Advertisement

ಜರಿದು ಬಿದ್ದ ಅಡಿಗಲ್ಲು: ಸಂಪರ್ಕ ಕಡಿತ ಭೀತಿಯಲ್ಲಿ ಜನತೆ

12:24 AM Jun 29, 2019 | Team Udayavani |

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಕಾನರ್ಪದಿಂದ ದೂಂಬೆಟ್ಟು ಸಂಪರ್ಕಿಸುವ ಕುರುಡ್ಯ ಸಮೀಪದ ಸೇತುವೆ ಪಿಲ್ಲರ್‌ನ ಅಡಿಗಲ್ಲು ಕುಸಿದು ಬಿದ್ದ ಪರಿಣಾಮ ನುರಾರು ಮನೆಗಳಿಗೆ ಸಂಪರ್ಕ ಕಡಿತ ಭೀತಿ ಎದುರಾಗಿದೆ.

Advertisement

ಸುಮಾರು 40 ವರ್ಷಗಳಿಗೂ ಹಳೆಯ, ಕಲ್ಲಿನಿಂದ ಕಟ್ಟಿದ ಸೇತುವೆ ಸೇತುವೆಯಾಗಿದ್ದರಿಂದ ಜೂ. 22ರಂದು ಸುರಿದ ಮಳೆಗೆ ಅಡಿಗಲ್ಲಿನ ಒಂದು ಭಾಗ ಜರಿದು ಬಿದ್ದಿದೆ. 7 ಮೀ. ಉದ್ದ, 5 ಮೀ. ಅಗಲವಿರುವ ಸೇತುವೆ ಕೆಳಭಾಗದ ಪಿಲ್ಲರ್‌ನ 4 ಅಡಿ ಎತ್ತರ, 3 ಅಡಿ ಉದ್ದ ಭಾಗದ ಕಲ್ಲು ಕುಸಿದು ಬಿದ್ದಿದೆ. ದೂಂಬೆಟ್ಟು ಪ್ರದೇಶದಂಚಿಗೆ 300ಕ್ಕೂ ಹೆಚ್ಚು ಮನೆಯವರು ಇದೇ ಕಿರು ಸೇತುವೆ ಆಶ್ರಯಿಸಿದ್ದಾರೆ.

ಬೆಳ್ಳೂರು ಬೈಲಿ ಕಾಮಗಾರಿ ಆಮೆಗತಿ
ಕಡಿರುದ್ಯಾವರ ಈಂದಬೆಟ್ಟುಗೆ ಸಂಪರ್ಕಿಸುವ ಬೆಳ್ಳೂರು ಬೈಲಿನ ಎತ್ತಿನಗಂಡಿ ಎಂಬಲ್ಲಿ 4 ಕೋ.ರೂ. ವೆಚ್ಚದಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಮಾಜಿ ಶಾಸಕರಿಂದ ಶಂಕುಸ್ಥಾಪನೆ ನೆರವೇರಿತ್ತು. ಹಲವು ಕಾರಣಗಳಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರಿಂದ ಸುಮಾರು 500 ಮನೆಗೆ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಸೇತುವೆ ನಿರ್ಮಾಣವಾಗದೆ ಇಲ್ಲಿನ ಮಂದಿ ಕುಕ್ಕಾವು ಪ್ರದೇಶದಿಂದ ಹತ್ತಾರು ಕಿ.ಮೀ. ಸುತ್ತಿ ಬಳಸಬೇಕು. ಸೇತುವೆ ನಿರ್ಮಾಣವಾಗದೆ ನದಿ ನೀರು ದಾಟಬೇಕಾದ ಪರಿಸ್ಥಿತಿ. ಮತ್ತೂಂದೆಡೆ ಉದ್ದಾರ ಮಠ ಸಮೀಪ ಸಣ್ಣ ನೀರಾವರಿ ಯೋಜನೆಯಡಿ 5 ಕೋ. ರೂ.ವೆಚ್ಚ‌ದಲ್ಲಿ ಅಣೆಕಟ್ಟು, ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಸ್ಥಳೀಯರಿಗೆ ಅನುಕೂಲವಾಗಲಿದೆ.

