಾಗುವುದಾದರೆ ಲೋಡಿಂಗ್‌ / ಅನ್‌ಲೋಡಿಂಗ್‌ಗೆ ಸ್ಥಳಾವಕಾಶ ಅಗತ್ಯ. ಬಸ್‌ನಿಲ್ದಾಣ ಸಮೀಪದಲ್ಲಿರುವುದರಿಂದ ಪಾರ್ಕಿಂಗ್‌ ಸಮಸ್ಯೆ ಎದುರಾಗುವ ಅಪಾಯವೂ ಇದೆ. ಮಾಹಿತಿ ಪ್ರಕಾರ ತಾತ್ಕಾಲಿಕ ಮಾರುಕಟ್ಟೆಯನ್ನು ಸುಸಜ್ಜಿತ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎನ್ನುವುದು ಮನಪಾ ವಾದ.

ಸೌಕರ್ಯ ಅಗತ್ಯ
ಕಾಮಗಾರಿ ಸಂದರ್ಭ ಸೂಕ್ತ ವ್ಯವಸ್ಥೆಗಳನ್ನು ಮಾಡಿದ ಅನಂತರ ವಷ್ಟೇ ವ್ಯಾಪಾರಿಗಳ ತೆರವುಗೊಳಿಸುವಂತೆ ಈಗಾಗಲೇ ಸಚಿವರು, ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ತಾತ್ಕಾಲಿಕ ಮಾರುಕಟ್ಟೆಯಲ್ಲಿ ಎಲ್ಲ ಸೌಕರ್ಯಗಳನ್ನು ನೀಡಿ, ಸಮಸ್ಯೆ ಆಗದಂತೆ ಆಡಳಿತ ವ್ಯವಸ್ಥೆ ನೋಡಿಕೊಳ್ಳಬೇಕು.
– ಮುಸ್ತಫಾ ಕೆ.,ಅಧ್ಯಕ್ಷರು,
ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next