Advertisement

ಡಿಸಿ ಸಂಕೀರ್ಣಕ್ಕೆ “ಸ್ಮಾರ್ಟ್‌ ಸಿಟಿ’ ನೆರವು: 20 ಕೋಟಿ ರೂ. ಮೀಸಲು

06:03 PM Jul 02, 2024 | Team Udayavani |

ಮಹಾನಗರ: ಸುಮಾರು ಆರು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಪಡೀಲ್‌ ನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಶೀಘ್ರವೇ ವೇಗ ಸಿಗುವ ಲಕ್ಷಣ ಕಾಣಿಸುತ್ತಿದೆ. ಬಾಕಿ ಉಳಿದಿರುವ ಕಾಮಗಾರಿಯನ್ನು ಮಂಗಳೂರು ಸ್ಮಾರ್ಟ್‌ ಸಿಟಿ
ಸಹಕಾರದಲ್ಲಿ ಪೂರ್ಣಗೊಳಿಸುವ ನಿಟ್ಟನಲ್ಲಿ ಪ್ರಕ್ರಿಯೆಗಳು ಈಗಾಗಲೇ ಆರಂಭವಾಗಿವೆ.

Advertisement

ಸಂಕೀರ್ಣದ ಒಂದು ಹಂತದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಎರಡನೇ ಹಂತದ ಕಾಮಗಾರಿ ಬಾಕಿ ಇದೆ. ಎರಡನೇ
ಹಂತವನ್ನು ಪೂರ್ಣಗೊಳಿಸಲು ಅಂದಾಜಿನ ಪ್ರಕಾರ ಸುಮಾರು 32 ಕೋ.ರೂ.ಗಳ  ಅಗತ್ಯವಿದೆ. ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆಯಾಗದೇ ಇರುವುದರಿಂದ ಕಾಮಗಾರಿಗೆ ಅಡ್ಡಿಯಾಗಿದೆ. ಇದೀಗ ಅಂತಿಮವಾಗಿ ಸರಕಾರದ ಮಟ್ಟದಲ್ಲಿ
ಹಲವು ಸುತ್ತಿನ ಮಾತುಕತೆಗಳು ನಡೆದು, ಮಂಗಳೂರು ಸ್ಮಾರ್ಟ್‌ ಸಿಟಿ ಲಿ. ಸಹಕಾರದಿಂದ ಯೋಜನೆಯನ್ನು ಪೂರ್ಣಗೊಳಿಸಲು
ಜಿಲ್ಲಾಡಳಿತ ನಿರ್ಧರಿಸಿದೆ.

ಯೋಜನೆ ಪೂರ್ಣಗೊಳಿಸಲು ಸ್ಮಾರ್ಟ್‌ ಸಿಟಿ 20 ಕೋ.ರೂ. ಮೀಸಲಿರಿಸಲು ಉದ್ದೇಶಿಸಿದೆ. ಇದರಲ್ಲಿ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಟ್ಟಡಕ್ಕೆ ಕಲ್ಪಿಸಲಾಗುತ್ತದೆ. ಮುಖ್ಯವಾಗಿ ಸುಸಜ್ಜಿತ ಆವರಣಗೋಡೆ, ಯಾರ್ಡ್‌, ಫ್ಲೋರಿಂಗ್‌, ಡಿಸಿ ಕಚೇರಿಗೆ ಸಂಬಂಧಿಸಿದ ಪೀಠೊಪಕರಣಗಳು, ಸಭಾಂಗಣದ ವಿನ್ಯಾಸ, ಪೈಂಟಿಂಗ್‌, ಇಲೆಕ್ಟ್ರಿಕಲ್‌- ಕೇಬಲ್‌ ನೆಟ್‌ವರ್ಕ್‌ ಮೊದಲಾದ ಕೆಲಸಗಳು ನಡೆಯಲಿದೆ. ಇದಕ್ಕಾಗಿ ಪ್ರತ್ಯೇಕ ಟೆಂಡರ್‌ ಕರೆದು ಯೋಜನೆ ಮುಂದುವರಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

