Advertisement

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

11:34 AM Nov 21, 2024 | Team Udayavani |

ಬೆಂಗಳೂರು: ಬಸ್ಸುಗಳ ವಿವರ, ಮಹಿಳೆಯರ ಸುರಕ್ಷತೆಗಾಗಿ ಪ್ಯಾನಿಕ್‌ ಬಟನ್‌ ಹಾಗೂ ಸ್ಯಾನಿಟರಿ ಪ್ಯಾಡ್‌ ವೆಂಡಿಂಗ್‌ ಮಷಿನ್‌, ಸಿಸಿ ಕ್ಯಾಮೆರಾ, ಚಾರ್ಜಿಂಗ್‌ ಪಾಯಿಂಟ್ಸ್‌ ಹೀಗೆ ವಿವಿಧ ಅತ್ಯಾಧುನಿಕ ಸೌಕರ್ಯಗಳುಳ್ಳ “ಸ್ಮಾರ್ಟ್‌ ಬಸ್‌ ನಿಲ್ದಾಣ’ಗಳ ಸಾಲಿಗೆ ಈಗ ಮತ್ತೂಂದು ಸೇರ್ಪಡೆಯಾಗಲಿದೆ.

Advertisement

ನೃಪತುಂಗ ರಸ್ತೆ ಹಾಗೂ ಕಾಡುಬೀಸಹಳ್ಳಿಯ ನ್ಯೂ ಹಾರಿಝನ್‌ ಕಾಲೇಜಿನ ಮುಂಭಾಗದ ಸ್ಮಾರ್ಟ್‌ ಬಸ್‌ ನಿಲ್ದಾಣಗಳ ಯಶಸ್ವಿ ಪ್ರಯೋಗದ ಬಳಿಕ ಇದೀಗ ಕೋರ ಮಂಗಲದ ನೆಕ್ಸಸ್‌ ಮಾಲ್‌ ಮುಂಭಾಗದಲ್ಲಿ ಅತೀ ಶೀಘ್ರ ಮತ್ತೂಂದು ಸ್ಮಾರ್ಟ್‌ ಬಸ್‌ ನಿಲ್ದಾಣ ಬರಲಿಕ್ಕಿದೆ.

ಶಿಲ್ಪಾ ಫೌಂಡೇಷನ್‌ ಹಾಗೂ ಸೇಪಿಯನ್ಸ್‌ ಇಂಡಿಯಾ ಸಂಸ್ಥೆಯು ತನ್ನ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯಡಿ ನೃಪತುಂಗ ರಸ್ತೆ ಹಾಗೂ ಹಾರಿಝನ್‌ ಕಾಲೇಜಿನ ಮುಂಭಾಗದಲ್ಲಿ ತಲಾ 40 ಲಕ್ಷ ರೂ. ವೆಚ್ಚದಲ್ಲಿ ಈ ಬಸ್‌ ನಿಲ್ದಾಣಗಳನ್ನು ನಿರ್ಮಿಸಿದೆ. ಅದರ ಮುಂದುವರಿದ ಭಾಗವಾಗಿ ಕೋರಮಂಗಲದ ನೆಕ್ಸಸ್‌ ಮಾಲ್‌ ಮುಂಭಾಗ ಮತ್ತೂಂದು ಬಸ್‌ ನಿಲ್ದಾಣ ಮಾಡಲಾಗುತ್ತಿದೆ ಎಂದು ಶಿಲ್ಪಾ ಫೌಂಡೇಷನ್‌ ಸ್ಥಾಪಕ ಅಚ್ಯುತ್‌ ಗೌಡ ತಿಳಿಸಿದ್ದಾರೆ.

ಈ ಆತ್ಯಾಧುನಿಕ ಹಾಗೂ ಆಕರ್ಷಕ ತಂಗುದಾಣ ಗಳಲ್ಲಿ ಪ್ರಯಾಣಿಕರ ಪ್ರಾಥಮಿಕ ಆದ್ಯತೆಗಳಾದ ಆಸನ ಮತ್ತು ಆಸರೆಯ ವ್ಯವಸ್ಥೆ ಇದ್ದು, ತಂಗುದಾಣದಲ್ಲಿನ ಡಿಜಿಟಲ್‌ ಪರದೆಯಲ್ಲಿ ಮಾರ್ಗದ ಮೂಲಕ ಹಾದು ಹೋಗುವ ಬಸ್‌ಗಳ ಪಟ್ಟಿ, ತಂಗುದಾಣಕ್ಕೆ ಬಸ್‌ ಬಂದು ತಲುಪುವ ಸರಾಸರಿ ಸಮಯದ ಮಾಹಿತಿ ಬಿತ್ತರಗೊಳ್ಳುತ್ತದೆ. ಇದಕ್ಕೆ ರಾತ್ರಿ ವೇಳೆ ಎಲ್‌ಇಡಿ ಬಲ್ಬ್ ಗಳ ಬೆಳಕು ಬೀರುತ್ತದೆ. ಈ ನಿಲ್ದಾಣಗಳನ್ನು ನಿರ್ಮಿಸಿದ ನಂತರ, ಬಿಬಿಎಂಪಿಗೆ ಹಸ್ತಾಂತರಿಸಲಾಗುತ್ತದೆ.

