ಧಾರವಾಡ: ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ್ದರಿಂದ ಸಣ್ಣ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತ ಕಚೇರಿಯ ವಸ್ತುಗಳನ್ನು ವಕೀಲರು ಹಾಗೂ ಬೆಲೀಫರು ಶನಿವಾರ ಜಪ್ತಿ ಮಾಡಿದರು. ರೈತರಿಂದ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡುವಂತೆ ನ್ಯಾಯಾಲಯದ ಆದೇಶವಿದ್ದರೂ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ್ದರಿಂದ ಇದೀಗ ಜಪ್ತಿ ಮಾಡಲಾಯಿತು.
ವಕೀಲರು ಕಚೇರಿ ಜಪ್ತಿಗೆ ಆಗಮಿಸಿದ ಸಂದರ್ಭದಲ್ಲಿ ಕಾರ್ಯ ನಿರ್ವಾಹಕ ಅಭಿಯಂತರ ಕೊಠಡಿಗೆ ಕೀಲಿ ಹಾಕಲಾಗಿತ್ತು. ಇದರಿಂದ ಕೆರಳಿದ ವಕೀಲರು ಕೀಲಿ ತೆಗೆಯುವಂತೆ ಒತ್ತಾಯಿಸಿದರು. ಆಗಲೂ ಸಹ ಸಿಬ್ಬಂದಿ ಕೀಲಿ ತೆರೆಯದೆ ಸಾಹೇಬೊಂದಿಗೆ ಮಾತನಾಡುವಂತೆ ಮನವಿ ಮಾಡಿದರು.
ಆದರೆ, ಇದಕ್ಕೆ ಸ್ಪಂದಿಸದ ವಕೀಲರು ಕೀಲಿ ತೆರವುಗೊಳಿಸಿ ಕಚೇರಿ ಜಪ್ತಿಗೆ ಮುಂದಾದರು. 14 ಕುರ್ಚಿ, ಒಂದು ಅಧಿಕಾರಿಯ ಕುರ್ಚಿ, 2 ಕಂಪ್ಯೂಟರ್, 2 ಪ್ರಿಂಟರ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಬೆಲೀಫರಾದ ಗುರಪ್ಪ ಗೊಲ್ಲರ, ಎಫ್.ಸಿ. ಭಾವಿಕಟ್ಟಿ, ವಕೀಲರಾದ ಈರಯ್ಯ ಮರಿಸಣ್ಣವರ ಇದ್ದರು.
ಪ್ರಕರಣದ ಹಿನ್ನೆಲೆ: ಕಲಘಟಗಿ ತಾಲೂಕಿನ ಮಡಕಿಹೊನ್ನಳ್ಳಿ ಹಾಗೂ ಸಂಗೆದೇವರಕೊಪ್ಪ ಗ್ರಾಮದ ಬಳಿ ಬಾಂದಾರ್ ನಿರ್ಮಿಸಲು 9 ರೈತರಿಂದ ಒಟ್ಟು 1 ಎಕರೆ 7 ಗುಂಟೆ ಜಾಗವನ್ನು 2015ರಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಈ ಪೈಕಿ ಸಂತ್ರಸ್ತರಿಗೆ ಒಟ್ಟು 45 ಲಕ್ಷ ರೂ. ನೀಡಬೇಕಿತ್ತು.
ಆದರೆ, 20 ಲಕ್ಷ ರೂ. ಮಾತ್ರ ಪರಿಹಾರ ನೀಡಿ ಉಳಿದ ಹಣ ನೀಡಲು ವಿಳಂಬ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂತ್ರಸ್ತರು ನ್ಯಾಯಾಲಯ ಮೊರೆ ಹೋಗಿದ್ದರು. ಮಾಹಿತಿ ಪರಿಶೀಲನೆ ನಡೆಸಿದ 2ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ ಪರಿಹಾರ ವಿತರಿಸಿ ಎಂದು ಆ. 2ರಂದು ಆದೇಶ ಹೊರಡಿಸಿತ್ತು. ಈ ಆದೇಶವಿದ್ದರೂ ಪರಿಹಾರ ವಿಳಂಬ ಮಾಡಿದ ಕಾರಣ ಜಪ್ತಿ ಮಾಡಲಾಗಿದೆ.
2015ರಲ್ಲಿ ಬಾಂದಾರ್ ನಿರ್ಮಿಸಲು ನಮ್ಮ 8 ಗುಂಟೆ ಜಾಗವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಆದರೆ, ಈವರೆಗೂ ಪೂರ್ಣ ಪ್ರಮಾಣದ ಪರಿಹಾರ ನೀಡದ ಕಾರಣ ನ್ಯಾಯಾಲಯ ಮೊರೆ ಹೋಗಿದ್ದೆವು. ನ್ಯಾಯಾಲಯದ ಆದೇಶದಂತೆ ಅಧಿಕಾರಿಗಳು ನಡೆದುಕೊಳ್ಳದ ಕಾರಣದಿಂದ ಜಪ್ತಿಗೆ ವಕೀಲರು ಮುಂದಾಗಬೇಕಾಯಿತು ಎಂದು ಸಂತ್ರಸ್ತ ರೈತ ತಿಪ್ಪಣ್ಣ ರೆಡ್ಡೇರ ತಿಳಿಸಿದ್ದಾರೆ.