ಮುಂಬಯಿ: ಒಂದು ಸಣ್ಣ ಬೆಂಕಿಯ ಕಿಡಿಯೊಂದು ಬಹುದೊಡ್ಡ ಬೆಂಕಿಯ ಜ್ವಾಲೆಯನ್ನು ಹೇಗೆ ಸೃಷ್ಟಿಸಲು ಸಾಧ್ಯವೋ ಹಾಗೆಯೇ ನಮ್ಮ ಸಂಸ್ಥೆಯ ಕಿರಿಯ ವಿದ್ಯಾರ್ಥಿ ನಾಯಕರು ತಮ್ಮ ವಿಶ್ವಾಸದ ಮೂಲಕ ಹಿರಿದಾದ ಪ್ರಕಾಶಮಯ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ಬಂಟರ ಸಂಘ ಮುಂಬಯಿ ಸಂಚಾಲಿತ ಎಸ್. ಎಂ. ಶೆಟ್ಟಿ ಶಿಕ್ಷಣ ಸಂಕುಲದ ಕಾರ್ಯಾಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ ಅವರು ನುಡಿದರು.
ಜು. 10 ರಂದು ಬಂಟರ ಸಂಘ ಎಸ್‌ಎಂ ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಮತ್ತು ಮಾಧ್ಯಮಿಕ ವಿಭಾಗದ ನೂತನ ವಿದ್ಯಾರ್ಥಿ ನಾಯಕ ಕಾರ್ಯಕಾರಿ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಚನ ಬದ್ಧತೆಯೊಂದಿಗೆ ದೂರದೃಷ್ಟಿಯ ಗುಣದೊಂದಿಗೆ ಸೂಕ್ಷ್ಮಾತಿಸೂಕ್ಷ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನಾಯಕತ್ವದ ಗುಣ ವನ್ನು ಪರಿಚಯಿಸುವುದರ ಜೊತೆಗೆ ಶಿಕ್ಷಣ ಸಂಸ್ಥೆ ಯ ಯಶಸ್ಸಿನ ಧ್ವನಿಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು ಪ್ರಯತ್ನಶೀಲರಾಗಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಪದವಿ ಪ್ರಧಾನ ಸಮಾರಂಭದ ಯಶಸ್ಸಿಗೆ ಕಾರಣಕರ್ತರಾದ ವಿದ್ಯಾರ್ಥಿಗಳನ್ನು ಕಾರ್ಯಾಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ ಇವರು ಅಭಿನಂದಿಸಿದರು. ಆಯ್ಕೆಗೊಂಡ ವಿದ್ಯಾರ್ಥಿ ನಾಯಕ-ನಾಯಕಿಯರು ತಮ್ಮ ಶಾಲಾನುಭವಗಳನ್ನು ಅಭಿವ್ಯಕ್ತಪಡಿಸಿ, ತಮ್ಮ ಯೋಚನೆ-ಯೋಜನೆ ಹಾಗೂ ಭವಿಷ್ಯದ ಕನಸ್ಸುಗಳ ಬಗ್ಗೆ ವಿವರಿಸಿದರು.ವಿದ್ಯಾರ್ಥಿಗಳ ನಾಯಕತ್ವ ಗುಣ, ಅಚಲ ವಿಶ್ವಾಸ, ಪ್ರತಿಭೆ ಹಾಗೂ ವ್ಯಕ್ತಿತ್ವವನ್ನು ತೀರ್ಪುಗಾರರ ತಂಡವು ಸಂದರ್ಶನದ ಮೂಲಕ ಆಯ್ಕೆಮಾಡುವಲ್ಲಿ ಯಶಸ್ವಿಯಾಯಿತು. ವೇದಿಕೆಯಲ್ಲಿ ಬಂಟರ ಸಂಘದ ಜೊತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಪದವಿ ಕಾಲೇಜಿನ ಪ್ರಾಂಶುಪಾಲೆ ಮಿಲ್‌ಫ್ರೆಡ್ ಲೋಬೋ, ಸ್ಟೇಟ್ ಬೋರ್ಡ್‌ನ ಉಪ ಪ್ರಾಂಶುಪಾಲ ರಾಕೇಶ್ ಶುಕ್ಲಾ, ಸ್ಟೇಡ್ ಬೋರ್ಡ್ ಪ್ರಾಂಶುಪಾಲೆ ಸೀಮಾ ಸಬ್ಲೋಕ್, ಉಪ ಪ್ರಾಂಶುಪಾಲರು, ಸ್ಟೇಟ್ ಬೋರ್ಡ್ ಸಮನ್ವಯಕರು ಉಪಸ್ಥಿತರಿದ್ದರು.
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು.