ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇವಲ ಕೆಲವು ತಿಂಗಳುಗಳಷ್ಟೇ ಬಾಕಿ ಇರುವಂತೆಯೇ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಎಂಎಸ್ ಕೃಷ್ಣ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು ನನಗೀಗ 90 ವರ್ಷ ಆದರೆ 90 ವರ್ಷದಲ್ಲಿ 50 ವರ್ಷದವರ ರೀತಿ ನಟನೆ ಮಾಡಲು ಆಗಲ್ಲ. ವಯೋಸಹಜ ಕಾರಣಗಳು ಅಡ್ಡಿಯಾಗ್ತಿವೆ ಹಾಗಾಗಿ ರಾಜಕೀಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಲವರ್ಧನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಪಕ್ಷದ ಕಾರ್ಯಕ್ರಮಗಳು ಬಂದಾಗ ನೋಡೋಣ, ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಗ್ಗೆ ಬಂದರೆ ನೊಡೋಣ, ವರಿಷ್ಠರು ಕೇಳಿದರೆ ನಾನು ಸಲಹೆ ಕೊಡ್ತೇನೆ, ನಾನೇ ಮೇಲೆ ಬಿದ್ದು ಸಲಹೆ ಕೊಡಲು ಹೋಗುವುದಿಲ್ಲ ಎಂದರು.
ಮೈಸೂರು ರಸ್ತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ಇಡುವ ವಿಚಾರದಲ್ಲಿ ಮಾತನಾಡಿದ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ದೇಶ ಕಂಡ ಮಹಾನ್ ವ್ಯಕ್ತಿ, ಅಭಿವೃದ್ಧಿ ವಿಚಾರವಾಗಿ ಅನೇಕ ಕೆಲಸ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನ ಇಡಬೇಕು ಎಂದು ನಿತಿನ್ ಗಡ್ಕರಿ, ಸಿಎಂಗೆ ಮನವಿ ಮಾಡಿದ್ದೇನೆ ಅವರು ಏನು ಮಾಡ್ತಾರೆ ಎಂದುದು ನೋಡಬೇಕು ಎಂದು ಹೇಳಿದರು.
ಇದನ್ನೂ ಓದಿ: ಗೆಳೆಯರ ಜೊತೆ ಅಬ್ಬಿಫಾಲ್ಸ್ ನಲ್ಲಿ ಈಜಲು ಹೋದ ತೀರ್ಥಹಳ್ಳಿ ಯುವಕ ದುರ್ಮರಣ