ಸುರತ್ಕಲ್: ಕುಳಾಯಿ ಬಳಿಯ ಐತಿಹಾಸಿಕ ಬಗ್ಗುಂಡಿ ಕೆರೆ ಕಾಯಕಲ್ಪಕ್ಕೆ ಸ್ಮಾರ್ಟ್ ಸಿಟಿ ಅನುದಾನದ ಮೂಲಕ ಮಾಡಲು ಚಿಂತನೆ ನಡೆದಿದೆ.
ಗುಜ್ಜರಕೆರೆ, ಕಾವೂರು ಕೆರೆಯ ಮಾದರಿ ನಗರದೊಳಗಿನ ಕೆರೆ ಉಳಿಸುವ ಜತೆಗೆ ಪ್ರವಾಸಿ ಆಕರ್ಷಣೆಯ ಕೇಂದ್ರವನ್ನಾಗಿ ಮಾಡುವ ಚಿಂತನೆಯೂ ಅಡಕವಾಗಿದೆ.
ಕೊರೊನಾದಿಂದ ಬದಲಾದ ಆರ್ಥಿಕ ಸ್ಥಿತಿಯಲ್ಲಿ ವಿಶ್ವ ಬ್ಯಾಂಕ್‌ನಿಂದ ಹಣಕಾಸು ನೆರವು ಪಡೆಯಲು ಸ್ಥಳೀಯಾಡಳಿತ ಮುಂದಾಗಿದೆ. ಜತೆಗೆ ಸ್ಮಾರ್ಟ್ ಸಿಟಿ ಅನುದಾನ ಮೀಸಲಿಡಲು ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ಸೂಚಿಸಿರುವುದರಿಂದ ಕೆರೆ ಕಾಯಕಲ್ಪದ ನಿರೀಕ್ಷೆ ಚಿಗುರೊಡೆದಿದೆ.
ಈ ಹಿಂದೆ ಸ್ಥಳೀಯ ಕೃಷಿ ಭೂಮಿಗೆ ಬಗ್ಗುಂಡಿ ಕೆರೆ ಮೂಲವಾಗಿತ್ತು. 60ಎಕ್ರೆಗೂ ಮಿಕ್ಕಿ ಪ್ರದೇಶ ಇಲ್ಲಿದ್ದರೂ, ಇಲ್ಲಿ ಸರಕಾರಿ ದಾಖಲೆಯಲ್ಲಿರುವ ಕೆರೆ 13 ಎಕರೆಯಷ್ಟಿದೆ. ಬಗ್ಗುಂಡಿ ಕೆರೆಗೂ ಕುಳಾಯಿ ಬಳಿ ಇರುವ ಕೋಟೆದ ಬಬ್ಬು ದೈವಸ್ಥಾನಕ್ಕೂ ನಂಟಿದ್ದು ಪ್ರತಿವರ್ಷ ಮಾರ್ಚ್‌ನಲ್ಲಿ ಬರುವ ಮೀನ ಸಂಕ್ರಮಣದಂದು ಈ ದೈವಸ್ಥಾನದ ನೇಮದ ಸಂದರ್ಭ ಕೆರೆಯಲ್ಲಿ ಮೀನು ಹಿಡಿಯುವ ಜಾತ್ರೆ ನಡೆಯುತ್ತಿದೆ. ಪ್ರತೀ ವರ್ಷ ವಿವಿಧ ಗ್ರಾಮಗಳಿಂದ ಬರುವ ಜನ ಮೀನು ಹಿಡಿಯುವ ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮ ಪಡುತ್ತಿದ್ದರು. ಆದರೆ ಇತ್ತೀಚಿನ ನಾಲ್ಕೈದು ವರ್ಷಗಳಲ್ಲಿ ಕೆರೆಯಲ್ಲಿ ಹಾವಸೆ ತುಂಬಿದ ಕಾರಣ ಅನೇಕ ವರ್ಷಗಳಿಂದ ಕೆರೆಯಲ್ಲಿ ನಡೆಯುವ ಮೀನು ಹಿಡಿಯುವ ಜಾತ್ರೆಗೂ ವಿಘ್ನವುಂಟು ಮಾಡಿತ್ತು. ಅಲ್ಲದೇ ಕೆರೆ ಸುತ್ತಮುತ್ತ ಇರುವ ಕೈಗಾರಿಕೆ ಹಾಗೂ ಇದೀಗ ಬಡಾವಣೆಗಳಿಂದಲೂ ಮಲೀನ ನೀರು ಕೆರೆಯನ್ನು ತುಂಬುತ್ತಿದೆ.
