Advertisement

ಆಮೆಗತಿಯಲ್ಲಿ ಅಮೃತ ಸಿಟಿ ಕೆಲಸ

01:05 PM Oct 18, 2019 | Team Udayavani |

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಘೋಷಣೆಯಾದ ಅಮೃತ್‌ ಸಿಟಿ ಯೋಜನೆಯಲ್ಲಿ ಗಂಗಾವತಿ ನಗರವೂ ಆಯ್ಕೆಯಾಗಿದ್ದು, ಯೋಜನೆ ಪ್ರಗತಿ ಸೆಪ್ಟೆಂಬರ್‌ ತಿಂಗಳಾಂತ್ಯಕ್ಕೆ ಶೇ. 40ರಷ್ಟು ಸಾಗಿದೆ. ವಿವಿಧ ಕಾಮಗಾರಿಗಳು ಆಮೆಗತಿಯಲ್ಲಿ ಸಾಗಿವೆ.

Advertisement

ಹೌದು. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಲ್ಲೊಂದಾದ ಅಮೃತ್‌ ಸಿಟಿ ಯೋಜನೆಯಡಿ ದೇಶಾದ್ಯಂತ ನಗರ ಪ್ರದೇಶಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಗರದಲ್ಲಿನ ಒಳ ಚರಂಡಿ, ಕುಡಿಯುವ ನೀರು, ಪಾರ್ಕ್‌, ಸಾರಿಗೆ ಸೌಲಭ್ಯ, ಪರಿಸರ ಸೇರಿ ವಿವಿಧ ಸೌಲಭ್ಯ ಕಲ್ಪಿಸಬೇಕೆಂದು ಯೋಜನೆ ರೂಪಿಸಿ 2014ರಲ್ಲಿ ಅಮೃತ್‌ ಸಿಟಿ ಯೋಜನೆ ಘೋಷಣೆ ಮಾಡಿತ್ತು. ಮೊದಲ ಯೋಜನೆಯಲ್ಲೇ ಜಿಲ್ಲೆಯಲ್ಲಿನ ಭತ್ತದ ನಾಡು ಗಂಗಾವತಿ ನಗರ ಆಯ್ಕೆಯಾಗಿದೆ. ಯೋಜನೆ 2014ರಲ್ಲೇ ಘೋಷಣೆಯಾದರೂ 2015ರ ಅವಧಿಯಲ್ಲಿ ಯೋಜನೆ ಆರಂಭಕ್ಕೆ ಮುಂದಾಯಿತು. ಆದರೆ ಗಂಗಾವತಿ ನಗರದಲ್ಲಿ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಯೋಜನೆ ಮತ್ತೆ ವಿಳಂಬವಾಯಿತು.

ಅಧಿಕಾರಿಗಳು ಹಳೆ ಕಾಮಗಾರಿಗಳನ್ನೇ ಅಮೃತ್‌ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಂಡಿದ್ದರಿಂದ ಯೋಜನೆಯ ಹಿನ್ನಡೆಗೆ ಕಾರಣವಾಯಿತು. ಯೋಜನೆಯಲ್ಲಿನ ಕಾಮಗಾರಿಗಳನ್ನು ಮಾರ್ಪಾಡು ಮಾಡಿದ ಬಳಿಕ ಈಗ ಒಂದು ಹಂತಕ್ಕೆ ಬಂದು ತಲುಪಿವೆ. ಪ್ರಸ್ತುತ ಗಂಗಾವತಿಯಲ್ಲಿನ ಯೋಜನೆಯ ಪ್ರಗತಿ ಅವಲೋಕಿಸಿದರೆ, ಒಟ್ಟು 20 ಕಾಮಗಾರಿ ಪೈಕಿ ನಾಲ್ಕು ಕಾಮಗಾರಿಗಳನ್ನು

ಮಾತ್ರ ಪೂರ್ಣಗೊಳಿಸಲಾಗಿದೆ. ಅಂದರೆ ಇನ್ನೂ 16 ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಬಾಕಿಯಿದೆ. ಇದರಲ್ಲಿ ಒಳ ಚರಂಡಿ ಕಾಮಗಾರಿ ಸೇರಿ ನಗರ ಸಾರಿಗೆ ಕಾರ್ಯಗಳು ನಿಧಾನಗತಿಯಲ್ಲಿ ನಡೆದಿವೆ. ಪಾರ್ಕ್‌ ನಿರ್ಮಾಣ ಹಾಗೂ ಸಾರಿಗೆ ಸೌಲಭ್ಯ ಕಲ್ಪಿಸಿದ್ದನ್ನು ಬಿಟ್ಟರೆ ಇನ್ನುಳಿದ ಕಾಮಗಾರಿಗಳು ಆಮೆಗತಿಯಲ್ಲಿ ನಡೆದಿವೆ.

