ಗಜೇಂದ್ರಗಡ: ಸಮೀಪದ ಶ್ರೀ ಕಾಲಕಾಲೇಶ್ವರ ದೇಗುಲ ಸನ್ನಿಧಾನದಲ್ಲಿ ಯುಗಾದಿ ಪಾಡ್ಯದಂದು ಮಳೆ ಪ್ರಮಾಣ ಮುನ್ಸೂಚನೆ ತಿಳಿಸುವ ಬೆಟ್ಟದ ಗೂಡಿನ ರಂದ್ರದಿಂದ ಅಲ್ಪ ಗಂಗಾಜಲ ಹರಿದಿದೆ. ಹೀಗಾಗಿ ನೂತನ ಸಂವತ್ಸರದಲ್ಲಿ ಸಾಧಾರಣ ಮಳೆ, ಬೆಳೆ ಆಗಲಿದೆ ಎಂದು ನಂಬಲಾಗುತ್ತಿದೆ.
ದಕ್ಷಿಣ ಕಾಶಿ ಖ್ಯಾತಿಯ ಶ್ರೀ ಕಾಲಕಾಲೇಶ್ವರ ಐತಿಹಾಸಿಕ ದೇಗುಲ ಸನ್ನಿಧಿಯಲ್ಲಿ ಭಕ್ತರಿಗೆ ದರ್ಶನ ಭಾಗ್ಯ ನೀಡುವುದರ ಜೊತೆ ಅನ್ನದಾತರಿಗೆ ಮಳೆ, ಬೆಳೆ ಮುನ್ಸೂಚನೆ ಅಂದಾಜಿಸುವ ತಾಣವು ಇದಾಗಿದೆ. ಹೀಗಾಗಿ ಯುಗಾದಿಯಂದು ಸುಣ್ಣ, ಸುರುಮಗಳ ಲೀಲೆ ಹಾಗೂ ಭವಿಷ್ಯ ಮಳೆ ಪ್ರಮಾಣ ಮುನ್ಸೂಚನೆ ಕಾಣಲು ರೈತರು ಕಾತರರಾಗಿದ್ದರು.
ಶುಕ್ರವಾರದಂದು ನಾಡಿನ ಅಪಾರ ಸಂಖ್ಯೆ ಭಕ್ತರು, ರೈತರು ದೇವಸ್ಥಾನಕ್ಕೆ ಆಗಮಿಸಿದ್ದರು. ಸೂರ್ಯೋದಯ ನಂತರ ದೇವಸ್ಥಾನ ಅಂತರಗಂಗೆ ಪಕ್ಕದ ವರ್ತುಲಾಕಾರದಲ್ಲಿ ಗುಡ್ಡಕ್ಕಿರುವ ರಂದ್ರದಿಂದ ತನ್ನಿಂದತಾನೆ ನೀರು ಹರಿದು ಬಂದಿದೆ. ಅದರ ಆಧಾರ ಮೇಲೆ ಆಯಾ ವರ್ಷ ಮಳೆ ಪ್ರಮಾಣ ರೈತರು ಅಂದಾಜಿಸಿದರು. ಮಾಡದಿಂದ ನೀರು ಹರಿದು ಬಂದರೆ ಉತ್ತಮ ಮಳೆಗಾಲ, ಇರದಿದ್ದರೆ ಬರಗಾಲ ಎಂಬ ನಂಬಿಕೆ ಭಕ್ತರದ್ದಾಗಿದೆ. ಆದರೆ ಈ ವರ್ಷ ರಂದ್ರದಿಂದ ಕಡಿಮೆ ನೀರು ಬಂದ ಹಿನ್ನೆಲೆಯಲ್ಲಿ ಸಾಧಾರಣೆ ಮಳೆಯಾಗುತ್ತದೆ ಎಂಬ ನಂಬಿಕೆ ರೈತರದ್ದಾಗಿದೆ.
ಸುಣ್ಣ-ಸುರುಮಗಳಿಂದ ಬೆಳೆಗಳ ಅಂದಾಜು: ದುರ್ಮುಖನಾಮ ಸಂವತ್ಸರ ಪ್ರವೇಶವಾದ ಶುಕ್ರವಾರ ದೇವಸ್ಥಾನದಲ್ಲಿ ಸುಣ್ಣ-ಸುರುಮ ಇಟ್ಟು ರಾತ್ರಿ ಪೂಜೆ ಮಾಡಿ ಕೆಳಗೆ ಬಂದಿದ್ದರು. ಪಲ್ಲಕ್ಕಿಯೊಂದಿಗೆ ದೇವಸ್ಥಾನ ಆರ್ಚಕರು ಮತ್ತು ಸಿಬ್ಬಂದಿ ಸಕಲ ವಾದ್ಯದಿಂದ ರಥ ಪ್ರದಕ್ಷಿಣೆ ಹಾಕಿದರು. ಮರು ದಿನವಾದ ಬೆಳಗ್ಗೆ ಗುಡ್ಡದ ಪಡಿಗೆ ಸುರಮಕ್ಕಿಂತ ಸುಣ್ಣ ಹೆಚ್ಚಿಗೆ ಲೇಪನವಾಗಿತ್ತು. ಇದರಿಂದ ಬಿಳಿ ಜೋಳ ಬೆಳೆ ಹೆಚ್ಚಿಗೆ ಬರಲಿದೆ ಎಂಬುದು ರೈತರು ನಂಬಿದ್ದಾರೆ.
