Advertisement

ಅಷ್ಟಪಥ ಕಾರಿಡಾರ್‌ ಯೋಜನೆಗೆ ಗ್ರಹಣ!

10:31 AM Dec 21, 2019 | Suhan S |

ಬೆಂಗಳೂರು: ಹೆಚ್ಚು-ಕಡಿಮೆ “ನಮ್ಮ ಮೆಟ್ರೋ’ ಹುಟ್ಟಿಕೊಂಡ ಆಸುಪಾಸಿನಲ್ಲೇ ಜನ್ಮತಾಳಿದ್ದು ಓಕಳೀಪುರ ಅಷ್ಟಪಥ ಕಾರಿಡಾರ್‌ ಯೋಜನೆ. ಅತ್ತ 42.3 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಾಣಗೊಂಡು, ವರ್ಷದಿಂದ ಸೇವೆಯನ್ನೂ ನೀಡುತ್ತಿದೆ.  ಆದರೆ, ಇತ್ತ ಅಷ್ಟಪಥ ಕಾರಿಡಾರ್‌ ಯೋಜನೆ ಮಾತ್ರ ಕುಂಟುತ್ತಾ ಸಾಗಿದೆ. ಪರಿಣಾಮ ಜನರ ಗೋಳು ನಿರಂತರವಾಗಿ ಮುಂದುವರಿದಿದೆ.

Advertisement

ಅತಿ ಹೆಚ್ಚು ಸಂಚಾರದಟ್ಟಣೆ ಮಧ್ಯೆಯೇ ಕಳೆದ ಒಂದೂವರೆ ದಶಕದಲ್ಲಿ ಹೆಜ್ಜೆ-ಹೆಜ್ಜೆಗೂ ರಸ್ತೆಗಳ ಮೇಲೆ ಕಂಬ ನೆಟ್ಟು ಹಾಗೂ ಹತ್ತಾರು ಕಿ.ಮೀ. ಸುರಂಗವನ್ನೂ ಕೊರೆದು ಮೆಟ್ರೋ ಮಾರ್ಗ ನಿರ್ಮಿಸಲಾಗಿದೆ. ಆದರೆ, ಇದೇ ಅವಧಿಯಲ್ಲಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಅಷ್ಟಪಥದ ಮಾರ್ಗ ನಿರ್ಮಿಸಲು ಸಾಧ್ಯವಾಗಿಲ್ಲ. ಇದುವರೆಗೆ ಭಾಗಶಃ ಮಾರ್ಗ ಸೇವೆಗೆ ಲಭ್ಯವಾಗಿದ್ದು, ಸಂಪೂರ್ಣ ಲೋಕಾರ್ಪಣೆಗೆ ಇನ್ನೂ ಒಂದು ವರ್ಷ ಕಾಯುವುದು ಅನಿವಾರ್ಯವಾಗಿದೆ.

ಈ ವಿಳಂಬ ಧೋರಣೆಯಿಂದ ಯೋಜನಾ ವೆಚ್ಚದಲ್ಲಿ ಕೋಟ್ಯಂತರ ರೂ. ಹೆಚ್ಚಳವಾಗಿದ್ದು, ಅದರ ಹೊರೆಯು ಪರೋಕ್ಷವಾಗಿ ನಾಗರಿಕರ ಮೇಲೆ ಬೀಳುತ್ತಿದೆ. ಈ ಕಾಮಗಾರಿಯ “ಆಮೆ ವೇಗ’ಕ್ಕೆ ನಿತ್ಯ ವಾಹನ ಸವಾರರು ಪರದಾಡುವಂತಾಗಿದೆ. ಅತಿ ಹೆಚ್ಚು ಜನಸಂದಣಿ ಇರುವ ರೈಲು ನಿಲ್ದಾಣ ಹಾಗೂ ಬಸ್‌ ನಿಲ್ದಾಣ ಸೇರಿದಂತೆ ನಾಲ್ಕು ಮಾರ್ಗಗಳು ಕೂಡುವ ಈ ಜಾಗದಲ್ಲಿ “ಪೀಕ್‌ ಅವರ್‌’ನಲ್ಲಿ ವಾಹನಗಳಿಂದ ಭರ್ತಿ ಆಗಿರುತ್ತದೆ.

