Advertisement

ಸ್ಲೋ ಮೂವಿಂಗ್‌ ವೈಟ್‌ಟಾಪಿಂಗ್‌!

12:32 PM Dec 15, 2018 | |

ಬೆಂಗಳೂರು: ರಾಜಧಾನಿಯ ರಸ್ತೆ ಗುಂಡಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿ ಕೈಗೆತ್ತಿಕೊಂಡಿರುವ ವೈಟ್‌ಟಾಪಿಂಗ್‌ ಕಾಮಗಾರಿಯಿಂದ ಪ್ರಮುಖ ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Advertisement

ನಗರದ ಪ್ರಮುಖ ರಸ್ತೆಗಳ ಪೈಕಿ 93.47 ಕಿ.ಮೀ ರಸ್ತೆಯನ್ನು ವೈಟ್‌ಟಾಪಿಂಗ್‌ ಮಾಡಲು ಪಾಲಿಕೆ 972.69 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿದೆ. ಆದರೆ, ಮೊದಲ ಹಂತದಲ್ಲಿ ಕಾಮಗಾರಿ ಆರಂಭಿಸಿದ ರಸ್ತೆಗಳಿಗೆ ಪರ್ಯಾಯವಾಗಿ ಮಾರ್ಗ ಕಲ್ಪಿಸದ ಕಾರಣ ವಾಹನ ದಟ್ಟಣೆ ತೀವ್ರವಾಗಿತ್ತು. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದ ಸಂಚಾರ ಪೊಲೀಸರು, ಯೋಜನೆ ವೇಗಕ್ಕೆ ಬ್ರೇಕ್‌ ಹಾಕಿದ್ದರು.

ಜತೆಗೆ ತಮ್ಮ ಅನುಮತಿ ಪಡೆದ ನಂತರವೇ ಕಾಮಗಾರಿ ನಡೆಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದರು. ಹೀಗಾಗಿ, ಪೊಲೀಸರ ಅನುಮತಿಗಾಗಿ ಕಾಯುತ್ತಾ ವೈಟ್‌ಟಾಪಿಂಗ್‌ ತೆಡವಾಗುತ್ತಿದೆ. ಒಂದು ಮಾರ್ಗದಲ್ಲಿ ಇಂತಿಷ್ಟು ಕಿ.ಮೀ. ಕಾಮಗಾರಿ ನಡೆಸಲು ಮಾತ್ರ ಅವಕಾಶ ನೀಡುತ್ತಿರುವುದರಿಂದ ಮೂರ್‍ನಾಲ್ಕು ತಿಂಗಳಿಗೊಮ್ಮೆ ಸಾರ್ವಜನಿಕರು ವಾಹನ ದಟ್ಟಣೆ ಸಮಸ್ಯೆ ಅನುಭವಿಸುವಂತಾಗಿದೆ.

ಪ್ರಸ್ತುತ ಹೆಬ್ಟಾಳದಿಂದ ಹೆಣ್ಣೂರು, ನಾಯಂಡಳ್ಳಿಯಿಂದ ಸುಮ್ಮನಹಳ್ಳಿ, ಮಡಿವಾಳದಿಂದ ಸಿಲ್ಕ್ಬೋರ್ಡ್‌ ಬಳಿ ಕಾಮಗಾರಿಗೆ ಪೊಲೀಸರು ಅನುಮತಿ ನೀಡಿದ್ದು, ಈ ರಸ್ತೆಗಳಲ್ಲಿ ವಿಪರೀತ ವಾಹನ ದಟ್ಟಣೆ ಉಂಟಾಗುತ್ತಿದೆ. ಜತೆಗೆ ಪರ್ಯಾಯ ಮಾರ್ಗ ಸೂಚಿಸದ ಅಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಕಾಮಗಾರಿ ನಡೆಸಯುತ್ತಿರುವ ರಸ್ತೆಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ಉಂಟಾಗುವ ಟ್ರಾಫಿಕ್‌ ದಟ್ಟಣೆಯಿಂದ ವಾಹನ ಸವಾರರು ರೋಸಿಹೋಗಿದ್ದಾರೆ. 

