Advertisement

ಹೂಳು ವಿಲೇವಾರಿ ಗೋಳು!

12:40 PM Jan 08, 2018 | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಹೂಳು ವಿಲೇವಾರಿ ಸ್ಥಳಗಳು ಭರ್ತಿಯಾಗಿದ್ದು, ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯಲು ಕೈಗೊಂಡಿರುವ ಹೂಳು ತೆಗೆಯುವ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಬಿಬಿಎಂಪಿ ಮುಂದಾಗಿದೆ. 

Advertisement

ನಗರದಲ್ಲಿ ಸುರಿದ ಭಾರಿ ಮಳೆಯಿಂದ ರಾಜಕಾಲುವೆಗಳು ಉಕ್ಕಿ ಸಾವು ನೋವು ಸಂಭವಿಸುತ್ತಿದ್ದು, ಹಲವಾರು ಪ್ರದೇಶಗಳಲ್ಲಿ ಪ್ರವಾಹ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಕಾಲುವೆ ದುರಸ್ತಿ, ಹೂಳೆತ್ತುವುದು ಹಾಗೂ ತಡೆಗೋಡೆಗಳ ನಿರ್ಮಾಣ ಕಾಮಗಾರಿಗಳಿಗೆ ಸರ್ಕಾರ 800 ಕೋಟಿ ರೂ. ಅನುದಾನ ನೀಡಿದ್ದು, ಅದರಂತೆ ಪಾಲಿಕೆಯ ಅಧಿಕಾರಿಗಳು ಹಲವಾರು ಭಾಗಗಳಲ್ಲಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. 

ರಾಜಕಾಲುವೆಗಳಿಂದ ತೆರವುಗೊಳಿಸಿದ ಹೂಳು ವಿಲೇವಾರಿಗೆ ಪಾಲಿಕೆಯ ವ್ಯಾಪ್ತಿಯಲ್ಲಿ ಗುರುತಿಸಲಾಗಿದ್ದ ಸ್ಥಳಗಳು ಭರ್ತಿಯಾಗಿದ್ದು, ಬೇರೆ ಕಡೆಗಳಲ್ಲಿ ಹೂಳು ವಿಲೇವಾರಿಗೆ ಸಾರ್ವಜನಿಕರು ವಿರೋಧಿಸುತ್ತಿರುವುದರಿಂದ ಬೇರೆ ಮಾರ್ಗವಿಲ್ಲದೆ ಪಾಲಿಕೆಯ ಅಧಿಕಾರಿಗಳು ತಾತ್ಕಾಲಿಕವಾಗಿ ಹೂಳೆತ್ತುವ ಕಾರ್ಯ ಸ್ಥಗಿತಗೊಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಜತೆಗೆ ಕೂಡಲೇ ಹೂಳು ವಿಲೇವಾರಿಗೆ ಸ್ಥಳ ಗುರುತಿಸಿ ಕೊಡುವಂತೆ ಪಾಲಿಕೆಯ ಘನತ್ಯಾಜ್ಯ ವಿಭಾಗವನ್ನು ಕೋರಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 842 ಕಿ.ಮೀ. ಉದ್ದದ ರಾಜಕಾಲುವೆಗಳಿದ್ದು, ಅಧಿಕ ಪ್ರಮಾಣದಲ್ಲಿ ಹೂಳಿರುವ ಕಡೆಗಳಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗುತ್ತದೆ. ಹೀಗಾಗಿ ಪಾಲಿಕೆಯಿಂದ ಈಗಾಗಲೇ 100 ಕಿ.ಮೀ. ಉದ್ದದ ಪ್ರದೇಶದ ಪ್ರಮುಖ ಭಾಗಗಳಲ್ಲಿನ ಹೂಳು ತೆಗೆಯಲಾಗಿದ್ದು, ಇನ್ನೂ 110 ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಹೂಳು ತೆಗೆಯಲು ಯೋಜನೆ ರೂಪಿಸಲಾಗಿದೆ. 