ಪ್ರಸ್ತುತ ರಾಜಾಜಿನಗರ- ಓಕಳೀಪುರ ಮಾರ್ಗದಿಂದ ಮಂತ್ರಿಮಾಲ್‌ ಕಡೆಗೆ, ಮೆಜಸ್ಟಿಕ್‌ ಕಡೆಗೆ ಸಾಗಬಹುದು. ಹಾಗೆಯೇ ಮೆಜಸ್ಟಿಕ್‌ನಿಂದ ರೈಲ್ವೆ ಕಾಲೊನಿ ಹಾಗೂ ಓಕಳೀಪುರ ಕಡೆ ಸಾಗಬಹುದು. ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯ ಡಾಂಬರೀಕರಣ ಕಿತ್ತುಹೋಗಿದ್ದು, ಕಾಮಗಾರಿಯಿಂದ ಸುತ್ತಲಿನ ಪ್ರದೇಶದಲ್ಲಿ ದೂಳು ಹೆಚ್ಚಾಗಿದೆ. ಬೆಳಿಗ್ಗೆ 8ರಿಂದ 11 ಹಾಗೂ ಸಂಜೆ 5ರಿಂದ 8ರವರೆಗೆ ವಾಹನದಟ್ಟಣೆ ವಿಪರೀತ ಇರುತ್ತದೆ. ಇದೀಗ ಒಂದು ಮಾರ್ಗದಲ್ಲಿ ಗಂಟೆಗೆ ಐದು ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಕಾರಿಡಾರ್‌ ಪೂರ್ಣಗೊಂಡರೆ ಪಿಕ್‌ ಅವರ್‌ನಲ್ಲಿಯೂ ವಾಹನದಟ್ಟಣೆ ಕಡಿಮೆ ಆಗಲಿದೆ. ಜತೆಗೆ ನಾವೂ ತುಸು ನಿಟ್ಟುಸಿರುಬಿಡಬಹುದು ಎನ್ನುತ್ತಾರೆ ಸಂಚಾರ ಪೊಲೀಸರು.

2002ರಲ್ಲಿ ಯೋಜನೆಗೆ ಒಪ್ಪಿಗೆ: ನಗರದ ಕೇಂದ್ರ ಭಾಗ ಹಾಗೂ ರಾಜಾಜಿನಗರ, ವಿಜಯನಗರ, ಬಸವೇಶ್ವರ ನಗರ, ನಾಗರಬಾವಿ ಮತ್ತಿತರ ಪ್ರದೇಶಗಳ ನಡುವೆ ಸುಗಮ ಸಂಚಾರ ವ್ಯವಸ್ಥೆಗಾಗಿ ಪಾಲಿಕೆ 2002ರಲ್ಲಿ ಈ ಅಷ್ಟಪಥದ ಕಾರಿಡಾರ್‌ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿತ್ತು. ಚಿಂತನೆ ಹುಟ್ಟಿದ ದಶಕದ ನಂತರ ರಾಜ್ಯ ಸರ್ಕಾರ ಅನುಮೋದನೆ ಸಿಕ್ಕಿತು. 2012ರ ಡಿ.20ರಂದು ಭೂಮಿ ಪೂಜೆಯೂ ನೆರವೇರಿತು. ಆದರೆ, ನಂತರ ದಿನಗಳಲ್ಲಿ ಜಮೀನು ಹಸ್ತಾಂತರ ವಿಳಂಬದಿಂದ ಕಾಮಗಾರಿ ನೆನಗುದಿಗೆ ಬಿದ್ದಿತ್ತು.

