Advertisement

ಸ್ಮಾರ್ಟ್‌ ಸಿಟಿ ಸಮಗ್ರ ಮಾಹಿತಿಗೆ ವೆಬ್‌ಸೈಟ್‌

09:48 AM Oct 30, 2018 | Team Udayavani |

ಮಂಗಳೂರು: ಸ್ಮಾರ್ಟ್‌ಸಿಟಿ ಯೋಜನೆ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಾಮಾನ್ಯ ಜನರಿಗೆ ಸಮಗ್ರ ಮಾಹಿತಿ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ವೆಬ್‌ಸೈಟ್‌ ಆರಂಭಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ತಿಳಿಸಿದ್ದಾರೆ.

Advertisement

ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಿಗೆ ಸ್ಮಾರ್ಟ್‌ಸಿಟಿ ಯೋಜನೆ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಸೋಮವಾರ ಆಯೋಜಿಸಲಾದ ಸಭೆ ಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈ ವೆಬ್‌ಸೈಟ್‌ನಲ್ಲಿ ಮಂಜೂರಾದ ಹಾಗೂ ಅನುಷ್ಠಾನಗೊಂಡ ಸ್ಮಾರ್ಟ್‌ಸಿಟಿ ಯೋಜನೆಗಳ ಸಹಿತ ಪ್ರಮುಖ ಮಾಹಿತಿಗಳನ್ನು ನೀಡಲಾಗುತ್ತದೆ. ಇದರಿಂದ ಸ್ಮಾರ್ಟ್‌ಸಿಟಿ ಯೋಜನೆಗಳ ಸಂಪೂರ್ಣ ಮಾಹಿತಿ ಪ್ರತಿಯೊಬ್ಬರಿಗೂ ಲಭಿಸಲಿದೆ ಎಂದರು.

ಯೋಜನೆಯ ಬಗ್ಗೆ ಜನತೆಗೆ ಮಾಹಿತಿ ಕೊರತೆ ಇದೆ. ಸರಕಾರದ ಇತರ ಅಭಿವೃದ್ಧಿ ಯೋಜನೆಗಳಿಂದ ಸ್ಮಾರ್ಟ್‌ಸಿಟಿ ಯೋಜನೆ ಸಂಪೂರ್ಣ ಭಿನ್ನವಾಗಿರುತ್ತದೆ. ಇದರಲ್ಲಿ ನಗರದ ನಿರ್ದಿಷ್ಟ ಪ್ರದೇಶದ ಪರಿಣಾಮಕಾರಿ ಅಭಿವೃದ್ಧಿಯನ್ನು ಮಾಡಲಾಗುತ್ತದೆ. ಇದರ ಯಶಸ್ಸಿಗೆ ಎಲ್ಲರ ಸಹಭಾಗಿತ್ವ ಅಗತ್ಯ ಎಂದು ತಿಳಿಸಿದರು.

ಸದಸ್ಯರ ಅಸಮಾಧಾನ
ಯೋಜನೆ ಬಗ್ಗೆ ಸಮರ್ಪಕ ಮಾಹಿತಿ ನೀಡದೆ ಇರುವ ಬಗ್ಗೆ ಪಾಲಿಕೆಯ ಆಡಳಿತ ಹಾಗೂ ವಿಪಕ್ಷ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ವಾರ್ಡ್‌ ಬಗ್ಗೆ ಅಧಿಕಾರಿಗಳಿಗಿಂತಲೂ ಹೆಚ್ಚು ನಮಗೆ ತಿಳಿದಿರುತ್ತದೆ. ಆದರೆ ನಮ್ಮ ಗಮನಕ್ಕೆ ತರದೆ ಕೆಲವು ಭಾಗಗಳಲ್ಲಿ ಅನಾವಶ್ಯಕ ಯೋಜನೆಗಳನ್ನು ಮಾಡಲಾಗುತ್ತಿದೆ ಎಂದು ಸದಸ್ಯರಾದ ಮಹಾಬಲ ಮಾರ್ಲ, ಹರಿನಾಥ್‌, ಎ.ಸಿ. ವಿನಯರಾಜ್‌, ನವೀನ್‌ ಡಿ’ಸೋಜಾ, ಅಪ್ಪಿ ಅಸಮಾಧಾನ ವ್ಯಕ್ತಪಡಿಸಿದರು. ಯೋಜನೆ ಅನುಷ್ಠಾನ ಹಂತದಲ್ಲಿ ಸಲಹೆ ಪಡೆಯದೆ ಈ ಸಭೆ ನಡೆಸುವ ಔಚಿತ್ಯ ಏನೆಂದು ರೂಪಾ ಡಿ. ಬಂಗೇರ ಪ್ರಶ್ನಿಸಿದರು.

