Advertisement

ಸ್ವಚ್ಛ ಸಾಲಿಗ್ರಾಮ ಪರಿಕಲ್ಪನೆಯ SLRM ಘಟಕ ನನೆಗುದಿಗೆ

01:20 AM Oct 03, 2018 | Team Udayavani |

ಕೋಟ: ಸಾಲಿಗ್ರಾಮ ಪ.ಪಂ. ವ್ಯಾಪ್ತಿಯಲ್ಲಿನ ಬಹುಕಾಲದ ಸಮಸ್ಯೆಯಾಗಿರುವ ತ್ಯಾಜ್ಯ ನಿರ್ವಹಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಘನ ದ್ರವ ತ್ಯಾಜ್ಯ ಸಂಸ್ಕರಣೆ ಘಟಕ (SLRM) ಸ್ಥಾಪನೆಯ ಪ್ರಸ್ತಾವನೆ ಸಿದ್ಧಪಡಿಸಿ ವರುಷ ಕಳೆದಿದೆ. ಅನುದಾನ ಹೊಂದಿಸಿ, ಹಲವು ಕಡೆಗಳಲ್ಲಿ ಸ್ಥಳ ಗುರುತಿಸಲಾಗಿದೆ. ಆದರೆ  ಸಾರ್ವಜನಿಕರು ಈ ಘಟಕವನ್ನು ಡಂಪಿಂಗ್‌ ರ್ಯಾರ್ಡ್‌ಗೆ ಎಂದು ಅಂದುಕೊಂಡಿರುವು ಕಾರಣ ಹಲವಾರು ಆಕ್ಷೇಪಗಳು ವ್ಯಕ್ತವಾಗಿವೆ. ಇದರಿಂದಾಗಿ ಯೋಜನೆ ಹಳ್ಳ ಹಿಡಿದಿದೆ. ಸಾರ್ವಜನಿಕರ ಮನವೊಲಿಸಿ ಆತಂಕ ದೂರ ಮಾಡುವಲ್ಲಿಯೂ ಆಡಳಿತ ವ್ಯವಸ್ಥೆ ವಿಫಲವಾಗಿದೆ.

Advertisement

ಎಲ್ಲ ಕಡೆ ಆಕ್ಷೇಪ
ಇಂಡಿಯನ್‌ ಗ್ರೀನ್‌ ಸರ್ವೀಸಸ್‌  ಪ್ರಾಜೆಕ್ಟ್ ಡೈರೆಕ್ಟರ್‌ ವೆಲ್ಲೂರು ಶ್ರೀನಿವಾಸನ್‌ ಅವರ ಮಾದರಿಯಲ್ಲಿ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಸಾಕಷ್ಟು ತಯಾರಿ ನಡೆಸಲಾಗಿತ್ತು ಹಾಗೂ ಶ್ರೀನಿವಾಸನ್‌ ಅವರನ್ನು ಸಾಲಿಗ್ರಾಮಕ್ಕೆ ಕರೆಸಿಕೊಂಡು ಘಟಕದ ಕುರಿತು ಮಾಹಿತಿ ನೀಡಲಾಗಿತ್ತು. ಪರಿಸರ ಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ ಎನ್ನುವುದನ್ನು ಕರಪತ್ರಗಳ ಮೂಲಕ ಜನರಿಗೆ ತಿಳಿಸಲಾಗಿತ್ತು. ಅನಂತರ ಚಿತ್ರಪಾಡಿ, ಕಾರ್ಕಡ, ಗುಂಡ್ಮಿ, ಪಾರಂಪಳ್ಳಿ ಗ್ರಾಮದ ಐದಾರು ಕಡೆಗಳಲ್ಲಿ ಇದಕ್ಕಾಗಿ ಸ್ಥಳ ಗುರುತಿಸಲಾಯಿತು. ಆದರೆ ಎಲ್ಲೆಡೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾಯಿತು.