ಮಾಲಿನ್ಯದಿಂದ ಕೆರೆಯಲ್ಲಿ ಮುಗುಡು ಮೀನುಗಳು ಹೆಚ್ಚಾಗಿ ಇತರ ಸಣ್ಣಪುಟ್ಟ ಮೀನುಗಳು ಈ ಮೀನಿಗೆ ಆಹಾರವಾಗುವ ಕಾರಣ ಇತರ ಮೀನುಗಳು ಸಂತತಿ ಕಡಿಮೆಯಾಗುತ್ತಿದೆ.
ಟೂರಿಸ್ಟ್ ಹಾಟ್‌ಸ್ಪಾಟ್ ಲಕ್ಷಣ
ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿರುವ ಉಡುಪಿ ಮಂಗಳೂರು ರಸ್ತೆಯ ಇಕ್ಕೆಲದಲ್ಲಿ ಇರುವ ಕುಳಾಯಿ ಗ್ರಾಮದ ಪರಿಸರಕ್ಕೆ ಒಂದು ಕಾಲದಲ್ಲಿ ತಾಲೂಕಿನ ಜೀವ ನಾಡಿಯಾಗಿದ್ದ ಐತಿಹಾಸಿಕ ಬಗ್ಗುಂಡಿ ಕೆರೆ, ಪ್ರಕೃತಿಯ ಸುಂದರ ತಾಣದಲ್ಲಿ ನೆಲೆಗೊಂಡಿದೆ. ವಿವಿಧ ಜಾತಿಯ ನೀರು ಹಕ್ಕಿಗಳ ಕಲರವ ನಿತ್ಯ ಕಾಣಸಿಗುತ್ತವೆ.
ಉಳಿದಂತೆ ವರ್ಷಪೂರ್ತಿ ನೀರಸೆಲೆ ಇರುವುದರಿಂದ ಮೊಟ್ಟೆಯಿಡಲು ಬೇರೆ ಬೇರೆ ತಾಣದಿಂದ ಹಕ್ಕಿಗಳು ಇಲ್ಲಿ ಬರುತ್ತವೆ. ಪ್ರಯತ್ನ ಪಟ್ಟರೆ ಅತ್ಯಂತ ಸುಂದರ ಪ್ರವಾಸಿ ಸ್ಥಳವನ್ನಾಗಿ ಮಾಡಬಹುದು. ಬೋಟಿಂಗ್, ಕೆರೆಯ ಸುತ್ತಾ ವಾಕಿಂಗ್ ಟ್ರ್ಯಾಕ್, ಸೈಲ್ ರೈಡಿಂಗ್ ಮತ್ತಿತರ ಸೌಲಭ್ಯಕ್ಕೆ ಸಾಕಷ್ಟು ಅವಕಾಶಗಳಿವೆ.
ಕೆರೆ ಅಭಿವೃದ್ಧಿಗೆ ಯೋಜನೆ
ಕಾವೂರು ಕೆರೆಯಂತೆ ಈ ಕೆರೆ ಅಭಿವೃದ್ಧಿಗೂ ಯೋಜನೆ ರೂಪಿಸಲಾಗುವುದು. ಕಾವೂರು, ಗುಜ್ಜರಕೆರೆ ಹಾಗೂ ವಿವಿಧೆಡೆ ಕೆರೆ ಅಭಿವೃದ್ಧಿ ಆಗುತ್ತಿದೆ. ಸುರತ್ಕಲ್ ಉಪವಿಭಾಗ ಪಾಲಿಕೆ ವ್ಯಾಪ್ತಿಯಲ್ಲಿ ಕುಳಾಯಿಯ ಈ ಐತಿಹಾಸಿಕ ಮಾದರಿ ಕೆರೆ ಮಾಡಲು ಸರಕಾರ ಯೋಜನೆ ರೂಪಿಸುತ್ತದೆ.
-ಡಾ| ಭರತ್ ಶೆಟ್ಟಿ ವೈ, ಶಾಸಕರು