ಸ್ಥಳ ಗುರುತಿಸುವಂತೆ ಮನವಿ: ಪಾಲಿಕೆ ವ್ಯಾಪ್ತಿಯ ಕಾಲುವೆಗಳಲ್ಲಿ ತೆರವುಗೊಳಿಸುತ್ತಿದ್ದ ಹೂಳನ್ನು ವಿಲೇವಾರಿ ಮಾಡುತ್ತಿದ್ದ ಅಂಜನಾಪುರ, ಮಲ್ಲಸಂದ್ರ ಹಾಗೂ ಬೆಳ್ಳಹಳ್ಳಿ ಕ್ವಾರಿಗಳು ಭರ್ತಿಯಾಗಿವೆ. ಹೀಗಾಗಿ ಪಾಲಿಕೆಯಿಂದ ತೆರವುಗೊಳಿಸುತ್ತಿರುವ ಹೂಳು ವಿಲೇವಾರಿಗೆ ಸ್ಥಳವಿಲ್ಲದಂತಾಗಿದ್ದು, ಕೂಡಲೇ ಹೂಳು ವಿಲೇವಾರಿಗೆ ಎರಡು ಸ್ಥಳಗಳನ್ನು ಗುರುತಿಸಿಕೊಡುವಂತೆ ಘನತ್ಯಾಜ್ಯ ವಿಭಾಗವನ್ನು ಕೋರಲಾಗಿದೆ ಎಂದರು. 

Advertisement

ಹೂಳು ಹಾಕಲು ಸ್ಥಳೀಯರ ವಿರೋಧ: ಪಾಲಿಕೆಯ ರಾಜಕಾಲುವೆಗಳಿಂದ ತೆರವುಗೊಳಿಸುವ ಹೂಳು ವಿಲೇವಾರಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ರಾಜಕಾಲುವೆಗೆ ನೇರವಾಗಿ ಜಲಮಂಡಳಿಯ ಒಳಚರಂಡಿ ನೀರು ಪ್ರವೇಶಿಸುವುದರಿಂದ ಒಳಚರಂಡಿಯಲ್ಲಿನ ಅಂಶಗಳು ಹೂಳಾಗಿ ಪರಿವರ್ತನೆಗೊಳ್ಳುತ್ತವೆ.

ಇದರೊಂದಿಗೆ ಹೂಳಿನಿಂದ ದುರ್ವಾಸನೆ ಬರುವುದು ಹಾಗೂ ಅತ್ಯಂತ ಕೆಟ್ಟ ಬಣ್ಣವಿರುವುದರಿಂದ ರಾಜಕಾಲುವೆ ಹೂಳು ವಿಲೇವಾರಿಗೆ ಗುರುತಿಸುವ ಸ್ಥಳದ ಸುತ್ತಲ ನಿವಾಸಿಗಳು ವಿರೋಧಿಸುತ್ತಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವರ್ಷಕ್ಕೆ ಒಂದೂವರೆ ಲಕ್ಷ ಕ್ಯೂ ಲೀ ಹೂಳು!: ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಮಳೆಗಾಲಕ್ಕೆ ಮೊದಲು ಸರಾಸರಿ 1.50 ಲಕ್ಷದಿಂದ 2  ಲಕ್ಷ ಕ್ಯೂಬಿಕ್‌ ಮೀಟರ್‌ ಹೂಳು ತೆಗೆಯಲಾಗುತ್ತದೆ. ಎಲ್ಲ 842 ಕಿ.ಮೀ. ವ್ಯಾಪ್ತಿಯಲ್ಲಿ ಹೂಳು ತೆಗೆಯಲು ಸಾವಿರಾರು ಕೋಟಿ ರೂ. ಬೇಕಾಗುತ್ತದೆ. ಹೀಗಾಗಿ ಹೆಚ್ಚು ಹೂಳು ತುಂಬಿರುವ ಮತ್ತು ಕಾಲುವೆ ಉಕ್ಕಿ ನೀರು ಹರಿಯುವ ಭಾಗಗಳಲ್ಲಿ ಆದ್ಯತೆ ಮೇರೆಗೆ ಹೂಳು ತೆಗೆಯಲಾಗುತ್ತದೆ ಎಂದು ಬೃಹತ್‌ ಮಳೆನೀರು ಕಾಲುವೆ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.

ಸರ್ಕಾರದಿಂದ ನೀಡಲಾಗಿರುವ ಅನುದಾನದಲ್ಲಿ ಹಲವೆಡೆ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ನಡೆಸುತ್ತಿದ್ದು, ಹೂಳು ವಿಲೇವಾರಿಗೆ ಪಾಲಿಕೆಯಿಂದ ಗುರುತಿಸಿರುವ ಸ್ಥಳಗಳು ಭರ್ತಿಯಾಗಿವೆ. ಹೀಗಾಗಿ ಮುಂದೆ ತೆರವುಗೊಳಿಸುವ ಹೂಳು ವಿಲೇವಾರಿಗೆ ಸ್ಥಳ ಗುರುತಿಸಿ ಕೊಡುವಂತೆ ಘನತ್ಯಾಜ್ಯ ವಿಭಾಗವನ್ನು ಕೋರಲಾಗಿದೆ.
-ಬೆಟ್ಟೇಗೌಡ, ಬೃಹತ್‌ ಮಳೆನೀರು ಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌

* ವೆಂ. ಸುನೀಲ್‌ ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next