ಸಂಸ್ಥೆಯ ವತಿಯಿಂದ ಯಾವುದೇ ಜಾಹೀರಾತು ಗಳನ್ನು ಅಳವಡಿಸದೆ, ಡಿಜಿಟಲ್‌ ಪರದೆಗಳಲ್ಲಿ ಸಾರ್ವ ಜನಿಕರಿಗೆ ಉಪಯೋಗವಾಗುವ ಜಾಹೀರಾತುಗಳನ್ನು ಬಿಬಿಎಂಪಿ ಅಥವಾ ಸರ್ಕಾರದ ಮಾಹಿತಿಗಳನ್ನು ಬಿತ್ತರಿಸಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡರು.

Advertisement

ಸಿಸಿ ಕ್ಯಾಮೆರಾ: ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಲು 24×7 ಅವಧಿ ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತವೆ. ಈ ಕ್ಯಾಮೆರಾಗಳು ಸ್ಥಳೀಯ ಪೊಲೀಸ್‌ ಠಾಣೆಗೆ ಸಂಪರ್ಕ ಹೊಂದಿದ್ದು, ಸ್ಥಳೀಯ ಠಾಣಾ ಪೊಲೀಸರ ನಿರೀಕ್ಷಣೆಯಲ್ಲಿರುತ್ತವೆ.

ಪ್ಯಾನಿಕ್‌ ಬಟನ್‌: ಮಹಿಳಾ ಪ್ರಯಾಣಿಕರಿಗೆ ಸೇರಿದಂತೆ ಸಾರ್ವಜನಿಕರಿಗೆ ಯಾವುದೇ ಅಪಾಯ ಉಂಟಾದರೆ, ಬಸ್‌ ನಿಲ್ದಾಣದಲ್ಲಿರುವ ಪ್ಯಾನಿಕ್‌ ಬಟನ್‌ ಒತ್ತಿ ದರೆ, ಸ್ಥಳೀಯ ಪೊಲೀಸ್‌ ಠಾಣೆಗೆ ಸಂದೇಶ ತಲುಪುತ್ತದೆ. ಆಗ ಕೆಲವೇ ನಿಮಿಷಗಳಲ್ಲಿ ಪೊಲೀಸ್‌ ಸಿಬ್ಬಂದಿ ಆಗಮಿಸಿ ಅಪಾಯ ಕ್ಕೊಳಗಾದವರ ರಕ್ಷಣೆ ಮಾಡಲಿದ್ದಾರೆ.

ಸ್ಯಾನಿಟರಿ ಪ್ಯಾಡ್‌ ವೆಂಡಿಂಗ್‌ ಮೆಷಿನ್‌: ಮಹಿಳೆಯರಿಗೆ 24/7 ಅವಧಿ ಸ್ಯಾನಿಟರಿ ಪ್ಯಾಡ್‌ಗಳು ದೊರೆಯಲಿವೆ. ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಪ್ಯಾಡ್‌ಗಳನ್ನು ಪಡೆಯಬಹುದು.

ಚಾರ್ಜಿಂಗ್‌ ಪಾಯಿಂಟ್ಸ್‌: ದೂರದ ಪ್ರಯಾಣ ಮಾಡುವವರಿಗೆ ಅನುಕೂಲವಾ ಗಲೆಂದು ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಅಳವಡಿಸಿದ್ದು, ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ಗ್ಳನ್ನು ಚಾರ್ಜ್‌ ಮಾಡಬಹುದು. ಇದು ಸಹ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ.