ಮನವೊಲಿಸುವಲ್ಲಿ ವಿಫಲ 
ಘಟಕ ಸ್ಥಾಪನೆಯಾದರೆ ತ್ಯಾಜ್ಯದಿಂದ ವಾಸನೆ ಹರಡುತ್ತದೆ. ಕಲುಷಿತ ನೀರಿನಿಂದ ಪರಿಸರ ಮಲಿನವಾಗುತ್ತದೆ. ಊರಿನಲ್ಲಿ ಡಂಪಿಂಗ್‌ಯಾರ್ಡ್‌ ರೀತಿಯ ವಾತವರಣ ಸೃಷ್ಟಿಯಾಗುತ್ತದೆ ಎನ್ನುವುದು  ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ. ಆದರೆ ಎಸ್‌ಎಲ್‌ಆರ್‌ಎಂ ಘಟಕ ಡಂಪಿಂಗ್‌ ಯಾರ್ಡ್‌ ರೀತಿಯಲ್ಲ, ಇದರ ಕಾರ್ಯ ನಿರ್ವಹಣೆಯೇ ಬೇರೆ. ಇಲ್ಲಿ ತ್ಯಾಜ್ಯವನ್ನು ತಂದು ರಾಶಿ ಹಾಕಲಾಗುವುದಿಲ್ಲ, ಸಂಸ್ಕರಿಸಲಾಗುತ್ತದೆ. ಪ್ರಸ್ತುತ ಹಲವು ಕಡೆ ನಗರದ ಮಧ್ಯಭಾಗದಲ್ಲಿ ಘಟಕಗಳಿವೆ. ಅಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎನ್ನುವುದನ್ನು ಮನವೊಲಿಸಲು ಸ್ಥಳೀಯ ಆಡಳಿತ ವ್ಯವಸ್ಥೆ ಕೂಡ ವಿಫಲವಾಗಿದೆ.

ಎಸ್‌ಎಲ್‌ಆರ್‌ಎಂ ಘಟಕ ಹೇಗೆ ಭಿನ್ನ
ಸಾಲಿಗ್ರಾಮದಲ್ಲಿ ಉದ್ದೇಶಿತ ಘಟಕದಲ್ಲಿ ಆರಂಭದಲ್ಲಿ ಕೇವಲ ಒಣಕಸಗಳನ್ನು ಪಡೆದು ವಿಗಂಡಿಸುವ ಗುರಿ ಹೊಂದಲಾಗಿತ್ತು. ಕ್ರಮೇಣ ಹಸಿಕಸವನ್ನು ಪಡೆದು ಗೊಬ್ಬರವಾಗಿ ಪರಿವರ್ತಿಸಲು ಉದ್ದೇಶಿಸಲಾಗಿತ್ತು. ಒಣಕಸ ವಿಲೇವಾರಿ ಯಾವ ರೀತಿ ಇರುತ್ತದೆಂದರೆ, ಪ್ಲಾಸ್ಟಿಕ್‌, ಗಾಜು, ಪ್ಲಾಸ್ಟಿಕ್‌, ಬಾಟಲಿ ಮುಂತಾದ ಪಡೆದು ವ್ಯವಸ್ಥಿತವಾಗಿ ವಿಗಂಡಿಸಿ ಎಲ್ಲವನ್ನೂ ನೀರಿನಲ್ಲಿ ತೊಳೆಯಲಾಗುತ್ತದೆ. ಅನಂತರ ಮರುಬಳಕೆಯಾಗುವ ತ್ಯಾಜ್ಯಗಳನ್ನು ಪ್ರತ್ಯೇಕ ವಿಂಗಡಿಸಲಾಗುವುದು. ಹೀಗೆ ವಿಗಂಡಿಸಿ ಸಿಗುವ ವಸ್ತುಗಳನ್ನು ಬಿಸಿ ನೀರಿನಲ್ಲಿ ತೊಳೆದು ಡೋರ್‌ ಮ್ಯಾಟ್‌, ಕ್ಯಾರಿ ಬ್ಯಾಗ್‌ ರೀತಿಯ ಅನೇಕ ವಸ್ತುಗಳನ್ನು  ತಯಾರಿಸಲಾಗುತ್ತದೆ. ಅದರಲ್ಲೂ  ಕೊಳೆತ ಅಥವಾ ವಾಸನೆ ಬೀರುವ ಕಸವನ್ನು ಸ್ವೀಕರಿಸದಿರುವುದರಿಂದ ಪರಿಸರ ಮಾಲಿನ್ಯಗೊಳ್ಳುವ ಅವಕಾಶಗಳಿರುವುದಿಲ್ಲ ಹಾಗೂ ಕಸವನ್ನು ರಾಶಿ ಹಾಕಿ ಕೊಳೆಸುವುದಿಲ್ಲ. ಬ್ರಹ್ಮಾವರದಲ್ಲಿ ನಗರದ ಮಧ್ಯ ಭಾಗದಲ್ಲಿ  ಇದೇ ಮಾದರಿಯ ಘಟಕ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಇದುವರೆಗೆ ಯಾವುದೇ ಸಮಸ್ಯೆಯಾಗಿಲ್ಲ. ಹೀಗಾಗಿ ಆಕ್ಷೇಪಣೆ ಮಾಡುವವರನ್ನು ಇಂತಹ ಒಂದೆರಡು ಘಕಗಳಿಗೆ ಭೇಟಿ ನೀಡಿಸಿ ಮನವೊಲಿಸುವ ಪ್ರಯತ್ನಗಳು ನಡೆಯಬೇಕಿದೆ.

