Advertisement
ಮಂಗಳೂರು ನಗರದಲ್ಲಿ ಕಾಂಕ್ರೀಟೀಕರಣ ಮಾಡುವಾಗ ಒಳಚರಂಡಿ, ಫುಟ್‌ಪಾತ್, ಯುಟಿಲಿಟಿ ಕಾಮಗಾರಿಗಳನ್ನು ಕಡೆಗಣಿಸಿರುವುದು ಸಮಸ್ಯೆಯಾಗಿ ಕಾಡತೊಡಗಿದೆ. ಕಾಂಕ್ರೀಟೀಕರಣಗೊಂಡಿರುವ ರಸ್ತೆಗಳನ್ನು ಅಲ್ಲಲ್ಲಿ ತುಂಡರಿಸುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ. ನೀರು ಸರಬರಾಜು ಕೊಳವೆಗಳು, ಟೆಲಿಪೋನ್ ಕಂಪೆನಿಗಳ ಕಂಬಗಳು, ತಂತಿಗಳು, ಒಳಚರಂಡಿ ಮುಂತಾದವುಗಳನ್ನು ರಸ್ತೆ ಮಧ್ಯದಲ್ಲೇ ಉಳಿಸಿಕೊಂಡು ಕಾಮಗಾರಿ ನಡೆಸಿರುವ ಪರಿಣಾಮವಾಗಿ ಸಮಸ್ಯೆ ನಿರ್ಮಿಸಿದಾಗ ಕಾಂಕ್ರೀಟ್ ರಸ್ತೆಯನ್ನೇ ತುಂಡರಿಸಿಯೇ ಇವುಗಳನ್ನು ಸರಿಪಡಿಸಬೇಕಾಗಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಮೂಲ ಕಾಂಕ್ರೀಟ್ ಮಾಯವಾಗಿ ತೇಪೆಗಳ ರಸ್ತೆಯಾಗಿ ಮಾರ್ಪಡುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.
Related Articles
Advertisement
ಇಂತಹ ಲೋಪಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಬೆಂಗಳೂರು ಸಹಿತ ಕೆಲವು ನಗರಗಳಲ್ಲಿ ಆನ್‌ಲೈನ್ ಅಪ್‌ಡೇಟ್, ಟೆಂಡರ್ ಶ್ಯೂರ್ ಮುಂತಾದ ಆಧುನಿಕ ಮಾದರಿಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಒಂದೊಮ್ಮೆ ಕೇಬಲ್, ಕೊಳವೆ, ಒಎಫ್‌ಸಿ ಮುಂತಾದ ಜಾಲಗಳನ್ನು ಅಳವಡಿಸಲು ರಸ್ತೆಗಳನ್ನು ಅಗೆಯ ಬೇಕಾದುದು ಅನಿವಾರ್ಯವಾದರೆ ಅದಕ್ಕೊಂದು ಪರಿಹಾರಬೇಕಾಗುತ್ತದೆ. ಅಗೆದವರಿಗೆ ಮತ್ತು ಅನುಮತಿ ನೀಡಿದವರಿಗೆ ಉತ್ತರದಾಯಿತ್ವ ನಿಗದಿಪಡಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಿದ್ಧಗೊಂಡಿರುವುದು ಆನ್‌ಲೈನ್ ಅಪ್‌ಡೇಟ್ ವ್ಯವಸ್ಥೆ, ಅನುಮತಿ ಹಾಗೂ ಕಾಮಗಾರಿ ಪೂರ್ಣಗೊಂಡ ಬಳಿಕ ದುರಸ್ತಿ ಬಗ್ಗೆ ನಿಗಾ ಇದರಲ್ಲಿ ವಹಿಸಲಾಗುತ್ತದೆ. ಅಗೆದ ರಸ್ತೆಯನ್ನು ಸಮರ್ಪಕವಾಗಿ ದುರಸ್ತಿಪಡಿಸದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರಗಿಸಲಾಗುತ್ತದೆ. ಬೆಂಗಳೂರಿನಲ್ಲಿ ಈ ವ್ಯವಸ್ಥೆ ಈಗಾಗಲೇ ಅನುಷ್ಠಾನದಲ್ಲಿದೆ.
ನಗರದ ರಸ್ತೆಗಳು ಯಾವುದೇ ಸೂಕ್ತ ಮಾರ್ಗದರ್ಶನವಿಲ್ಲದೆ ಯರ್ರಾಬ್ರಿರಿಯಾಗಿದ್ದುದನ್ನು ಒಂದು ಪರಿಕಲ್ಪಿತ ರೂಪದಲ್ಲಿ ಸುಂದರವಾಗಿ ನಿರ್ಮಿಸುವುದು ಟೆಂಡರ್ ಶ್ಯೂರ್‌ನ ಮುಖ್ಯ ಉದ್ದೇಶವಾಗಿದ್ದು, ನಾಗರಿಕ ಏಜೆನ್ಸಿಗಳು ಒಂದೇ ರಸ್ತೆಯಲ್ಲಿ ಸಮನ್ವಯತೆ ಇಲ್ಲದೆ ಮನಬಂದಂತೆ ಪದೇಪದೇ ಅಗೆದು ಹಾಳುಗೆಡವುದನ್ನು ನಿವಾರಿಸುವ ದಿಸೆಯಲ್ಲಿ ಇದು ಉಪಕ್ರಮವಾಗಿದೆ. ರಸ್ತೆಗಳು, ಪಾದಚಾರಿ ಮಾರ್ಗಗಳು , ಯುಟಿಲಿಟಿ ಡಕ್ಕ್ ಗಳು, ಬಸ್ ಬೇಗಳ ಮತ್ತು ರಸ್ತೆ ಬದಿಯ ವ್ಯಾಪಾರದ ಸ್ಥಳಗಳು ಎಲ್ಲವೂ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿರುವಂತೆ ಮಾಡುವ ಪರಿಕಲ್ಪನೆ ಹೊಂದಿದೆ. ಇಂತಹ ವ್ಯವಸ್ಥೆ ಮಂಗಳೂರಿನಲ್ಲೂ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಿದರೆ ರಸ್ತೆಗಳ ಬೇಕಾಬಿಟ್ಟಿ ಅಗೆತ ತಡೆಯುವುದು ಮತ್ತು ರಸ್ತೆಗಳ ಸುಸ್ಥಿತಿಯನ್ನು ಕಾಯ್ದುಕೊಳ್ಳುವಲ್ಲಿ ಪೂರಕವಾಗಬಹುದು.
ಮಂಗಳೂರಿನಲ್ಲಿ ಸ್ಮಾರ್ಟ್ ನಗರ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಇದರಲ್ಲಿ ವ್ಯವಸ್ಥೆಗಳು ಕೂಡ ಸ್ಮಾರ್ಟ್‌ಗೊಳ್ಳುವುದು ಅವಶ್ಯ. ಹಾಗಾಗಿ ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಸಂದರ್ಭದಲ್ಲಿ ಅದಕ್ಕೆ ಹೊಂದಿಕೊಂಡಿರುವಂತಹ ಎಲ್ಲ ಪೂರಕ ವ್ಯವಸ್ಥೆಗಳನ್ನು ಜತೆಯಲ್ಲೇ ಕೈಗೊಂಡರೆ ಮುಂದಕ್ಕೆ ಅವುಗಳನ್ನು ಅಗೆದು, ತುಂಡರಿಸಿ ವಿರೂಪಗೊಳಿಸುವ ಪ್ರಸಂಗಗಳನ್ನು ತಪ್ಪಿಸಬಹುದು.
ಕೇಶವ ಕುಂದರ್