Advertisement

ಸ‌ಣ್ಣ ಉದ್ದಿಮೆಗಳಿಗೆ ಪ್ರೋತ್ಸಾಹ ಅಗತ್ಯ

03:59 PM Oct 30, 2017 | |

ಶಿವಮೊಗ್ಗ: ಕೈಗಾರಿಕಾ ವಲಯದ ಜತೆಯಲ್ಲಿ ಸಣ್ಣ ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ ನೀಡುವುದರಿಂದ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

Advertisement

ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕಾನ್‌ ಫೇಡರೇಷನ್‌ ಆಫ್ ಇಂಡಿಯನ್‌ ಇಂಡಸ್ಟ್ರಿ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಆಶ್ರಯದಲ್ಲಿ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಶಿವಮೊಗ್ಗ ರೋಡ್‌ ಶೋ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಕ್ಷೇತ್ರ ಲಾಭದಾಯಕ ಎಂದು ಪರಿಗಣಿಸಲು ಸಾಧ್ಯವಾಗದ ವಾತಾವರಣ ಇರುವುದರಿಂದ ಯುವಜನತೆ
ಕೃಷಿ ಚಟುವಟಿಕೆಯತ್ತ ಆಕರ್ಷಿತರಾಗುತ್ತಿಲ್ಲ. ಬದಲಿಗೆ ನಗರ ಪ್ರದೇಶಗಳತ್ತ ಉದ್ಯೋಗ ಅರಸಿ ವಲಸೆ ಹೋಗತೊಡಗಿದ್ದಾರೆ. ಅವರಿಗೆ ಸ್ಥಳೀಯವಾಗಿ ಉತ್ತಮ ಅವಕಾಶ ದೊರಕುವಂತೆ ಹೊಸ ಆಲೋಚನೆ ನಡೆಸಬೇಕಿದೆ ಎಂದರು.

ಉದ್ಯೋಗಾವಕಾಶ ಸೃಷ್ಟಿಸುವ ಸಣ್ಣ ಉದ್ದಿಮೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ. ಹೀಗಾಗಿ ಉದ್ಯೋಗವಕಾಶ ಹೆಚ್ಚು ಸೃಷ್ಟಿ ಮಾಡುವ ದೃಷ್ಟಿಯಿಂದ ಕೈಗಾರಿಕಾ ಕ್ಷೇತ್ರ ಕ್ರೀಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಣ್ಣ ಉದ್ಯಮಗಳಿಗೆ ಅಗತ್ಯ ಸೌಲಭ್ಯ ಹಾಗೂ ಮೂಲ ಸೌಕರ್ಯ ಒದಗಿಸುವ  ಕಾರ್ಯವಾಗಬೇಕಿದೆ. ಹೀಗಾದಲ್ಲಿ ಸಣ್ಣ ಉದ್ಯಮಗಳು ಪ್ರಾರಂಭಗೊಂಡು ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತವೆ. ಜತೆಗೆ ವಲಸೆ ಪ್ರವೃತ್ತಿಯನ್ನು ತಡೆಗಟ್ಟಲು ಸಾಧ್ಯವಿದೆ ಎಂದರು.

ಕಾಸಿಯಾದ ಹಲವು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಕಾಸಿಯಾ ಕೂಡ ಕೇವಲ ಬೆಂಗಳೂರಿನತ್ತ ಮುಖ ಮಾಡದೇ ಜಿಲ್ಲಾ ಕೇಂದ್ರಗಳಲ್ಲೂ ಹೊಸ ಕೈಗಾರಿಕೆಗಳನ್ನು ಸ್ಥಾಪಿಸುವ ಬಗ್ಗೆ ಯೋಜನೆ ರೂಪಿಸಬೇಕು ಎಂದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಎಂ. ಶಂಕರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಸೋಗಾನೆ ಸಮೀಪದಲ್ಲಿ ಜಾಗ ಮಂಜೂರು ಮಾಡುವ ಮೂಲಕ ಸಹಕಾರ ನೀಡಬೇಕು. ರಸ್ತೆ, ವಿದ್ಯುತ್‌, ಮೂಲಸೌಕರ್ಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಚ್‌. ಆರ್‌. ರಾಜಪ್ಪ ಮಾತನಾಡಿ, ಬೆಂಗಳೂರಿನಲ್ಲಿ ನ. 23 ಮತ್ತು 24ರಂದು ನಡೆಯುವ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆ ಹಿನ್ನೆಲೆಯಲ್ಲಿ 15 ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆ ರೋಡ್‌ ಶೋ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಕಾಸಿಯಾ ಗೌರವ ಅಧ್ಯಕ್ಷ ಆರ್‌. ಹನುಮಂತೇಗೌಡ, ರಾಜು, ಜಯಕುಮಾರ್‌,
ಸತ್ಯನಾರಾಯಣ ಭಟ್‌, ಟಿ.ಎಸ್‌. ಉಮಾಶಂಕರ್‌, ಬಿ.ಆರ್‌. ಸಂತೋಷ್‌, ನರಸಿಂಹಮೂರ್ತಿ ಮತ್ತಿತರರು ಇದ್ದರು. 

Advertisement

ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನೀಡುವುದು ರಾಜ್ಯ ಸರ್ಕಾರ ಆಶಯ. ಆದರೆ ಇದು ಅಂದುಕೊಂಡಷ್ಟು ಮಟ್ಟಕ್ಕೆ ಸಾಧ್ಯವಾಗಿಲ್ಲ ಎಂಬ ಬೇಸರವಿದೆ. ಜೀವನದಲ್ಲಿ ಉತ್ತಮ ಸಂಸ್ಕೃತಿ ಅಳವಡಿಸಿಕೊಂಡಲ್ಲಿ ಮಾತ್ರ ಸ್ವಚ್ಛ ಮತ್ತು ಪಾರದರ್ಶಕ ಆಡಳಿತ ಕಾರ್ಯರೂಪಕ್ಕೆ ಬರಲು ಸಾಧ್ಯ. ಇದು ಜಾರಿಯಾಗಬೇಕಾದರೆ ಅಧಿಕಾರಿಗಳ ಮನಸ್ಥಿತಿಯಲ್ಲಿ ಬದಲಾವಣೆಯಾಗಬೇಕು.
 ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next