Advertisement

ಕಸಾಯಿಖಾನೆ ಹಣ
ಸದಸ್ಯ ಸುಧೀರ್‌ ಶೆಟ್ಟಿ ಮಾತನಾಡಿ, ಸ್ಥಳಾಂತರವಾಗಲಿರುವ ಕುದ್ರೋಳಿ ಕಸಾಯಿಖಾನೆ ಅಭಿವೃದ್ಧಿಗೆ 15 ಕೋಟಿ ರೂ. ಮೀಸಲಿರಿಸುವ ಆವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರು. ಕಸಾಯಿಖಾನೆ ಸ್ಥಳಾಂತರ ಮಾಡುವ ಪ್ರಸ್ತಾವನೆ ಸದ್ಯ ಇಲ್ಲ. ಈಗ ಹಣ ಮೀಸಲಿರಿಸಲಾಗಿದೆ. ಅಷ್ಟು ಹಣ ವ್ಯಯವಾಗುವುದಿಲ್ಲ. ಸಮಗ್ರ ಯೋಜನಾ ವರದಿ ಬಳಿಕ ಅಂದಾಜು ಪಟ್ಟಿ ತಯಾರಾಗಲಿದೆ. ಆಗ ಬಳಕೆ ಯಾಗುವ ನಿರ್ದಿಷ್ಟ ಮೊತ್ತ ತಿಳಿಯಬಹುದು ಎಂದು ಜಿಲ್ಲಾಧಿಕಾರಿ ಉತ್ತರಿಸಿದರು. ಮೇಯರ್‌ ಭಾಸ್ಕರ ಕೆ. ಅಧ್ಯಕ್ಷತೆ ವಹಿಸಿದ್ದರು. ಉಪಮೇಯರ್‌ ಮುಹಮ್ಮದ್‌,  ಮನಪಾ ಆಯುಕ್ತ ಮುಹಮ್ಮದ್‌ ನಝೀರ್‌ ಉಪಸ್ಥಿತರಿದ್ದರು.

“ವಾಟರ್‌ ಫ್ರಂಟ್‌’ ಯೋಜನೆಗೆ ಆದ್ಯತೆ
ಸ್ಮಾರ್ಟ್‌ ಸಿಟಿ ಯೋಜನೆಯಡಿ ಮಂಗಳೂರು ನಗರದ ನದಿ ತಟದ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಂಪರ್ಕಿಸುವ “ವಾಟರ್‌ ಫ್ರಂಟ್‌’ ಯೋಜನೆಯಿದೆ. ಮುಂಬಯಿ, ಕೊಚ್ಚಿಯಂತೆಯೇ ಮಂಗಳೂರನ್ನು “ವಾಟರ್‌ ಫ್ರಂಟ್‌’ ನಗರವನ್ನಾಗಿ ಅಭಿವೃದ್ಧಿ ಪಡಿಸಲು ಅವಕಾಶ ಇದೆ. ಹಳೆ ಮಂಗಳೂರು ವ್ಯಾಪ್ತಿಯ 8 ವಾರ್ಡ್‌ ಗಳಲ್ಲಿ ಸುಮಾರು 65 ಯೋಜನೆ ಗಳನ್ನು ಅನುಷ್ಠಾನ ಮಾಡುವ ಉದ್ದೇಶವಿದೆ. ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌, ಪಂಪ್‌ವೆಲ್‌ ಬಸ್‌ ನಿಲ್ದಾಣ, ಸೆಂಟ್ರಲ್‌ ಮಾರ್ಕೆಟ್‌ ಅಭಿವೃದ್ಧಿ ಮುಂತಾದ ಕಾಮಗಾರಿ ಸ್ಮಾರ್ಟ್‌ ಸಿಟಿಯಡಿ ಅನುಷ್ಠಾನ ಗೊಳ್ಳಲಿವೆ ಎಂದು ಡಿಸಿ ತಿಳಿಸಿದರು.

ಸ್ಮಾರ್ಟ್‌ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕ ಬಿ.ಎಚ್‌. ನಾರಾಯಣಪ್ಪ
ಮಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ‌ ವ್ಯವ ಸ್ಥಾಪಕ ನಿರ್ದೇಶಕರಾಗಿ ಬಳ್ಳಾರಿ ನಗರ ಪಾಲಿಕೆಯ ಆಯುಕ್ತರಾಗಿದ್ದ ಬಿ.ಎಚ್‌. ನಾರಾಯಣಪ್ಪ ಅಧಿಕಾರ ಸ್ವೀಕರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next