ಸೆನ್ಸರ್‌ ಆಧಾರಿತ ಕಸದಬುಟ್ಟಿ: ಒಣ ಹಾಗೂ ಹಸಿ ತ್ಯಾಜ್ಯ ವಿಂಗಡಣೆಗೊಂಡು ಶೇಖರಣೆಯಾಗುತ್ತದೆ. ತ್ಯಾಜ್ಯ ತುಂಬಿದಾಕ್ಷಣ ನಿರ್ವಾಹಕರಿಗೆ ಆನ್‌ಲೈನ್‌ನಲ್ಲಿ ಸೈರನ್‌ ಮೂಲಕ ಮಾಹಿತಿ ತಲುಪುತ್ತದೆ. ಕೂಡಲೇ ತ್ಯಾಜ್ಯ ವಿಲೇವಾರಿ ಮಾಡಬಹುದು.

ಮಳೆ ನೀರು ಕೊಯ್ಲು: ಬಸ್‌ನಿಲ್ದಾಣದ ಮೇಲೆ ಬೀಳುವ ಮಳೆ ನೀರು ಪೋಲಾಗ ದಂತೆ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಶೇಖರಣೆಯಾದ ನೀರನ್ನು ಗಿಡಗಳಿಗೆ ಹಾಗೂ ಇಂಗು ಗುಂಡಿಗಳಿಗೆ ಬಿಡಲಾಗುತ್ತದೆ.

ಪ್ರತಿದಿನ ವೈಟ್‌ಫೀಲ್ಡ್‌ನಿಂದ ಮಹಾರಾಣಿ ಕಾಲೇಜಿಗೆ ಹಾಗೂ ಕಾಲೇಜಿನಿಂದ ವೈಟ್‌ಫೀಲ್ಡ್‌ಗೆ ಸಂಚರಿಸುತ್ತೇನೆ. ಕಾಲೇಜು ಬೆಳಗ್ಗೆಯಿಂದ ಸಂಜೆಯವರೆಗೆ ಇದ್ದಂತಹ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಚಾರ್ಜ್‌ ಉಳಿಯುವುದಿಲ್ಲ. ಆಗ ಈ  ನಿಲ್ದಾಣದಲ್ಲಿ ಚಾರ್ಜ್‌ ಮಾಡಿಕೊಳ್ಳುತ್ತೇನೆ. ಜತೆಗೆೆ ತುರ್ತು ಪರಿಸ್ಥಿತಿಯಲ್ಲಿ ಸ್ಯಾನಿಟರ್‌ ಪ್ಯಾಡ್‌ಗಳು ಸಿಗುವಂತೆ ಅನುಕೂಲ ಮಾಡಲಾಗಿದೆ.-ಮಂಜುಳಾ, ಪದವಿ ವಿದ್ಯಾರ್ಥಿನಿ.

ನಗರದಲ್ಲಿ ಸಾವಿರಾರು ಬಸ್‌ ತಂಗುದಾಣಗಳಿದ್ದರೂ, ಪ್ರಯಾಣಿಕ ಸ್ನೇಹಿ ಹಾಗೂ ಅತ್ಯಾಧುನಿಕ ಸೌಲಭ್ಯವುಳ್ಳ ತಂಗುದಾಣಗಳ ಸಂಖ್ಯೆ ವಿರಳ. ಬಿಬಿಎಂಪಿಗೆ ಯಾವುದೇ ರೀತಿಯಲ್ಲೂ ಹೊರೆಯಾಗದಂತೆ ಸುಸಜ್ಜಿತ ಮತ್ತು ಅತ್ಯಾಧುನಿಕ ಸೌಲಭ್ಯಗಳುಳ್ಳ ಬಸ್‌ ಪ್ರಯಾಣಿಕರ ತಂಗುದಾಣ ಕಲ್ಪಿಸುವ ಉದ್ದೇಶದೊಂದಿಗೆ ಈ ಯೋಜನೆಯನ್ನು ರೂಪಿಸಲಾಗಿದೆ. ಪ್ರಯಾಣಿಕರಿಗೆ ಉಪಯುಕ್ತವಾಗುವ ರೀತಿಯಲ್ಲಿ ತಂಗುದಾಣವನ್ನು ವಿನ್ಯಾಸಗೊಳಿಸಲಾಗಿದೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರಯಾಣಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು.ಅಚ್ಯುತ್‌ ಗೌಡ, ಸಂಸ್ಥಾಪಕರು, ಶಿಲ್ಪಾ ಫೌಂಡೇಷನ್‌   

– ಭಾರತಿ ಸಜ್ಜನ್‌

 

Advertisement

Udayavani is now on Telegram. Click here to join our channel and stay updated with the latest news.

Next