ಮಹಾನಗರ: ಕದ್ರಿಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ನೂತನ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣದ ಕಾಮಗಾರಿ ಕೋವಿಡ್ ಹಾಗೂ ತಾಂತ್ರಿಕ ಸಮಸ್ಯೆಗಳಿಂದಾಗಿ 9 ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದು, ಇದೀಗ ಮುಂದಿನ ಕೆಲವೇ ದಿನಗಳಲ್ಲಿ ಪುನರಾರಂಭಗೊಳ್ಳುವ ನಿರೀಕ್ಷೆ ಇದೆ.
ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಯುಐಡಿಎಫ್‌ಸಿ), ಮಹಾನಗರ ಪಾಲಿಕೆ ಹಾಗೂ ಬ್ಯಾಂಕ್ ಸಾಲ ಪಡೆದು ಹಣಕಾಸು ಸೌಲಭ್ಯ ಹೊಂದಿಸಿಕೊಳ್ಳಲು ನಿರ್ಧರಿಸಿ ಯೋಜನೆಯನ್ನು ಕೈಗೆತ್ತಿಗೊ ಳ್ಳಲಾಗಿತ್ತು. 2 ನೆಲ ಅಂತಸ್ತುಗಳು ಸಹಿತ 5 ಅಂತಸ್ತುಗಳ ಕದ್ರಿ ಮಾರುಕಟ್ಟೆ ಸಂಕೀರ್ಣಕ್ಕೆ 2018ರ ಮಾರ್ಚ್ 26ರಂದು ಶಂಕುಸ್ಥಾಪನೆ ನೆರವೇರಿತ್ತು. ಎರಡು ನೆಲ ಅಂತಸ್ತುಗಳ ಕಾಮಗಾರಿ ನಡೆದಿದೆ. 2019 ಮಾರ್ಚ್‌ನಲ್ಲಿ ದಿಢೀರ್ ಆಗಿ ಕಾಣಿಸಿಕೊಂಡ ಕೊರೊನಾ, ಆ ಬಳಿಕ ಮಳೆಗಾಲ, ಕೆಲವು ತಾಂತ್ರಿಕ ಸಮಸ್ಯೆಗಳು ಕಾಮಗಾರಿಯ ಮೇಲೆ ಪರಿಣಾಮ ಬೀರಿದ್ದರಿಂದ ಕಾಮಗಾರಿ ಬಹುತೇಕ ಸ್ಥಗಿತಗೊಂಡಿತ್ತು. ಕೊರೊನಾ ಕಡಿಮೆಯಾದ ಬಳಿಕ ಹಾಗೂ ಮಳೆಗಾಲ ಮುಗಿದ ಅನಂತರ ಸೆಪ್ಟಂಬರ್ ತಿಂಗಳ ಅಂತ್ಯದಲ್ಲಿ ಕಾಮಗಾರಿ ಪುನರಾರಂಭ ಆಗಿತ್ತು. ಆದರೆ ಬಳಿಕ ಕೆಲವೇ ದಿನಗಳಲ್ಲಿ ಕೆಲಸ ಪುನಃ ಸ್ಥಗಿತಗೊಂಡಿತ್ತು. ಆರ್ಥಿಕ ಅಡಚಣೆ ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ. ಇದೀಗ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆ ಆಗಿದೆ ಎನ್ನಲಾಗಿದ್ದು, ಶೀಘ್ರದಲ್ಲಿಯೇ ಕೆಲಸ ಪುನರಾರಂಭಗೊಂಡು ನಿರ್ಮಾಣ ಚಟು ವಟಿಕೆಗಳು ಬಿರುಸುಗೊಳ್ಳುವ ನಿರೀಕ್ಷೆ ಇದೆ.
12.30 ಕೋ. ರೂ. ವೆಚ್ಚದ ಕಾಮಗಾರಿ :
ಸುಮಾರು 40 ವರ್ಷಗಳಷ್ಟು ಹಳೆಯ ಕದ್ರಿ ಮಾರುಕಟ್ಟೆ ಕಟ್ಟಡ ಶಿಥಿಲಾವಸ್ಥೆಗೆ ತಲುಪಿರುವುದನ್ನು ಗಮನಿಸಿ ಹಳೆಯ ಕಟ್ಟಡ ಕೆಡವಿ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಹಿಂದಿನ ಮಾರುಕಟ್ಟೆ ಕಟ್ಟಡದ ಭಾಗದಲ್ಲಿ 25 ಸೆಂಟ್ಸ್ ಹಾಗೂ ಪಕ್ಕದಲ್ಲಿ ಲಭ್ಯವಿರುವ ಪಾಲಿಕೆಯ 45 ಸೆಂಟ್ಸ್ ಜಾಗವನ್ನು ಬಳಸಿಕೊಂಡು ಒಟ್ಟು 12.30 ಕೋ. ರೂ. ವೆಚ್ಚದಲ್ಲಿ 6,920 ಚದರ ಮೀಟರ್ ವಿಸ್ತೀರ್ಣದಲ್ಲಿ ಕಾರು ಪಾರ್ಕಿಂಗ್, ಕಚೇರಿ, ವಾಣಿಜ್ಯ ಮಳಿಗೆಗಳನ್ನು ಒಳಗೊಂಡ ಸುಸಜ್ಜಿತ ಕಟ್ಟಡ ಸಂಕೀರ್ಣ ನಿರ್ಮಾಣವಾಗಲಿದೆ. ಹಳೆಯ ಕದ್ರಿ ಮಾರುಕಟ್ಟೆಯಲ್ಲಿದ್ದ ಒಟ್ಟು 45 ಮಳಿಗೆಗಳ ವ್ಯಾಪಾರಸ್ಥರಿಗೆ ವ್ಯವಹಾರ ನಡೆಸಲು ನಿರ್ಮಾಣ ಹಂತದಲ್ಲಿರುವ ಹೊಸ ಕಟ್ಟಡದ ಎದುರು ರಸ್ತೆಯ ಇನ್ನೊಂದು ಬದಿ ತಾತ್ಕಾಲಿಕ ಮಳಿಗೆಗಳನ್ನು ಕಟ್ಟಿಸಿ ಕೊಡಲಾಗಿದೆ.
ಕದ್ರಿ ಮಾರುಕಟ್ಟೆಗೆ ಹಿಂದಿನ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಗುದ್ದಲಿಪೂಜೆ ನಡೆದಿದ್ದು, ಆಗ ಎಸಗಿದ ಕೆಲವೊಂದು ತಪ್ಪುಗಳಿಂದಾಗಿ ಕಾಮಗಾರಿ ವಿಳಂಬ ವಾಗಿದೆ. ಇದೀಗ ಈಗಿನ ಆಡ ಳಿತ ಪರ್ಯಾಯ ವ್ಯವಸ್ಥೆಯನ್ನು ಮಾಡಿ ಕೊಂಡು ಕಾಮಗಾರಿಯನ್ನು ನಡೆಸಲು ನಿರ್ಧರಿಸಿದೆ. ಮುಂದಿನ 15- 20 ದಿನ ಗಳೊಳಗೆ ಕಾಮಗಾರಿ ಆರಂಭವಾಗಲಿದೆ.
–ಡಿ. ವೇದವ್ಯಾಸ ಕಾಮತ್, ಶಾಸಕರು