Advertisement

ಎಲ್ಲ ಗ್ರಾ.ಪಂ.ಗಳಲ್ಲಿ ಎಸ್‌ಎಲ್‌ಆರ್‌ಎಂ ಘಟಕ

11:13 AM Jun 24, 2020 | mahesh |

ಉಡುಪಿ: ಸ್ವಚ್ಛ ಭಾರತ್‌ ಮಿಶನ್‌ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಎಸ್‌ಎಲ್‌ಆರ್‌ಎಂ (ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ) ಘಟಕಗಳನ್ನು ಡಿಸೆಂಬರ್‌ನೊಳಗೆ ಜಿಲ್ಲೆಯ ಎಲ್ಲ 158 ಗ್ರಾ.ಪಂ.ಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಜಿ.ಪಂ. ಸಿಇಒ ಪ್ರೀತಿ ಗೆಹಲೋತ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಜಿಲ್ಲೆಯ 65 ಗ್ರಾ.ಪಂ.ಗಳಲ್ಲಿ ಕಸ ನಿರ್ವಹಣೆಯನ್ನು ಪರಿಣಾಮ ಕಾರಿಯಾಗಿ ಮಾಡಲಾಗುತ್ತಿದೆ. ಉಳಿದ ಬಹುತೇಕ ಕಡೆಗಳಲ್ಲಿ ಕೆಲಸಗಳನ್ನು ಆರಂಭಿಸಲಾಗಿದೆ. 2020ರ ಡಿಸೆಂಬರ್‌ನೊಳಗೆ ಎಲ್ಲ ಕಡೆ ವ್ಯವಸ್ಥಿತವಾಗಿ ನಡೆಸಲು ಗುರಿಯನ್ನು ಜಿ.ಪಂ. ಇರಿಸಿಕೊಂಡಿದೆ. ತಿಂಗಳಿಗೆ ಪ್ರತಿ ಮನೆಯಿಂದ 20ರಿಂದ 60 ರೂ. ವರೆಗೆ ಸಂಗ್ರಹಿಸಲಾಗುತ್ತದೆ. ಇದನ್ನು ನಿರ್ಧರಿಸುವುದು ಆಯಾ ಗ್ರಾ.ಪಂ.ಗಳೇ. ಕೆಲವು ಕಡೆ ಶುಲ್ಕ ಕೊಡಲು ಹಿಂದೇಟು ಹಾಕುತ್ತಾರೆ. ಸಾರ್ವಜನಿಕರು ಶುಲ್ಕ ಪಾವತಿಸಿ ದರೆ ಕಸ ವಿಲೇವಾರಿ ಸುಲಭ ಸಾಧ್ಯವಾಗುತ್ತದೆ ಎಂಬ ಅಭಿಮತ ಗೆಹಲೋತ್‌ ಅವರದು.

ಕಸ ಸುಟ್ಟರೆ ದಂಡ
ಕಸವನ್ನು ಎಲ್ಲೆಂದರಲ್ಲಿ ಚೆಲ್ಲಿದರೆ, ಸುಟ್ಟು ಹಾಕುತ್ತಿದ್ದರೆ ದಂಡ ವಿಧಿಸುವ ಮಾರ್ಗಸೂಚಿ ಸೂತ್ರವನ್ನು ಕೇಂದ್ರ ಸರಕಾರ ನೀಡಿದೆ. ಆದರೆ ಇದರ ಕುರಿತೂ ಅಂತಿಮ ನಿರ್ಣಯ ತಳೆಯಬೇಕಾದುದು ಆಯಾ ಗ್ರಾ.ಪಂ.ಗಳೇ. ಬಹುತೇಕ ಕಡೆಗಳಲ್ಲಿ ದಂಡ ವಿಧಿಸುವ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ.

ಕಸ ಸಂಗ್ರಹಕ್ಕೆ ಬ್ಯಾಗ್‌
ಈ ಹಿಂದೆ ಕಸ ವಿಂಗಡಿಸಿ ಕೊಡಲು ಬಕೆಟ್‌ ನೀಡಲಾಗುತ್ತಿತ್ತು. ಈಗ ಬ್ಯಾಗ್‌ ಕೊಡಲಾಗುತ್ತಿದೆ. ಒಣ ಕಸಗಳನ್ನು ಸಂಗ್ರಹಿಸಲು ಬ್ಯಾಗ್‌ ಉತ್ತಮ ಎಂದು ಹೇಳುತ್ತಾರೆ ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌.

