ವರದಿ: ಬಸವರಾಜ ಹೂಗಾರ
ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳು ವೇಗ ಪಡೆದುಕೊಂಡಿದ್ದು, ನಗರದಲ್ಲಿನ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಕಾರ್ಯ ಭರದಿಂದ ಸಾಗಿದೆ.
ಕೊರೊನಾ ಕರ್ಫ್ಯೂನಿಂದ ವಾಹನ, ಜನ ಸಂಚಾರ ಇಲ್ಲದಿರುವುದು ಇದಕ್ಕೆ ಪೂರಕವಾಗಿದೆ. ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ರಸ್ತೆ ಕಾಮಗಾರಿ, ಯುಜಿಡಿ, ಉದ್ಯಾನವನ ಅಭಿವೃದ್ಧಿ, ನೆಹರು ಮೈದಾನ ನವೀಕರಣ, ಈಜುಕೊಳ ದುರಸ್ತಿ ಹೀಗೆ ವಿವಿಧ ಯೋಜನೆಗಳ ಕಾಮಗಾರಿ ವೇಗದಿಂದ ಸಾಗುತ್ತಿದೆ. ಕೊಪ್ಪಿಕರ ರಸ್ತೆ, ಜೆ.ಸಿ. ನಗರ, ದುರ್ಗದ ಬಯಲು, ಬೆಳಗಾವಿ ಗಲ್ಲಿ, ದಾಜೀಬಾನ ಪೇಟೆ, ವೀರಾಪುರ ಓಣಿ ರಸ್ತೆ, ಅಂಚಟಗೇರಿ ಓಣಿ, ಸ್ಟೇಶನ್ ರಸ್ತೆ, ತಬೀಬ್ ಲ್ಯಾಂಡ್, ಮಂಟೂರ ರಸ್ತೆ, ಪ್ರಿಯದರ್ಶಿನಿ ಕಾಲೋನಿ, ಸಿಲ್ವರ್ ಟೌನ್, ವಿವೇಕಾನಂದನಗರ ಸೇರಿದಂತೆ ಬಹುತೇಕ ಕಡೆ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳು ವೇಗ ಪಡೆದುಕೊಂಡಿವೆ.
ನೆಹರು ಮೈದಾನ, ತೋಳನಕೆರೆ, ಇಂದಿರಾ ಗಾಜಿನಮನೆ ಉದ್ಯಾನವನ, ಉಣಕಲ್ಲ ಕೆರೆ ಉದ್ಯಾನವನ ಕಾಮಗಾರಿಗಳು ವೇಗ ಪಡೆದುಕೊಂಡಿವೆ. ನಗರದಲ್ಲಿ ಹಲವು ಪ್ರದೇಶಗಳಲ್ಲಿ ಹೆಚ್ಚಿನ ವಾಹನ ಸಂಚಾರ ಹಾಗೂ ಜನದಟ್ಟಣೆ ಇರುವುದರಿಂದ ಕಾಮಗಾರಿಗಳು ನಡೆಸುವುದು ಕಷ್ಟಕರವಾಗಿತ್ತು. ಆದರೆ ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಅಂತಹ ಎಲ್ಲ ಸಮಸ್ಯೆಗಳಿಗೆ ಇದೀಗ ಪರಿಹಾರ ಸಿಕ್ಕಂತಾಗಿದೆ. ಸ್ಟೇಶನ್ ರಸ್ತೆ ಚಂದ್ರಕಲಾ ಚಿತ್ರಮಂದಿರದ ಪಕ್ಕ ಚರಂಡಿ ಕಾಮಗಾರಿ, ಗಣೇಶಪೇಟೆ ಸರ್ಕಲ್ ವೃತ್ತದಲ್ಲಿ ಚರಂಡಿ ಕಾಮಗಾರಿ, ಮರಾಠ ಗಲ್ಲಿ ಸಿಬಿಟಿ ರಸ್ತೆ ಚರಂಡಿ ಕಾಮಗಾರಿ, ಕೊಪ್ಪಿಕರ ರಸ್ತೆ-ಕೋಯಿನ್ ರಸ್ತೆ ಚರಂಡಿ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳನ್ನು ಶುಕ್ರವಾರ ಒಂದೇ ದಿನ ಕೈಗೊಂಡಿದ್ದು, ಜನರ ಹಾಗೂ ವಾಹನ ಸಂಚಾರ ಇಲ್ಲದೇ ಇರುವುದು ಕಾಮಗಾರಿಗೆ ವರದಾನವಾಗಿದೆ.
ಈ ಹಿಂದೆ ವಾಹನ ಸಂಚಾರ, ಜನ ಸಂಚಾರ ಇಲ್ಲದೆ ಇರುವ ಸಮಯ ನೋಡಿಕೊಂಡು ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಬೇಕಾಗಿತ್ತು. ಆದರೆ ಇದೀಗ ಅದ್ಯಾವ ಸಮಸ್ಯೆಯಿಲ್ಲ. ಹೀಗಾಗಿ ಹಲವು ರಸ್ತೆ ಕಾಮಗಾರಿಗಳು ಭರದಿಂದ ಸಾಗಿವೆ. ಉಣಕಲ್ಲ ಕೆರೆ ಕಾಮಗಾರಿ, ಇಂದಿರಾ ಗಾಜಿನ ಮನೆ ಉದ್ಯಾನವನದ ಕಾಮಗಾರಿಗಳಿಗೆ ಇನ್ನಷ್ಟು ವೇಗ ಸಿಗಬೇಕಾಗಿದೆ.