ಬೆಂಗಳೂರು: ಗಂಟೆಗೆ ಸಾವಿರಾರು ವಾಹನಗಳು ಸಂಚರಿಸುವ ಕಾಟನ್‌ಪೇಟೆ ಮುಖ್ಯರಸ್ತೆಯ ಟೆಂಡರ್ ಶ್ಯೂರ್ ಕಾಮಗಾರಿ ಆಮೆ ವೇಗ ಪಡೆದುಕೊಂಡಿದೆ. ಇದರಿಂದ ಒಂದೆಡೆ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದರೆ ಇನ್ನೊಂದೆಡೆ ವಾಹನ ಸಂಚಾರ ಕಿರಿಕಿರಿ ಉಂಟಾಗಿದೆ.
ಗೂಡ್ಸ್ ಶೆಡ್ ರಸ್ತೆಯ ಜಂಕ್ಷನ್ (ಶಾಂತಲಾ ಸಿಲ್ಕ್ ಹೌಸ್)ನಿಂದ ಮೈಸೂರು ರಸ್ತೆ ಜಂಕ್ಷನ್‌ವರೆಗೆ 1.15 ಕಿ.ಮೀ. ಉದ್ದವಿದ್ದು, 11.71 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಕೊಳವೆ ಅಳವಡಿಕೆ ಮತ್ತು ಟೆಂಡರ್ ಶ್ಯೂರ್ ಕಾಮಗಾರಿ ನಡೆಯತ್ತಿದೆ. ಪರಿಣಾಮ ಸುತ್ತಲಿನ ರಸ್ತೆಗಳು ವಾಹನದಟ್ಟಣೆಯಿಂದ ಕೂಡಿದ್ದು, ಸ್ಥಳೀಯರಿಗೆ ನರಕ ಸದೃಶ್ಯವಾಗಿದೆ. ಟಿಎಂಸಿ ರಾಯನ್ ರಸ್ತೆ ಏಕಪಥ ಮಾರ್ಗವಾಗಿದ್ದು, ಮೈಸೂರು ರಸ್ತೆ ಮೂಲಕ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಂಪರ್ಕಿಸಲಿದೆ. ಆದರೆ, ಕಾಟನ್ ಪೇಟೆ ಮುಖ್ಯರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ರೈಲ್ವೆ ಪಾರ್ಸೆಲ್ ಕಚೇರಿ ರಸ್ತೆ ಮೂಲಕ ಮೈಸೂರು ರಸ್ತೆ ಕಡೆಗೆ ವಿರುದ್ಧ ಮುಖವಾಗಿ ವಾಹನಗಳು ಸಂಚರಿಸುತ್ತಿವೆ. ಇದರಿಂದ ಸವಾರರು, ಪಾದಚಾರಿಗಳು ಕಿರಿಕಿರಿ ಅನುಭವಿಸುತ್ತಿದ್ದಾರೆ. ಪೀಕ್ ಅವರ್‌ನಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಸಂಚಾರ ಪೊಲೀಸರು ಇದ್ದರೂ, ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಅಮೃತ ಕನ್‌ಸ್ಟ್ರಕ್ಷನ್ ಸಂಸ್ಥೆ ಗುತ್ತಿಗೆ ಪಡೆದಿದ್ದು, 2019 ಫೆ. 8ರಂದು ಶಾಸಕ ದಿನೇಶ್ ಗುಂಡೂರಾವ್, ಅಂದಿನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಭೂಮಿ ಪೂಜೆ ನೆರವೇರಿಸಿದ್ದರು. ಫೆ. 11ರಂದು ಕಾಮಗಾರಿಯೂ ಆರಂಭವಾಗಿತ್ತು. ಕಾಮಗಾರಿ ಎಂಟು ತಿಂಗಳಲ್ಲಿ ಮುಗಿಸಲು ಅವಧಿ ನಿಗದಿಪಡಿಸಲಾಗಿತ್ತು. ಇದರಂತೆ ಸಂಚಾರ ಪೊಲೀಸರು ಮೈಸೂರು ರಸ್ತೆಯತ್ತ ತೆರಳುವ ವಾಹನಗಳು ಓಕಳೀಪುರ, ಮಾಗಡಿ ರಸ್ತೆ, ಬಿನ್ನಿಮಿಲ್ ಮಾರ್ಗದಲ್ಲಿ ಸಂಚರಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಿತ್ತು. ಆದರೀಗ ವರ್ಷ ಮುಗಿಯುತ್ತಿದ್ದರೂ, ಕಾಮಗಾರಿ ಶೇ. 50ರಷ್ಟು ಕೂಡ ಪೂರ್ಣಗೊಂಡಿಲ್ಲ. ಗೂಡ್ಸ್‌ಶೆಡ್ ರಸ್ತೆಯ ಜಂಕ್ಷನ್‌ನಿಂದ ಮೈಸೂರು ರಸ್ತೆಯವರೆಗೆ 600 ಮಿ.ಮೀ ವ್ಯಾಸದ ಒಳಚರಂಡಿ ಕೊಳವೆಯುರಸ್ತೆಯ ಮಧ್ಯ ಭಾಗದಲ್ಲಿಯೇ ಹಾದುಹೋಗಿದೆ. ಹಾಗೆಯೇ ಸೂಪರ್ ಚಿತ್ರಮಂದಿರದ ಬಳಿ ಹಾದು ಹೋಗಿರುವ ರಾಜಕಾಲುವೆಯನ್ನು ದುರಸ್ತಿಪಡಿಸಿ, ಬಾಕ್ಸ್ ಡ್ರೈನ್ ನಿರ್ಮಿಸಲಾಗಿದೆ. ಆದ್ದರಿಂದ ಕಾಮಗಾರಿ ವಿಳಂಬವಾಯಿತು ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ.