ಇನ್ನೂ ಹಣಕಾಸಿನ ಲೆಕ್ಕಾಚಾರ ಅವಲೋಕಿಸಿದರೆ, ಪಾರ್ಕ್‌ಗೆ 1.88 ಕೋಟಿ ಪೈಕಿ 46 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಚರಂಡಿ ಕಾಮಗಾರಿಗೆ 18 ಕೋಟಿ ಪೈಕಿ 11 ಕೋಟಿ ರೂ., ಸಾರಿಗೆ ಸಂಬಂಧಿತ ಕಾಮಗಾರಿಗೆ 9 ಕೋಟಿ ಪೈಕಿ 83 ಲಕ್ಷ ವ್ಯಯ, ಒಳ ಚರಂಡಿ ಕಾಮಗಾರಿಗೆ 28 ಕೋಟಿ ಪೈಕಿ 22 ಕೋಟಿ ವೆಚ್ಚ ಮಾಡಲಾಗಿದೆ. ಕುಡಿಯುವ ನೀರು ಸರಬರಾಜಿಗೆ 13 ಕೋಟಿ ವ್ಯಯ ಮಾಡಿದೆ. ಒಟ್ಟು 110 ಕೋಟಿಯಲ್ಲಿ ವಿವಿಧ ಹಂತದಲ್ಲಿ 43 ಕೋಟಿ ವೆಚ್ಚ ಮಾಡಲಾಗಿದೆ.

Advertisement

ಶೇ. 40ರಷ್ಟು ಪ್ರಗತಿ: ಅಮೃತ್‌ ಸಿಟಿ ಯೋಜನೆಯಡಿ ನಾಲ್ಕು ವರ್ಷಗಳಲ್ಲಿ ಗಂಗಾವತಿಯ ವಿವಿಧ ಕಾಮಗಾರಿ ಪ್ರಗತಿ ಶೇ. 40ರಷ್ಟು ಮಾತ್ರ ನಡೆದಿದೆ. ಇನ್ನೂ ಶೇ. 60ರಷ್ಟು ಪೂರ್ಣಗೊಳ್ಳಬೇಕಿದೆ. ಇದರಲ್ಲಿ ಒಳ ಚರಂಡಿ ಕಾಮಗಾರಿ, ಪಾರ್ಕ್‌ ಕಾಮಗಾರಿ ಬಹುಪಾಲು ಪೂರ್ಣಗೊಂಡಿದೆ. ಆದರೆ ಕುಡಿಯುವ

ನೀರಿನ ಯೋಜನೆಯ ಕಾಮಗಾರಿಗಳು ಮಾತ್ರ ಆಮೆಗತಿಯಲ್ಲಿ ನಡೆದಿವೆ. ಕಳೆದ ನಾಲ್ಕು ವರ್ಷಗಳಲ್ಲಿನ ಪ್ರಗತಿ ಅವಲೋಕಿಸಿದರೆ ಕಾಮಗಾರಿಯು ಯಾವ ರೀತಿ ಪ್ರಗತಿಯಲ್ಲಿದೆ ಎನ್ನುವುದಕ್ಕೆ ಆರ್ಥಿಕ, ಭೌತಿಕ ಪ್ರಗತಿಯಲ್ಲಿನ ಅಂಕಿ ಅಂಶಗಳೇ ಸಾಕ್ಷಿಯಾಗಿವೆ. ಕೇಂದ್ರದಲ್ಲಿ ಮೋದಿ ಸರ್ಕಾರ 2ನೇ ಅವಧಿಗೆ ಅಧಿಕಾರ ಹಿಡಿದಿದೆ. ಆದರೆ ಕಾಮಗಾರಿಗಳು ಮಾತ್ರ ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿವೆ.

ಗಂಗಾವತಿ ನಗರ ಅಮೃತ್‌ ಸಿಟಿ ಯೋಜನೆಯಡಿ ಆಯ್ಕೆಯಾಗಿದೆ. 110 ಕೋಟಿ ಯೋಜನೆಯಿಡಿ 43 ಕೋಟಿ ವೆಚ್ಚವಾಗಿದೆ. 20 ಪ್ಯಾಕೆಜ್‌ ಕಾಮಗಾರಿಯಲ್ಲಿ 4 ಪ್ಯಾಕೆಜ್‌ ಕಾಮಗಾರಿ ಪೂರ್ಣಗೊಂಡಿವೆ. ಒಳ ಚರಂಡಿ ಕಾಮಗಾರಿ ಬಹುಪಾಲು ಪೂರ್ಣಗೊಂಡಿದ್ದು ಕುಡಿಯುವ ನೀರಿನ ಯೋಜನೆಯ ಕಾಮಗಾರಿ ನಿಧಾನಗತಿಯಲ್ಲಿದೆ. ಗುತ್ತಿಗೆದಾರನಿಗೆ ನೋಟಿಸ್‌ ನೀಡಿದ್ದು ಕಾಮಗಾರಿಗೆ ವೇಗ ನೀಡಲು ಸೂಚನೆ ನೀಡಿದ್ದೇವೆ.  –ಮಾರುತಿ, ಅಪರ ಜಿಲ್ಲಾಧಿಕಾರಿ

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next