ಎಸ್‌ಎಲ್‌ಆರ್‌ಎಂ ಘಟಕ ಅನಿವಾರ್ಯ
ಸಾಲಿಗ್ರಾಮ ಪ.ಪಂ. ನವರು ಡಂಪಿಂಗ್‌ಯಾರ್ಡ್‌ಗೆಂದು ಖರೀದಿಸಿದ ಜಮೀನು ವಿವಾದಕ್ಕೀಡಾಗಿ ನ್ಯಾಯಾಲಯದಲ್ಲಿರುವುದರಿಂದ ಶಾಶ್ವತ ಡಂಪಿಂಗ್‌ಯಾರ್ಡ್‌ ಸ್ಥಾಪನೆ ಇನ್ನಷ್ಟು ವಿಳಂಬವಾಗಲಿದೆ. ಇದೀಗ ಇಲ್ಲಿನ ಕಸವನ್ನು ಉಡುಪಿಯಲ್ಲಿ ಸ್ವೀಕರಿಸದಿರುವುದರಿಂದ ಮತ್ತು ಕಸದ ಪ್ರಮಾಣ ಹೆಚ್ಚಳವಾಗುತ್ತಿರುವುದರಿಂದ ಪ.ಪಂ. ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಪೇಟೆ ಮುಂತಾದ ಅಗತ್ಯ ಸ್ಥಳದ ಒಣಕಸವನ್ನು ಮಾತ್ರ ಸ್ವೀಕರಿಸಿ ಟ್ರಾಕ್ಟರ್‌ನಲ್ಲೇ ವಿಂಗಡಿಸಿ ಬೇರೆ ಕಡೆ ಕಳುಹಿಸಲಾಗುತ್ತದೆ. ಹಸಿಕಸವನ್ನು ರಸ್ತೆಯ ಅಕ್ಕ-ಪಕ್ಕ ಅನಧಿಕೃತವಾಗಿ ವಿಲೇವಾರಿ ಮಾಡುವುದು ಈಗಾಗಲೇ ಹೆಚ್ಚುತ್ತಿದೆ.  ಆದ್ದರಿಂದ ಈ ಎಲ್ಲಾ  ಸಮಸ್ಯೆಗೆ ಪರಿಹಾರದ ನಿಟ್ಟಿನಲ್ಲಿ ಎಸ್‌ಎಲ್‌ಆರ್‌ಎಂ ಸ್ಥಾಪನೆ ಅನಿವಾರ್ಯವಾಗಿದೆ.

Advertisement

ಜನರು, ಜನಪ್ರತಿನಿಧಿಗಳ ಸಹಕಾರ ಅಗತ್ಯ
ಎಸ್‌ಎಲ್‌ಆರ್‌ಎಂ ಘಟಕ ಸ್ಥಾಪಿಸಿ ಒಣಕಸ ವಿಲೇವಾರಿ ಮಾಡಲು ನಾಲ್ಕೈದು ಕಡೆ ಸ್ಥಳ ಗುರುತಿಸಲಾಯಿತು. ಆದರೆ ಸ್ಥಳೀಯರು ತಪ್ಪು ಕಲ್ಪನೆಯೊಂದಿಗೆ  ಎಲ್ಲ ಕಡೆ ಆಕ್ಷೇಪ ವ್ಯಕ್ತಪಡಿಸಿದರು. ಜನರನ್ನು ಮನವೊಲಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಮುಂದಿನ ದಿನದಲ್ಲಿ ಆಕ್ಷೇಪ ಮಾಡುವವರನ್ನು ಬ್ರಹ್ಮಾವರ ಮುಂತಾದ ಘಟಕಗಳಿಗೆ ಕರೆದೊಯ್ದು ನಿಜಸ್ಥಿತಿ ಅರಿವು ಮೂಡಿಸಲು ಪ್ರಯತ್ನಿಸಲಾಗುವುದು. ಜನಪ್ರತಿನಿಧಿಗಳೂ ಜನರಿಗೆ ತಿಳಿಹೇಳಬೇಕು. ಈ ಮೂಲಕ ದೀರ್ಘ‌ ಕಾಲದ ಸಮಸ್ಯೆಗೆ ಎಲ್ಲರೂ ಒಟ್ಟಾಗಿ  ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.
– ಶ್ರೀಪಾದ್‌ ಪುರೋಹಿತ್‌, ಮುಖ್ಯಾಧಿಕಾರಿಗಳು

— ರಾಜೇಶ ಗಾಣಿಗ ಅಚ್ಲಾಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next