ಮತ್ತೆ ಯಾಕಾದ್ರೂ ಶುರುವಾಯ್ತೋ: ಚುನಾವಣೆ ಕಾರಣಕ್ಕೆ ಹಾಗೂ ಸಂಚಾರ ಪೋಲಿಸರ ಅನುಮತಿ ದೊರೆಯದೆ ಕೆಲ ದಿನ ನಿಂತಿದ್ದ ವೈಟ್‌ ಟಾಪಿಂಗ್‌ ಅಕ್ಟೋಬರ್‌ನಿಂದ ಮತ್ತೆ ಶುರುವಾಗಿದೆ. ಕಾಮಗಾರಿ ಪುನರಾರಂಭವಾದ ರಸ್ತೆಗಳಲ್ಲಿ ಸಾಕಷ್ಟು ವಾಹನ ದಟ್ಟಣೆ ಉಂಟಾಗಿದೆ. ವಾಹನ ಸವಾರರು “ಮತ್ತೆ ಯಾಕಪ್ಪಾ ಈ ವೈಟ್‌ ಟಾಪಿಂಗ್‌ ಶುರುವಾಯ್ತು’ ಎಂದು ಗೊಣಗುತ್ತಾ, ಪಾಲಿಕೆಗೆ ಶಾಪ ಹಾಕುತ್ತಿದ್ದಾರೆ.

Advertisement

ಜತೆಗೆ ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲಿ ನಡೆದು ಹೋಗಲು ಸ್ಥಳವಿಲ್ಲದೆ ಪಾದಚಾರಿಗಳು ಕೂಡ ಪರದಾಡುತ್ತಿದ್ದಾರೆ. ಈ ನಡುವೆ ಕಾಮಗಾರಿ ನಡೆಯುವ ಸ್ಥಳದಲ್ಲಿ ವಿಪರೀತ ಧೂಳು ರುವ ಕಾರಣ ಸಂಚಾರ ಪೊಲೀಸರು ಜಂಕ್ಷನ್‌ಗಳನ್ನು ಬಿಟ್ಟು ಬರುತ್ತಿಲ್ಲ ಪರಿಣಾಮ, ಕಾಮಗಾರಿ ಸ್ಥಳದಲ್ಲಿ ವಾಹನಗಳು ಅಡ್ಡಾದಿಡ್ಡಿ ಸಾಗಿ ವಾಹನ ದಟ್ಟಣೆ ಉಲ್ಬಣಗೊಳ್ಳುತ್ತಿದೆ ಎಂಬ ಆರೋಪವಿದೆ.

18.5 ಕಿ.ಮೀ ಕಾಮಗಾರಿ ಪೂರ್ಣ: ನಗರದ ಹೊರವರ್ತುಲ ರಸ್ತೆಗಳೂ ಸೇರಿದಂತೆ ಒಟ್ಟು 40 ರಸ್ತೆಗಳಲ್ಲಿ 93.47 ಕಿ.ಮೀ ಉದ್ದದ ರಸ್ತೆಯನ್ನು ವೈಟ್‌ ಟಾಪಿಂಗ್‌ ಮಾಡಲು ಪಾಲಿಕೆ ಯೋಜನೆ ರೂಪಿಸಿತ್ತು. ಇದಕ್ಕಾಗಿ 972.69 ಕೋಟಿ ರೂ. ಯೋಜನಾ ಅನುದಾನವನ್ನು ನಿಗಗದಿಪಡಿಸಿ, 2017ರ ನವೆಂಬರ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಿದೆ.

ಮೊದಲ ಹಂತದಲ್ಲಿ 59.97 ಕಿ.ಮೀ. ರಸ್ತೆಯಲ್ಲಿ ಕಾಮಗಾರಿ ನಡೆಸಲು ಪಾಲಿಕೆ ನಿರ್ಧರಿಸಿತ್ತು. ಆದರೆ ಆಮೆಗತಿ ಕಾಮಗಾರಿಯಿಂದಾಗಿ ಈವರೆಗೆ ನಾಗವಾರ ಹೊರವರ್ತುಲ ರಸ್ತೆ, ವಿಜಯನಗರ, ಹೊಸೂರು ರಸ್ತೆ, ಕೋರಮಂಗಲ, ಕಾಡುಗೋಡಿ, ಮೈಸೂರು ರಸ್ತೆ ಸೇರಿ ಒಟ್ಟು 18.5 ಕಿ.ಮೀ. ವೈಟ್‌ಟಾಪಿಂಗ್‌ ಮಾಡಲಾಗಿದೆ. ಅದರಂತೆ ಮೊದಲ ಹಂತದಲ್ಲಿ ಇನ್ನೂ 41.47 ಕಿ.ಮೀ. ಉದ್ದದ ಕಾಮಗಾರಿ ಬಾಕಿಯಿದೆ.

