Advertisement

ದೇಶದಲ್ಲಿ ಕಾಂಗ್ರೇಸ್‌ ಛೋಡೋ ಆರಂಭ

03:04 PM Sep 17, 2022 | Team Udayavani |

ಚಾಮರಾಜನಗರ: ಕಾಂಗ್ರೆಸ್‌ ಪಕ್ಷವು ಒಂದೆಡೆ ಭಾರತ್‌ ಜೋಡೋ ಕಾರ್ಯ ಕ್ರಮ ಮಾಡುತ್ತಿದ್ದರೆ, ಮತ್ತೂಂದೆಡೆ ಉತ್ತರ ಭಾರತದಲ್ಲಿ ಕಾಂಗ್ರೆಸ್‌ ಛೋಡೋ ನಡೆಯುತ್ತಿದೆ ಎಂದು ಕಾಡಾ ಅಧ್ಯಕ್ಷ ನಿಜಗುಣರಾಜು ವ್ಯಂಗ್ಯವಾಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿಯವರು ಕೇರಳದಿಂದ ಭಾರತ್‌ ಜೋಡೋ ಯಾತ್ರೆ ಆರಂಭಿಸಿದ್ದಾರೆ. ಆದರೆ ಉತ್ತರ ಭಾರತದಲ್ಲಿ ಅವರ ಪಕ್ಷದ ನಾಯಕರು ಕಾಂಗ್ರೆಸ್‌ ಛೋಡೋ ಮಾಡುತ್ತಿದ್ದಾರೆ. ಹಾರ್ದಿಕ್‌ ಪಟೇಲ್‌, ಗುಲಾಂ ನಬಿ ಆಜಾದ್‌, ಅಶ್ವಿ‌ನ್‌ ಕುಮಾರ್‌, ಆರ್‌.ಪಿ. ಸಿಂಗ್‌, ಕಪಿಲ್‌ ಸಿಬಲ್‌, ಅಮರೀಂದರ್‌ ಸಿಂಗ್‌ , ಶೇರ್‌ಗಿಲ್‌ ಮತ್ತಿತರ ಮುಖಂಡರು ಕಾಂಗ್ರೆಸ್‌ ತೊರೆಯುತ್ತಿದ್ದಾರೆ. ಗೋವಾದಲ್ಲಿ 8 ಮಂದಿ ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್‌ನ ಪ್ರಮುಖ ನಾಯಕರು ಭಾರತ್‌ ಜೋಡೋ ಕಾರ್ಯಕ್ರಮದ ಬಗ್ಗೆ ನನಗೆ ಗೊತ್ತೇ ಇಲ್ಲ ಎನ್ನುತ್ತಿದ್ದಾರೆ. ಕಾಂಗ್ರೆಸ್‌ ನಾಯಕರು ಮೊದಲು ತಮ್ಮ ಪಕ್ಷವನ್ನು ಉಳಿಸಿಕೊಳ್ಳಲಿ ಎಂದು ಗೇಲಿ ಮಾಡಿದರು.

ಬಿಜೆಪಿಯು ದೇಶವನ್ನು ಇಬ್ಭಾಗ ಮಾಡುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆ ಸತ್ಯಕ್ಕೆ ದೂರ ವಾದದ್ದು. ಸ್ವಾತಂತ್ರ್ಯ ನಂತರದಲ್ಲಿ ದೇಶವನ್ನು ವಿಭಜಿಸಿದವರು ಯಾರು? ಒಂದು ದೇಶದಲ್ಲಿ 2 ಸಂವಿಧಾನ, 2 ಬಾವುಟ, 2 ಪ್ರಧಾನಿಗಳನ್ನು ಹುಟ್ಟುಹಾಕಿದವರು ಯಾರು? ಎಂದು ಪ್ರಶ್ನಿಸಿದರು.

ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಮಾಡಿದ ಪಾಪದ ಕೊಳೆಯನ್ನು ತೊಳೆದು ಬಿಜೆಪಿಯು 370 ವಿಧಿಯನ್ನು ತೆಗೆಯುವ ಮೂಲಕ ದೇಶವನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ. ಉತ್ತರ ಭಾರತದಲ್ಲಿ ತುಂಬಾ ಜನರ ಕಾಂಗ್ರೆಸ್‌ ನಾಯಕರು ಪಕ್ಷ ಬಿಡುತ್ತಿದ್ದಾರೆ. ಕಾಂಗ್ರೆಸ್‌ ನಾಯಕರು ಇಲ್ಲ ಸಲ್ಲದ ಆರೋಪಗಳನ್ನು ಮಾಡಿಕೊಂಡು ರಾಜಕಾರಣ ಮಾಡುವಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಪದೇ ಪದೇ ಸುಳ್ಳು ಹೇಳುವ ಮೂಲಕ ನಿಜ ಮಾಡಲು ಹೊರಟಿದ್ದಾರೆ ಎಂದರು.

ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಧೂಳಿಪಟ: ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಧೂಳಿಪಟವಾಗುತ್ತಿದೆ. ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಆರ್‌ .ಧ್ರುವನಾರಾಯಣ ಅವರನ್ನು ಕಾಂಗ್ರೆಸ್‌ ದುರಾಡಳಿತ ನೋಡಿ ಜನರು ಸೋಲಿಸಿದರು.

Advertisement

ಕಾಂಗ್ರೆಸ್‌ ಪಕ್ಷವು ಅಖಂಡ ಭಾರತವನ್ನು ಹರಿದು ಹಂಚಿತು. ಬಿಜೆಪಿಯು ಅಧಿಕಾರಕ್ಕೆ ಬಂದ ನಂತರ ಅನೇಕ ಅಭಿವೃದ್ಧಿ ಕಾರ್ಯಗಳನ್ನು ದೇಶದಲ್ಲಿ ಜಾರಿಗೊಳಿಸಿದೆ. ಪ್ರತಿ ಜಿಲ್ಲೆಗಳಲ್ಲೂ ಮೆಡಿಕಲ್‌ ಕಾಲೇಜುಗಳನ್ನು ಪ್ರಾರಂಭಿಸಿತು. 2 ಇದ್ದ ಏಮ್ಸ್‌ ಗಳನ್ನು ಆರಕ್ಕೇರಿಸಿದೆ. ಐಐಟಿಗಳನ್ನು ಸ್ಥಾಪನೆ ಮಾಡಿದೆ. ಅಲ್ಲದೇ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ತಿಳಿಸಿದರು.

ಬಿಜೆಪಿ ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಜಯಸುಂದರ್‌, ಮುಖಂಡರಾದ ಕಿಲಗೆರೆ ಬಸವರಾಜು, ಸೂರ್ಯಕುಮಾರ್‌, ಶ್ರೀನಾಥ್‌, ಮಲ್ಲೇದೇವರು, ರಂಗನಾಥ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next