5 ವಾರ್ಡ್‌ಗೆ ಹಂಚಿಕೆ: ಈ ರಸ್ತೆಯು ಗಾಂಧಿನಗರ, ಚಿಕ್ಕಪೇಟೆ, ಕೆ.ಆರ್.ಮಾರುಕಟ್ಟೆ, ಕಾಟನ್‌ಪೇಟೆ, ಛಲವಾದಿ ಪಾಳ್ಯ ವಾರ್ಡ್‌ಗಳಿಗೆ ಹಂಚಿಕೆಯಾಗಿದೆ. ಶೀಘ್ರ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯ ನಿವಾಸಿಗಳು ಶಾಸಕ ದಿನೇಶ್ ಗುಂಡೂರಾವ್, ಮೇಯರ್ ಎಂ.ಗೌತಮ್ ಕುಮಾರ್ ಅವರಿಗೆ ಮನವಿ ನೀಡಿದ್ದಾರೆ. ಪ್ರತಿಭಟನೆ ಹಾಗೂ ಲಾಡ್ಜ್ ಅಸೋಸಿಯೇಷನ್ ವತಿಯಿಂದ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದರೂ, ಈವರಗೆ ಕಾಮಗಾರಿಗೆ ವೇಗ ನೀಡಿಲ್ಲ.
ಇತ್ತೀಚಿಗೆ ರಾಮಭಜನೆ ಮಂದಿರದ ಬಳಿ ಇದ್ದ ಆಲದ ಮರ ತೆರವುಗೊಳಿಸುವ ಸಂದರ್ಭದಲ್ಲಿ ಮರವು ದೇವಸ್ಥಾನ ಕಟ್ಟಡದ ಮೇಲೆ ಬಿದ್ದಿದ್ದು, ವಿಲೇವಾರಿ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಕ್ರಮಗೊಂಡಿಲ್ಲ. ರಸ್ತೆ ಕಾಮಗಾರಿ ಹೆಸರಿನಲ್ಲಿ ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಚಂದ್ರಶೇಖರ್ ಆರೋಪಿಸಿದರು.
ಸವಾರರ ಪರದಾಟ: ಅಯ್ಯಪ್ಪಸ್ವಾಮಿ ದೇವಸ್ಥಾನ ರಸ್ತೆ, ಜಿ.ಪಿ. ರಸ್ತೆ ಸೇರಿದಂತೆ 19 ಅಡ್ಡರಸ್ತೆಗಳು ಕಾಟನ್ ಪೇಟೆ ಮುಖ್ಯರಸ್ತೆಗೆ ಸೇರಲಿದ್ದು, ಪ್ರತಿದಿನ ಸಂಚಾರ ದಟ್ಟಣೆಯಿಂದ ಸ್ಥಳೀಯರು ಬೇಸತ್ತಿದ್ದಾರೆ. ಈ ರಸ್ತೆಗೆ ಅಡ್ಡಲಾಗಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಕಾಮಗಾರಿಗೆ ಬಳಸಿಕೊಳ್ಳಲಾಗಿದ್ದು, ಮುಖ್ಯರಸ್ತೆಗೆ ಸೇರುವ ಅಡ್ಡರಸ್ತೆಗಳಲ್ಲಿ ದ್ವಿಚಕ್ರ, ಆಟೋಗಳು ಎಗ್ಗಿಲ್ಲದೇ ಸಂಚರಿಸುತ್ತಿವೆ. ರಸ್ತೆ ಮಧ್ಯೆ ಬಾಕ್ಸ್ ಡ್ರೈನ್ ನಿರ್ಮಿಸಲಾಗಿದ್ದು, ಪಕ್ಕದಲ್ಲೇ ತಗ್ಗು ಬಿದ್ದಿದ್ದರೂ, ಬ್ಯಾರಿಕೇಡ್ ಹಾಕದೇ ನಿರ್ಲಕ್ಷ್ಯ ವಹಿಸಲಾಗಿದೆ.
-ಮಂಜುನಾಥ ಗಂಗಾವತಿ