ಕಾಮಗಾರಿ ಚಾಲ್ತಿಯಲ್ಲಿರುವ ರಸ್ತೆಗಳು: ಹೆಬ್ಟಾಳ ಮೇಲ್ಸೇತುವೆಯಿಂದ ಹೆಣ್ಣೂರು ಜಂಕ್ಷನ್‌, ಹೊರವರ್ತುಲ ರಸ್ತೆಯ ನಾಯಂಡಹಳ್ಳಿಯಿಂದ ಸುಮನಹಳ್ಳಿ ಜಂಕ್ಷನ್‌, ಮೇಖೀ ವೃತ್ತದಿಂದ ಯಶವಂತಪುರ, ಜೆಪಿ ನಗರ, ನಾಗವಾರ ಹೊರವರ್ತುಲ ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆ, ಕಾಡಗೋಡಿ, ಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಭಾಗಗಳಲ್ಲಿ ಮತ್ತೆ ಕಾಮಗಾರಿ ಆರಂಭಿಸಲು ಪೊಲೀಸರು ಇತ್ತೀಚೆಗೆ ಅನುಮತಿ ನೀಡಿದ್ದು, ಕಾಮಗಾರಿ ಚಾಲ್ತಿಯಲ್ಲಿದೆ.

ಕೆಲಸವಿಲ್ಲದೆ ನಿಂತ ಯಂತ್ರಗಳು: ಸಂಚಾರ ಪೊಲೀಸರ ಅನುಮತಿ ದೊರೆಯರ ಕಾರಣ, ಮೊದಲ ಹಂತದ ಎಲ್ಲಾ ರಸ್ತೆಗಳಲ್ಲಿ ಕಾಮಗಾರಿ ನಡೆಸಲು ತರಿಸಿದ್ದ ಯಂತ್ರೋಪಕರಣಗಳಿಗೆ ಕೆಲಸವಿಲ್ಲದಂತಾಗಿದೆ. ಈ ಹಿಂದೆ ವೈಟ್‌ಟಾಪಿಂಗ್‌ ಕಾಮಗಾರಿಗೆ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಹೆಚ್ಚುವರಿ ಯಂತ್ರಗಳನ್ನು ತರಿಸಿಕೊಳ್ಳಲು ಸೂಚನೆ ನೀಡಲಾಗಿತ್ತು. ಅದರಂತೆ, ಹೆಚ್ಚುವರಿ ಯಂತ್ರಗಳನ್ನು ತರಿಸಿಕೊಂಡರೂ ಏಕ ಸಮಯದಲ್ಲಿ ಅವುಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಗುತ್ತಿಗೆದಾರರೊಬ್ಬರು ತಿಳಿಸಿದರು.

ಮುಗಿಯಲು ಬೇಕು ಐದು ವರ್ಷ?: ನಗರದ ಹಲವು ರಸ್ತೆಗಳಲ್ಲಿ ಏಕಕಾಲದಲ್ಲಿ ಕಾಮಗಾರಿ ನಡೆಸುವುದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂದು ಒಂದು ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಮತ್ತೂಂದು ರಸ್ತೆಯಲ್ಲಿ ಕಾಮಗಾರಿ ನಡೆಸಲು ಸಂಚಾರ ಪೊಲೀಸರು ಅನುಮತಿ ನೀಡುತ್ತಿದ್ದಾರೆ. ಹೀಗಾಗಿ, ಕಾಮಗಾರಿ ತಡವಾಗುತ್ತಿದ್ದು, ಇದೇ ವೇಗದಲ್ಲಿ ಮುಂದುವರಿದರೆ, 93 ಕಿ.ಮೀ. ಕಾಮಗಾರಿ ಮುಗಿಸಲು ಐದು ವರ್ಷ ಬೇಕಾಗುತ್ತದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ವೈಟ್‌ಟಾಪಿಂಗ್‌ ಪೂರ್ಣಗೊಂಡ ರಸ್ತೆಗಳ ವಿವರ 
ಪೂರ್ಣಗೊಂಡ ರಸ್ತೆ    ಉದ್ದ (ಕಿ.ಮೀ.ಗಳಲ್ಲಿ)