Advertisement

ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ  ಕೈಗೊಂಡ ಅಷ್ಟಪಥ ಕಾರಿಡಾರ್‌ಗೆ ಭೂಸ್ವಾಧೀನ, ಒಳಚರಂಡಿಗಳ ಸ್ಥಳಾಂತರ ಸೇರಿದಂತೆ ಒಟ್ಟು ಯೋಜನಾ ವೆಚ್ಚ 115 ಕೋಟಿ ರೂ.ಆಗಿದ್ದು, ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಕಂಪೆನಿಗೆ ಗುತ್ತಿಗೆ ಪಡೆದಿದೆ. ಕಾಮಗಾರಿಗೆ 2012ರಲ್ಲಿ ಕಾರ್ಯಾದೇಶವಾಗಿದ್ದು, ಕಾರಿಡಾರ್‌ ನಿರ್ಮಾಣಕ್ಕಾಗಿ ರೈಲ್ವೆಗೆ ಸೇರಿದ 12,818 ಚ.ಮೀ. ಜಾಗವನ್ನು ಸ್ವಾಧೀನಕ್ಕೆ ಪಡೆದು ಕಾಮಗಾರಿ ಆರಂಭಿಸಿಲು ಮೂರು ವರ್ಷ ಬೇಕಾಯಿತು. 2015ರಲ್ಲಿ ಚಾಲನೆ ದೊರಕಿದ್ದು, 2016 ವರ್ಷಾಂತ್ಯದಲ್ಲಿ ಕಾಮಗಾರಿ ಮುಗಿಸಲು ಆದೇಶಿಸಲಾಗಿದ್ದರೂ, ಈವರೆಗೂ ಪೂರ್ಣಗೊಂಡಿಲ್ಲ. ಇನ್ನೂ ಶೇ. 20ರಷ್ಟು ಬಾಕಿ ಇದೆ ಎಂದು ತಿಳಿದುಬಂದಿದೆ.

ಇನ್ನೂ ಒಂದು ವರ್ಷ ಕಾಯಬೇಕು!: ಅಷ್ಟಪಥದ ಕಾರಿಡಾರ್‌ ಮಧ್ಯಭಾಗದಲ್ಲಿ ಬೆಂಗಳೂರು-ತುಮಕೂರು ಹಾಗೂ ಬೆಂಗಳೂರು-ಚೆನ್ನೈ ರೈಲು ಮಾರ್ಗ ಹಾದುಹೋಗಿದೆ. ಈ ಮಾರ್ಗದಲ್ಲಿ ರೈಲ್ವೆ ಕೆಳಸೇತುವೆ (ಆರ್‌ಯುಬಿ) ನಿರ್ಮಾಣ ಕಾರ್ಯ ವಿಳಂಬ ಆಗುತ್ತಿದ್ದು, ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಒಂದಿಲ್ಲೊಂದು ರೈಲುಗಳು ಈ ಮಾರ್ಗದಲ್ಲಿ ಸಂಚರಿಸುತ್ತಿರುತ್ತವೆ. ಹಾಗಾಗಿ, ಬೆಳಗ್ಗೆ 12.30ರಿಂದ 4.30 ಅವಧಿಯಲ್ಲೇ ಆರ್‌ಯುಬಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಈಗಾಗಲೇ ಬೆಂಗಳೂರು-ತುಮಕೂರು ಮಾರ್ಗದಲ್ಲಿ ಐದು, ಬೆಂಗಳೂರು-ಚೆನ್ನೈರೈಲು ಮಾರ್ಗದಲ್ಲಿ ಎರಡು ಕೆಳಸೇತುವೆ ನಿರ್ಮಾಣವಾಗಿದ್ದು, ಇನ್ನೂ ಮೂರು ಸೇತುವೆಗಳ ನಿರ್ಮಾಣ ಬಾಕಿ ಇದೆ. 2020 ವರ್ಷಾಂತ್ಯಕ್ಕೆ ಕಾರಿಡಾರ್‌ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆಗಳಿವೆ ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಇಂಜಿನಿಯರ್‌ ಎನ್‌.ರಮೇಶ್‌ ಮಾಹಿತಿ ನೀಡಿದರು.

ಮೆಜೆಸ್ಟಿಕ್‌ನಿಂದ ಓಕಳೀಪುರ ಕಡೆ ಸಾಗುವ ರಸ್ತೆಯನ್ನು ಸ್ಥಗಿತಗೊಳಿಸಿ, ಪಕ್ಕದಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಗುವುದು. ನಂತರ ರೈಲ್ವೆ ಇಲಾಖೆ ಆರ್‌ಯುಬಿ ಕಾಮಗಾರಿ ಆರಂಭಗೊಳ್ಳಲಿದೆ. 2020ರ ವರ್ಷಾಂತ್ಯದಲ್ಲಿ ಕಾರಿಡಾರ್‌ ಸಂಚಾರಕ್ಕೆ ಸಿದ್ಧವಾಗಲಿದೆ. ಎನ್‌.ರಮೇಶ್‌, ಮುಖ್ಯ ಇಂಜಿನಿಯರ್‌ (ಯೋಜನೆ)

 

-ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next