ಹೊರ ಬಂದ ತೇರು: ಸೂರ್ಯೋದಯ ಮುಂಚೆ ರಥ ಆಲಯದಿಂದ ತೇರನ್ನು ಹೊರತರಲಾಯಿತು. ದೇವಸ್ಥಾನದಲ್ಲಿ ಅಭಿಷೇಕ, ಪೂಜೆ, ಬೇವು, ಬೆಲ್ಲ ನೈವೇದ್ಯ ಮಾಡಿ ಬಳಿಕ ರಥಕ್ಕೆ ಪೂಜಾ ಮಾಡಲಾಯಿತು. ಕಾಲಕಾಲೇಶ್ವರ ಜಾತ್ರಾ ರಥೋತ್ಸವ ಪ್ರತಿ ವರ್ಷ ದವನ ಹುಣ್ಣಿಮೆಯಂದು ನಡೆಯಲಿದೆ. ಯುಗಾದಿ ದಿನದಂದು ಆಲಯದಿಂದ ಹೊರ ತೆಗೆದ ತೇರಿಗೆ ಪ್ರಥಮವಾಗಿ ಕಾಲಕಾಲೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಮಂಗಲಾದೇವಿ ದೇಶಮುಖ, ಕೀರ್ತಿಮಾಲಿನಿ ಮಾಲಿನಿ
ಘೋರ್ಪಡೆಯವರು, ಅರ್ಚಕ ಕಲ್ಲಿನಾಥ ಭಟ್ ಪೂಜಾರ, ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಜಾತ್ರೋತ್ಸವ ಚಾಟುವಟಿಕೆಯ ವಿಧಿ ವಿಧಾನಗಳಿಗೆ ಚಾಲನೆ ನೀಡಿದರು.
ಹಿಂದೂ ಹೊಸವರ್ಷಾಚರಣೆ
ಗಜೇಂದ್ರಗಡ: ಯುಗಾದಿ ಪಾಡ್ಯವನ್ನು ಪಟ್ಟಣ ಸೇರಿದಂತೆ ಸುತ್ತಲಿನ ಜನ ಸಂಭ್ರಮ ಸಡಗರದಿಂದ ಆಚರಿಸಿದರು. ಹಬ್ಬದಾಚರಣೆಗೆ ಗೃಹಿಣಿ ಯರು ಮನೆಯನ್ನು ಸ್ವತ್ಛಗೊಳಿಸಿ ತಳಿರು ತೋರಣ ಕಟ್ಟಿದ್ದರು. ಮನೆ ಮುಂದಿನ ಅಂಗಳದಲ್ಲಿ ಮಕ್ಕಳು ಚಿತ್ತಾರದ ರಂಗೋಲಿ ಹಾಕಿ ಸಿಂಗರಿಸಿದ್ದರು. ಬೇವು, ಬೆಲ್ಲ ಬೆರಸಿದ ಪ್ರಸಾದ ಸ್ವೀಕರಿಸಿದರು. ಆಸ್ತಿಕರು ಪುಣ್ಯಾಹ ಮಂತ್ರ ಉಚ್ಚರಿಸಿ ಮಾವಿನ ಎಲೆಯಿಂದ ಕಳಸದ ನೀರನ್ನು ಎಲ್ಲ ಕಡೆ ಸಿಂಪಡಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನೂತನ ಪಂಚಾಂಗ ಶ್ರವಣ ಮಾಡುವುದು ಚಂದ್ರಮಾನ ಯುಗಾದಿ ಹಬ್ಬ ಆಚರಣೆ ವಿಶೇಷವಾಗಿತ್ತು.
ಸಾವಿರಾರು ವರ್ಷಗಳ ಇತಿಹಾಸ ಸಾರುವ ದಕ್ಷಿಣ ಕಾಶಿ ಖ್ಯಾತಿಯ ಶ್ರೀ ಕಾಲಕಾಲೇಶ್ವರ ಐತಿಹಾಸಿಕ ದೇಗುಲ ಸನ್ನಿಧಿ ಬೆಟ್ಟಕ್ಕೆ ತಂನ್ನಿಂತಾನೆ ಬಳಿದುಕೊಳ್ಳುವ ಸುಣ್ಣ ಸುರುಮಗಳ ಅಚ್ಚರಿ ಜೊತೆ ಉತ್ತಮ ಮಳೆ, ಬೆಳೆಯ ಮುನ್ಸೂಚನೆ ನೀಡಿದವು. ಇಲ್ಲಿ ಮಹಾ ಪಲ್ಲಕ್ಕಿ ಉತ್ಸವ ನಡೆಯಿತು.