* ನಾಯಂಡಹಳ್ಳಿಯಿಂದ ಸುಮ್ಮನಹಳ್ಳಿ ಜಂಕ್ಷನವರೆಗೆ    1.2
* ಹೊಸಳ್ಳಿ ಮೆಟ್ರೋ ನಿಲ್ದಾಣದಿಂದ ವಿಜಯನಗರ ಟಿಟಿಎಂಸಿ    1.60 (ಬಲ ಬದಿ ಮಾತ್ರ)
* ಯಶವಂತಪುರ ಮೆಟ್ರೋ ನಿಲ್ದಾಣದಿಂದ ಗೊರಗುಂಟೆಪಾಳ್ಯ    500 ಮೀಟರ್‌ (ಎಡ ಬದಿ ಮಾತ್ರ)
* ಹೊರವರ್ತುಲ ರಸ್ತೆ ರಾಜ್‌ಕುಮಾರ್‌ ಸಮಾಧಿಯ ಮೈಸೂರು ರಸ್ತೆ    2.4 (ಬಲಭಾಗ ಮಾತ್ರ)
* ಹೆಣ್ಣೂರು ಜಂಕ್ಷನ್‍ನಿಂದ ಬೆನ್ನಿಗಾನಹಳ್ಳಿ    3 ಕಿ.ಮೀ
* ಹೆಬ್ಟಾಳನಿಂದ ಹೆಣ್ಣೂರು    3.5 (ಎಡ ಬದಿ) 0.5 (ಬಲ ಬದಿ)
* ಮೈಸೂರು ರಸ್ತೆಯ ಬಿಎಚ್‌ಇಎಲ್‌ ವೃತ್ತದವರೆಗೆ ಒಂದು ಭಾಗ    3.32
* ಕೋರಮಂಗಲ 20ನೇ ಮುಖ್ಯರಸ್ತೆ    1.50
* ಹೊಸೂರು ರಸ್ತೆಯ ಆನೆಪಾಳ್ಯ ಎಸ್‌ಡಬ್ಲೂéಡಿಯಿಂದ ಮಡಿವಾಳ ಅಂಡರ್‌ಪಾಸ್‌ವರೆಗೆ ಒಂದು ಭಾಗ    2.55
* ಮೇಖ್ರೀ ಸರ್ಕಲ್‌ನಿಂದ ಸದಾಶಿವ ನಗರ ಪೊಲೀಸ್‌ ಸ್ಟೇಷನ್‌    1.10
* ಕನಕಪುರ ರಸ್ತೆ ಬಸಪ್ಪ ಸರ್ಕಲ್‌ನಿಂದ ಬನಶಂಕರಿ ಬಸ್‌ ನಿಲ್ದಾಣ    1.65 
* 7ನೇ ಮುಖ್ಯ ರಸ್ತೆ ಬಾಣಸವಾಡಿ    1.62

ಏಕಕಾಲದಲ್ಲಿ ಐದು ರಸ್ತೆಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಷ್ಟು ಯಂತ್ರೋಪಕರಣಗಳು ನಮ್ಮಲ್ಲಿವೆ.  ಆದರೆ, ಸಂಚಾರ ಪೊಲೀಸರು ಒಂದು ರಸ್ತೆ ಕಾಮಗಾರಿ ಮುಗಿದ ನಂತರವೇ ಮತ್ತೂಂದು ರಸ್ತೆಯಲ್ಲಿ ಕಾಮಗಾರಿಗೆ ಅನುಮತಿ ನೀಡುತ್ತಿರುವ ಕಾರಣ ಕಾಮಗಾರಿ ತಡವಾಗುತ್ತಿದೆ.
-ಕೆ.ಟಿ.ನಾಗರಾಜ್‌, ಮುಖ್ಯ ಇಂಜಿನಿಯರ್‌ (ಯೋಜನೆ)

ಪದೇ ಪದೆ ವೈಟ್‌ ಟಾಪಿಂಗ್‌ ಹೆಸರಲ್ಲಿ ರಸ್ತೆ ಬಂದ್‌ ಮಾಡುವುದರಿಂದ ಸಮಸ್ಯೆಯಾಗುತ್ತಿದೆ. ಕೆಲವು ತಿಂಗಳು ರಸ್ತೆ ಬಂದ್‌ ಮಾಡಿ ಒಮ್ಮೆಲೆ ಕಾಮಗಾರಿ ಮುಗಿಸಬೇಕು. ಸಂಜೆ ಒಂದು ಕಿ.ಮೀ ದೂರ ಟ್ರಾಫಿಕ್‌ ಇರುತ್ತದೆ. ಬೈಕ್‌ನಲ್ಲಿ ಕಚೇರಿಯಿಂದ ಮನೆ ತಲುಪುವಷ್ಟರಲ್ಲಿ ಸಾಕಾಗಿ ಹೋಗುತ್ತದೆ.
-ಆನಂದ, ನಗರ ನಿವಾಸಿ

ವೈಟ್‌ ಟಾಪಿಂಗ್‌ ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲಿ ಸೂಕ್ತ ಪಾದಾಚಾರಿ ಮಾರ್ಗಗಳಿಲ್ಲ. ಸಿಮೆಂಟ್‌ ಹಾಕಿ ಗೋಣಿಚೀಲ ಹಾಸಿರುವ ಕೆಸರು ರಸ್ತೆ ಮೇಲೇ ನಡೆದು ಹೋಗುವ ಸ್ಥಿತಿಯಿದೆ. ಮೊದಲು ಪಾದಚಾರಿಗಳ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು.
-ನೇತ್ರಾವತಿ, ಪಾದಚಾರಿ

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next