Advertisement
ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ (ಎಲ್ಲರಿಗೂ ಸೂರು) ಕಣ್ಣೂರು ಗ್ರಾಮದ ಸರ್ವೆ ನಂಬರ್ 17ರಲ್ಲಿ ಈ ಮನೆಗಳು ನಿರ್ಮಾಣಗೊಳ್ಳಲಿವೆ. ಕರ್ನಾಟಕ ರಾಜ್ಯ ಸ್ಲಂ ಅಭಿವೃದ್ಧಿ ಮಂಡಳಿ ವತಿಯಿಂದ ಮನೆ ನಿರ್ಮಾಣ ಕಾಮಗಾರಿ ನಡೆಯಲಿದ್ದು, ಮುಂದಿನ ಒಂದೂವರೆ ವರ್ಷದೊಳಗೆ ಬಡ ವರ್ಗದ ಸ್ವಂತ ಸೂರಿನ ಕನಸು ನನಸಾಗಲಿದೆ.
ಒಟ್ಟು 11 ಎಕ್ರೆ ಖಾಲಿ ಜಾಗದ ಪೈಕಿ ನಾಲ್ಕು ಎಕ್ರೆ ಜಾಗದಲ್ಲಿ ಈ 500 ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಒಟ್ಟು 41 ಬ್ಲಾಕ್‌ಗಳಿರಲಿದ್ದು, ಒಂದು ಬ್ಲಾಕ್‌ನಲ್ಲಿ ತಲಾ 12 ಮನೆಗಳು ನಿರ್ಮಾಣಗೊಳ್ಳಲಿವೆ. ಜಿ ಪ್ಲಸ್ ಟು ಫ್ಲ್ಯಾಟ್ ಮಾದರಿಯಲ್ಲಿ ಮನೆ ನಿರ್ಮಾಣ ನಡೆಯಲಿದ್ದು, ಪ್ರತಿ ಫ್ಲ್ಯಾಟ್ ನಲ್ಲಿ ತಳ ಮಹಡಿ ಮತ್ತು ಎರಡು ಮಹಡಿಗಳಿರಲಿವೆ. ಪ್ರತಿ ಮಹಡಿಯಲ್ಲಿ ನಾಲ್ಕು ಮನೆಗಳಿರುತ್ತವೆ. ಒಂದು ಮನೆಯ ಒಟ್ಟು ವಿಸ್ತೀರ್ಣ 250 ಚ.ಮೀ. ಪ್ರತಿ ಮನೆಯಲ್ಲಿ ತಲಾ ಒಂದು ಹಾಲ್, ಅಡುಗೆ ಕೋಣೆ, ಮಲಗುವ ಕೋಣೆ, ಸ್ನಾನದ ಕೋಣೆ, ಶೌಚಾಲಯ, ಬಾಲ್ಕನಿ ಇರಲಿದೆ.ಈಗಾಗಲೇ ಈ ಯೋಜನೆಯಡಿ ಸ್ವಂತ ಸೂರಿಗಾಗಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಫಲಾನುಭವಿಗಳನ್ನು ಮಹಾನಗರ ಪಾಲಿಕೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ಆಯ್ದ ಫಲಾನುಭವಿಗಳು ಸ್ವಂತ ಮನೆಯ ಅವಕಾಶ ಪಡೆದುಕೊಳ್ಳಲಿದ್ದಾರೆ. ಪ್ರತಿ ಮನೆಗೆ 5. 50 ಲಕ್ಷ ರೂ.
ಇಲ್ಲಿ ನಿರ್ಮಾಣವಾಗಲಿರುವ ಪ್ರತಿ ಮನೆಗೆ 5.50 ಲಕ್ಷ ರೂ. ವೆಚ್ಚ ತಗಲುತ್ತದೆ. ಈ ಪೈಕಿ ಪ್ರತಿ ಮನೆಗೆ 1.50 ಲಕ್ಷ ರೂ. ಗಳನ್ನು ಕೇಂದ್ರ ಸರಕಾರ ನೀಡುತ್ತದೆ. ರಾಜ್ಯ ಸರಕಾರದಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ 2 ಲಕ್ಷ ರೂ., ಸಾಮಾನ್ಯ ವರ್ಗದವರಿಗೆ 1. 2 ಲಕ್ಷ ರೂ. ಲಭ್ಯವಾಗಲಿದೆ. ಉಳಿದಂತೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು ಶೇ. 10 ಮತ್ತು ಸಾಮಾನ್ಯ ವರ್ಗದವರು ಶೇ. 15ನ್ನು ಕೈಯಿಂದ ಭರಿಸಬೇಕಾಗುತ್ತದೆ. ಉಳಿದ ಹಣಕ್ಕೆ ಸ್ಲಂ ಬೋರ್ಡ್ ವತಿಯಿಂದಲೇ ಬ್ಯಾಂಕ್‌ನಿಂದ ಸಾಲ ತೆಗೆಸಿ ಕೊಡುವ ಸೌಲಭ್ಯವಿದೆ ಎಂದು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಮಂಗಳೂರಿನ ಕಾರ್ಯಕಾರಿ ಅಭಿಯಂತರ ಮಂಜುನಾಥ್ ಮಾಹಿತಿ ನೀಡಿದ್ದಾರೆ. ಮನೆ ನಿರ್ಮಾಣಕ್ಕೆ ಮುಂದಿನ ವಾರ ಶಿಲಾನ್ಯಾಸ ನೆರವೇರಲಿದ್ದು, ಸರಕಾರ ನೀಡಿರುವ ಒಂದೂವರೆ ವರ್ಷದ ಅವಧಿಯೊಳಗೆ ನಿರ್ಮಾಣ ಕಾರ್ಯವೂ ಮುಗಿಯಲಿದೆ.