20 ಕೋ.ರೂ. ನೆರವು ಯೋಜನೆ
ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಬಾಕಿ ಉಳಿದಿರುವ ಕಾಮಗಾರಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸ್ಮಾರ್ಟ್‌ ಸಿಟಿಯ ಸಹಕಾರ ಕೋರಿದ್ದು, ಈಗಾಗಲೇ ಮಾತುಕತೆಗಳು ನಡೆದಿವೆ. ಸ್ಮಾರ್ಟ್‌ ಸಿಟಿ ವತಿಯಿಂದ 20 ಕೋ.ರೂ. ಮೊತ್ತವನ್ನು “ಡೆಪಾಸಿಟ್‌ ಕಾಂಟ್ರಿಬ್ಯೂಶನ್‌’ ಎಂದು ಯೋಜನೆಗೆ ಒದಗಿಸಲು ಉದ್ದೇಶಿಸಲಾಗಿದೆ.
*ರಾಜು ಕೆ.,
ವ್ಯವಸ್ಥಾಪಕ ನಿರ್ದೇಶಕರು, ಮಂಗಳೂರು ಸ್ಮಾರ್ಟ್‌ ಸಿಟಿ

ಡಿಸಿ ಕಚೇರಿ ನಿರ್ಮಾಣ:ಸಾಗಿ ಬಂದ ಹಾದಿ  
*2014ರಲ್ಲಿ ಪಡೀಲ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕಿರ್ಣ ನಿರ್ಮಾಣಕ್ಕೆ ಸರಕಾರದಿಂದ ಆಡಳಿತಾತ್ಮಕ ಮಂಜೂರಾತಿ.

Advertisement

*ಅರಣ್ಯ ಇಲಾಖೆ ಇಲಾಖೆ ಜಾಗದ ಹಸ್ತಾಂತರ, ಮರ ಕಡಿಯಲು ಎನ್‌ಜಿಟಿ ವ್ಯಾಜ್ಯ ಮುಗಿದದ್ದು 2018ರಲ್ಲಿ.

*2018ರಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಮೂಲಕ ಕಾಮಗಾರಿ ಆರಂಭ

*ಆರಂಭದಲ್ಲಿ ಮೊದಲ ಹಂತಕ್ಕೆ 41 ಕೋ.ರೂ. ಮೊತ್ತದ ಯೋಜನೆ. ಅನಂತರ ಈ ಮೊತ್ತ 55 ಕೋ.ರೂ.ಗೆ ಏರಿಕೆ.

*ಮೊದಲ ಹಂತದ ಕಾಮಗಾರಿ ಮುಕ್ತಾಯ ವಾಗಿದೆ, ಇನ್ನು 2ನೇ ಹಂತ ಆರಂಭ

ಡಿಸಿ ಕಚೇರಿ ಶೀಘ್ರ ಸಳಾಂತರಿಸುವ ಉದ್ದೇಶ
ಜಿಲ್ಲಾಡಳಿತ ಶೀಘ್ರವೇ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ, ಮೊದಲ ಹಂತದಲ್ಲಿ ಜಿಲ್ಲಾಧಿಕಾರಿ ಕಚೇರಿಯನ್ನು ಕಟ್ಟಡಕ್ಕೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಬಳಿಕ ಹಂತಹಂತವಾಗಿ ಸುಮಾರು 38 ವಿವಿಧ ಇಲಾಖೆಗಳ ಕಚೇರಿಗಳನ್ನೂ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತದೆ. ಲೋಕಸಭಾ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೂ ಇಲ್ಲಿ ಸ್ಥಳಾವಕಾಶ ಒದಗಿಸಲಾಗಿದೆ. 2.26 ಲಕ್ಷ ಚ.ಅ. ವಿಸ್ತೀರ್ಣ ಹೊಂದಿರುವ ಗ್ರೌಂಡ್‌ ಪ್ಲಸ್‌ 3 ಮಾದರಿಯ ಸಾಂಪ್ರದಾಯಿಕ ಶೈಲಿಯ ಕಟ್ಟಡ ಇದ್ದಾಗಿದ್ದು, 5.8 ಎಕ್ರೆ ಪ್ರದೇಶವನ್ನು ಹೊಂದಿದೆ. ಸುಮಾರು 200 ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next