Advertisement
ಬಿಸಿಲ ಬೇಗೆಕಾಡಂಚಿನಿಂದ ಇಳಿದು ಬರುವ ಮಳೆ ನೀರು, ಒರತೆ ನೀರಿನ ಜತೆಗೆ ಮಿಳಿತಗೊಂಡು ಮಳೆಗಾಲದ ಆಕರ್ಷಣೆ ಕೇಂದ್ರವಾಗುತ್ತಿದ್ದ ಜಲಪಾತಕ್ಕೆ ಈಗ ಬಿಸಿಲ ಬೇಗೆ ತಟ್ಟಿದೆ. ಗುಡ್ಡದಂಚಿನಿಂದ ಇಳಿದು ಬರುವ ಸಣ್ಣ ಜಲಪಾತಗಳಲ್ಲಿ ಕಲ್ಲು ಬಂಡೆಗಳು ಮಾತ್ರ ಗೋಚರಿಸುತ್ತಿವೆ. ಸುಳ್ಯ, ಕೊಡಗು, ಮಲೆನಾಡ ಅಂಚಿನಲ್ಲಿರುವ ಚಾಮಡ್ಕ, ದೇವರಕೊಲ್ಲಿ, ಲೈನ್ಕಜೆ, ನಿಡ್ಯಮಲೆ, ಕಾಂತಬೈಲು, ಕಲ್ಯಾಳ, ಮೂಕಮಲೆ, ಹೊಸಗದ್ದೆ, ಜಾಕೆ, ಪಳಂಗಾಯ, ಬಿಳಿಮಲೆ, ಸೋಣಂಗೇರಿ, ಕೆಮನಬಳ್ಳಿ ಮೊದಲಾದ ಜಲಪಾತಗಳು ಮಳೆಗಾಲದಲ್ಲಿ ಚಾರಣಿಗರ ನೆಚ್ಚಿನ ತಾಣವಾಗಿತ್ತು.
ಈ ಜಲಪಾತಗಳಲ್ಲಿ ಹರಿಯುವ ನೀರಿನ ಪ್ರಮಾಣ ಶೇ. 90ರಷ್ಟು ಬತ್ತಿ ಹೋಗಿದೆ. ಸಣ್ಣ ಒರತೆಯ ಹರಿವಷ್ಟೆ ಉಳಿದಿದೆ. ಬಿಸಿಲು ಬೇಗೆ ಇದೇ ರೀತಿಯಾಗಿ ಮುಂದುವರಿದರೆ ಸೆಪ್ಟಂಬರ್ ತಿಂಗಳ ಕೊನೆಯಲ್ಲಿಯೇ ಬರೀ ಬಂಡೆಗಳನ್ನಷ್ಟೇ ಕಾಣುವಂತಾಗಬಹುದು ಎಂದು ಹೇಳುತ್ತಾರೆ ಸೋಣಂಗೇರಿ ಫಾಲ್ಸ್ ವೀಕ್ಷಿಸಿದ ಕೀರ್ತನ್ ಸುಳ್ಯ. ಒರತೆ ನೀರಿಲ್ಲ..!
ಕಾಡಂಚಿನಲ್ಲಿ ಬಿರು ಬೇಸಗೆಯಲ್ಲಿಯೂ ಒರತೆ ನೀರು ಇರುತ್ತದೆ. ನೀರ ಸೆಲೆ ಬತ್ತುವುದು ಕಡಿಮೆ. ಈ ಬಾರಿ ಅದು ಕಾಣುತ್ತಿಲ್ಲ. ಅಂತರ್ಜಲಕ್ಕೆ ಮಳೆ ನೀರು ಇಳಿಯದ ಕಾರಣ ನೀರು ಒರತೆ ರೂಪದಲ್ಲಿ ಜಿನುಗುತ್ತಿಲ್ಲ. ಘಟ್ಟ ಪ್ರದೇಶದಲ್ಲಿ ನೆಲ ಒಡೆದು ಬೇಸಗೆ ಭೀಕರತೆಗೆ ಸಾಕ್ಷಿ ಆದಂತೆ ಇಲ್ಲಿಯೂ ಆಗುವ ಅಪಾಯದ ಮುನ್ಸೂಚನೆ ಎನ್ನುತ್ತಾರೆ ಭೂಗರ್ಭ ಶಾಸ್ತ್ರಜ್ಞರು. ಭೂಮಿ ಮೇಲೆ ಎಷ್ಟೇ ಬಿಸಿಲು- ಶಾಖವಿದ್ದರೂ ನೀರು ಈ ಪ್ರಮಾಣದಲ್ಲಿ ಆವಿಯಾದ ಉದಾಹರಣೆಗಳಿಲ್ಲ. ಕಾಡು ನಾಶ, ಕಾಂಕ್ರೀಟ್ ಕಾಮಗಾರಿಗಳು, ಜಲ ಮಾರ್ಗಗಳ ನಾಶವೂ ಒಂದು ಕಾರಣ. ಪ್ರಕೃತಿಯ ಸಹಜ ರಚನೆಗಳಿಗೆ ಮಾನವನ ಅಡ್ಡಿ ಮತ್ತೊಂದು ಪ್ರಮುಖ ಕಾರಣ.
Related Articles
ಇತ್ತೀಚಿನ ಕೆಲ ವರ್ಷಗಳಲ್ಲಿ ನವೆಂಬರ್ ತನಕವೂ ಜಲಪಾತದಲ್ಲಿ ನೀರಿನ ಹರಿವಿತ್ತು. ಒರತೆ ರೂಪದ ನೀರಿನ ಹರಿವಾದರೂ ಇರುತ್ತಿತ್ತು. ಈ ಬಾರಿಯ ಸ್ಥಿತಿ ತದ್ವಿರುದ್ಧ ವಾಗಿದೆ ಎನ್ನುತ್ತಾರೆ ಮಹೇಶ್.
Advertisement
ಕಿರಣ್ ಪ್ರಸಾದ್ ಕುಂಡಡ್ಕ