Related Articles
ನಗರದಲ್ಲಿ ಒಟ್ಟು ಎಂಟು ಘೋಷಿತ ಕೊಳೆಗೇರಿ ಪ್ರದೇಶಗಳನ್ನು ರಾಜೀವ್ ಆವಾಜ್ ಯೋಜನೆಯಡಿ ಗುರುತಿಸಲಾಗಿದೆ. ಉರ್ವ, ಮಠದಕಣಿ, ಕೊಡಿಯಾಲ್‌ಗುತ್ತು, ಡೊಂಗರಕೇರಿ, ಕಂದುಕ, ಗಟ್ಟಿಹಿತ್ಲು, ಹೊಗೆಬಜಾರ್, ಕಾವೂರು ಜ್ಯೋತಿನಗರ ಘೋಷಿತ ಕೊಳಗೇರಿ ಪ್ರದೇಶಗಳಾಗಿದ್ದು, ಇಲ್ಲಿನ ಒಟ್ಟು ಜನಸಂಖ್ಯೆ 3,234 ಆಗಿದೆ. ಈ ಎಂಟೂ ಪ್ರದೇಶಗಳಲ್ಲಿ 718 ಕುಟಂಬಗಳು ವಾಸವಾಗಿವೆ. ಆದರೆ ಎಷ್ಟು ಕುಟುಂಬಗಳಿಗೆ ಸ್ವಂತ ಸೂರು ಇದೆ ಎಂಬ ಮಾಹಿತಿ ಲಭ್ಯವಾಗಿಲ್ಲ.
Advertisement
ಕಾಮಗಾರಿ ಶೀಘ್ರಕಣ್ಣೂರು ಗ್ರಾಮದಲ್ಲಿ ಕೊಳೆಗೇರಿ ನಿವಾಸಿಗಳಿಗೆ ಜಿ ಪ್ಲಸ್ ಟೂ ಫ್ಲ್ಯಾಟ್ ಮಾದರಿಯಲ್ಲಿ 500 ಮನೆಗಳ ನಿರ್ಮಾಣಕ್ಕಾಗಿ ಈಗಾಗಲೇ ಜಾಗ ಅಂತಿಮಗೊಳಿಸಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಮನೆ ನಿರ್ಮಾಣ ಕಾರ್ಯ ನಡೆಯಲಿದ್ದು, ಬಡ ವರ್ಗದವರಿಗೆ ಸ್ವಂತ ಮನೆ ಒದಗಿಸುವ ಕೆಲಸ ನಡೆಯಲಿದೆ. ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ಕರ್ನಾಟಕ ಸ್ಲಂ ಅಭಿವೃದ್ಧಿ ಮಂಡಳಿ ನಿರ್ಮಾಣ ಕಾರ್ಯ ನಡೆಸಲಿದೆ.
– ಡಿ. ವೇದವ್ಯಾಸ ಕಾಮತ್,
ಶಾಸಕರು ಪೂರ್ವ ಸಿದ್ಧತೆ ನಡೆದಿದೆ
ಕರ್ನಾಟಕ ಸ್ಲಂ ಅಭಿವೃದ್ಧಿ ಮಂಡಳಿ ಮೂಲಕ ಕಣ್ಣೂರು ಗ್ರಾಮದಲ್ಲಿ ಐನೂರು ಮನೆಗಳು ನಿರ್ಮಾಣಗೊಳ್ಳಲಿವೆ. ನಾಲ್ಕು ಎಕ್ರೆ ಜಾಗದಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯಲಿದ್ದು, ಈಗಾಗಲೇ ನಿರ್ಮಾಣಕ್ಕೆ ಬೇಕಾದ ಪೂರಕ ಕೆಲಸಗಳನ್ನೆಲ್ಲ ನಡೆಸಲಾಗಿದೆ.
– ಗುರುಪ್ರಸಾದ್,
ತಹಶೀಲ್ದಾರ್ ಮಂಗಳೂರು ಧನ್ಯಾ ಬಾಳೆಕಜೆ