ದೂಂಬೆಟ್ಟು ಕಾಲನಿಗೆ ಸಮಸ್ಯೆ
ನೂರಾರು ವರ್ಷಗಳಿಂದ ದೂಂಬೆಟ್ಟು ಎಂಬಲ್ಲಿ ವಾಸವಿರುವ ಪ. ಪಂಗಡಕ್ಕೆ ಸೇರಿದ 100ಕ್ಕೂ ಹೆಚ್ಚು ಮನೆಯವರು ಇದೇ ಮಾರ್ಗವನ್ನು ಅವಲಂಬಿಸಿ ದ್ದಾರೆ. ಸೇತುವೆ ಸಂಪೂರ್ಣ ಕುಸಿದಲ್ಲಿ ಮುಂಡಾಜೆ ಮೃತ್ಯುಂಜಯ ನದಿಗೆ ನಿರ್ಮಿಸಿದ ಆಲು ಪಿತ್ತಿಲು ತೂಗು ಸೇತುವೆಯಾಗಿ ಸುತ್ತಿ ಬರುವ ಪರಿಸ್ಥಿತಿ. ಕಿರುಸೇತುವೆ ಗೋಡೆ ಕುಸಿದಿದ್ದರಿಂದ ವಾಹನ ನಿಷೇಧಿಸುವ ಸಾಧ್ಯತೆ ಇದ್ದು, ಅಗತ್ಯ ಮನೆ ಬಳಕೆ ಸೊತ್ತುಗಳ ಸಾಗಾಟ ಸಮಸ್ಯೆ ಎದುರಾಗಲಿದೆ.

ಈಗಾಗಲೇ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದು, ಸಿಮೆಂಟ್ ಚೀಲದಲ್ಲಿ ಮರಳು ತುಂಬಿಸಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಲು ಗ್ರಾ.ಪಂ.ಗೆ ಸೂಚಿಸಿದೆ. ಕಾಮಗಾರಿ ತಡವಾದಲ್ಲಿ ಮತ್ತಷ್ಟು ಆತಂಕ ಎದುರಾಗುವ ಸಾಧ್ಯತೆ ಇದ್ದು ಸಂಬಂಧಪಟ್ಟ ಅಧಿಕಾರಗಳು ಎಚ್ಚೆತ್ತುಕೊಳ್ಳಬೇಕಿದೆ.

ಕ್ರಿಯಾಯೋಜನೆ ಸಿದ್ಧ

ಕುರುಡ್ಯ ಸೇತುವೆ ಪರಿಶೀಲಿಸಿದ್ದೇನೆ. ಈಗಾಗಲೇ ಕ್ರಿಯಾಯೋಜನೆ ಸಿದ್ಧಪಡಿಸಿದ್ದು, ತಹಶೀಲ್ದಾರ್‌ಗೆ ಗಮನಕ್ಕೆ ತರಲಾಗುವುದು. ತಾತ್ಕಾಲಿಕವಾಗಿ ಮರಳು ಗೋಣಿ ಅಳವಡಿಸಲು ಗ್ರಾ.ಪಂ. ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
– ತಮ್ಮಣ್ಣ ಗೌಡ ಪಾಟೀಲ್ ಕಿರಿಯ ಅಭಿಯಂತರು, ಪಂಚಾಯತ್‌ರಾಜ್‌ ಉಪವಿಭಾಗ

ಅಧಿಕಾರಿಗಳ ಸೂಚನೆಯಂತೆ ತಾತ್ಕಾಲಿಕ ಕ್ರಮ

ಅಧಿಕಾರಿಗಳ ಸೂಚನೆಯಂತೆ ತಾತ್ಕಾಲಿಕ ಕ್ರಮಕ್ಕಾಗಿ ಗೋಡೆಗೆ ಆಧಾರವಾಗಿ ಮರಳಿನ ಮೂಟೆ ಜೋಡಿಸಲಾಗುವುದು. ವಾಹನ ನಿಷೇಧ ಸೂಚನ ಫಲಕ ಅಳವಡಿಸಿ ಸ್ಥಳೀಯರಿಗೆ ಮಾಹಿತಿ ನೀಡಲಾಗುವುದು.
– ದೇವಕಿ, ಪಿಡಿಒ, ಕಡಿರುದ್ಯಾವರ ಗ್ರಾ.ಪಂ.

ಚೈತ್ರೇಶ್‌ ಇಳಂತಿಲ
Advertisement
Advertisement

Udayavani is now on Telegram. Click here to join our channel and stay updated with the latest news.

Next