ಕಸ ನಿರ್ವಹಣೆ: ಸ್ವಾವಲಂಬಿ ಗ್ರಾ.ಪಂ.ಗಳು
ವಂಡ್ಸೆ, ಹಂಗಳೂರು, ಸಿದ್ದಾಪುರ, ಮರವಂತೆ, ಕಾಡೂರು, 80 ಬಡಗಬೆಟ್ಟು, ಹೆಜಮಾಡಿ, ವರಂಗ, ಎರ್ಲಪಾಡಿ, ನಿಟ್ಟೆ, ಮುಂಡ್ಕೂರು, ಮುಡೂರು ಮೊದಲಾದ ಗ್ರಾ.ಪಂ.ಗಳಲ್ಲಿ ಕಸ ನಿರ್ವಹಣೆ ಖರ್ಚು ತೆಗೆದು ಉಳಿಕೆಯಾಗುವ ಹಂತದಲ್ಲಿದೆ. ಇಲ್ಲಿ ಕೆಲಸಗಾರರ ವೇತನ ಎಸ್‌ಎಲ್‌ಆರ್‌ಎಂ ಘಟಕದಿಂದಲೇ ನಡೆಯುತ್ತಿದೆ. ಸ್ವಲ್ಪ ಉಳಿಕೆಯೂ ಆಗುತ್ತದೆ. ಕೊಕ್ಕರ್ಣೆ, ಪಡುಬಿದ್ರಿ, ಬಸ್ರೂರು ಮೊದಲಾದ ಗ್ರಾ.ಪಂ.ಗಳಲ್ಲಿ ಗ್ರಾ.ಪಂ.ಗೆ ಯಾವುದೇ ಖರ್ಚಿಲ್ಲದೆ ನಡೆಯುತ್ತಿದೆ.
ಬಸ್ರೂರಿನಲ್ಲಿ ವಾರ್ಷಿಕ ಆದಾಯ 4.64 ಲ.ರೂ., ಖರ್ಚು 3.37 ಲ.ರೂ., ವಂಡ್ಸೆಯಲ್ಲಿ ಎಂಟು ಮಂದಿ ಕೆಲಸಕ್ಕಿದ್ದು ತಿಂಗಳ ಆದಾಯ 1.15 ಲ.ರೂ., ಖರ್ಚು 1 ಲ.ರೂ., ಕಾಡೂರಿನಲ್ಲಿ ವಾರ್ಷಿಕ ವ್ಯವಹಾರ 2.52 ಲ.ರೂ., ಸಿದ್ದಾಪುರದಲ್ಲಿ 4.66 ಲ.ರೂ., ಹಂಗಳೂರಿನಲ್ಲಿ 2.24 ಲ.ರೂ., 80 ಬಡಗ ಬೆಟ್ಟುವಿನಲ್ಲಿ 21 ಲ.ರೂ., ಹೆಜಮಾಡಿಯಲ್ಲಿ 11.49 ಲ.ರೂ. ಇದೆ. 80 ಬಡಗಬೆಟ್ಟು ಗ್ರಾ.ಪಂ. ಜಿಲ್ಲೆಯ ಅತಿ ಹೆಚ್ಚು ವ್ಯವಹಾರ ಕುದುರಿಸುವ ಗ್ರಾ.ಪಂ. ಇಲ್ಲಿ 10- 12 ಮಂದಿ ಕೆಲಸಕ್ಕಿದ್ದು 12 ಲ.ರೂ. ಬಳಕೆದಾರರ ಶುಲ್ಕದಿಂದ, 5.65 ಲ.ರೂ. ಕಸ ಮಾರಾಟದಿಂದ ಬರುತ್ತಿದೆ. ಸಿದ್ದಾಪುರದಲ್ಲಿ 3.63 ಲ.ರೂ. ಶುಲ್ಕದಿಂದ, 20,000 ರೂ. ಕಸ ಮಾರಾಟದಿಂದ ಬರುತ್ತಿದೆ.

Advertisement

ಗ್ರಾ.ಪಂ.ಗೆ ಒಂದು ಪ್ಲಾಸ್ಟಿಕ್‌ ಬಳಸಿ ರಸ್ತೆ
ಪ್ಲಾಸ್ಟಿಕ್‌ನಿಂದ ರಸ್ತೆ ನಿರ್ಮಾಣದ ಪ್ರಯೋಗವನ್ನು ಹಿಂದೆ ಅಲೆವೂರಿನಲ್ಲಿ ನಡೆಸಲಾಗಿತ್ತು. ಅನಂತರ ಮರವಂತೆಯಲ್ಲಿ ನಡೆಸಲಾಗಿದೆ. ಎರಡೂ ಕಡೆ 300 ಮೀ. ರಸ್ತೆ ನಿರ್ಮಿಸಲಾಗಿದೆ. ಡಾಮಾರಿಗೆ ಪ್ಲಾಸ್ಟಿಕ್‌ನ್ನು ಮಿಶ್ರಣ ಮಾಡಿ ಕಾಮಗಾರಿ ನಡೆಸಲಾಗುತ್ತದೆ. 1 ಕಿ.ಮೀ.ಗೆ 1 ಟನ್‌ ಪ್ಲಾಸ್ಟಿಕ್‌ ಬಳಕೆಯಾಗುತ್ತದೆ. ಪ್ರತಿ ಗ್ರಾ.ಪಂ.ಗಳಲ್ಲಿ ಒಂದೊಂದು ರಸ್ತೆಯನ್ನು ನಿರ್ಮಿಸುವ ಗುರಿ ಇರಿಸಿಕೊಳ್ಳಲಾಗಿದೆ. ತಾಲೂಕಿಗೊಂದರಂತೆ ಸಿಲ್ವರ್‌ ಕೋಟೆಡ್‌ ಪ್ಲಾಸ್ಟಿಕ್‌, ಸಿಂಗಲ್‌ ಯೂಸ್ಡ್ ಪ್ಲಾಸ್ಟಿಕ್‌ನ್ನು ಪುಡಿ ಮಾಡುವ ಯಂತ್ರವನ್ನು ಖರೀದಿಸಲಾಗಿದೆ. ಇದು ಆರ್ಥಿಕವಾಗಿ ಲಾಭದಾಯಕವಲ್ಲದಿದ್ದರೂ ಪ್ಲಾಸ್ಟಿಕ್‌ ತ್ಯಾಜ್ಯ ವಿಲೇವಾರಿಯಾಗುವುದೇ ಲಾಭ.

Advertisement

Udayavani is now on Telegram. Click here to join our channel and stay updated with the latest news.

Next